ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಲ ಕೆಟ್ಟಿಲ್ಲ, ಮನುಷ್ಯ ಕೆಟ್ಟಿದ್ದಾನೆ: ಬಸವರಾಜ ಹೊರಟ್ಟಿ

ಶ್ರೀರಾಮ ನವಮಿ ಮಹೋತ್ಸವ, ಕೃಷ್ಣ ದೇವರ ಪ್ರತಿಷ್ಠಾಪನೆ‌ ಸುವರ್ಣ ಮಹೋತ್ಸವ
Last Updated 31 ಮಾರ್ಚ್ 2023, 6:03 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಕಾಲ ಕೆಟ್ಟಿಲ್ಲ. ಮನುಷ್ಯರು ಕೆಟ್ಟಿದ್ದಾರೆ. ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಮನುಷ್ಯ ಕಾಲವನ್ನು ದೂರುತ್ತಿದ್ದಾನೆ. ಸತ್ಯ ನುಡಿದು, ಸತ್ಯದಿಂದ ಬದುಕಿದಾಗ ಎಲ್ಲವೂ ಸರಿಯಾಗಲಿದೆ’ ಎಂದು ವಿಧಾನ ಪರಿಷತ್ ಸಭಾಪತಿ‌ ಬಸವರಾಜ ಹೊರಟ್ಟಿ ಹೇಳಿದರು.

ದೇಶಪಾಂಡೆ ನಗರದ ಕೃಷ್ಣ ಕಲ್ಯಾಣ ಮಂಟಪದಲ್ಲಿ ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜವು ಗುರುವಾರ ಹಮ್ಮಿಕೊಂಡಿದ್ದ ಶ್ರೀರಾಮ ನವಮಿ ಮತ್ತು ಕೃಷ್ಣ ದೇವರ ಪ್ರತಿಷ್ಠಾಪನೆ ಸುವರ್ಣ ಮಹೋತ್ಸವದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಒಂದು‌ ಸಂಸ್ಥೆಯ ಆರಂಭ ದೊಡ್ಡದಲ್ಲ. ಆದರೆ, ಅದನ್ನು ಐವತ್ತು ವರ್ಷಗಳವರೆಗೆ ಉಳಿಸಿಕೊಂಡು ಬರುವುದು ನಿಜಕ್ಕೂ ಸಾಧನೆ. ಈ ಪಯಣದಲ್ಲಿ ಸಮಾಜವು ತನ್ನ ಬಳಗಕ್ಕೆ ನೀಡಿರುವ ಸಂಸ್ಕಾರ ಶ್ಲಾಘನೀಯ. ಸಮಾಜದ ಸಂಘಟನೆ ತಪ್ಪಲ್ಲ. ಅದರ‌ ದುರುಪಯೋಗ ತಪ್ಪು’ ಎಂದರು.

‘ಇಂದು ಯಾರೂ ನೆಮ್ಮದಿ ಮತ್ತು ಸಮಾಧಾನದಿಂದ ಇಲ್ಲ. ಎಲ್ಲರೂ ಒಂದಲ್ಲ ಒಂದು ರೀತಿಯ ಜಂಜಾಟದಲ್ಲಿ‌ ಸಿಲುಕಿದ್ದೇವೆ.‌‌ ಇಂತಹ ಸಂದರ್ಭದಲ್ಲಿ ಸಮಾಜಕ್ಕೆ ಮಾರ್ಗದರ್ಶನ ಮತ್ತು ನೆಮ್ಮದಿ ನೀಡುವ ಕಾರ್ಯಕ್ರಮ ಇದಾಗಿದೆ’ ಎಂದು ಅಭಿಪ್ರಾಯಪಟ್ಟರು.

ಧಾರವಾಡ ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಸುಗ್ಗಿ ಸುಧಾಕರ ಮಾತನಾಡಿ, ‘ಬ್ರಾಹ್ಮಣರು ಮತ್ತು ಬಂಟರ ನಡುವೆ ಅನ್ಯೋನ್ಯ ಸಂಬಂಧವಿದೆ. ಧಾರ್ಮಿಕ ಕಾರ್ಯಕ್ರಮಗಳಿಗೆ ಮಕ್ಕಳನ್ನು ಸಹ‌ ಕರೆದುಕೊಂಡು ಬರಬೇಕು. ‌ಚಿಕ್ಕಂದಿನಿಂದಲೇ ಅವರಿಗೆ ಸಂಸ್ಕಾರ ಕಲಿಸಬೇಕು’ ಎಂದು ಸಲಹೆ ನೀಡಿದರು.

ಸಾನ್ನಿಧ್ಯ ವಹಿಸಿದ್ದ ಉಡುಪಿಯ ಪಲಿಮಾರು ಮಠದ ವಿದ್ಯಾದೀಶ ತೀರ್ಥ ಸ್ವಾಮೀಜಿ ಮತ್ತು ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.

ಸನ್ಮಾನ: ಕೃಷ್ಣ ಮತ್ತು ರಾಘವೇಂದ್ರ ದೇವಾಲಯದಲ್ಲಿ ಐವತ್ತು ವರ್ಷಗಳಿಂದ‌ ಅರ್ಚಕರಾಗಿ ಸೇವೆ ಸಲ್ಲಿಸುತ್ತಿರುವ ಲಕ್ಷ್ಮೀನಾರಾಯಣ ಭಟ್ ದಂಪತಿಗೆ ‘ಶ್ರೀ ಕೃಷ್ಣ ಸೇವಾ ನಿರತ ಪ್ರಶಸ್ತಿ’ ಹಾಗೂ ಕೃಷ್ಣಮೂರ್ತಿ ತೆಂಕಿಲ್ಲಾಯ ದಂಪತಿಗೆ ‘ಶ್ರೀ ರಾಘವೇಂದ್ರ ಸೇವಾ ನಿರತ ಪ್ರಶಸ್ತಿ’ ನೀಡಿ ಸನ್ಮಾನಿಸಲಾಯಿತು.

ಬ್ರಾಹ್ಮಣ ಸಮಾಜದ ಅಧ್ಯಕ್ಷ ಅನಂತ ಪದ್ಮನಾಭ ಐತಾಳ ಸ್ವಾಗತಿಸಿದರು. ಪದಾಧಿಕಾರಿಗಳಾದ ಸುರೇಶ ಕೆಮ್ತೂರು, ವಾದಿರಾಜ ಭಟ್, ರಾಮಚಂದ್ರ ಉಪಾಧ್ಯ, ಅನಂತಕೃಷ್ಣ ಐತಾಳ್, ಗೀತಾ ಸೋಮೇಶ್ವರ, ಮನೋಹರ ಪರ್ವತಿ ಇದ್ದರು. ವೆಂಕಟೇಶ ಆಚಾರ್ಯ ಕೊರ್ಲಳ್ಳಿ ನಿರೂಪಣೆ ಮಾಡಿದರು.

ರಾಮ ನವಮಿ ಅಂಗವಾಗಿ ರಾಮ ಜನ್ಮೋತ್ಸವ ಮತ್ತು ತೊಟ್ಟಿಲೋತ್ಸವ ಜರುಗಿತು. ಪ್ರಸಾದ ವಿತರಣೆ ಜರುಗಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT