ಮಂಗಳವಾರ, ಜೂನ್ 28, 2022
28 °C

ಬಿಯರ್‌ ಮಾರಾಟ ಶೇ 60ರಷ್ಟು ಕುಸಿತ, ಖರೀದಿಯತ್ತ ಒಲವು ತೋರಿಸದ ಮದ್ಯಪ್ರಿಯರು

ಕಲಾವತಿ ಬೈಚಬಾಳ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಲಾಕ್‌ಡೌನ್‌ ಕಾರಣದಿಂದ ಸದ್ಯ ಮದ್ಯದ ಅಂಗಡಿಗಳನ್ನು ತೆರೆಯಲು ದಿನದ 4 ಗಂಟೆ ಮಾತ್ರ ಅವಕಾಶ ಇದ್ದರೂ ಮದ್ಯ, ಬಿಯರ್‌ ಮಾರಾಟ ಕುಸಿದಿದೆ.

ಕಳೆದ ಬಾರಿಯ ಲಾಕ್‌ಡೌನ್‌ನಲ್ಲಿ ಮದ್ಯದ ಪಾರ್ಸಲ್ ಸೇವೆಗೆ ಅವಕಾಶ ಇರಲಿಲ್ಲ. ಈ ಬಾರಿ ಅಗತ್ಯ ವಸ್ತುಗಳಿಗೆ ನೀಡಿದ ವಿನಾಯಿತಿ ಪಟ್ಟಿಯಲ್ಲಿ ಮದ್ಯ ಸ್ಥಾನ ಪಡೆದಿದೆ. ಬೆಳಿಗ್ಗೆ 6 ರಿಂದ 10 ಗಂಟೆ ತನಕ ಪಾರ್ಸಲ್‌ ಒಯ್ಯಲು ಅವಕಾಶವಿದೆ.

ಲಾಕ್‌ಡೌನ್‌ ಅವಧಿಯಲ್ಲಿ ವಿಸ್ಕಿ, ಬ್ರಾಂಡಿ, ರಮ್ ಸೇರಿದಂತೆ ಐಎಂಎಲ್‌ (ಮದ್ಯ) ಮಾರಾಟದಲ್ಲಿ ಶೇ 50ರಷ್ಟು ಕುಸಿದಿದೆ. ಆದರೆ, ಬಿಯರ್‌ ಮಾರಾಟದಲ್ಲಿ ಶೇ 60ರಷ್ಟು ಕಡಿಮೆಯಾಗಿದೆ ಎಂದು ಅಬಕಾರಿ ಇಲಾಖೆ ಆಯುಕ್ತ ಕೆ. ಪ್ರಶಾಂತ ಕುಮಾರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.  

2021ರ ಮೇ ತಿಂಗಳಿನಲ್ಲಿ 73,971 ಪೆಟ್ಟಿಗೆಗಳಷ್ಟು ಮದ್ಯ ಮಾರಾಟವಾಗಿದ್ದು, 8,357 ಪೆಟ್ಟಿಗೆಗಳಷ್ಟು ಬಿಯರ್ ಮಾರಾಟವಾಗಿದೆ. 2020ರ ಮೇ ತಿಂಗಳಿನಲ್ಲಿ 1,00897 ಪೆಟ್ಟಿಗೆ ಮದ್ಯ, 26,085 ಪೆಟ್ಟಿಗೆ ಬಿಯರ್‌ ಮಾರಾಟವಾಗಿತ್ತು.

‘ಪಬ್, ಬಾರ್ ಆ್ಯಂಡ್ ರೆಸ್ಟೋರಂಟ್‌ಗಳಲ್ಲಿ ಬಿಯರ್ ಹೆಚ್ಚು ಮಾರಾಟವಾಗುತ್ತಿತ್ತು. ಅವುಗಳನ್ನು ತೆರೆಯಲು ಅವಕಾಶವಿಲ್ಲದ ಕಾರಣ ಬಿಯರ್ ಮಾರಾಟ ಕುಸಿದಿರಬಹುದು’ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಸಾಮಾನ್ಯ ದಿನಗಳಲ್ಲಿ ದಿನಕ್ಕೆ ₹1.5 ಲಕ್ಷದಷ್ಟು ಮದ್ಯ ವ್ಯಾಪಾರವಾಗುತ್ತಿತ್ತು. ಈಗ ₹30ರಿಂದ ₹40 ಸಾವಿರದಷ್ಟು ಮಾರಾಟವಾಗುತ್ತಿದೆ. ಮದ್ಯ ಖರೀದಿಗಿರುವ ಸಮಯವನ್ನು ಇನ್ನಷ್ಟು ವಿಸ್ತರಿಸಿದರೆ ಅನುಕೂಲ
ಪ್ರದೀಪ್‌ ಶೆಟ್ಟಿ, ಪಿಕೊಲೊ ಬಾರ್‌ ಮತ್ತು ರೆಸ್ಟೋರೆಂಟ್‌

ಅಕ್ರಮ ಮದ್ಯ ಮಾರಾಟ ಪ್ರಕರಣ ಇಳಿಕೆ

‘ಕಳೆದ ವರ್ಷದ ಲಾಕ್‌ಡೌನ್‌ ಅವಧಿಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಕಳ್ಳಬಟ್ಟಿ, ಅಕ್ರಮ ಮದ್ಯ ಮಾರಾಟ ಪ್ರಕರಣಗಳು ಕಂಡು ಬಂದಿದ್ದವು. ಆದರೆ, ಈ ವರ್ಷ ಬೆರೆಳೆಣಿಕೆಯಷ್ಟು ಪ್ರಕರಣಗಳು ಮಾತ್ರ ಕಂಡು ಬಂದಿವೆ’ ಎಂದು ಅಬಕಾರಿ ಇಲಾಖೆ ಆಯುಕ್ತ ಕೆ. ಪ್ರಶಾಂತ ಕುಮಾರ  ತಿಳಿಸಿದರು.

‘2021ರ ಏಪ್ರಿಲ್‌ 23ರಿಂದ ಮೇ 31ರ ಅವಧಿಯಲ್ಲಿ 18 ಅಕ್ರಮ ಮದ್ಯ ಸಾಗಾಟ, 2 ಕಳ್ಳಬಟ್ಟಿ ಪ್ರಕರಣಗಳು ಕಂಡು ಬಂದಿವೆ. ಅಂದಾಜು ₹7 ಲಕ್ಷ ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

ರಾಜಸ್ವ ಸಂಗ್ರಹಣೆ ಅಂಕಿ–ಅಂಶ

ವರ್ಷ;ಏಪ್ರಿಲ್‌; ಮೇ (ಕೋಟಿ ₹ಗಳಲ್ಲಿ)

2020;0;75.86

2021;114.60;64.76

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು