ಭಾನುವಾರ, ಆಗಸ್ಟ್ 1, 2021
20 °C
ಎಎಪಿ ಕರ್ನಾಟಕ ವೀಕ್ಷಕ ರೋಮಿ ಭಾಟಿ ಹೇಳಿಕೆ

ಮಹಾನಗರ ಪಾಲಿಕೆ ಚುನಾವಣೆ: ಎಎಪಿ ಸಂಭಾವ್ಯ ಅಭ್ಯರ್ಥಿಗಳ ಆಯ್ಕೆಗೆ ಚಾಲನೆ

‍ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ ಮಹಾನಗರ ಪಾಲಿಕೆ ಕಚೇರಿ–ಸಾಂದರ್ಭಿಕ ಚಿತ್ರ

ಹುಬ್ಬಳ್ಳಿ: ‘ಸ್ಥಳೀಯ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ 82 ವಾರ್ಡ್‌ಗಳಿಗೆ ಪಕ್ಷದ ಸಂಭಾವ್ಯ ಅಭ್ಯರ್ಥಿಗಳ ಆಯ್ಕೆಗೆ ಚಾಲನೆ ನೀಡಲಾಗಿದೆ’ ಎಂದು ಎಎಪಿ ಕರ್ನಾಟಕ ವೀಕ್ಷಕ ಹಾಗೂ ದೆಹಲಿ ಮುಖ್ಯಮಂತ್ರಿ ರಾಜಕೀಯ ಸಲಹೆಗಾರ ರೋಮಿ ಭಾಟಿ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾವು ಜಾತಿ ಮತ್ತು ಧರ್ಮವನ್ನು ಬದಿಗಿಟ್ಟು, ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಮಾಡುವವರು. ದೆಹಲಿ ಮಾದರಿಯಲ್ಲಿ ಅವಳಿನಗರವನ್ನು ಅಭಿವೃದ್ಧಿಪಡಿಸುವುದೇ ನಮ್ಮ ಅಜೆಂಡಾ. ಯಾವಾಗ ಬೇಕಾದರೂ ಚುನಾವಣೆ ಘೋಷಣೆಯಾಗಬಹುದು. ಅದಕ್ಕಾಗಿ, ನಾವು ಈಗಿನಿಂದಲೇ ತಯಾರಿ ನಡೆಸುತ್ತಿದ್ದೇವೆ’ ಎಂದರು.

‘ರಾಜ್ಯದ ಎರಡನೇ ದೊಡ್ಡ ನಗರವಾದ ಹುಬ್ಬಳ್ಳಿ–ಧಾರವಾಡ, ಸ್ಮಾರ್ಟ್ ಸಿಟಿ ಎಂಬ ಹೆಗ್ಗಳಿಕೆಯನ್ನೂ ಹೊಂದಿದೆ. ಆದರೆ, ಇದುವರೆಗೆ ನಗರದ ಬದಲಿಗೆ ರಾಜಕೀಯ ನಾಯಕರ ಅಭಿವೃದ್ಧಿಯಷ್ಟೇ ಆಗಿದೆ. ಸದ್ಯ ಇರುವ ರಾಜಕೀಯ ಪಕ್ಷಗಳಿಗೆ ಪರ್ಯಾಯವಾಗಿ ಜನ ಎಎಪಿಯನ್ನು ಬೆಂಬಲಿಸುತ್ತಿದ್ದಾರೆ’ ಎಂದು ತಿಳಿಸಿದರು.

ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಮಾತನಾಡಿ, ‘ಬೇರೆ ಪಕ್ಷಗಳಂತೆ ನಾವು ಅಭ್ಯರ್ಥಿಯ ಬ್ಯಾಂಕ್ ಬ್ಯಾಲೆನ್ಸ್ ನೋಡಿ ಟಿಕೆಟ್ ಕೊಡುವುದಿಲ್ಲ. ಸೇವಾ ಮನೋಭಾವ, ಜನಪರತೆ ಹಾಗೂ ಜನರಿಗೆ ಆಕಾಂಕ್ಷಿ ಬಗ್ಗೆ ಇರುವ ಅಭಿಪ್ರಾಯ ಆಧರಿಸಿ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತೇವೆ. ಪಕ್ಷದ ಕೇಂದ್ರ ಸಮಿತಿ ನೇತೃತ್ವದಲ್ಲಿ ಈ ಚುನಾವಣೆ ಎದುರಿಸಲಿದ್ದೇವೆ’ ಎಂದರು.

ಧಾರವಾಡ ಜಿಲ್ಲಾ ಸಂಚಾಲಕ ಸಂತೋಷ ನರಗುಂದ, ‘ಪಾಲಿಕೆ ಚುನಾವಣೆಯಲ್ಲಿ ಪಕ್ಷದಿಂದ ಕಣಕ್ಕಿಳಿಯಲು ಈಗಾಗಲೇ 200ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಕೇಂದ್ರ ಸಮಿತಿ ಅಭ್ಯರ್ಥಿಗಳನ್ನು ಸಂದರ್ಶಿಸಿ ಪಟ್ಟಿಯನ್ನು ಅಂತಿಮಗೊಳಿಸಲಿದೆ’ ಎಂದು ಹೇಳಿದರು.

ಪಕ್ಷದ ಶಾಂತಲಾ ದಾಮ್ಲೆ, ಬಸವರಾಜ ಮುದಿಗೌಡರ ಹಾಗೂ ದರ್ಶನ್ ಜೈನ್ ಇದ್ದರು.

‘ಶೆಟ್ಟರ್ ಮನೆಯಲ್ಲಿ ಸಿದ್ಧಗೊಂಡ ಪಟ್ಟಿ’

‘ಮಹಾನಗರ ಪಾಲಿಕೆಯ ವಾರ್ಡ್ ಮರುವಿಂಗಡಣೆ ಹಾಗೂ ಮೀಸಲಾತಿ ಪಟ್ಟಿಯು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರ ಮನೆಯಲ್ಲಿ ಸಿದ್ಧಗೊಂಡಿದೆ. ಇದರ ವಿರುದ್ಧ ಮತ್ತೆ ನಾವು ಕೋರ್ಟ್‌ಗೆ ಹೋದರೆ, ಈಗಾಗಲೇ ಎರಡೂವರೆ ವರ್ಷ ವಿಳಂಬವಾಗಿರುವ ಚುನಾವಣೆ ಮತ್ತೆ ಮುಂದಕ್ಕೆ ಹೋಗುತ್ತದೆ. ಹಾಗಾಗಿ, ಶೆಟ್ಟರ್ ಅವರು ಸಿದ್ಧಪಡಿರುವ ಮೈದಾನದಲ್ಲಿಯೇ ನಾವು ಆಟವಾಡಿ ಗೆಲ್ಲಲು ಅಣಿಯಾಗಿದ್ದೇವೆ’ ಎಂದು ಸಂತೋಷ ನರಗುಂದ ಹೇಳಿದರು.

‘ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಂದ ನಾವು ಹಣ ಪಡೆಯುವುದಿಲ್ಲ. ಜನರಿಂದಲೇ ನ್ಯಾಯಯುತವಾಗಿ ಹಣ ಸಂಗ್ರಹಿಸಿ ಚುನಾವಣೆ ಮಾಡುತ್ತೇವೆ. ಅರ್ಥಿಕವಾಗಿ ಅತ್ಯಂತ ದುರ್ಬಲವಾಗಿರುವವರಿಗಷ್ಟೇ ಚುನಾವಣೆ ಖರ್ಚಿಗಾಗಿ ಸ್ವಲ್ಪ ಹಣವನ್ನು ಪಕ್ಷ ಕೊಡಲಿದೆ’ ಎಂದರು.

ಬದಲಾವಣೆಗಾಗಿ ರಾಜಕೀಯ:

‘ಬದಲಾವಣೆ ತರಲು ಹೋರಾಟದಷ್ಟೇ ರಾಜಕೀಯ ಅಧಿಕಾರವೂ ಮುಖ್ಯ. ಬಿಆರ್‌ಟಿಎಸ್‌ನಂತಹ ಕಳಪೆ ಯೋಜನೆ ವಿರುದ್ಧ ಎಷ್ಟೇ ಹೋರಾಡಿದರೂ ಪ್ರಯೋಜನವಾಗಿಲ್ಲ. ಎರಡು ಸಲ ಶಾಸಕರಾಗಿರುವ ಬಿಜೆಪಿಯ ಅರವಿಂದ ಬೆಲ್ಲದ ಅವರು, ಯೋಜನೆ ವಿರುದ್ಧ ದನಿ ಎತ್ತಿದರೂ, ಯಾವುದೇ ಬದಲಾವಣೆ ತರಲು ಸಾಧ್ಯವಾಗಿಲ್ಲ. ಹೋರಾಟದ ಜತೆಗೆ ರಾಜಕೀಯ ಅಧಿಕಾರವೂ ಬದಲಾವಣೆಗೆ ಅನಿವಾರ್ಯವಾಗಿದೆ. ಎಎಪಿ ಆ ಸಿದ್ದಾಂತದಲ್ಲಿ ನಂಬಿಕೆ ಇಟ್ಟುಕೊಂಡಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು