ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ: ಆಕ್ಸಿಜನ್‌ ಕೇಂದ್ರ ಆರಂಭಿಸಿದ ನಟ ಸೋನು ಸೂದ್‌

ಸೂದ್‌ ಚಾರಿಟಿ ಫೌಂಡೇಷನ್‌, ರೈಲ್ವೆ ಪೊಲೀಸ್‌ ಸಹಯೋಗದಲ್ಲಿ ನಿರ್ವಹಣೆ
Last Updated 26 ಮೇ 2021, 9:52 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಜಿಲ್ಲೆಯ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಕೋವಿಡ್‌ ರೋಗಿಗಳಿಗೆ ಉಚಿತವಾಗಿ ಆಕ್ಸಿಜನ್‌ ಸೇವೆ ಒದಗಿಸಲು ಬಾಲಿವುಡ್‌ ನಟ ಸೋನು ಸೂದ್‌ ವಾಣಿಜ್ಯ ನಗರಿಯಲ್ಲಿ ಬುಧವಾರ ‘ರ್‍ಯಾಪಿಡ್‌ ಆಕ್ಸಿಜನ್‌ ಕೇಂದ್ರ’ ಆರಂಭಿಸಿದ್ದಾರೆ.

ಸೂದ್‌ ಚಾರಿಟಿ ಫೌಂಡೇಷನ್‌, ಬೆಂಗಳೂರಿನ ಸ್ವಾಗ್‌ ಸಂಸ್ಥೆ ಮತ್ತು ರೈಲ್ವೆ ಪೊಲೀಸ್‌ ಸಹಯೋಗದಲ್ಲಿ ನಗರದ ರೈಲು ನಿಲ್ದಾಣದ ಆವರಣದಲ್ಲಿರುವ ರೈಲ್ವೆ ಪೊಲೀಸ್‌ ಠಾಣೆಯ ಪಕ್ಕದಲ್ಲಿ ಕೇಂದ್ರ ಕಾರ್ಯನಿರ್ವಹಿಸಲಿದೆ. ಧಾರವಾಡ, ಹಾವೇರಿ, ಗದಗ, ಬೆಳಗಾವಿ, ಕೊಪ್ಪಳ ಜಿಲ್ಲೆಗಳ ಸೋಂಕಿತರಿಗೆ ಆಕ್ಸಿಜನ್‌ ಸೇವೆ ಸಿಗಲಿದೆ. ಸ್ಥಳೀಯವಾಗಿ ಆಕ್ಸಿಜನ್‌ ತುಂಬಿಸಿಕೊಳ್ಳಲು ಫೌಂಡೇಷನ್‌ ಕರ್ನಾಟಕ ಗ್ಯಾಸ್‌ ಎಜೆನ್ಸಿ ಜೊತೆ ಒಪ್ಪಂದ ಮಾಡಿಕೊಂಡಿದೆ.

ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಫೌಂಡೇಷನ್‌ ನಿರ್ದೇಶಕ ಅಮಿತ್ ಪುರೋಹಿತ್‌ ‘ಆಕ್ಸಿಜನ್‌ ಕೊರತೆಯ ಕಾರಣದಿಂದ ಯಾವೊಬ್ಬ ಸೋಂಕಿತರು ಸಾಯಬಾರದು ಎನ್ನುವ ಉದ್ದೇಶ ಸೋನ್ ಸೂದ್‌ ಅವರದ್ದು. ಹೀಗಾಗಿ ರಾಜ್ಯದ ಪ್ರಮುಖ ಊರುಗಳಲ್ಲಿ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಈಗಾಗಲೇ ಬೆಂಗಳೂರಿನಲ್ಲಿ ಸೂದ್‌ ಚಾರಿಟಿ ಫೌಂಡೇಷನ್‌ ಸಕ್ರಿಯವಾಗಿ ಕೆಲಸ ನಿರ್ವಹಿಸುತ್ತಿದೆ’ ಎಂದರು.

‘ರೈಲ್ವೆ ಎಡಿಜಿಪಿ ಭಾಸ್ಕರರಾವ್‌ ಅವರು ಮಾರ್ಗದರ್ಶನ ಮಾಡುತ್ತಿದ್ದು, ಧಾರವಾಡ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಜನರಿಗೆ ಆಕ್ಸಿಜನ್‌ ಒದಗಿಸಲು ರೈಲ್ವೆಯಿಂದ ವಾಹನಗಳ ಸೌಲಭ್ಯ ಇದೆ. ಒಂದು ಅಂಬುಲೆನ್ಸ್‌ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸೌಲಭ್ಯ ಇರುವವರು ಅವರೇ ವಾಹನ ತಂದು ಆಕ್ಸಿಜನ್‌ ತೆಗೆದುಕೊಳ್ಳಬಹುದು. ಅನಾನುಕೂಲವಿದ್ದವರಿಗೆ ನಾವೇ ತಲುಪಿಸುವ ವ್ಯವಸ್ಥೆ ಮಾಡುತ್ತೇವೆ’ ಎಂದು ತಿಳಿಸಿದರು.

ರೈಲ್ವೆ ಪೊಲೀಸ್‌ನ ಡಿವೈಎಸ್‌ಪಿ ಎನ್‌. ಪುಷ್ಪಲತಾ ಮಾತನಾಡಿ ‘ಭಾಸ್ಕರರಾವ್‌ ಅವರ ಆಸಕ್ತಿ ಮೇರೆಗೆ ಹುಬ್ಬಳ್ಳಿಯಿಂದ ಸೋನು ಸೂದ್‌ ಅವರ ಕೇಂದ್ರ ಆರಂಭವಾಗಿದೆ. ಅಗತ್ಯ ಇರುವವರು ಇದರ ಅನುಕೂಲ ಪಡೆದುಕೊಳ್ಳಬೇಕು. ಯಾರಿಗೂ ಆಕ್ಸಿಜನ್ ಕೊರತೆ ಆಗಬಾರದು ಎನ್ನುವ ಉದ್ದೇಶ ನಮ್ಮದು’ ಎಂದರು.

ಸಹಾಯವಾಣಿ ಆರಂಭ
ಚಾರಿಟಿ ಫೌಂಡೇಷನ್‌ ಆರಂಭಿಕ ಹಂತದಲ್ಲಿ 20 ಸಿಲಿಂಡರ್‌ಗಳನ್ನು ಹೊಂದಿದ್ದು, ಸಿಲಿಂಡರ್ ತೆಗೆದುಕೊಂಡು ಹೋದವರು ಬಳಕೆ ಮಾಡಿದ ಬಳಿಕ ಸ್ಯಾನಿಟೈಸರ್‌ ಮಾಡಿ ವಾಪಸ್‌ ನೀಡಬೇಕು.

ಆಕ್ಸಿಜನ್‌ ಬೇಕಾದವರು ಸಹಾಯವಾಣಿ 7069999961 ಸಂಪರ್ಕಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT