ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶಿಷ್ಟರ ಮೇಲೆ ನಿಲ್ಲದ ದೌರ್ಜನ್ಯ

Published 19 ಜನವರಿ 2024, 6:29 IST
Last Updated 19 ಜನವರಿ 2024, 6:29 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೇಲೆ ದೌರ್ಜನ್ಯ ತಡೆಗೆ ಕಾನೂನು ಹಾಗೂ ಜಾಗೃತಿ ಕಾರ್ಯಕ್ರಮ ಜಾರಿಗೊಳಿಸಿದರೂ, ಹಲವು ಸ್ವರೂಪಗಳಲ್ಲಿ ಶೋಷಣೆಗಳು ಮುಂದುವರೆದಿವೆ.

ರಾಜ್ಯದಲ್ಲಿ 2023-24ನೇ ಸಾಲಿನಲ್ಲಿ 461 ದೌರ್ಜನ್ಯ ಪ್ರಕರಣಗಳಲ್ಲಿ ಎಫ್‌ಐಆರ್‌ ದಾಖಲಾಗಿದೆ. 643 ಮಂದಿ ಶೋಷಣೆಗೆ ಒಳಗಾಗಿದ್ದು, ಈ ಪೈಕಿ 10 ಕೊಲೆ ಮತ್ತು 9 ಅತ್ಯಾಚಾರದಂತಹ ಗಂಭೀರ ಪ್ರಕರಣಗಳೂ ಇವೆ.

ಬೆಂಗಳೂರು ನಗರದಲ್ಲಿ 98, ಚಿಕ್ಕಮಗಳೂರು-66, ಧಾರವಾಡ-53, ತುಮಕೂರು-43 ಪ್ರಕರಣಗಳು ನಡೆದಿದ್ದರೆ, ವಿಜಯನಗರ,  ಹಾವೇರಿ, ಕಲಬುರಗಿ, ಕೋಲಾರ, ಕೊಡಗು, ಚಿತ್ರದುರ್ಗ, ಯಾದಗಿರಿ, ಹಾಸನ, ವಿಜಯಪುರ, ಬೆಂಗಳೂರು ಗ್ರಾಮೀಣ, ಚಾಮರಾಜನಗರ ಮತ್ತು ಬಳ್ಳಾರಿಯಲ್ಲಿ ಯಾವ ಪ್ರಕರಣವೂ ದಾಖಲಾಗಿಲ್ಲ. ಒಟ್ಟು ₹5.16 ಕೋಟಿ ಪರಿಹಾರ ನೀಡಲಾಗಿದೆ.

‘ಅತ್ಯಂತ ಪ್ರಬಲವಾದ ಕಾಯ್ದೆಯನ್ನು ಅನುಷ್ಠಾನಗೊಳಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ತಮ್ಮ ಹಕ್ಕುಗಳ ಚಲಾವಣೆಗೆ ಸಮುದಾಯದವರೂ ಹಿಂಜರಿಯುತ್ತಾರೆ. ಅದಕ್ಕೆ ದೌರ್ಜನ್ಯ ನಿಯಂತ್ರಣಕ್ಕೆ ಬಂದಿಲ್ಲ’ ಎಂದು ಸಮತಾ ಸೇನಾ ಕರ್ನಾಟಕ ಸಂಘಟನೆ ಅಧ್ಯಕ್ಷ ಗುರುನಾಥ ಉಳ್ಳಿಕಾಶಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ನ್ಯಾಯಾಲಯಕ್ಕೆ ಬೇಕಾಗುವ ಸಾಕ್ಷಿ ಕಲೆ ಹಾಕುವಲ್ಲಿ ಅಧಿಕಾರಿಗಳು ವಿಫಲರಾಗುವುದು, ಗಂಭೀರ ಪ್ರಕರಣಗಳಲ್ಲೂ ಅನೌಪಚಾರಿಕ ರಾಜಿ ಸಂಧಾನ ಮಾಡುವುದರಿಂದ ದೌರ್ಜನ್ಯಕ್ಕೆ ಒಳಗಾದವರಿಗೆ ಅನ್ಯಾಯ ಆಗುತ್ತಿದೆ. ಈ ಸಂಬಂಧ ಸಮುದಾಯದವರಲ್ಲಿ ಜಾಗೃತಿ ಮೂಡಬೇಕು. ಸಂಘಟನೆಗಳು ರಾಜಕೀಯ ಪ್ರೇರಿತ ಚಟುವಟಿಕೆಗಳಿಂದ ಹೊರಬಂದು, ಸಮುದಾಯಗಳ ಒಳಿತಿಗೆ ಒಗ್ಗೂಡಬೇಕು’ ಎಂದರು.

ಜಾಗೃತಿ: ದೌರ್ಜನ್ಯಕ್ಕೆ ಒಳಗಾದ ಪರಿಶಿಷ್ಟ ಜಾತಿ ಮತ್ತು ಪಂಗಡದವರು ನೀಡಿದ ದೂರು ಆಧರಿಸಿ, ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಾರೆ. ಅದರಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಪರಿಶೀಲಿಸುತ್ತಾರೆ.  ಸತ್ಯಾಸತ್ಯತೆ ಬಗ್ಗೆ ವರದಿ ಸಲ್ಲಿಸಲಾಗುತ್ತದೆ. ನಂತರ, ದೌರ್ಜನ್ಯಕ್ಕೆ ಒಳಗಾದವರಿಗೆ ಹಂತ ಹಂತವಾಗಿ ಪರಿಹಾರ ಕಲ್ಪಿಸಲಾಗುತ್ತದೆ. ಇಂತಹ ಘಟನೆಗಳು ನಡೆಯದಂತೆ ಎಲ್ಲ ಸಮುದಾಯದವರ ಸಭೆ ನಡೆಸಿ, ಜಾಗೃತಿ ಮೂಡಿಸಲಾಗುತ್ತದೆ’ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಎಂ.ಬಿ. ಸಣ್ಣೇರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT