ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡದ ಜಾಗೃತಿ; ಆಸಕ್ತಿ ತೋರದ ಜನ

ಪೂರ್ಣಗೊಳ್ಳದ ವಾರ್ಡ್‌ ಸಮಿತಿ ರಚನೆ, ಪದೇ ಪದೇ ದಿನಾಂಕ ವಿಸ್ತರಣೆ
Last Updated 25 ಮೇ 2022, 4:06 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅವಳಿ ನಗರಗಳ ಅಭಿವೃದ್ಧಿಗೆ ಪೂರಕವಾಗುವ ವಾರ್ಡ್‌ವಾರು ಸಮಿತಿ ರಚನೆಗೆ ಮೊದಲ ಬಾರಿಗೆ ಅರ್ಜಿ ಆಹ್ವಾನಿಸಿ ಎರಡು ತಿಂಗಳು ಸಮೀಪಿಸಿದರೂ ಬಹುತೇಕ ಕಡೆ ಜನ ಆಸಕ್ತಿ ತೋರಿಸುತ್ತಿಲ್ಲ. ಹೀಗಾಗಿ ಸಮಿತಿ ರಚನೆ ವಿಳಂಬವಾಗುತ್ತಲೇ ಸಾಗಿದೆ.

ಪಾಲಿಕೆ ಆಯುಕ್ತರು ಏಪ್ರಿಲ್‌ 5ರಂದು ಮೊದಲ ಸಲ ವಾರ್ಡ್‌ವಾರು ಸಮಿತಿ ರಚನೆಗೆ ಆದೇಶ ಹೊರಡಿಸಿದ್ದರು. ಇದಾದ ಬಳಿಕ ಮೂರು ಬಾರಿ ದಿನಾಂಕ ವಿಸ್ತರಿಸಿದ್ದಾರೆ. ಈಗ ಮತ್ತೆ ದಿನಾಂಕ ವಿಸ್ತರಣೆಯಾಗಿದ್ದು, ಜೂನ್‌ 17 ಕೊನೆ ದಿನವಾಗಿದೆ.

ಪ್ರತಿ ಸಮಿತಿಯಲ್ಲಿ 11 ಜನ ಸದಸ್ಯರು ಇರಬೇಕು. ಆಯಾ ವಾರ್ಡ್‌ ಪ್ರತಿನಿಧಿಸುವ ಪಾಲಿಕೆ ಸದಸ್ಯ ಸಮಿತಿ ಅಧ್ಯಕ್ಷರಾಗಿರುತ್ತಾರೆ. ಇಬ್ಬರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದವರು, ಕನಿಷ್ಠ ಮೂವರು ಮಹಿಳೆಯರು, ಆಯಾ ಬಡಾವಣೆಗಳ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳನ್ನು ಪ್ರತಿನಿಧಿಸುವ ಇಬ್ಬರು ಸದಸ್ಯರಾಗಬಹುದು. ಬಹಳಷ್ಟು ಕಡೆ ಜನ ಆಸಕ್ತಿ ತೋರದ ಕಾರಣ ಸಮಿತಿ ರಚನೆ ಇನ್ನೂ ಪೂರ್ಣಗೊಂಡಿಲ್ಲ.

ಜಾಗೃತಿಯ ಕೊರತೆ: ವಾರ್ಡ್‌ ಸಮಿತಿಯ ಅಗತ್ಯತೆ ಹಾಗೂ ಮಹತ್ವ ಬಹಳಷ್ಟು ಜನಕ್ಕೆ ಗೊತ್ತಿಲ್ಲದ ಕಾರಣ ವಿಳಂಬವಾಗುತ್ತಿದ್ದು, ಪಾಲಿಕೆ ಕೂಡ ಈ ಕುರಿತು ಜಾಗೃತಿ ಮೂಡಿಸುವ ಕೆಲಸ ಪರಿಣಾಮಕಾರಿಯಾಗಿ ಮಾಡುತ್ತಿಲ್ಲ. ಕೆಲವೆಡೆ ಪಾಲಿಕೆ ಸದಸ್ಯರೇ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ವಾರ್ಡ್‌ನಲ್ಲಿ ಸಮಿತಿ ರಚನೆಯಾದರೆ ನಮ್ಮ ಅಧಿಕಾರ ಕಡಿಮೆಯಾಗುತ್ತದೆ ಎಂದು ಕೆಲ ಪಾಲಿಕೆ ಸದಸ್ಯರು ಭಾವಿಸಿದ್ದು ಕೂಡ ಸಮಿತಿ ರಚನೆಗೆ ಹಿನ್ನಡೆ ಉಂಟಾಗಲು ಕಾರಣ ಎನ್ನಲಾಗುತ್ತಿದೆ. ಆದ್ದರಿಂದ ಪಾಲಿಕೆ ಅಧಿಕಾರಿಗಳೇ ವಾರ್ಡ್‌ ಸಮಿತಿ ರಚನೆ, ಅಗತ್ಯತೆ ಬಗ್ಗೆ ಇನ್ನಷ್ಟು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು. ಇದಕ್ಕೆ ವಾರ್ಡ್‌ವಾರು ಕಾರ್ಯಕ್ರಮ ಆಯೋಜಿಸಬೇಕು ಎನ್ನುವ ಆಗ್ರಹ ಕೂಡ ಸಾರ್ವಜನಿಕರ ವಲಯದಿಂದ ಕೇಳಿಬರುತ್ತಿದೆ.

ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ವಿನಯ ಜವಳಿ ‘ಪಾಲಿಕೆ ಹಾಗೂ ಸಂಘ ಸಂಸ್ಥೆಗಳು ವಾರ್ಡ್‌ವಾರು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ವಾರ್ಡ್‌ ಸಮಿತಿ ರಚನೆಯಿಂದಾಗಿ ಕುಡಿಯುವ ನೀರು, ಕಸ ವಿಲೇವಾರಿ, ರಸ್ತೆ ದುರಸ್ತಿ ಹೀಗೆ ಅನೇಕ ಮೂಲಸೌಕರ್ಯಗಳ ಸಮಸ್ಯೆಗಳು ತ್ವರಿತವಾಗಿ ಪರಿಹಾರವಾಗುತ್ತವೆ. ಜನ ಕೂಡ ಎಚ್ಚೆತ್ತುಕೊಳ್ಳಬೇಕು’ ಎಂದರು.

ಜನಾಗ್ರಹದ ಪ್ರಯತ್ನ: ವಾರ್ಡ್‌ ಸಮಿತಿ ರಚನೆ ಅಗತ್ಯತೆ ತಿಳಿಸಲು ಜನಜಾಗೃತಿ ಮೂಡಿಸುತ್ತಿರುವ ಜನಾಗ್ರಹ ಸಮಿತಿ ವಾರ್ಡ್‌ವಾರು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲು ಮುಂದಾಗಿದೆ. ಆಯಾ ವಾರ್ಡ್‌ನಲ್ಲಿನ ಪರಿಶಿಷ್ಟ ಸಮುದಾಯದ ಸಂಘಗಳನ್ನು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳನ್ನು ಗುರುತಿಸಿ ಜಾಗೃತಿ ಮೂಡಿಸುತ್ತಿದೆ.

ವಾರ್ಡ್‌ ಸಮಿತಿಗೆ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಿಸುವಂತೆ ಜನರೇ ಕೇಳಿಕೊಂಡಿದ್ದಾರೆ. ಇದು ಕೊನೆಯ ಅವಕಾಶ. ದಿನಾಂಕ ಮತ್ತೆ ವಿಸ್ತರಣೆ ಮಾಡುವುದಿಲ್ಲ.
ಡಾ. ಗೋಪಾಲಕೃಷ್ಣ ಬಿ.
ಪಾಲಿಕೆ ಆಯುಕ್ತರು

ಅವಧಿ ವಿಸ್ತರಣೆಯಾದ್ದರಿಂದ ಉತ್ತಮ ಸದಸ್ಯರನ್ನು ಹುಡುಕಲು ಸಾಧ್ಯವಾಗುತ್ತದೆ. 12 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯ ಅವಳಿ ನಗರದಲ್ಲಿ 820 ಸದಸ್ಯರ ಆಯ್ಕೆ ಸುಲಭವಲ್ಲ.
ಸಂತೋಷ ನರಗುಂದ
ವಾರ್ಡ್‌ ಸಮಿತಿ ರಚನೆ ಸಂಪನ್ಮೂಲ ವ್ಯಕ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT