ಮೀನುಗಳ ದರ ಅರ್ಧದಷ್ಟು ಇಳಿಕೆ

ಹುಬ್ಬಳ್ಳಿ: ಸಮುದ್ರ ಮೀನುಗಳ ದರ ಇಳಿದಿದೆ. ಎರಡು ವಾರದ ಹಿಂದೆ ಇದ್ದ ದರದ ಅರ್ಧದಷ್ಟಾಗಿರುವುದು ಮೀನು ಪ್ರಿಯರಿಗೆ ಖುಷಿ ತಂದಿದೆ.
ಕರಾವಳಿಯಲ್ಲಿ ಮಳೆ ತಗ್ಗಿದ ಕಾರಣ ಸಮುದ್ರ ಮೀನುಗಾರಿಕೆ ಚುರುಕು ಪಡೆದಿದೆ. ಇದರಿಂದಾಗಿ ಇಲ್ಲಿನ ಗಣೇಶಪೇಟೆ ಮೀನು ಮಾರುಕಟ್ಟೆಯಲ್ಲಿ ಈಗ ಸಮುದ್ರದ ಬಗೆ, ಬಗೆಯ ಮೀನುಗಳದ್ದೇ ಸುಗ್ಗಿ.
ಜೂನ್–ಜುಲೈನಲ್ಲಿ ಜಾರಿಯಲ್ಲಿದ್ದ ಆಳಸಮುದ್ರ ಮೀನುಗಾರಿಕೆ ಆಗಸ್ಟ್ 1ರಂದು ತೆರೆವುಗೊಂಡಿದ್ದರೂ, ಜೋರು ಮಳೆ–ಗಾಳಿ, ಸಮುದ್ರ ಅಲೆಗಳ ಅಬ್ಬರದಿಂದ ಚುರುಕು ಪಡೆದಿರಲಿಲ್ಲ. ಪರಿಣಾಮ ಮೀನುಗಳ ದರ ಗಗನಮುಖಿಯಾಗಿ ಮೀನು ತಿನ್ನುವವರ ಆಸೆಗೆ ತಣ್ಣೀರೆರೆಚಿತ್ತು.
ವಾರದ ಹಿಂದೆ ಕೆಜಿಗೆ ₹380–₹400 ಇದ್ದ ಬಂಗಡೆ ದರ ₹180–₹200ಕ್ಕೆ ಇಳಿದಿದೆ. ಕೆಜಿಗೆ ₹1,000 ಸನಿಹದಲ್ಲಿದ್ದ ಬಿಳಿ ಪಾಂಪ್ರೆಟ್, ಕಾಣೆ ಮೀನುಗಳ ದರ ₹350, ₹600ರಷ್ಟಿದ್ದ ಸಿಗಡಿ ಮೀನಿನ ದರ ₹350, ₹600–₹700 ಇದ್ದ ಸುರಮೈ (ಇಶೋಣಾ) ಮೀನು ದರ ₹300–₹350ಕ್ಕೆ ಇಳಿದಿದೆ. ಇವುಗಳ ಜೊತೆಗೆ ಜಾಲಿ (ಏಡಿ), ಸ್ವರಾ, ದೋಡಿ, ಕರಿ ಮಾಂಜಿ, ಗೋಬ್ರಾ, ಬಾಳೆ ಮೀನುಗಳ ದರದಲ್ಲಿಯೂ ಕುಸಿತವಾಗಿದೆ.
ಶ್ರಾವಣ ತಿಂಗಳಲ್ಲಿ ಮಾಂಸಾಹಾರ ತ್ಯಜಿಸುವ ಮಾಂಸಾಹಾರಿಗಳು, ಚೌತಿ ಹಬ್ಬ ಮುಗಿಸಿಯೇ ಮತ್ತೆ ಆರಂಭಿಸುವುದು ರೂಢಿ. ದರ ವಿಪರೀತ ಹೆಚ್ಚಾಗಿದ್ದರಿಂದ ಮೀನುಪ್ರಿಯರು ಮಾರುಕಟ್ಟೆಯತ್ತ ಹೋಗುವುದು ಕಡಿಮೆ ಮಾಡಿದ್ದರು. ಈಗ ಬೆಲೆ ಇಳಿದಿರುವುದರಿಂದ ಮಾರುಕಟ್ಟೆಯಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಿದೆ ಎನ್ನುತ್ತಾರೆ ಮೀನು ವ್ಯಾಪಾರಿಗಳು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.