ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರಾಗಿದ್ದಾಗ ರಕ್ತದಲ್ಲಿ ಪತ್ರ ಬರೆದಿದ್ದ ಬೊಮ್ಮಾಯಿ ಈಗ ಮಾತನಾಡುತ್ತಿಲ್ಲ: ಎಎಪಿ

ಮಹದಾಯಿ ಯೋಜನೆ ವಿಚಾರದಲ್ಲಿ ಜನರನ್ನು ಕತ್ತಲಲ್ಲಿ ಇಟ್ಟ ಸರ್ಕಾರ; ಆಮ್ ಆದ್ಮಿ ಮುಖಂಡ ವಿಕಾಸ ಸೊಪ್ಪಿನ ಆಕ್ರೋಶ
Last Updated 20 ಜೂನ್ 2022, 9:19 IST
ಅಕ್ಷರ ಗಾತ್ರ

ಹುಬ್ಬಳ್ಳಿ:‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಹಿಂದೆ ಶಾಸಕರಾಗಿದ್ದ ಸಂದರ್ಭದಲ್ಲಿ ಮಹದಾಯಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ರಕ್ತದಲ್ಲಿ ಪತ್ರ ಬರೆದು ಒತ್ತಾಯಿಸಿದ್ದರು. ಮೂರು ದಿನಗಳ ಹಿಂದೆ ಕೇಂದ್ರ ಜಲಸಂಪನ್ಮೂಲ ಸಚಿವರನ್ನು ಭೇಟಿಯಾದ ವೇಳೆ ಮಹದಾಯಿ ಕುರಿತು ಯಾವುದೇ ಚರ್ಚೆ ನಡೆಸಿಲ್ಲ’ ಎಂದು ಆಮ್‌ ಆದ್ಮಿ ಪಕ್ಷದ ಧಾರವಾಡ ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷ ವಿಕಾಸ ಸೊಪ್ಪಿನ ಆರೋಪಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಕಳಸಾ ಬಂಡೂರಿ, ಮಹದಾಯಿ ಯೋಜನೆ ಕುರಿತು ಸಿದ್ಧಪಡಿಸಿದ ಯೋಜನಾ ಪೂರ್ವ ಕಾರ್ಯಸಾಧ್ಯತಾ ವರದಿಯನ್ನೇ (ಪಿಎಫ್ಆರ್) ರಾಜ್ಯ ಸರ್ಕಾರ ಸಮಗ್ರ ಯೋಜನಾ ವದರಿ (ಡಿಪಿಆರ್) ಎಂದು ನಂಬಿಸಿ ಮೋಸ ಮಾಡಿದೆ’ ಎಂದು ಕಿಡಿಕಾರಿದರು.

‘ರಾಜ್ಯ ಸರ್ಕಾರ ಮಹದಾಯಿ ಯೋಜನೆ ಬಗ್ಗೆ ಜನರಿಗೆ ಹುಸಿ ಭರವಸೆ ನೀಡುತ್ತ ಮೋಸ ಮಾಡುತ್ತಲೇ ಬಂದಿದೆ. ಬಜೆಟ್‌ನಲ್ಲಿಯೂ ಸಾವಿರಾರು ಕೋಟಿ ರೂ. ಅನುದಾನ ಮೀಸಲಿಡುವ ಮೂಲಕ ದಿಕ್ಕು ತಪ್ಪಿಸುತ್ತಿದೆ. ಪಿಎಫ್‌ಆರ್‌ ವರದಿಯನ್ನೇ ಮುಂದಿಟ್ಟುಕೊಂಡು, ಡಿಪಿಆರ್‌ ವರದಿ ಎಂದು ಇಷ್ಟು ವರ್ಷ ಮೋಸ ಮಾಡಿದ್ದು ಸಾಕು. ಮಹದಾಯಿ ಯೋಜನೆ ಅನುಷ್ಠಾನ ಮಾಡಲು ಸಾಧ್ಯವೇ ಅಥವಾ ಇಲ್ಲವೇ ಎನ್ನುವುದನ್ನು ಸ್ಪಷ್ಟಪಡಿಸಬೇಕು’ ಎಂದು ಒತ್ತಾಯಿಸಿದರು.

‘ಮಹದಾಯಿ ಯೋಜನೆ ಕುರಿತು ನ್ಯಾಯಾಧೀಕರಣ ತೀರ್ಪು ನೀಡಿ ನಾಲ್ಕು ವರ್ಷವಾಗಿದೆ. ಮೂರು ತಿಂಗಳ ಹಿಂದೆ ಸಿಎಂ ಬೊಮ್ಮಾಯಿ ಅವರು ಯೋಜನೆ ಬಗ್ಗೆ ಗೊ‌ದಲವಿದೆ ಎಂದು ಹೇಳಿಕೆ ನೀಡಿದ್ದರು. ಈಗ ಮತ್ತೆ ಗೋವಾ ಜೊತೆ ಮಾತುಕತೆ ನಡೆಸಬೇಕು ಎಂದು ಹೇಳುತ್ತಿದ್ದಾರೆ. ಇನ್ನು ಎಷ್ಟು ವರ್ಷ ಜನರನ್ನು ಕತ್ತಲಲ್ಲಿ ಇಡುತ್ತೀರಿ. ಸಿದ್ಧಪಡಿಸಿದ್ದು ಡಿಪಿಆರ್‌ ವರದಿಯೇ ಆಗಿದ್ದರೆ ಅದನ್ನು ಬಹಿರಂಗ ಪಡಿಸಲಿ’ ಎಂದು ಸವಾಲು ಹಾಕಿದರು.

‘ರಾಜ್ಯದ ಹಿತಾಸಕ್ತಿ ಕಾಪಾಡಲು ಸರ್ಕಾರ ಸರ್ವಪಕ್ಷದ ಸಭೆ ಕರೆಯಬೇಕು. ನೀರಾವರಿ ಹಾಗೂ ಕಾನೂನು ತಜ್ಞರ ಜೊತೆ ಚರ್ಚಿಸಬೇಕು. ನಾವು ಸಹ ಗೋವಾದಲ್ಲಿರುವ ಪಕ್ಷದ ಶಾಸಕರ ಜೊತೆ ಚರ್ಚಿಸಿ ವರದಿಯೊಂದನ್ನು ಸಿದ್ಧಪಡಿಸುತ್ತೇವೆ. ಜೂನ್‌ 30ರ ಒಳಗೆ ಪಕ್ಷದ ನಿಯೋಗ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಚರ್ಚಿಸಲಿದೆ’ ಎಂದು ಹೇಳಿದರು.

ಪಕ್ಷದ ಮುಖಮಡರಾದ ಮಲ್ಲಪ್ಪ ತಡಸದ, ಮಲ್ಲಿಕಾರ್ಜುನ ಹಿರೇಮಠ, ರೇವಣ ಸಿದ್ಧಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT