ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಎಂದರೆ ಭ್ರಷ್ಟಾಚಾರಿಗಳ ಜನತಾ ಪಕ್ಷ: ದಿನೇಶ ಗುಂಡೂರಾವ್ ಟೀಕೆ

Last Updated 12 ಮೇ 2019, 9:35 IST
ಅಕ್ಷರ ಗಾತ್ರ

ಹುಬ್ಬಳ್ಳಿ: ’ಬಿಜೆಪಿ ಎಂದರೆ ಭ್ರಷ್ಟಾಚಾರಿಗಳ ಜನತಾ ಪಕ್ಷ. ಅಲ್ಲಿರುವವರೆಲ್ಲರೂ ಭ್ರಷ್ಟಾಚಾರಿಗಳೇ. ರಾಜ್ಯದ ಮೈತ್ರಿ ಸರ್ಕಾರ ಬೀಳಿಸುವ ಯತ್ನ ಮಾಡಿರುವ ಬಿ.ಎಸ್. ಯಡಿಯೂರಪ್ಪ ಅವರ ಧ್ವನಿಮುದ್ರಿಕೆಯಲ್ಲೇ ಇದು ಸಾಬೀತಾಗಿದೆ. ಅಂತಹವರ ಭ್ರಷ್ಟಾಚಾರದ ವಿರುದ್ಧದ ಮಾತನ್ನು ಯಾರು ತಾನೇ ಕೇಳುತ್ತಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಲೋಕಸಭೆ ಹಾಗೂ ರಾಜ್ಯದ ಉಪ ಚುನಾವಣೆಗಳಲ್ಲಿ ಸೋಲುವ ಭಯದಿಂದ ಬಿಜೆಪಿಯವರು ಮನ ಬಂದಂತೆ ಮಾತನಾಡುತ್ತಿದ್ದಾರೆ. ಐದು ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿಗೆ 160 ಸೀಟು ಸಿಗಲಿದೆ ಎಂದು ಹೇಳಿರುವ ಬೆನ್ನಲ್ಲೇ, ಪ್ರಧಾನಿ ಮೋದಿ ಕೂಡ ಹುಚ್ಚುಚ್ಚಾಗಿ ಮಾತನಾಡುತ್ತಿದ್ದಾರೆ’ ಎಂದರು.

‘23ರ ಚುನಾವಣಾ ಫಲಿತಾಂಶವೂ ಬಡಾಯಿಗಳ ಬಾಯಿ ಮುಚ್ಚಿಸಲಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗಳಿಸಿ ಸರ್ಕಾರ ರಚಿಸಲಿದೆ. ಅದರಂತೆ, ಉಪ ಚುನಾವಣೆಯಲ್ಲೂ ಮೈತ್ರಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ’ ಎಂದು ಹೇಳಿದರು.

ಕೇಂದ್ರ ಹಣ ಬಿಡುಗಡೆ ಮಾಡಿಲ್ಲ

‘ರಾಜ್ಯದಲ್ಲಿ ಬರ ಪರಿಹಾರ ಕಾರ್ಯಕ್ರಮಗಳ ಜಾರಿಗೆ ಕೇಂದ್ರ ಸರ್ಕಾರ ನೀಡಬೇಕಾದ ಅನುದಾನವನ್ನು ಇದುವರೆಗೆ ಬಿಡುಗಡೆ ಮಾಡಿಲ್ಲ. ಅಲ್ಲದೆ, ಚುನಾವಣಾ ಆಯೋಗ ಕೂಡ ಬರಕ್ಕೆ ಸಂಬಂಧಿಸಿದ ಕೆಲಸ ಮಾಡಲು ಅವಕಾಶ ಕೊಡುತ್ತಿಲ್ಲ. ಈ ಕುರಿತು ಸಚಿವ ಕೃಷ್ಣ ಬೈರೇಗೌಡ ಅವರು ಮಾಡಿದ ಮನವಿಗೂ ಸ್ಪಂದಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿಯ 10 ಮಂದಿ ಸಂಪರ್ಕದಲ್ಲಿದ್ದಾರೆ: ಜಮೀರ್

‘ಮೂರು ತಿಂಗಳಿಂದ ಬಿಜೆಪಿಯ 9ರಿಂದ 10 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಆದರೆ, ಅವರನ್ನು ಕಾಂಗ್ರೆಸ್‌ಗೆ ಕರೆತರಲು ನಮಗೇ ಇಷ್ಟವಿಲ್ಲ. ಹೀಗಿರುವಾಗ ನಮ್ಮ ಸರ್ಕಾರ 23ರ ಬಳಿಕ ಹೇಗೆ ಬೀಳುತ್ತದೆ’ ಎಂದು ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಪ್ರಶ್ನಿಸಿದರು.

‘ಯಾರ‍್ಯಾರು ಸಂಪರ್ಕದಲ್ಲಿದ್ದಾರೆ?’ ಎಂಬ ಪ್ರಶ್ನೆಗೆ, ‘ಬಿಜೆಪಿಯವರು ಮೊದಲು ಅವರೊಂದಿಗೆ ಸಂಪರ್ಕದಲ್ಲಿರುವ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ 20 ಶಾಸಕರ ಹೆಸರು ಬಹಿರಂಗಪಡಿಸಲಿ. ಬಳಿಕ, ನಾವು ಹೇಳುತ್ತೇವೆ. ಮತ್ತೆ ಮುಖ್ಯಮಂತ್ರಿಯಾಗುತ್ತೇನೆ ಎಂದು ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಗಲುಗನಸು ಕಾಣುತ್ತಿದ್ದಾರೆ. ಅದು ಎಂದಿಗೂ ನನಸಾಗದು’ ಎಂದರು.

‘ಬಿಜೆಪಿಯರಿಗೆ ಮೇ 25ರವರೆಗೆ ಗಡುವು ನೀಡುತ್ತೇನೆ. ಒಂದು ವೇಳೆ ನಮ್ಮ ಸರ್ಕಾರ ಬಿದ್ದರೆ, ನಾನು ರಾಜಕೀಯ ನಿವೃತ್ತಿ ಘೋಷಿಸುತ್ತೇನೆ. ಇಲ್ಲದಿದ್ದರೆ, ಯಡಿಯೂರಪ್ಪ ನಿವೃತ್ತಿ ತೆಗೆದುಕೊಳ್ಳಲು ತಯಾರಿದ್ದಾರಾ?’ ಎಂದು ಸವಾಲು ಹಾಕಿದರು.

ಎಚ್‌ಡಿಕೆ ತಪ್ಪಿನಿಂದ ಬೆಳೆದ ಬಿಜೆಪಿ

‘2008ರಲ್ಲಿ ಜೆಡಿಎಸ್ ಮತ್ತು ಬಿಜೆಪಿಯ ಟ್ವೆಂಟಿ–20 ಸರ್ಕಾರವಿದ್ದಾಗ, ಕೊಟ್ಟ ಮಾತಿನಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಬಿಜೆಪಿಗೆ ಅಧಿಕಾರ ಹಸ್ತಾಂತರಿಸಿದ್ದರೆ ಇಂದು ರಾಜ್ಯದಲ್ಲಿ ಬಿಜೆಪಿ ಇಷ್ಟೊಂದು ಬೆಳೆಯುತ್ತಿರಲಿಲ್ಲ’ ಎಂದು ಹೇಳಿದರು.

‘ಕಾಂಗ್ರೆಸ್ ಹೈಕಮಾಂಡ್ ಆದೇಶದಂತೆ, ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಐದು ವರ್ಷ ಪೂರೈಸಲಿದ್ದಾರೆ. 2022ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಬೇಕು ಎಂದು ಜನ ಬಯಸುತ್ತಿದ್ದಾರೆ. ನಾನೂ ಸೇರಿದಂತೆ, ಹಲವು ಶಾಸಕರ ಅಭಿಪ್ರಾಯವೂ ಇದೇ ಆಗಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

500 ಓಟು ಹಾಕಿಸೊ ತಾಕತ್ತಿಲ್ಲ

‘ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಹರಕೆಯ ಕೋಣಕ್ಕೆ ಹೋಲಿಸಿರುವ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಏನು ಅಂತ ಎಲ್ಲರಿಗೂ ಗೊತ್ತಿದೆ. ಕುಂದಗೋಳದಲ್ಲಿ 500 ಓಟು ಹಾಕಿಸುವ ತಾಕತ್ತಿಲ್ಲದ ಅವರು, ಮಾಧ್ಯಮದಲ್ಲಿ ಸುದ್ದಿಯಾಗಬೇಕು ಅಂದುಕೊಂಡು ಮನಸ್ಸಿಗೆ ಬಂದಂತೆ ಮಾತನಾಡುತ್ತಾರೆ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT