ದಾಖಲೆಯ ₹1.10 ಕೋಟಿ ವಹಿವಾಟು

ಹುಬ್ಬಳ್ಳಿ: ನಗರದ ಮೂರು ಸಾವಿರಮಠದ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ಒಣ ಮೆಣಸಿನಕಾಯಿ ಮೇಳದಲ್ಲಿ ದಾಖಲೆಯ ₹1.10 ಕೋಟಿ ವಹಿವಾಟು ನಡೆದಿದ್ದು, ಸುಮಾರು 30 ಟನ್ ಮೆಣಸಿನಕಾಯಿ ಮಾರಾಟವಾಗಿದೆ.
ಕರ್ನಾಟಕ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ತೋಟಗಾರಿಕೆ ಇಲಾಖೆ, ಹುಬ್ಬಳ್ಳಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಸಂಶಿಯ ಅಮರಶಿವ ರೈತ ಉತ್ಪಾದಕ ಸಂಸ್ಥೆ ಹಾಗೂ ಅಮರಗೋಳದ ಉಳುವ ಯೋಗಿ ರೈತ ಉತ್ಪಾದಕ ಸಂಸ್ಥೆ ಸಹಯೋಗದಲ್ಲಿ ಜ. 20ರಿಂದ ಜ. 22ರವರೆಗೆ ಮೇಳ ಆಯೋಜಿಸಲಾಗಿತ್ತು.
‘ಧಾರವಾಡ, ಬಾಗಲಕೋಟೆ, ಗದಗ ಜಿಲ್ಲೆಯ ವಿವಿಧ ಭಾಗಗಳ 90 ರೈತರ ಮಳಿಗೆಗಳು ಮೇಳದಲ್ಲಿದ್ದವು. ಮೊದಲನೇ ದಿನ ₹25 ಲಕ್ಷ, ಎರಡನೇ ದಿನ ₹40 ಲಕ್ಷ ಹಾಗೂ ಮೂರನೇ ದಿನವಾದ ಭಾನುವಾರ ₹45 ಲಕ್ಷ ಮೌಲ್ಯದ ಮೆಣಸಿನಕಾಯಿ ಮಾರಾಟವಾಗಿದೆ’ ಎಂದು ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಗಿರೀಶ ಬಿ.ಆರ್. ತಿಳಿಸಿದ್ದಾರೆ.
‘2018ರ ಮೇಳದಲ್ಲಿ 125 ರೈತರು ₹65 ಲಕ್ಷ ಮೌಲ್ಯದ 45 ಟನ್ ಒಣ ಮೆಣಸಿನಕಾಯಿ, 2019ರ ಮೇಳದಲ್ಲಿ 102 ರೈತರು ₹77 ಲಕ್ಷ ಮೌಲ್ಯದ 33 ಟನ್ ಮೆಣಸಿನಕಾಯಿ ಮಾರಾಟ ಮಾಡಿದ್ದರು. ಕೋವಿಡ್ ಹಿನ್ನೆಲೆಯಲ್ಲಿ 2020, 2021 ಮತ್ತು 2022ರಲ್ಲಿ ಮೇಳಗಳು ನಡೆದಿರಲಿಲ್ಲ. ಅತಿವೃಷ್ಟಿಯಿಂದ ಈ ವರ್ಷ ಮೆಣಸಿನಕಾಯಿ ಇಳುವರಿಯಲ್ಲಿ ಕುಂಠಿತವಾಗಿದ್ದರೂ, ಕಳೆದ ಎರಡು ಮೇಳಗಳ ಸರಾಸರಿ ಆದಾಯ ಗಳಿಕೆಯಲ್ಲಿ ಪ್ರಸ್ತುತ ವರ್ಷದ ಮೇಳ ದಾಖಲೆ ಬರೆದಿದೆ. ಮೇಳದಲ್ಲಿ ಪಾಲ್ಗೊಂಡಿದ್ದ ರೈತರ ಮೊಗದಲ್ಲೂ ಮಂದಹಾಸ ಮೂಡಿದೆ’ ಎಂದು ಹೇಳಿದ್ದಾರೆ.
ಧಾರವಾಡ ಜಿಲ್ಲೆಯಷ್ಟೇ ಅಲ್ಲದೆ, ಹಾವೇರಿ, ಗದಗ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬಂದಿದ್ದ ಗ್ರಾಹಕರು ಮೆಣಸಿನಕಾಯಿ ಖರೀದಿಸಿದರು. ಸಂಬಾರು ಪದಾರ್ಥಗಳ ಅಭಿವೃಧ್ಧಿ ಮಂಡಳಿ ಅಧಿಕಾರಿಗಳು ಭಾನುವಾರ ರೈತರಿಗೆ ಪ್ರಮಾಣಪತ್ರ ಮತ್ತು ಪಾರಿತೋಷಕ ನೀಡಿ ಗೌರವಿಸಿದರು.
ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಯೋಗೇಶ ಕಿಲಾರಿ ಇದ್ದರು.
‘ಮೇಳದಲ್ಲೂ ದಲ್ಲಾಳಿಗಳ ಹಾವಳಿ’: ‘ದಲ್ಲಾಳಿಗಳ ನೆರವಿಲ್ಲದೆ ರೈತರೇ ನೇರವಾಗಿ ಗ್ರಾಹಕರಿಗೆ ಮೆಣಸಿನಕಾಯಿ ಮಾರಾಟ ಮಾಡಲಿ ಎನ್ನುವ ಉದ್ದೇಶದಿಂದ ಸಂಬಾರು ಮಂಡಳಿ ಪ್ರತಿವರ್ಷ ಮೇಳ ಆಯೋಜಿಸುತ್ತಿದೆ. ಆದರೆ, ಮಾರಾಟಕ್ಕೆ ಹೆಚ್ಚಾಗಿ ದಲ್ಲಾಳಿಗಳು ಮತ್ತು ಎಪಿಎಂಸಿ ವ್ಯಾಪಾರಸ್ಥರೇ ಬರುತ್ತಾರೆ. ನಮ್ಮಿಂದಲೇ ಮೆಣಸಿನಕಾಯಿ ಖರೀದಿಸಿ, ನಮ್ಮೆದುರಿಗೇ ವಹಿವಾಟು ನಡೆಸುತ್ತಾರೆ. ಈ ವರ್ಷ ಎಪಿಎಂಸಿಗಳಲ್ಲಿ ಟೆಂಡರ್ ಆಗಿರುವ ಬಳ್ಳಾರಿಯ ಏಳೆಂಟು ಬಗೆಯ ಮೆಣಸಿನಕಾಯಿಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿದ್ದಾರೆ. ಜಿಪಿಎಸ್ ಸಮೀಕ್ಷೆ ನೋಡಿದರೆ, ಅವು ನಮ್ಮ ಭಾಗದಲ್ಲಿ ಬೆಳೆದದ್ದಲ್ಲ ಎಂಬುದು ಗೊತ್ತಾಗುತ್ತದೆ’ ಎಂದು ಕುಂದಗೋಳ ರೈತ ಮುದುಕಪ್ಪ ಶಿರಸಂಗಿ ಅಳಲು ತೋಡಿಕೊಂಡರು.
****
ಪ್ರಸ್ತುತ ವರ್ಷದ ಒಣ ಮೆಣಸಿನಕಾಯಿ ಮೇಳ ಯಶಸ್ವಿಯಾಗಿ ನಡೆದಿದೆ. ಬಳ್ಳಾರಿ ಭಾಗಗಳಿಂದ ಬಂದ ಎರಡು–ಮೂರು ಲೋಡ್ ಮೆಣಸಿನಕಾಯಿಗಳನ್ನು ಮರಳಿ ಕಳುಹಿಸಲಾಗಿದೆ
– ಗಿರೀಶ ಬಿ.ಆರ್., ವ್ಯವಸ್ಥಾಪಕ ನಿರ್ದೇಶಕ, ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.