ಶುಕ್ರವಾರ, ಮಾರ್ಚ್ 24, 2023
30 °C
ಸ್ಥಳಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ; ಮರಗಳ ತೆರವು ಇಂದು

ಹುಬ್ಬಳ್ಳಿ ದರ್ಗಾ ಸಂಪೂರ್ಣ ತೆರವು; ಸಂಚಾರಕ್ಕೆ ಧಾರವಾಡ ರಸ್ತೆ ಮುಕ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಬಿಆರ್‌ಟಿಎಸ್‌ ವ್ಯಾಪ್ತಿಯ ಇಲ್ಲಿನ ಬೈರಿದೇವರಕೊಪ್ಪದ ದರ್ಗಾದ ಭಾಗಶಃ ತೆರವು ಕಾರ್ಯ ನಡೆಯಬೇಕಿತ್ತು. ಆದರೆ, ಆಡಳಿತ ಮಂಡಳಿಯ ಕೋರಿಕೆ ಮೇರೆಗೆ ಬಿಆರ್‌ಟಿಎಸ್‌ ದರ್ಗಾವನ್ನು ಸಂಪೂರ್ಣ ತೆರವು ಮಾಡಿದೆ.

ಬುಧವಾರ ಬೆಳಿಗ್ಗೆಯಿಂದ ಆರಂಭವಾದ ತೆರವು ಕಾರ್ಯ ಶುಕ್ರವಾರ ಸಂಜೆವರೆಗೂ ನಡೆಯಿತು. ಗುರುವಾರ ನಸುಕಿನ ವೇಳೆ ಮೂರು ಗೋರಿಗಳನ್ನು ಸ್ಥಳಾಂತರಿಸಲಾಗಿತ್ತು. ಇನ್ನುಳಿದ ಸಣ್ಣಪುಟ್ಟ ತೆರವು ಕಾರ್ಯ ಮುಂದುವರಿದಿದೆ. ಕಟ್ಟಡಗಳ ಅವಶೇಷ ಹಾಗೂ ಕಬ್ಬಿಣದ ಸಾಮಗ್ರಿಗಳನ್ನು ಸ್ಥಳದಿಂದ ಬೇರೆಡೆಗೆ ರವಾನಿಸಲಾಗಿದೆ. ಅಲ್ಲಿರುವ ಎರಡು ಬೃಹತ್‌ ಹುಣಸೆ ಮರಗಳ ತೆರವು ಕಾರ್ಯ ಶನಿವಾರ ನಡೆಯಲಿದೆ.

ಎರಡು ದಿನಗಳಿಂದ ಬೈರಿದೇವರಕೊಪ್ಪದಿಂದ ನವನಗರದವರೆಗೆ ಬಂದ್‌ ಆಗಿದ್ದ ಹು–ಧಾ ಮುಖ್ಯರಸ್ತೆಯನ್ನು ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ನಿಷೇಧಾಜ್ಞೆ ಹಿನ್ನೆಲೆಯಲ್ಲಿ ನಿಯೋಜಿಸಲಾಗಿದ್ದ ಭದ್ರತಾ ಸಿಬ್ಬಂದಿಯ ಸಂಖ್ಯೆ ಕಡಿಮೆ ಮಾಡಲಾಗಿದೆ. ತೆರವಾದ ದರ್ಗಾ ಸ್ಥಳದ ಸುತ್ತಮುತ್ತ ಬಿಗಿ ಭದ್ರತೆ ಒದಗಿಸಿ, ಸಾರ್ವಜನಿಕರ ಪ್ರವೇಶಕ್ಕೆ ದಿಗ್ಬಂಧನ ಹಾಕಲಾಗಿದೆ.

ಸಿಎಂ ಭೇಟಿ: ದರ್ಗಾ ಸ್ಥಳಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ರಾತ್ರಿ ಭೇಟಿ ನೀಡಿ, ಮುಸ್ಲಿಂ ಸಮುದಾಯದ ಮುಖಂಡರೊಂದಿಗೆ ಚರ್ಚಿಸಿದರು. ಖಾಸಗಿ ಸ್ಥಳದಲ್ಲಿ ಮಸೀದಿ ನಿರ್ಮಿಸಲು ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಸುಪ್ರೀಂಕೋರ್ಟ್‌ ಆದೇಶದ ಮೇರೆಗೆ ರಾಜ್ಯದಲ್ಲಿ ಕೆಲವು ಕಡೆ ಅನಧಿಕೃತ ಧಾರ್ಮಿಕ ಹಾಗೂ ಇತರ ಕಟ್ಟಗಳ ತೆರವು ಕಾರ್ಯ ನಡೆಯುತ್ತಿದೆ. ನಾಗರಿಕತೆ ಬೆಳೆಯುತ್ತಿದ್ದಂತೆ, ಕೆಲವು ಅಗತ್ಯಗಳು ಹೆಚ್ಚುತ್ತವೆ. ರಸ್ತೆಗಳು ಸಹ ವಿಸ್ತಾರವಾಗಬೇಕಾಗುತ್ತದೆ’ ಎಂದರು.

‘ಅವಳಿನಗರದ ಮುಖ್ಯರಸ್ತೆಯಲ್ಲಿನ 13 ದೇವಸ್ಥಾನಗಳನ್ನು ಕೆಡವಲಾಗಿದೆ. ಇದು ನೋವಿನ ಸಂಗತಿ. ಆದರೆ ಅನಿವಾರ್ಯ. ಎಲ್ಲರ ಸಹಕಾರದಿಂದ ಈ ಕಾರ್ಯ ಮಾಡಬೇಕಾಗುತ್ತದೆ. ದರ್ಗಾ ತೆರವಿಗೆ ಸಮುದಾಯದ ಮುಖ್ಯಸ್ಥರು ಸಹಕಾರ ನೀಡಿದ್ದಾರೆ. ಅದರಿಂದ ಅವಳಿನಗರದಲ್ಲಿ ಶಾಂತಿ ಕಾಪಾಡಲು ಸಹಕಾರಿಯಾಯಿತು’ ಎಂದು ಹೇಳಿದರು.

ಮುಸ್ಲಿಂ ಮುಖಂಡರೊಂದಿಗೆ ಸಿಎಂ ಚರ್ಚೆ

ಹುಬ್ಬಳ್ಳಿ: ನಗರದ ಬೈರಿದೇವರಕೊಪ್ಪದ ದರ್ಗಾ ತೆರವಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಆದರ್ಶನಗರದ ನಿವಾಸದಲ್ಲಿ ಶುಕ್ರವಾರ ರಾತ್ರಿ ದರ್ಗಾ ಸಮಿತಿ ಹಾಗೂ ಮುಸ್ಲಿಂ ಮುಖಂಡರ ಜೊತೆ ಚರ್ಚಿಸಿದರು.

ದರ್ಗಾ ತೆರವಾದ ಜಾಗದಲ್ಲಿ ಮಸೀದಿ ಮರು ನಿರ್ಮಾಣಕ್ಕೆ ಆರ್ಥಿಕ ನೆರವು ಒದಗಿಸಬೇಕೆಂದು ಮುಖಂಡರು ವಿನಂತಿಸಿದರು. ಬೈರಿದೇವರಕೊಪ್ಪ, ಸಂಗೊಳ್ಳಿ ರಾಯಣ್ಣ ನಗರ, ಎಪಿಎಂಸಿ ಸುತ್ತಮುತ್ತ ಕಾಲೊನಿಗಳು ಬೆಳೆಯುತ್ತಿರುವುದರಿಂದ, ಅಲ್ಲಿ ಈದ್ಗಾ ಹಾಗೂ ಕಬರಸ್ಥಾನಕ್ಕೆ ಜಾಗ ನೀಡಬೇಕು. ಗ್ರಾಮೀಣ ಭಾಗದಲ್ಲಿ ಆಯುರ್ವೇದ ಮತ್ತು ನರ್ಸಿಂಗ್ ಕಾಲೇಜು ಹಾಗೂ  ಅಂಜುಮನ್‌ ಸಂಸ್ಥೆಗೆ ಜಾಗ ಮಂಜೂರು ಮಾಡುವ ಜೊತೆಗೆ, ಆರ್ಥಿಕವಾಗಿಯೂ ನೆರವಾಗಬೇಕು ಎಂದು ಮನವಿ ಸಲ್ಲಿಸಿದರು.

ದರ್ಗಾ ಸಮಿತಿ ಅಧ್ಯಕ್ಷ ಮುನ್ನಾ ಹೆಬ್ಬಳ್ಳಿ, ಮುಖಂಡರಾದ ಮಹ್ಮದ್‌ ಯೂಸೂಫ್‌ ಸವಣೂರ, ಎ.ಎಂ. ಹಿಂಡಸಗೇರಿ, ಅಲ್ತಾಫ್‌ ಹಳ್ಳೂರ, ಅಲ್ತಾಫ್‌ ಕಿತ್ತೂರ, ಇಕ್ಬಾಲ್ ನವಲೂರ, ಇಲಿಯಾಸ್‌ ಮನಿಯಾರ, ಬಸಿರ್‌ ಅಹ್ಮದ್‌ಗುಡಮಾಲ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು