ಶನಿವಾರ, ಜೂನ್ 6, 2020
27 °C

ಧಾರವಾಡ | ಬಿರುಗಾಳಿ ಮಳೆಗೆ ನೆಲಕಚ್ಚಿದ ಮಾವು

ಎಂ.ಚಂದ್ರಪ್ಪ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲೇ ಅತಿ ಹೆಚ್ಚು ಮಾವು ಬೆಳೆಯುವ ಧಾರವಾಡ ಜಿಲ್ಲೆಯಲ್ಲಿ ಅಕಾಲಿಕ ಮಳೆ ಬೆಳೆಗಾರರನ್ನು ನಷ್ಟದ ಸುಳಿಗೆ ತಳ್ಳಿದೆ. ಶನಿವಾರ ಸಂಜೆ ಸುರಿದ ಆಲಿಕಲ್ಲು, ಬಿರುಗಾಳಿ ಸಹಿತ ಮಳೆ, ಕೊಯ್ಲಿಗೆ ಬಂದ ಮಾವು ಇಳುವರಿಯನ್ನು ಆಪೋಷನ ತೆಗೆದುಕೊಂಡಿದೆ.

ಜಿಲ್ಲೆಯಲ್ಲಿ 10,500 ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆದಿದ್ದು, ಬಹುತೇಕ ತೋಟಗಳಲ್ಲಿ ಮಾವು ನೆಲಕ್ಕೆ ಉದುರಿದೆ. ಕಲಘಟಗಿ, ಕುಂದಗೋಳ, ಧಾರವಾಡ ಸೇರಿ ಹುಬ್ಬಳ್ಳಿ ತಾಲ್ಲೂಕಿನ ಉಣಕಲ್‌, ರೇವಡಿಹಾಳ ಗ್ರಾಮಗಳಲ್ಲಿ ಫಸಲು ಹಾನಿಯಾಗಿದೆ. ಬಿರುಗಾಳಿಗೆ ಮಾವು, ಚಿಕ್ಕು ಗಿಡಗಳೂ ಕೂಡ ಮುರಿದಿವೆ.

‘ಬಿಸಿಲಿನ ತಾಪದಿಂದ ಇಳುವರಿ ಕಡಿಮೆ ಬಂದಿತ್ತು. ಕೊಯ್ಲಿಗೆ ಬಂದ ಬೆಳೆ ಕೈಗೆ ಸಿಗದಂತಾಗಿದೆ’ ಎಂದು ಚನ್ನಪ್ಪ ಸಿದ್ಧಪ್ಪ ಮುಳಗುಂದ ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು. ಹುಬ್ಬಳ್ಳಿಯ ಉಣಕಲ್‌ ಗ್ರಾಮದ ಚನ್ನಪ್ಪ ಸಿದ್ಧಪ್ಪ ಮುಳಗುಂದ (ಹೊಂಬಾಳ) ಅವರ 2 ಎಕರೆ ತೋಟದಲ್ಲಿ ಬಿರುಗಾಳಿ ಮಳೆಗೆ 2 ಕ್ವಿಂಟಲ್‌ಗೂ ಅಧಿಕ ಮಾವು ಉದುರಿದೆ. 10ಕ್ಕೂ ಹೆಚ್ಚು ಮಾವು, ಸಪೋಟಾ ಗಿಡಗಳು ಮುರಿದಿವೆ.


ಮುರಿದು ಬಿದ್ದಿರುವ ಸಪೋಟಾ ಗಿಡ

ರೇವಡಿಹಾಳ ಗ್ರಾಮದಲ್ಲಿ ರವಿ ದುರ್ಗಪ್ಪ ಹರಿಜನ ಅವರಿಗೆ ಸೇರಿದ ಮಾವಿನ ಗಿಡಗಳಲ್ಲೂ ಫಸಲು ಬಿರುಗಾಳಿಗೆ ಉದುರಿದೆ. ಧಾರವಾಡ ತಾಲ್ಲೂಕಿನ ದೇವರಹುಬ್ಬಳ್ಳಿ ಗ್ರಾಮದಲ್ಲಿರುವ ಮಹೇಶ್‌ ಬಿಳಿಹಾಳ ಅವರಿಗೆ ಸೇರಿದ ತೋಟದಲ್ಲೂ 25 ಮಾವಿನ ಮರಗಳು ನೆಲಕ್ಕುರುಳಿವೆ. ಸಸಿಗಳು, ನೆಲಕಚ್ಚಿವೆ. ಮರಗಳಲ್ಲಿದ್ದ ಕಾಯಿಗಳೆಲ್ಲ ಉದುರಿಹೋಗಿವೆ.


ಚನ್ನಪ್ಪ ಸಿದ್ದಪ್ಪ ಮುಳಗುಂದ

ಫಸಲು ತುಂಬಿದ್ದ ಹಲಸಿನ ಮರದಲ್ಲಿ ಕಾಯಿಗಳು ನೆಲಕ್ಕುದುರಿವೆ. ಪೇರಲ ಗಿಡಗಳಲ್ಲಿ ಹೂವು ಉದುರಿವೆ. ಇದರಿಂದ ಇಳುವರಿ ಕಡಿಮೆಯಾಗುವ ಆತಂಕ ರೈತರಲ್ಲಿ ಮನೆ ಮಾಡಿದೆ.  

ಬೆಳೆ ಹಾಳು ಮಾಡದಂತೆ ಮನವಿ

ರೈತರು ಯಾವುದೇ ಕಾರಣಕ್ಕೂ ಬೆಳೆ ಹಾನಿ ಮಾಡಬಾರದು. ತೋಟಗಾರಿಕಾ ಇಲಾಖೆ ಅಧಿಕಾರಿಗಳು ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಜತೆಗೆ ರೈತರ ಬಳಿಗೇ ವ್ಯಾಪಾರಿಗಳನ್ನೂ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಿದೆ. ಕೃಷಿ ಉತ್ಪನ್ನ ಸಾಗಣೆಗೆ ಸರ್ಕಾರ ವಿನಾಯ್ತಿ ನೀಡಿರುವ ಕಾರಣ ಯಾರೂ ಆತಂಕ ಪಡಬಾರದು ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ರಾಮಚಂದ್ರಪ್ಪ ಮಡಿವಾಳರ ಮನವಿ ಮಾಡಿದರು.

ಗಾಳಿ ಮಳೆಯಿಂದ ಮಾವು ಇಳುವರಿ ಹಾಳಾಗಿರುವ ಬಗ್ಗೆ ಸಮೀಕ್ಷೆ ನಡೆಸಲು ತಾಲ್ಲೂಕು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಮೀಕ್ಷಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು