ಭಾನುವಾರ, ಏಪ್ರಿಲ್ 11, 2021
33 °C
ಹುಬ್ಬಳ್ಳಿ–ಧಾರವಾಡ ಮೆಟ್ರೊ

ಹದ್ದು ಮೀರಿದ ಹಾರಾಟ!

ಮಂಜುನಾಥ ಆರ್.ಗೌಡರ Updated:

ಅಕ್ಷರ ಗಾತ್ರ : | |

Prajavani

ಆಹಾರ ಸರಪಳಿಯಲ್ಲಿ ಪ್ರಮುಖ ಪಾತ್ರ ಹೊಂದಿರುವ ಆಕ್ಸಿಪಿಟ್ರಿಡೈ ಕುಟುಂಬದ ಈ ಹಕ್ಕಿಯ ಹಾರಾಟ ಅವಳಿನಗರದ ರಾಜಕಾಲುವೆಗಳ ಸೇತುವೆ ಬಳಿ, ಕಸದ ರಾಶಿ ಸಮೀಪ ಸಾಮಾನ್ಯವಾಗಿ ಕಂಡುಬರುತ್ತದೆ. ಗುಂಪಿನಲ್ಲಿದ್ದರೂ ಬೇಟೆಗಾಗಿ ಸದಾ ಧ್ಯಾನಸ್ಥ ಸ್ಥಿತಿಯಲ್ಲಿರುವಂತೆ ಭಾಸವಾಗುತ್ತದೆ.

ಅಂದಾಜು 47ರಿಂದ 55 ಸೆಂ.ಮೀ ಗಾತ್ರ, 540 ಗ್ರಾಂ ತೂಕದ ಕಪ್ಪು ಹದ್ದು (ಬ್ಲಾಕ್‌ ಕೈಟ್‌) ಜಗತ್ತಿನಲ್ಲಿರುವ ಬೇಟೆ ಪಕ್ಷಿಗಳಲ್ಲಿ ದೊಡ್ಡ ಸಂಖ್ಯೆಯಲ್ಲಿವೆ ಎನ್ನಲಾಗಿದೆ. ಬಲಿಷ್ಠ ಕೊಕ್ಕು, ತೀಕ್ಷ್ಣ ನೋಟದ ಇವುಗಳು ಭಾರಿ ಎತ್ತರದಲ್ಲಿ ಹಾರಾಟ ನಡೆಸುತ್ತವೆ. ಈ ಹಕ್ಕಿಯ ಕಾಲುಗಳ ಸಾಮರ್ಥ್ಯವೂ ಹೆಚ್ಚು. 60 ಪ್ರಜಾತಿಗಳು ಯೂರೇಷ್ಯಾ ಮತ್ತು ಆಫ್ರಿಕಾದಲ್ಲಿ ಕಾಣಿಸುತ್ತವೆ. ಇವುಗಳಲ್ಲಿ ಕೇವಲ ಹದಿನಾಲ್ಕು ಪ್ರಜಾತಿಗಳನ್ನು ನಮ್ಮಲ್ಲಿ ಕಾಣಬಹುದು.

ಉಡ, ಸಣ್ಣ ಗಾತ್ರದ ಸಸ್ತನಿ, ಹುಳುಗಳನ್ನು ತಿನ್ನುವ ಇವುಗಳು ಬೆಂಕಿ, ಹೊಗೆಗೆ ಆಕರ್ಷಿತವಾಗುತ್ತವೆ. ಕಾರಣ ಬೆಂಕಿ, ಹೊಗೆಯಿಂದ ತಪ್ಪಿಸಿಕೊಂಡು ಹಾರಾಟ ನಡೆಸುವ ಪ್ರಾಣಿ, ಪಕ್ಷಿಗಳನ್ನು ಹಿಡಿದು ಸುಲಭವಾಗಿ ಆಪೋಶನ ಮಾಡಬಹುದು. ಕಾಗೆಗಿಂತ ಒಂದೂವರೆ ಪಟ್ಟು ದೊಡ್ಡದಾಗಿರುವ ಇದರ ಕೊಕ್ಕು ಕಪ್ಪು ಬಣ್ಣ ಹಾಗೂ ಚೂರು ಬಾಗಿದೆ. ರೆಕ್ಕೆಗಳು ಕಂದು ಮಿಶ್ರಿತ ಕೆಂಪು ಬಣ್ಣದಾಗಿದೆ. ಕಾಲಿನ ಪಾದದ ಚಾಚಿದ ಭಾಗ ಶಿಕಾರಿಯನ್ನು ಹಿಡಿಯಲು ಪೂರಕವಾಗಿದೆ. ರೆಕ್ಕೆಯ ಕೆಳಭಾಗದ ಬಿಳಿಯ ಭಾಗ ಇದನ್ನು ಸುಲಭವಾಗಿ ಗುರುತಿಸಲು ಸಹಕಾರಿಯಾಗಿದೆ. ಕೇಕೆ, ಚೀರಾಟದಂತೆ ಧ್ವನಿ ಹಾಕುವ ಇದಕ್ಕೆ ಕಾಗೆಯೇ ಶತ್ರು.

ಸಂತಾನ: ಆಗಸ್ಟ್‌, ನವೆಂಬರ್‌ನಲ್ಲಿ ಸಂತಾನೋತ್ಪತ್ತಿ ಇದರ ಅವಧಿಯಾಗಿದೆ. ಎರಡರಿಂದ ಮೂರು ಮೊಟ್ಟೆ ಇಡುವ ಈ ಹಕ್ಕಿ 28 ದಿನಗಳಲ್ಲಿ ಮರಿ ಮಾಡುತ್ತವೆ. ಸೆಪ್ಟೆಂಬರ್‌ನಿಂದ ಏಪ್ರಿಲ್‌ನಲ್ಲಿ ಎತ್ತರದ ಜಾಗದಲ್ಲಿ ಕಸಕಡ್ಡಿಗಳಿಂದ ಗೂಡು ಮಾಡುತ್ತವೆ.

ಏಕಾಂಗಿಯಾಗಿ ಹಳ್ಳಿಗಳ ಪೇಟೆ, ತ್ಯಾಜ್ಯ ಘಟಕ, ರಾಜಕಾಲುವೆಗಳ ಸಮೀಪದಲ್ಲಿ ಹಾರಾಟ, ಗಿಡಮರಗಳ ಎತ್ತರದ ಕೊಂಬೆಯಲ್ಲಿ ಕುಳಿತು ಕೇಕೆ ಹಾಕುವುದು ಇವುಗಳಿಗೆ ಬಲುಪ್ರಿಯ. ಇದಲ್ಲದೇ ಮೀನು, ಮಾಂಸದ ಮಾರುಕಟ್ಟೆಗಳ ಬಳಿ, ಮೀನುಗಾರರು ಎಸೆಯುವ ಮೂಳೆ ಚೂರು, ಕಸಾಯಿಖಾನೆಯಿಂದ ಎಸೆಯಲಾಗುವ ತ್ಯಾಜ್ಯ ತಿಂದು ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುತ್ತದೆ. ಇದೇ ಕಾರಣಕ್ಕಾಗಿಯೇ ಇದನ್ನು ನಾಗರಿಕತೆಗೆ ಹೊಂದಿಕೊಂಡ ಪಕ್ಷಿ ಎನ್ನಲಾಗಿದೆ. ಪ್ರಮುಖವಾಗಿ ಕಾಣಸಿಗುವ ಸ್ಥಳಗಳು ಭಾರತ, ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕ, ಮಯನ್ಮಾರ್‌ ಎಂದು ತಿಳಿದುಬಂದಿದೆ.

ಚಿತ್ರಗಳು: ಲೇಖಕರವು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು