ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ | 30 ಗುಂಟೆಯಲ್ಲಿ 84 ತಳಿಯ ರಾಗಿ ‘ನಾಟಿ’

ಶ್ರೀವಿನಾಯಕ ಸ್ತ್ರೀ ಶಕ್ತಿ ಸಂಘದ ಪ್ರಯೋಗ: ಸಹಜ ಸಮೃದ್ಧ ಸಂಸ್ಥೆ ನೆರವು
Published : 21 ಸೆಪ್ಟೆಂಬರ್ 2024, 5:24 IST
Last Updated : 21 ಸೆಪ್ಟೆಂಬರ್ 2024, 5:24 IST
ಫಾಲೋ ಮಾಡಿ
Comments

ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ರಾಗಿ ಬೆಳೆಯುವುದು ವಿರಳ. ಕುಂದಗೋಳ ತಾಲ್ಲೂಕಿನ ಮತ್ತಿಗಟ್ಟಿಯ ಶ್ರೀವಿನಾಯಕ ಸ್ತ್ರೀ ಶಕ್ತಿ ಸಂಘವು 30 ಗುಂಟೆ ಜಮೀನಿನಲ್ಲಿ ರಾಗಿಯ 84 ತಳಿಗಳನ್ನು ನಾಟಿ ಮಾಡಿ, ಬೆಳೆಯಲು ಮುಂದಾಗಿದೆ.

ಸಹಜ ಸಮೃದ್ಧ ಸಂಸ್ಥೆಯ ನೆರವಿನೊಂದಿಗೆ ಸಂಘವು ಕಳೆದ ವರ್ಷ 77 ತಳಿಯ ರಾಗಿಯನ್ನು ನಾಟಿ ವಿಧಾನದಲ್ಲಿ ಬೆಳೆದಿತ್ತು. ಈ ವರ್ಷ ನಾಟಿ ಮಾಡಿದ ಬೆಳೆಯ ತೆನೆ ಮೂಡುತ್ತಿದ್ದು, ಎರಡು ತಿಂಗಳಲ್ಲಿ ಕಟಾವಿಗೆ ಬರಲಿದೆ.

‘ಮತ್ತಿಗಟ್ಟೆ ಗ್ರಾಮದ ಸಂಘದ ಸದಸ್ಯೆಯೊಬ್ಬರ ಜಮೀನಿನ 1 ಗುಂಟೆ ಜಾಗದಲ್ಲಿ ರಾಗಿ ಪೈರು ಬೆಳೆದೆವು. ಈಗ 30 ಗುಂಟೆ ಜಮೀನಿನಲ್ಲಿ ನಾಟಿ ಮಾಡಿದ್ದೇವೆ. ತಲಾ 40 ಸೆಂ.ಮೀ. x40 ಸೆಂ.ಮೀ. ಅಳತೆಯ 84 ಪ್ಲಾಟ್‌ ನಿರ್ಮಾಣ ಮಾಡಲಾಗಿದೆ’ ಎಂದು ಸಹಜ ಸಮೃದ್ಧ ಸಂಸ್ಥೆಯ ಯೋಜನಾ ಸಮನ್ವಯಾಧಿಕಾರಿ ಈಶ್ವರಪ್ಪ ಅಂಗಡಿ ತಿಳಿಸಿದರು.

ಕಳೆದ ವರ್ಷ 77 ತಳಿಗಳ ಪೈಕಿ 35 ತಳಿಗಳು ಚೆನ್ನಾಗಿ ಬೆಳೆದವು. ಕಡಿಮೆ ಮಳೆಯಿಂದ ಕಾರಣ ಬೀಜೋತ್ಪಾದನೆ ಕೊಂಚ ಕುಸಿಯಿತು. ಆದರೆ ಇಲ್ಲಿನ ಮಣ್ಣಿಗೆ ಯಾವ ತಳಿ ಸೂಕ್ತ ಎಂಬುದು ಗೊತ್ತಾಯಿತು.
ರತ್ನಾ ಪ್ರಕಾಶ ಹೊಸಳ್ಳಿ, ಸದಸ್ಯೆ, ಶ್ರೀವಿನಾಯಕ ಸ್ತ್ರೀಶಕ್ತಿ ಸಂಘ ಕುಂದಗೋಳ

‘ರಾಗಿಯನ್ನು ಸಾಲು ಹೊಡೆಯುವುದು ಬಿತ್ತುವುದು ಸಾಮಾನ್ಯ. ಭತ್ತದಂತೆ ರಾಗಿ ನಾಟಿ ಮಾಡುವ ವಿಧಾನವನ್ನು ಗುಳಿ ರಾಗಿ ಮಾದರಿ ಎನ್ನಲಾಗುತ್ತದೆ. ಹಾವೇರಿಯ ರಾಣೆಬೆನ್ನೂರು ಭಾಗದಲ್ಲಿ ಕೆಲ ರೈತರು ಅನುಸರಿಸುವ ಈ ವಿಧಾನವನ್ನು ಇಲ್ಲಿಯೂ ಅಳವಡಿಸಿಕೊಳ್ಳಲಾಗಿದೆ’ ಎಂದು ಅವರು ತಿಳಿಸಿದರು.

‘ನಾಟಿ ವಿಧಾನದಲ್ಲಿ ರಾಗಿ ಬೆಳೆಯುವುದರಿಂದ ಎಕರೆಗೆ 10 ರಿಂದ 12 ಕ್ವಿಂಟಲ್‌ ಇಳುವರಿ ಪಡೆಯಬಹುದು. ಪ್ಲಾಟ್‌ಗಳ ನಡುವೆ ಜಾಗ ಇರುವುದರಿಂದ ಕಳೆ ತೆಗೆಯಲು ಅನುಕೂಲ ಆಗುತ್ತದೆ. ಗ್ರಾಮೀಣ ಭಾಗದಲ್ಲಿ ಮಹಿಳೆಯರು ಹೊಸ ಮಾದರಿ ಕೃಷಿ ಚಟುವಟಿಕೆಗೆ ಆಸಕ್ತಿ ತೋರುತ್ತಾರೆ. ಹೊಲಗಳಲ್ಲಿ ಹೆಚ್ಚು ಕೆಲಸ ಮಾಡುತ್ತಾರೆ’ ಎಂದರು.

‘ಸಹಜ ಸಮೃದ್ಧ ಸಂಸ್ಥೆಯ ಸಲಹೆಯಂತೆ ತರಹೇವಾರಿ ತಳಿಯ ರಾಗಿ ಬೆಳೆಯಲು ಮುಂದಾಗಿದ್ದೇವೆ. ಮಳೆ ಹೆಚ್ಚುಕಡಿಮೆ ಆದರೂ ಬಹುತೇಕ ತಳಿಯ ರಾಗಿಗೆ ಸಮಸ್ಯೆ ಆಗುವುದಿಲ್ಲ. ಒಂದು ಮಳೆಯಾದರೂ ಸಾಕು. ಸಂಘದ ಸದಸ್ಯೆಯರೇ ಜಮೀನಿನಲ್ಲಿ ದುಡಿಯುವುದರಿಂದ ಕೃಷಿ ಕಾರ್ಮಿಕರ ಕೊರತೆಯಿಲ್ಲ’ ಎಂದು ಎಂದು ಶ್ರೀವಿನಾಯಕ ಸ್ತ್ರೀ ಶಕ್ತಿ ಸಂಘದ ರತ್ನಾ ಪ್ರಕಾಶ್ ಹೊಸಳ್ಳಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT