ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೇಶದ ಬದಲಾವಣೆಯ ಭರವಸೆ ಮೂಡಿಸಿದ ಬಿಜೆಪಿ: ನಡ್ಡಾ

Published 21 ಏಪ್ರಿಲ್ 2024, 14:37 IST
Last Updated 21 ಏಪ್ರಿಲ್ 2024, 14:37 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹತ್ತು ವರ್ಷಗಳ ಹಿಂದೆ ದೇಶದಲ್ಲಿ ಬದಲಾವಣೆ ಅಸಾಧ್ಯ ಎಂಬ ನಕಾರಾತ್ಮಕ ಭಾವನೆ ಎಲ್ಲರಲ್ಲೂ ಇತ್ತು. ಮೋದಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ದೇಶದ ಬದಲಾವಣೆ ಸಾಧ್ಯ ಎಂಬ ಭರವಸೆ ಮೂಡಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದರು.

ನಗರದ ಖಾಸಗಿ ಹೋಟೆಲ್ ನಲ್ಲಿ ಭಾನುವಾರ ನಡೆದ ಧಾರವಾಡ ಲೋಕಸಭಾ ಕ್ಷೇತ್ರದ ವಿವಿಧ ಸಮುದಾಯಗಳ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು.

ಈ ಹಿಂದೆ ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿತ್ತು. ಅಂದಿನ ಸರ್ಕಾರ ಜಾತಿ, ಕೋಮು ಆಧಾರಿತವಾಗಿ

ನಡೆಯುತ್ತಿತ್ತು. ಬಡತನ ನಿರ್ಮೂಲನೆ ಮಾಡುವುದಾಗಿ ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಭರವಸೆ ನೀಡಿದ್ದರು. ಆದರೂ, ಅದು ಸಾಧ್ಯವಾಗಿಲ್ಲ. ಇದೀಗ ರಾಹುಲ್ ಗಾಂಧಿ ಅದೇ ಹೇಳಿಕೆಯನ್ನು ಪುನರುಚ್ಚರಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಇಂಡಿಯಾ ಕೂಟವು ಪರಿವಾರ ರಾಜಕಾರಣಕ್ಕೆ ಸೀಮಿತವಾಗಿದೆ. ಬಹುತೇಕರು ಭ್ರಷ್ಟಾಚಾರದಲ್ಲಿ ತೊಡಗಿದವರು. ಕೆಲವರು ಜೈಲಿನಲ್ಲಿದ್ದರೆ, ಸೋನಿಯಾ ಗಾಂಧಿ, ರಾಹುಲ್‌ಗಾಂಧಿ ಸೇರಿದಂತೆ ಹಲವರು ಜಾಮೀನಿನ ಮೇಲೆ ಹೊರಗಿದ್ದಾರೆ. ಭ್ರಷ್ಟಾಚಾರಿಗಳಿಂದ ದೇಶದ ಅಭಿವೃದ್ಧಿ ಸಾಧ್ಯವಿಲ್ಲ ಎಂದರು.

ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ದೇಶವು ಕತ್ತಲ ದಿನಗಳಿಂದ ಬೆಳಕಿನ ದಿನಗಳತ್ತ ಹೆಜ್ಜೆ ಹಾಕುತ್ತಿದೆ. ಕೇಂದ್ರ ಸರ್ಕಾರದ ಹಲವಾರು ಜನಪರ ಯೋಜನೆಗಳಿಂದ ಬಡತನ ನಿರ್ಮೂಲನೆ ಸಾಧ್ಯವಾಗಿದೆ ಎಂದು ಕೇಂದ್ರ ಸರ್ಕಾರದ ಯೋಜನೆಗಳ ವಿವರ ನೀಡಿದರು.

ಇದು ಪ್ರಲ್ಹಾದ ಜೋಶಿ ಅವರನ್ನು ಸಂಸದರಾಗಿಸುವ ಚುನಾವಣೆ ಅಷ್ಟೇ ಅಲ್ಲ. ಮೋದಿ ಅವರ ವಿಕಸಿತ ಭಾರತ ಸಂಕಲ್ಪವನ್ನು ಸಾಕಾರಗೊಳಿಸುವ ಚುನಾವಣೆ. ದೇಶದ ಅಭಿವೃದ್ಧಿಗಾಗಿ ಬಿಜೆಪಿ ಗೆಲ್ಲಿಸಿ. ಇತರರಿಗೂ ಮತ ಹಾಕಲು ಮನವರಿಕೆ ಮಾಡಿಕೊಡಿ ಎಂದು ಕರೆ ನೀಡಿದರು.

ಮಹಿಳೆಯರು, ರೈತರು, ಯುವಕರ ಸಬಲೀಕರಣ, ಆರೋಗ್ಯ, ರಕ್ಷಣೆ, ಉತ್ಪಾದನಾ ವಲಯದಲ್ಲಿ ಸ್ವಾವಲಂಬನೆ ಸಾಧಿಸಲಾಗಿದೆ. ಜಾಗತಿಕ‌ ಮಟ್ಟದಲ್ಲಿ‌ ಭಾರತಕ್ಕೆ ವಿಶೇಷ ಸ್ಥಾನಮಾನ ದೊರೆತಿದೆ. ವಿಶ್ವದ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಭಾರತ ಮುನ್ನಡೆಯುತ್ತಿದೆ ಎಂದು ನುಡಿದರು.

ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಮಾತನಾಡಿ, ಧಾರವಾಡದ ಅಭಿವೃದ್ಧಿಯನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ಯುವೆ ಎಂದ ಭರವಸೆ ಮಾಡಿದರು.

ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಮಾತನಾಡಿ, ಮಹಾತ್ಮ ಗಾಂಧಿ ಅವರು ಎಲ್ಲ ಸಮುದಾಯವನ್ನು ಒಟ್ಟಿಗೆ ಕೊಂಡೊಯ್ಯುವ ಶಕ್ತಿ ಹೊಂದಿದ್ದರು. ಅವರ ನಂತರ ಪ್ರಧಾನಿ ಮೋದಿ ಆ ಕೆಲಸ ಮಾಡುತ್ತಿದ್ದಾರೆ ಎಂದು ಬಣ್ಣಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT