ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಮುಷ್ಕರದ ನಡುವೆ ಬಸ್ ಓಡಿಸಲು ಸಾಹಸ

ಖಾಸಗಿ ವಾಹನಗಳಿಂದ ಹೆಚ್ಚು ಹಣ ವಸೂಲಿ ಆರೋಪ: ಅಧಿಕಾರಿಗಳಿಂದ ಪರಿಶೀಲನೆ, ಕ್ರಮದ ಎಚ್ಚರಿಕೆ
Last Updated 8 ಏಪ್ರಿಲ್ 2021, 16:27 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವೇತನ ಪರಿಷ್ಕರಣೆ ಬೇಡಿಕೆ ಮುಂದಿಟ್ಟು ಎರಡು ದಿನಗಳಿಂದ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರದ ನಡುವೆಯೂ ಗುರುವಾರ ಸಾರಿಗೆ ಸಂಸ್ಥೆಯ ಕೆಲ ಬಸ್‌ಗಳು ಸಂಚರಿಸಿದವು.

ಸಾರಿಗೆ ಅಧಿಕಾರಿಗಳು ಸಿಬ್ಬಂದಿಗೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಕೆಲ ನೌಕರರು ಕರ್ತವ್ಯಕ್ಕೆ ಮರಳಿದರು. ಹೀಗಾಗಿ ಅವಳಿ ನಗರಗಳ ನಡುವೆ ಎರಡು ಬಿಆರ್‌ಟಿಎಸ್‌ ಮತ್ತು ಐದು ಸಾಮಾನ್ಯ ಬಸ್‌ಗಳ ಸಂಚಾರ ಮಾಡಿದವು. ಹುಬ್ಬಳ್ಳಿ ಗ್ರಾಮಾಂತರ ವಿಭಾಗದಿಂದ ಕಾರವಾರ, ಶಿರಸಿ, ಬೆಳಗಾವಿಗೆ ತಲಾ ಒಂದು, ಧಾರವಾಡಕ್ಕೆ ಒಂದು, ಗದಗಕ್ಕೆ ಏಳು ಬಸ್‌ಗಳು ಸಂಚರಿಸಿದವು.

ನಗರದ ಹಳೇ ಬಸ್‌ ನಿಲ್ದಾಣದಲ್ಲಿ ಬೆಳಿಗ್ಗೆಯಿಂದಲೇ ಖಾಸಗಿ ವಾಹನಗಳು ನಿಂತಿದ್ದವು. ವಿವಿಧ ಗ್ರಾಮಗಳಿಂದ ಬಂದಿದ್ದ ಪ್ರಯಾಣಿಕರು ಖಾಸಗಿ ವಾಹನಗಳಲ್ಲಿ ತೆರಳಿದರೆ, ದೂರದ ಊರುಗಳಿಗೆ ವಾಹನಗಳ ಸೌಲಭ್ಯ ಕಡಿಮೆಯಿದ್ದ ಕಾರಣ ಪ್ರಯಾಣಿಕರು ಪರದಾಡಿದ ಚಿತ್ರಣ ಕಂಡು ಬಂತು. ಬಿರು ಬಿಸಿಲಿಗೆ ಬಸವಳಿದಿದ್ದ ಕೆಲ ಜನ ಬಸ್‌ ಸಿಗಲಾರದೆ ನಿಲ್ದಾಣದಲ್ಲಿಯೇ ಮಲಗಿ ವಿಶ್ರಾಂತಿ ಪಡೆದರು.

ಖಾಸಗಿ ವಾಹನಗಳು ನಿಗದಿಗಿಂತಲೂ ಹೆಚ್ಚು ಹಣ ವಸೂಲಿ ಮಾಡುತ್ತಿವೆ ಎನ್ನುವ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಆರ್‌ಟಿಒ ಅಧಿಕಾರಿಗಳು ಹಳೇ ಬಸ್‌ ನಿಲ್ದಾಣದಲ್ಲಿ ಮೊಕ್ಕಾಂ ಹೂಡಿದ್ದರು. ಹೆಚ್ಚು ಹಣ ಪಡೆದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಕೆ ನೀಡುತ್ತಿದ್ದರು. ಮುಷ್ಕರದ ಬಗ್ಗೆ ಮೊದಲೇ ಮಾಹಿತಿ ಇದ್ದದ್ದರಿಂದ ಪ್ರಯಾಣಿಕರ ಸಂಖ್ಯೆ ಎಂದಿನಂತಿರಲಿಲ್ಲ.

ಬಸ್‌ ಏರಿದ ಕಾರು ಚಾಲಕರು: ಸಾರಿಗೆ ಇಲಾಖೆಯ ಅಧಿಕಾರಿಗಳ ಕಾರು ಚಾಲಕರಾಗಿದ್ದವರು ಗುರುವಾರ ಬಸ್‌ಗಳನ್ನು ಓಡಿಸಿದರು. ಇದಕ್ಕೆ ಚಾಲಕರ ಕುಟುಂಬ ಸದಸ್ಯರು ರಸ್ತೆಗೆ ಅಡ್ಡವಾಗಿ ನಿಂತು ವಿರೋಧ ವ್ಯಕ್ತಪಡಿಸಿದರು. ಕೆಲ ಮಕ್ಕಳು ಕೂಡ ರಸ್ತೆಗೆ ಅಡ್ಡಲಾಗಿ ನಿಂತಿದ್ದರು. ಆಗ ಅಧಿಕಾರಿಗಳು ಗೋಕುಲ ಠಾಣೆಯ ಪೊಲೀಸರನ್ನು ಕರೆಯಿಸಿ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಟ್ಟರು.

ವಾಗ್ವಾದ: ಕೋವಿಡ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಖಾಸಗಿ ವಾಹನಗಳ ಮಾಲೀಕರು ಪರಿಸ್ಥಿತಿಯ ಲಾಭ ಪಡೆಯಲು ಬುಧವಾರ ರಾತ್ರಿಯಿಂದಲೇ ಹಳೇ ಬಸ್‌ ನಿಲ್ದಾಣದಲ್ಲಿ ವಾಹನಗಳನ್ನು ನಿಲ್ಲಿಸಿದ್ದರು.. ಸಾರಿಗೆ ಇಲಾಖೆ ಅಧಿಕಾರಿಗಳು ಕೆಲ ಸಿಬ್ಬಂದಿಯನ್ನು ಕರೆ ತಂದು ಬಸ್‌ಗಳನ್ನು ಓಡಿಸುವ ಸಾಹಸಕ್ಕೆ ಮುಂದಾದಾಗ ಖಾಸಗಿ ವಾಹನಗಳ ಚಾಲಕರು ವಿರೋಧ ವ್ಯಕ್ತಪಡಿಸಿದರು.

‘ಬೆಳಿಗ್ಗೆಯಿಂದ ಒಂದೂ ಟ್ರಿಪ್‌ ಆಗಿಲ್ಲ. ಬಸ್‌ ಓಡಿಸಲು ಮುಂದಾದರೆ ಹೇಗೆ’ ಎಂದು ಪ್ರಶ್ನಿಸಿದರು. ಸರ್ಕಾರದ ಮನವಿಗೆ ಸ್ಪಂದಿಸಿ ಬಾಕಿ ಉಳಿದಿದ್ದ ತೆರಿಗೆ ಪಾವತಿಸಿ ವಾಹನ ತೆಗೆದುಕೊಂಡು ಬಂದಿದ್ದೇವೆ. ನಮ್ಮ ವಾಹನದ ಒಂದು ಟ್ರಿಪ್‌ ಆದ ಬಳಿಕ ಬಸ್‌ ಒಳಗಡೆ ತನ್ನಿ’ ಎಂದರು. ಕೆಲ ಹೊತ್ತಿನ ಬಳಿಕ ಹಿರಿಯ ಅಧಿಕಾರಿಗಳು ಬಂದಾಗ ಬಸ್‌ ಅನ್ನು ನಿಲ್ದಾಣದ ಒಳಗೆ ನಿಲ್ಲಿಸಲಾಯಿತು.

ಬಹುತೇಕ ಖಾಸಗಿ ವಾಹನದವರು ಹೆಚ್ಚು ಪ್ರಯಾಣಿಕರಿರುವ ‌ಮಾರ್ಗದಲ್ಲಿ ಮಾತ್ರ ಸಂಚಾರ ನಡೆಸಲು ಒಲವು ತೋರಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಧಿಕಾರಿಗಳು ಎಲ್ಲಾ ಮಾರ್ಗಗಳಲ್ಲಿಯೂ ಬಸ್‌ ಓಡಿಸಬೇಕು ಎಂದು ಸೂಚಿಸಿದರು.

ಕರ್ತವ್ಯಕ್ಕೆ ಮರಳಿದರೆ ‘ಅವಕಾಶ’...

ಮುಷ್ಕರದಿಂದ ಹಿಂದೆ ಸರಿದು ಕರ್ತವ್ಯಕ್ಕೆ ಮರಳುವ ಸಿಬ್ಬಂದಿಗೆ ವಿಶೇಷ ‘ಅವಕಾಶ’ ಹಾಗೂ ಸೌಲಭ್ಯಗಳನ್ನು ನೀಡುವುದಾಗಿ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ತಿಳಿಸಿದೆ.

ಈಗ ಚಾಲಕರು ಹಾಗೂ ನಿರ್ವಾಹಕರು ಕರ್ತವ್ಯ ನಿರ್ವಹಿಸಿದರೆ ಮುಂದಿನ ಆರು ತಿಂಗಳ ಅವಧಿಗೆ ಅವರು ಆಯ್ಕೆ ಮಾಡಿಕೊಂಡ ನಿರ್ದಿಷ್ಟ ಮಾರ್ಗದಲ್ಲಿಯೇ ಬಸ್ ಓಡಿಸಲು ಅವಕಾಶ ಕೊಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.}

******

'ನಮ್ಮ ವ್ಯಾಪ್ತಿಯಲ್ಲಿ 23 ಸಿಬ್ಬಂದಿ ವಸತಿಗೃಹದಲ್ಲಿದ್ದು, ಅದರಲ್ಲಿ ಇಬ್ಬರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಉಳಿದ 21 ಸಿಬ್ಬಂದಿಗೆ ವಸತಿಗೃಹ ತೆರವು ಮಾಡುವಂತೆ ಸೂಚಿಸಲಾಗಿದೆ'.

-ವಿವೇಕಾನಂದ ವಿಶ್ವಜ್ಞ,ವಿಭಾಗೀಯ ನಿಯಂತ್ರಣಾಧಿಕಾರಿ, ಹುಬ್ಬಳ್ಳಿ–ಧಾರವಾಡ ನಗರ ಸಾರಿಗೆ

********

'ಸಂಸ್ಥೆಗೆ ಅಗತ್ಯವಿದ್ದಾಗ ಕರ್ತವ್ಯಕ್ಕೆ ಬಾರದ ಸಿಬ್ಬಂದಿಗೆ ವಸತಿಗೃಹ ನೀಡಿ ಏನು ಪ್ರಯೋಜನ? ಆದ್ದರಿಂದ ನೋಟಿಸ್‌ ನೀಡಲಾಗಿದೆ.'

-ಎಚ್. ರಾಮನಗೌಡರ,ವಿಭಾಗೀಯ ನಿಯಂತ್ರಣಾಧಿಕಾರಿ,ಹುಬ್ಬಳ್ಳಿ ಗ್ರಾಮಾಂತರ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT