ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಷ ಬೀಜ ಬಿತ್ತುತ್ತಿರುವ ಕಾಂಗ್ರೆಸ್‌: ಬಿ.ಸಿ.ಪಾಟೀಲ

ಪೌರತ್ವ(ತಿದ್ದುಪಡಿ) ಕಾಯ್ದೆ; ಬಿಜೆಪಿ ವಿಭಾಗ ಮಟ್ಟದ ಸಭೆ
Last Updated 28 ಡಿಸೆಂಬರ್ 2019, 12:54 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪೌರತ್ವ(ತಿದ್ದುಪಡಿ) ಕಾಯ್ದೆ ಜಾರಿ ಮೂಲಕ ಮುಸ್ಲಿಮರನ್ನು ದೇಶದಿಂದ ಹೊರಗೋಡಿಸಲು ಕೇಂದ್ರ ಸರ್ಕಾರ ಸಂಚು ರೂಪಿಸಿದೆ ಎಂದು ಅವರ ತಲೆಯಲ್ಲಿ ಕಾಂಗ್ರೆಸ್‌ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದೆ ಎಂದು ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ ಆರೋಪಿಸಿದರು.

ಪೌರತ್ವ(ತಿದ್ದುಪಡಿ) ಕಾಯ್ದೆ ಕುರಿತು ನಗರದಲ್ಲಿ ಶನಿವಾರ ಏರ್ಪಡಿಸಿದ್ದ ವಿಭಾಗ ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನ ಟೊಳ್ಳು ಮಾತಿಗೆ ಯಾರೂ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ನುಸುಳುಕೋರರನ್ನು ಮಾತ್ರ ಹೊರಹಾಕಲಾಗುತ್ತದೆಯೇ ಹೊರತು; ದೇಶದ ಯಾವೊಬ್ಬ ಪ್ರಜೆಯನ್ನೂ ಹೊರಹಾಕುವುದಿಲ್ಲ ಎಂದು ಹೇಳಿದರು.

ಜಮ್ಮು–ಕಾಶ್ಮೀರಕ್ಕೆ ನೀಡಲಾಗಿದ್ದ ಕಲಂ 370 ರದ್ದುಗೊಳಿಸಿದಾಗ, ತ್ರಿವಳಿ ತಲಾಖ್‌ ರದ್ದು ಮಾಡಿದಾಗ ಹಾಗೂ ಅಯೋಧ್ಯಾ ತೀರ್ಪು ಬಂದಾಗ ದೇಶದಲ್ಲಿ ಏನಾದರೂ ಆಗಬಹುದು ಎಂದು ಕಾಂಗ್ರೆಸ್‌ ಭಾವಿಸಿತ್ತು. ಆದರೆ, ಏನೂ ಆಗಲಿಲ್ಲ. ಪರಿಣಾಮ ಇದೀಗ ಪೌರತ್ವ ಕಾಯ್ದೆಯನ್ನು ನೆಪವಾಗಿಟ್ಟುಕೊಂಡು ದೇಶದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಜಾತ್ಯತೀತ ಹೆಸರಿನಲ್ಲಿ ಕಾಂಗ್ರೆಸ್‌ ಡೋಂಗಿತನ ಪ್ರದರ್ಶಿಸುತ್ತಿದೆ. ಕೇವಲ ಹಿಂದೂ–ಮುಸ್ಲಿಮರನ್ನು ಪ್ರತ್ಯೇಕ ಮಾಡುತ್ತಿಲ್ಲ. ಬದಲಿಗೆ ಹಿಂದೂ ಧರ್ಮದಲ್ಲೇ ಹಿಂದುಳಿದವರು, ಮುಂದುವರಿದವರು ಹಾಗೂ ಆ ಜಾತಿ, ಈ ಜಾತಿಗಳ ಹೆಸರಲ್ಲಿ ಒಡೆದು ಆಳುವ ಕೆಲಸವನ್ನು ಕಾಂಗ್ರೆಸ್‌ ಮಾಡುತ್ತಿದೆ. ಈ ಕಾರಣಕ್ಕೆ ಬೇಸತ್ತು ಆ ಪಕ್ಷವನ್ನು ಬಿಟ್ಟು ಬಂದಿದ್ದೇನೆ ಎಂದರು.

ಮುಸ್ಲಿಮರು ಗುರಿಯಲ್ಲ:ಕೇಂದ್ರ ಸರ್ಕಾರವು ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಪೌರತ್ವ(ತಿದ್ದುಪಡಿ) ಕಾಯ್ದೆ ಜಾರಿಗೆ ತಂದಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಎನ್‌. ರವಿಕುಮಾರ್‌ ಹೇಳಿದರು.

ಕಾಯ್ದೆಯನ್ನು ವಿರೋಧಿಸಿ ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆ, ಹೋರಾಟದಲ್ಲಿ ಅಲ್ಪಸಂಖ್ಯಾತ ಬಂಧುಗಳ ಪಾತ್ರ ಇಲ್ಲ. ಕಾಂಗ್ರೆಸ್‌, ಕಮ್ಯುನಿಷ್ಠ್‌, ಪ್ರಗತಿಪರರು ಮತ್ತು ಸುದ್ದಿಜೀವಿಗಳದ್ದೇ ಶೇ 99ರಷ್ಟು ತಪ್ಪಿದೆ ಎಂದು ಆರೋಪಿಸಿದರು.

ಮುಸ್ಲಿಮರನ್ನು ಕಾಂಗ್ರೆಸ್ ತನ್ನ ಮತಬ್ಯಾಂಕ್‌ ಮಾಡಿಕೊಳ್ಳುತ್ತಿದೆಯೇ ಹೊರತು ಅವರನ್ನು ಮನುಷ್ಯರೆಂದು ಇದುವರೆಗೂ ಪರಿಗಣಿಸಿಲ್ಲ. ರಾಷ್ಟ್ರೀಯ ಹಿತಕ್ಕಿಂತ ವೋಟ್‌ ಬ್ಯಾಂಕ್‌ ರಾಜಕಾರಣವೇ ಕಾಂಗ್ರೆಸ್‌ಗೆ ಮುಖ್ಯವಾಗಿದೆ ಎಂದು ಟೀಕಿಸಿದರು.

ನೆಹರೂ, ಇಂದಿರಾಗಾಂಧಿ, ರಾಜೀವ್‌ಗಾಂಧಿ, ಮನಮೋಹನಸಿಂಗ್‌ ಅವರು ಒಪ್ಪಿಕೊಂಡಿರುವ ಪೌರತ್ವ ಕಾಯ್ದೆಗೆ ಇದೀಗ ವಿರೋಧ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್‌ಗೆ ಏಕ ನಿಲುವೆಂಬುದೇ ಇಲ್ಲ. ಅದರದ್ದು ದ್ವಂದ್ವ ನಿಲುವು ಎಂದು ಹೇಳಿದರು.

ಶಾಸಕರಾದ ಅರುಣಕುಮಾರ ಪೂಜಾರ, ರಾಮಣ್ಣ ಲಮಾಣಿ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಹಾವೇರಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಸಜ್ಜನ, ಹುಬ್ಬಳ್ಳಿ–ಧಾರವಾಡ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ನಾಗೇಶ ಕಲಬುರ್ಗಿ, ಧಾರವಾಡ ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷ ಈರಣ್ಣ ಜಡಿ, ಮುಖಂಡರಾದ ಲಿಂಗರಾಜ ಪಾಟೀಲ, ನಾರಾಯಣ ಜರತಾರಘರ, ಜಯತೀರ್ಥ ಕಟ್ಟಿ ಹಾಗೂ ಧಾರವಾಡ, ಹಾವೇರಿ ಮತ್ತು ಗದಗ ಜಿಲ್ಲೆಯ ಬಿಜೆಪಿ ಮುಖಂಡರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT