ಭಾನುವಾರ, ಜನವರಿ 26, 2020
24 °C

625 ಹೊಸ ಬಸ್‌ ಮಂಜೂರು: ಸರ್ಕಾರದ ನೂರು ದಿನಗಳ ಸಾಧನೆಯ ಮಾಹಿತಿ ಪ್ರದರ್ಶನ: ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 625 ಹೊಸ ಬಸ್‌ಗಳು ಮಂಜೂರಾಗಿದ್ದು, ಮೊದಲ ಹಂತದಲ್ಲಿ  ಮಾರ್ಚ್‌ ವೇಳೆಗೆ 345 ಬಸ್‌ಗಳು ಬರಲಿವೆ ಎಂದು ಸಂಸ್ಥೆಯ ಅಧ್ಯಕ್ಷ ವಿ.ಎಸ್‌. ಪಾಟೀಲ ಹೇಳಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಗರದ ಹೊಸ ಬಸ್ ನಿಲ್ದಾಣದಲ್ಲಿ ಏರ್ಪಡಿಸಿರುವ ರಾಜ್ಯ ಸರ್ಕಾರದ ನೂರು ದಿನಗಳ ಸಾಧನೆ ಮತ್ತು ಸರ್ಕಾರದ ಯೋಜನೆಗಳ ಮಾಹಿತಿ ನೀಡುವ ಮೂರು ದಿನಗಳ ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾಧ್ಯಮದವರ ಜೊತೆ ಅವರು ಮಾತನಾಡಿದರು.

‘30 ಹೊಸ ರಾಜಹಂಸ ಬಸ್‌ಗಳು ಕೂಡ ಬರಲಿದ್ದು,  ಹೊಸ ಬಸ್‌ಗಳನ್ನು ಗ್ರಾಮೀಣ ಭಾಗ ಮತ್ತು ಎಕ್ಸ್‌ಪ್ರೆಸ್‌ ಮಾರ್ಗಗಳಿಗೆ ಬಳಸಲಾಗುವುದು. ವಿದ್ಯಾರ್ಥಿಗಳ ಬೇಡಿಕೆಗೆ ಅನುಗುಣವಾಗಿ ಹೊಸ ಬಸ್‌ ಮಾರ್ಗಗಳ ಯೋಜನೆ ರೂಪಿಸಲಾಗುತ್ತದೆ. ಪರೀಕ್ಷೆ ಸಮೀಪಿಸುತ್ತಿರುವ ಕಾರಣ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್‌ಗಳನ್ನು ಓಡಿಸಲಾಗುವುದು’ ಎಂದು ತಿಳಿಸಿದರು.

‘ನಗರದಲ್ಲಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗಲು ಎಲ್ಲ ಕಡೆಯೂ ನೇರ ಬಸ್‌ಗಳ ಸೌಲಭ್ಯವಿಲ್ಲ ಎನ್ನುವ ದೂರು ಇದೆ. ಆದ್ದರಿಂದ ಸಂಪರ್ಕ ಸಾರಿಗೆಗಳನ್ನು ಹೆಚ್ಚಿಸಲಾಗುವುದು. ಸರಿಯಾದ ಸಮಯಕ್ಕೆ ಬಸ್‌ಗಳು ಸಂಚರಿಸುವಂತೆ ನೋಡಿಕೊಳ್ಳಲಾಗುವುದು’ ಎಂದರು.

ತೆರಿಗೆ ವಿನಾಯಿತಿಗೆ ಮನವಿ: ವಾ.ಕ.ರ.ಸಾ. ಸಂಸ್ಥೆ ವ್ಯಾಪ್ತಿಯಲ್ಲಿ ಮೋಟಾರು ವಾಹನ ಕಾಯ್ದೆಯಡಿ ತೆರಿಗೆ ವಿನಾಯಿತಿ ನೀಡಬೇಕು. ಬಸ್‌ಗಳಿಗೆ ಟೋಲ್‌ ಸಂಗ್ರಹಿಸಬಾರದು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಈ ಕುರಿತು ನಮ್ಮ ಸಂಸ್ಥೆ ವ್ಯಾಪ್ತಿಯ ಎಲ್ಲ ಶಾಸಕರ ಜೊತೆಯೂ ಚರ್ಚಿಸುತ್ತಿದ್ದೇನೆ ಎಂದರು.

ನೆರವಾದ ಸರ್ಕಾರ: ಪ್ರವಾಹ ಪೀಡಿತ 22 ಜಿಲ್ಲೆಗಳ, 103 ತಾಲ್ಲೂಕುಗಳ ಪ್ರದೇಶಗಳಿಗೆ ಕೇಂದ್ರ ಸರ್ಕಾರ ₹ 1,200 ಕೋಟಿ ಹಾಗೂ ರಾಜ್ಯ ಸರ್ಕಾರ ₹ 6,450 ಕೋಟಿ ನೀಡಿ ಸಂತ್ರಸ್ತರ ಸಂಕಷ್ಟಕ್ಕೆ ಮಿಡಿದಿದೆ. ಪ್ರವಾಹದಿಂದ ಸಂಪರ್ಕ ಕಳೆದುಕೊಂಡಿದ್ದ 178 ರಸ್ತೆಗಳ ಪೈಕಿ, 142 ರಸ್ತೆಗಳನ್ನು ದುರಸ್ತಿ ಮಾಡಲಾಗಿದೆ ಎಂದು ತಿಳಿಸಿದರು.

ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್, ಜಿಲ್ಲಾಧಿಕಾರಿ ದೀಪಾ ಚೋಳನ್  ‘ದಿನ ನೂರು, ಸಾಧನೆ ನೂರಾರು’ ಸರ್ಕಾರದ ಪ್ರಗತಿ ವರದಿ ಬಿಡುಗಡೆ ಮಾಡಿದರು.

ತಂತ್ರ ಹಾಗೂ ಬಫೊ ವೆಂಚರ್ಸ್ ಸಂಸ್ಥೆಗಳ ಮಹಿಳಾ ಕಲಾವಿದರು ಸರ್ಕಾರದ ಯೋಜನೆಗಳ ಕುರಿತು ಜಾಗೃತಿ ಗೀತೆಗಳನ್ನು ಹಾಡಿದರು.

ವಾ.ಕ.ರ.ಸಾ.ಸಂ. ಮುಖ್ಯ ಸಂಚಾರ ವ್ಯವಸ್ಥಾಪಕ ಸಂತೋಷ್ ಕುಮಾರ, ಮುಖ್ಯ ಭದ್ರತಾ ಜಾಗೃತಿ ಅಧಿಕಾರಿ ರಾಜೇಶ್ ಹುದ್ದಾರ, ನಿತಿನ್ ಹೆಗಡೆ, ಪಿ.ವೈ.ನಾಯಕ, ಜಯಕರಶೆಟ್ಟಿ, ನಾರಾಯಣಪ್ಪ, ಎಸ್.ಎಂ. ದೊಡ್ಡ ಲಿಂಗಣ್ಣವರ, ವಿಭಾಗೀಯ ನಿಯಂತ್ರಣಾಧಿಕಾರಿ ರಾಮನಗೌಡ್ರ, ಡಿ.ಬಿ.ಕೆಳಗೇರಿ, ನಿಯಂತ್ರಣಾಧಿಕಾರಿ ಅಶೋಕ ಪಾಟೀಲ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಡೊಳ್ಳಿನ, ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ್ ಪ್ರಕಾಶ ನಾಶಿ, ವಾರ್ತಾ ಇಲಾಖೆಯ ವಿನೋದಕುಮಾರ ಭಗವತಿ, ಸಿ.ಬಿ.ಭೋವಿ ಪಾಲ್ಗೊಂಡಿದ್ದರು.

ಎರಡು ತಿಂಗಳೊಳಗೆ ಹೊಸೂರು ನಿಲ್ದಾಣಕ್ಕೆ ಸ್ಥಳಾಂತರ: ಚೋಳನ್‌

ಹಳೇ ಬಸ್‌ ನಿಲ್ದಾಣದಿಂದ ನಿತ್ಯ ಸಂಚರಿಸುವ ಒಟ್ಟು 1,200 ಬಸ್‌ಗಳ ಪೈಕಿ 300 ಬಸ್‌ಗಳನ್ನು ಹೊಸೂರು ನಿಲ್ದಾಣಕ್ಕೆ ಸ್ಥಳಾಂತರಿಸಲಾಗುವುದು. ಎರಡು ತಿಂಗಳೊಳಗೆ ಈ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ರಾಜೇಂದ್ರ ಚೋಳನ್ ತಿಳಿಸಿದರು.

‘ಹೊಸೂರಿನಿಂದ ಉಣಕಲ್‌ ಕ್ರಾಸ್ ತನಕ ಕಾಂಕ್ರೀಟ್‌ ರಸ್ತೆ ನಿರ್ಮಾಣ ನಡೆಯುತ್ತಿರುವ ಕಾರಣ ಸ್ಥಳಾಂತರ ವಿಳಂಬವಾಗಿದೆ. ಈಗಲೇ ಸ್ಥಳಾಂತರ ಮಾಡಿದರೆ ಸಂಚಾರ ದಟ್ಟಣೆ ಹೆಚ್ಚಾಗುತ್ತದೆ. ಆದ್ದರಿಂದ ಹೊಸೂರಿನಿಂದ ಕಾರ್ಯಾಚರಣೆ ಆರಂಭಿಸಲು ಸೂಕ್ತ ಯೋಜನೆ ರೂಪಿಸುವಂತೆ ಪೊಲೀಸ್‌ ಇಲಾಖೆಗೆ ತಿಳಿಸಲಾಗಿದೆ’ ಎಂದರು.

‘ಸ್ಮಾರ್ಟ್‌ ಸಿಟಿ ಯೋಜನೆಯಡಿ ₹42 ಕೋಟಿ ವೆಚ್ಚದಲ್ಲಿ ಹಳೇ ಬಸ್‌ ನಿಲ್ದಾಣ ನವೀಕರಣ ಮಾಡಲಾಗುತ್ತದೆ. ಬಿಆರ್‌ಟಿಎಸ್‌ ರಸ್ತೆಗೆ ಸಮೀಪ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲು ಎಂಟು ಕಡೆ ಸ್ಥಳ ಗುರುತಿಸಲಾಗಿದೆ’ ಎಂದರು.

‘ರಸ್ತೆಯಲ್ಲಿರುವ ಧಾರ್ಮಿಕ ಸ್ಥಳಗಳನ್ನು ತೆರವುಗೊಳಿಸುವ ಕುರಿತು ಮುಖಂಡರ ಜೊತೆ ಎರಡು ಬಾರಿ ಸಭೆ ನಡೆಸಲಾಗಿದೆ. ಪೊಲೀಸ್‌ ಕಮಿಷನರ್‌ ಕೂಡ ಒಂದು ಬಾರಿ ಸಭೆ ನಡೆಸಲಿದ್ದಾರೆ. ಆಗಲೂ ಸಮಸ್ಯೆ ಪರಿಹಾರವಾಗದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು