ಗುರುವಾರ , ಸೆಪ್ಟೆಂಬರ್ 23, 2021
28 °C
ಪೊಲೀಸರಿಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮನವಿ

ಮಾದಕ ವಸ್ತುಗಳಿಗೆ ಕಡಿವಾಣ ಹಾಕಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಮಾದಕ ವಸ್ತು ದಂಧೆಯಲ್ಲಿ ತೊಡಗಿರುವವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ)  ಸದಸ್ಯರು ಗುರುವಾರ ಡಿಸಿಪಿ ಆರ್‌.ಬಿ. ಬಸರಗಿ ಅವರಿಗೆ ಮನವಿ ಸಲ್ಲಿಸಿದರು.

ಸ್ಯಾಂಡಲ್‌ವುಡ್‌ಗೆ ಮಾದಕ ವಸ್ತು ಜಾಲದ ನಂಟಿರುವ ಬಗ್ಗೆ ಪೊಲೀಸರು ತನಿಖೆ ತೀವ್ರಗೊಳಿಸರುವ ಬೆನ್ನಲ್ಲೇ, ಪ್ರಭಾವಿಗಳು, ನಟ–ನಟಿಯರು ಹಾಗೂ ರಾಜಕಾರಣಿಗಳ ಮಕ್ಕಳ ಹೆಸರು ಕೇಳಿ ಬರುತ್ತಿರುವುದು ಬೇಸರದ ಸಂಗತಿ. ಈ ದಂಧೆಯನ್ನು ಬುಡಸಮೇತ ಕಿತ್ತು ಹಾಕಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಠಿಣ ಕಾನೂನುಗಳನ್ನು ರೂಪಿಸಬೇಕು ಎಂದು ಆಗ್ರಹಿಸಿದರು.

ಶಾಲಾ–ಕಾಲೇಜುಗಳ ಕ್ಯಾಂಪಸ್‌ಗಳಿಗೂ ಸಹ ಮಾದಕ ವಸ್ತು ಮಾಫಿಯಾ ಕಾಲಿಟ್ಟಿದೆ. ವಿದ್ಯಾರ್ಥಿಗಳು ಕೂಡ ಇವುಗಳಿಗೆ ದಾಸರಾಗುತ್ತಿದ್ದಾರೆ. ಹಾಗಾಗಿ, ಶಿಕ್ಷಣ ಸಂಸ್ಥೆಗಳು ಕೂಡ ಎಚ್ಚರಿಕೆ ವಹಿಸಬೇಕು. ಪಾಲಕರು ಸಹ ತಮ್ಮ ಮಕ್ಕಳ ಚಟುವಟಿಕೆಗಳ ಮೇಲೆ ನಿಗಾ ವಹಿಸಬೇಕು. ಪೊಲೀಸರು ಯಾವುದೇ ಒತ್ತಡಕ್ಕೆ ಮಣಿಯದೇ ದಂಧೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಸಂಪೂರ್ಣ ಅಧಿಕಾರ ನೀಡಬೇಕು ಎಂದು ಒತ್ತಾಯಿಸಿದರು.

ಮೂರೂವರೆ ತಾಸು ಕಾಯಿಸಿದರು:

ಮನವಿ ಸಲ್ಲಿಸಲು ಬೆಳಿಗ್ಗೆ 11ಕ್ಕೆ ನವನಗರದ ಪೊಲೀಸ್ ಕಮಿಷನರ್ ಕಚೇರಿಗೆ ತೆರಳಿದ್ದ ಪದಾಧಿಕಾರಿಗಳನ್ನು ಮೂರೂವರೆ ತಾಸು ಕಾಯಿಸಿದರು. ಇದರಿಂದ ಬೇಸರಗೊಂಡು ಪೊಲೀಸರ ವಿರುದ್ಧ ಘೋಷಣೆ ಕೂಗಿ, ಸ್ಥಳದಲ್ಲೇ ಪ್ರತಿಭಟನೆ ನಡೆಸಿದರು.

‘ಪೊಲೀಸರು ತಿಳಿಸಿದ ಸಮಯಕ್ಕೆ ಸರಿಯಾಗಿ ಮನವಿ ಸಲ್ಲಿಸಲು ಕಚೇರಿಗೆ ಹೋಗಿದ್ದೆವು. ಕಮಿಷನರ್ ಆರ್. ದಿಲೀಪ್ ಅವರು ಮುಖ್ಯವಾದ ಸಭೆಯಲ್ಲಿದ್ದಾರೆ ಎಂದು ತಿಳಿಸಿದ ಅಧಿಕಾರಿಗಳು, ಕಾಯುವಂತೆ ಸೂಚಿಸಿದರು. ಆದರೆ, ಮೂರೂವರೆ ತಾಸು ಕಾದರೂ ಭೇಟಿಗೆ ಅವಕಾಶ ನೀಡಲಿಲ್ಲ’ ಎಂದು ಎಬಿವಿಪಿಯ ರಾಜ್ಯ ಕಾರ್ಯದರ್ಶಿ ಪ್ರತೀಕ್ ಮಾಳಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಕಮಿಷನರ್ ಮೊಬೈಲ್ ಸಂಖ್ಯೆಗೆ ಮೂರ್ನಾಲ್ಕು ಮಂದಿ ಹಲವು ಸಲ ಕರೆ ಮಾಡಿದರೂ ಪ್ರತಿಕ್ರಿಯಿಸಲಿಲ್ಲ. ಕಡೆಗೆ, ಕಚೇರಿಯೊಳಕ್ಕೆ ಹೋಗಿ ಅವರ ಖುರ್ಚಿ ಮೇಲೆ ಮನವಿ ಪತ್ರ ಇಟ್ಟೆವು. ಪೊಲೀಸರ ನಿರ್ಲಕ್ಷ್ಯ ಖಂಡಿಸಿ, ಸ್ಥಳದಲ್ಲೇ ಪ್ರತಿಭಟನೆ ನಡೆಸಿದವು. ಕೆಲ ಅಧಿಕಾರಿಗಳು ನಮ್ಮೊಂದಿಗೆ ವಾಗ್ವಾದ ಕೂಡ ನಡೆಸಿದರು. ನಂತರ ಡಿಸಿಪಿ ಆರ್‌.ಬಿ. ಬಸರಗಿ ಮನವಿ ಸ್ವೀಕರಿಸಿದರು’ ಎಂದರು.

ಮನವಿ ಕೊಡಲು ಬರುವ ಸಂಘಟನೆಗಳ ಪದಾಧಿಕಾರಿಗಳನ್ನು ತಾಸುಗಟ್ಟಲೆ ಕಾಯಿಸುವ ಪೊಲೀಸರು, ಇನ್ನು ಜನ‌ರ ಸಮಸ್ಯೆಗಳಿಗೆ ಹೇಗೆ ಸ್ಪಂದಿಸುತ್ತಾರೆ ಎಂಬುದರ ಅನುಮಾನ ಮೂಡಿದೆ
– ಪ್ರತೀಕ್ ಮಾಳಿ, ರಾಜ್ಯ ಕಾರ್ಯದರ್ಶಿ, ಎಬಿವಿಪಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು