ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ ಜಿಲ್ಲೆಗೆ ಹೆಚ್ಚುವರಿ 3,500 ಮನೆಗಳು ಮಂಜೂರು

ಕೊಳಚೆ ಪ್ರದೇಶಗಳಲ್ಲಿ ಮನೆಗಳ ನಿರ್ಮಾಣ ಕಾರ್ಯಕ್ರಮ: ಸೋಮಣ್ಣ ಹೇಳಿಕೆ
Last Updated 20 ಮಾರ್ಚ್ 2022, 6:21 IST
ಅಕ್ಷರ ಗಾತ್ರ

ಕುಂದಗೋಳ: ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಧಾರವಾಡ ಜಿಲ್ಲೆಯ ನಗರ ಹಾಗೂ ಪುರಸಭೆಗಳಿಗೆ 4,075 ಮನೆಗಳು ಈಗಾಗಲೇ ಮಂಜೂರು ಮಾಡಲಾಗಿದೆ. ಜಿಲ್ಲೆಗೆ ಹೆಚ್ಚುವರಿಯಾಗಿ ನಗರ ಪ್ರದೇಶಗಳ ವ್ಯಾಪ್ತಿಗೆ 3,500 ಮನೆಗಳನ್ನು ಮಂಜೂರು ಮಾಡಲಾಗುವುದು ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು.

ಅವರು ಶನಿವಾರ ಪಟ್ಟಣದಲ್ಲಿ ನಡೆದ ಕೊಳಚೆ ಪ್ರದೇಶಗಳಲ್ಲಿ ಮನೆಗಳ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ಹಾಗು ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಗುಡಿಸಲು ಮುಕ್ತ ರಾಜ್ಯ ಯೋಜನೆಗೆ ಮೊದಲ ಹೆಜ್ಜೆಯಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರುಕ್ಷೇತ್ರ ಹಾವೇರಿಯಿಂದ ಚಾಲನೆ ನೀಡಲಾಗಿದೆ. ಜಾತಿ ಆಧಾರದ ಮೇಲೆ ಯಾರಿಗೂ ಮನೆ ಹಂಚಿಕೆ ಮಾಡಬೇಡಿ. ನಿಜವಾದ ಫಲಾನುಭವಿಗಳಿಗೆ ಮನೆ ಹಂಚಿ ಬಡವರ, ನಿರ್ಗತಿಕರ ಕಷ್ಟಕ್ಕೆ ಸ್ಪಂದಿಸಬೇಕು’ ಎಂದರು.

‘ಕುಂದಗೋಳ ಪಟ್ಟಣದಲ್ಲಿ ರಾಜ್ಯಕ್ಕೆ ಮಾದರಿ ಎನಿಸುವ ರೀತಿಯಲ್ಲಿ ಕೊಳಚೆ ಪ್ರದೇಶಗಳನ್ನು ಅಭಿವೃದ್ಧಿ ಪಡಿಸಲಾಗುವುದು. 500 ಮನೆಗಳನ್ನು ತಕ್ಷಣಕ್ಕೆ ಮಂಜೂರು ಮಾಡುತ್ತೇನೆ. ಪಟ್ಟಣ ಪಂಚಾಯಿತಿಯಿಂದ ಫಲಾನುಭವಿಗಳ ಆಧಾರ್‌ ಹಾಗೂ ಜಿಪಿಎಸ್ ಮಾಹಿತಿ ಕಳುಹಿಸಬೇಕು. ಕೇಂದ್ರ ಸರ್ಕಾರ ಪ್ರಸಕ್ತ ವರ್ಷಕ್ಕೆ 18 ಲಕ್ಷ ಮನೆಗಳನ್ನು ರಾಜ್ಯಕ್ಕೆ ಮಂಜೂರು ಮಾಡಿದೆ. ರಾಜ್ಯದಲ್ಲಿ ಇದುವರೆಗೂ 5 ಲಕ್ಷ ಮನೆಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ 4 ಲಕ್ಷ ಮನೆಗಳನ್ನು ಗ್ರಾಮೀಣ ಭಾಗಕ್ಕೆ ನೀಡಲಾಗಿದೆ’ ಎಂದು ತಿಳಿಸಿದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ ‘2024ರೊಳಗೆ ಭಾರತದಲ್ಲಿ ಎಲ್ಲರಿಗೂ ಸೂರು ಕಲ್ಪಿಸಲಾಗುವುದು. ಪ್ರಸಕ್ತ ವರ್ಷದಲ್ಲಿ ಕೇಂದ್ರ ಸರ್ಕಾರ 1.15 ಕೋಟಿ ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಿದೆ’ ಎಂದರು.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವ ಜನಪ್ರತಿನಿಧಿಗಳು, ಅಧಿಕಾರಿಗಳು ಬಡವರು ಹಾಗೂ ನೊಂದವರ ಪರ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಇಲ್ಲವಾದರೆ ಜನ ನಮ್ಮ ಮೇಲೆ ನಂಬಿಕೆ ಕಳೆದುಕೊಳ್ಳುತ್ತಾರೆ’ ಎಂದರು.

ಶಾಸಕಿ ಕುಸುಮಾವತಿ ಶಿವಳ್ಳಿ, ಎಂ.ಆರ್‌. ಪಾಟೀಲ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ, ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಬಸವರಾಜ ಕುಂದಗೋಳಮಠ, ರವಿಗೌಡ ಪಾಟೀಲ, ಸಿ.ವೈ. ಹಿರೇಗೌಡ್ರ, ಡಿ.ವೈ. ಲಕ್ಕನಗೌಡ್ರ, ಚೈತ್ರಾ ಶಿರೂರು, ಭುವನೇಶ್ವರಿ ಕವಲಗೇರಿ, ಪ್ರಕಾಶ ಕೂಬಿಹಾಳ, ಎನ್‌.ಎನ್‌. ಪಾಟೀಲ, ಬರಮಪ್ಪ ಮುಗಳಿ, ತಹಶೀಲ್ದಾರ್ ಅಶೋಕ ಶಿಗ್ಗಾವ, ತಾಲ್ಲೂಕು ಪಂಚಾಯ್ತಿ ಇಒ ಮಹೇಶ ಕುರಿಯವರ, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಪ್ರಕಾಶ ಕೊಕಾಟೆ, ಉಪಾಧ್ಯಕ್ಷ ಹನುಮಂತಪ್ಪ ರಣತೂರ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಆಯುಕ್ತ ಬಿ.ವೆಂಕಟೇಶ್, ಧಾರವಾಡ ವೃತ್ತದ ತಾಂತ್ರಿಕ ನಿರ್ದೇಶಕ ಎಚ್.ಪಿ.ಸುಧೀರ, ಕುಂದಗೋಳ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಗಂಗಾಧರ ಎಂ. ಸಾನಕ್ಯಾನವರ ಪಾಲ್ಗೊಂಡಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT