ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಚೋಟೇಶ್ವರ ಸ್ವಾಮೀಜಿ ಸ್ಮರಣೆ ಇಂದು: ಭಾವಚಿತ್ರ ಮೆರವಣಿಗೆ, ದಾಸೋಹ

ಬಸನಗೌಡ ಪಾಟೀಲ 
Published 27 ನವೆಂಬರ್ 2023, 5:19 IST
Last Updated 27 ನವೆಂಬರ್ 2023, 5:19 IST
ಅಕ್ಷರ ಗಾತ್ರ

ಕುಂದಗೋಳ: ತಾಲ್ಲೂಕಿನ ಸರ್ವಧರ್ಮ ಸಮನ್ವಯ ಸಾರುವ ಗ್ರಾಮ ಎಂದೇ ಖ್ಯಾತಿ ಪಡೆದ ಕಮಡೊಳ್ಳಿ ಗ್ರಾಮದ ಲೋಚನೇಶ್ವರ ವಿರಕ್ತ ಮಠದ ಲಿಂಗೈಕ್ಯ ರಾಚೋಟೇಶ್ವರ ಸ್ವಾಮೀಜಿ ಅವರ ದ್ವಿತೀಯ ಪುಣ್ಯಸ್ಮರಣೆಯನ್ನು ಸೋಮವಾರ ಹಮ್ಮಿಕೊಳ್ಳಲಾಗಿದೆ.

ರಾಚೋಟೇಶ್ವರ ಶ್ರೀಗಳು ಇಲ್ಲಿನ ಮಠದ 9ನೇ ಪೀಠಧ್ಯಕ್ಷರಾಗಿದ್ದರು. ಜನ ಸೇವೆ, ಅನ್ನದಾನ ಮಾಡುತ್ತ ಪುರಾಣ-ಪ್ರವಚನಗಳ ಮೂಲಕ ಜನರಲ್ಲಿ ಭಕ್ತಿ,ಭಾವ ಸದಾ ಜೀವಂತವಿರುವಂತೆ ಮಾಡಿದ್ದರು. ಮೂಲತಃ ಜಮಖಂಡಿ ತಾಲ್ಲೂಕಿನ ಕಡಪಟ್ಟಿ ಗ್ರಾಮದ ರಾಮಯ್ಯ ಮತ್ತು ನೀಲಮ್ಮ ದಂಪತಿಯ ಆರನೇ ಪುತ್ರರಾಗಿ 1918ರಲ್ಲಿ ಜನಿಸಿದರು. ಬಾಲ್ಯದಿಂದಲೇ ಶರಣರ ಸಂಗ, ವಚನಗಳ ಆಲಿಸುತ್ತ, ಅದರ ಒಳಾರ್ಥವನ್ನು ಮನದಟ್ಟು ಮಾಡಿಕೊಂಡಿದ್ದರು. ವಿಜಯಪುರದ ಮಲ್ಲಿಕಾರ್ಜುನ ಸ್ವಾಮೀಜಿ ಅವರೊಂದಿಗೆ ಅಧ್ಯಾತ್ಮದ ಹಾದಿಯಲ್ಲಿ ಸಂಚಾರ ನಡೆಸಿದ್ದರು.

ಅನೇಕ ಧಾರ್ಮಿಕ ಗ್ರಂಥಗಳ ಅಧ್ಯಯನ ಮಾಡಿದ ಅವರು, 1952ರಲ್ಲಿ ಮೈಸೂರಿನ ಶಿವರಾತ್ರಿ ದೇಶಿಕೇಂದ್ರದ ಗುರುಕುಲದಲ್ಲಿ ಸಂಸ್ಕೃತ ಪಾಂಡಿತ್ಯ ಪಡೆದರು. ಇವರ ಅಧ್ಯಾತ್ಮದ ಪ್ರಭಾವ, ಮಾತು, ಜ್ಞಾನ ಭಂಡಾರ, ಜನಪರ ಕಾಳಜಿಗೆ ಮನಸೋತ ಕಮಡೊಳ್ಳಿ ಗ್ರಾಮದ ಹಿರಿಯರು 1960ರ ಅವಧಿಯಲ್ಲಿ ಲೋಚನೆಶ್ವರ ಮಠದ ಉತ್ತರಧಿಕಾರಿಯಾಗಿ ನೇಮಿಸಿದರು.  

ಶ್ರೀಗಳು 103ನೇ ವಯಸ್ಸಿನಲ್ಲಿ ಅಪಾರ ಭಕ್ತ ವೃಂದವನ್ನು ಅಗಲಿದರು. ನಂತರ ಮಠದ ಉತ್ತರಧಿಕಾರಿಯಾಗಿ ಜಮಖಂಡಿಯ ರಾಚೋಟೇಶ್ವರ ದೇವರನ್ನು ಆಯ್ಕೆ ಮಾಡಲಾಗಿದ್ದು ಇವರ ನೇತೃತ್ವದಲ್ಲಿ ಶಿಕ್ಷಣ, ಅನ್ನದಾನ, ಧಾರ್ಮಿಕ ಕಾರ್ಯಗಳು ನಡೆಯುತ್ತಿವೆ.

ಸೋಮವಾರ ಶ್ರೀಗಳ ದ್ವಿತೀಯ ಪುಣ್ಯಸ್ಮರಣೆ ಇದ್ದು, ಬೆಳಿಗ್ಗೆ ಶ್ರೀಗಳ ಭಾವಚಿತ್ರ ಮೆರವಣಿಗೆ ನಂತರ ದಾಸೋಹ ನೆರವೇರುವುದು ಎಂದು ಮಠದ ಮೂಲಗಳು ತಿಳಿಸಿವೆ. ಈ ಧಾರ್ಮಿಕ ಕಾರ್ಯಗಳಿಗೆ ಶಾಸಕ ಎಂ.ಆರ್.ಪಾಟೀಲ, ಧಾರವಾಡದ ಮುರುಘಾಮಠದ ಮಲ್ಲಿಕಾರ್ಜುನ ಶ್ರೀಗಳು, ಕುಂದಗೋಳದ ಶಿವಾನಂದಮಠದ ಮಹಾಂತ ಶ್ರೀಗಳು, ಕುಂದಗೋಳದ ಕಲ್ಯಾಣಪುರದ ಬಸವಣ್ಣಜ್ಜನವರು, ಜಮಖಂಡಿಯ ಜಗದೀಶ್ವರ ಮಠದ ಶಿವಶರಣೆ ಪ್ರಮೀಳಾ ತಾಯಿ, ಅನೇಕ ಮಠಾಧೀಶರು, ಗ್ರಾಮದ ಸರ್ವ-ಧರ್ಮದ ಹಿರಿಯರು ಪಾಲ್ಗೊಳ್ಳುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT