ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ನಡೆಯದ ಬೇಸಿಗೆ ಶಿಬಿರ, ಲಕ್ಷಾಂತರ ರೂಪಾಯಿ ನಷ್ಟ

ತರಬೇತಿಯನ್ನೇ ನೆಚ್ಚಿಕೊಂಡಿದ್ದ ಕ್ರೀಡಾ ಅಕಾಡೆಮಿಗಳು ಸಂಕಷ್ಟದಲ್ಲಿ
Last Updated 22 ಮೇ 2020, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪ್ರತಿ ವರ್ಷ ಬೇಸಿಗೆ ಬಂದಾಕ್ಷಣ ಅವಳಿ ನಗರದ ಮೈದಾನಗಳು ಸದಾ ಗಿಜಿಗಿಡುತ್ತಿದ್ದವು. ಕ್ರೀಡಾ ಅಕಾಡೆಮಿಗಳು ವಿವಿಧ ಕ್ರೀಡೆಗಳಿಗೆ ತರಬೇತಿ ನೀಡುತ್ತಿದ್ದವು. ಆದರೆ, ಈ ಬಾರಿ ಲಾಕ್‌ಡೌನ್‌ ಪರಿಣಾಮದಿಂದ ಬೇಸಿಗೆ ಶಿಬಿರವೇ ನಡೆದಿಲ್ಲ. ಇದರಿಂದ ಅಕಾಡೆಮಿಗಳ ಮಾಲೀಕರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ.

ಹುಬ್ಬಳ್ಳಿ–ಧಾರವಾಡದಲ್ಲಿ ಹತ್ತಾರು ಕ್ರಿಕೆಟ್‌ ಅಕಾಡೆಮಿಗಳಿವೆ. ಬ್ಯಾಡ್ಮಿಂಟನ್‌, ಸ್ಕೇಟಿಂಗ್‌, ಕರಾಟೆ, ಅಥ್ಲೆಟಿಕ್ಸ್‌, ವಾಲಿಬಾಲ್‌, ಮಲ್ಲಕಂಬ ಹೀಗೆ ವಿವಿಧ ಕ್ರೀಡೆಗಳ ತರಬೇತಿ ಪಡೆದುಕೊಳ್ಳಲು ಸಾವಿರಾರು ಮಕ್ಕಳು ಬರುತ್ತಿದ್ದರು. ಶಾಲೆಗೂ ರಜೆಯ ದಿನಗಳಾದ ಕಾರಣ ಮಕ್ಕಳು ಕೂಡ ಅತ್ಯಂತ ಉತ್ಸಾಹದಿಂದ ಶಿಬಿರಗಳಿಗೆ ಸೇರಿಕೊಳ್ಳುತ್ತಿದ್ದರು. ಇದರಿಂದ ಅಕಾಡೆಮಿಗಳ ಮಾಲೀಕರಿಗೆ ಲಕ್ಷಾಂತರ ರೂಪಾಯಿ ಆದಾಯ ಬರುತ್ತಿತ್ತು.

ನಗರದ ಟಿಂಬರ್‌ ಯಾರ್ಡ್‌ನಲ್ಲಿರುವ ನಾರಾಯಣ ಪೇಟ್ಕರ್‌ ಮಂಜುನಾಥ ಬ್ಯಾಡ್ಮಿಂಟನ್‌ ಅಕಾಡೆಮಿಯಲ್ಲಿ ತರಬೇತಿ ಪಡೆಯಲು ಬಾಗಲಕೋಟೆ, ವಿಜಯಪುರ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಂದಲೂ ಮಕ್ಕಳು ಬರುತ್ತಿದ್ದರು. ಜಿಲ್ಲೆಯ ಗ್ರಾಮೀಣ ಭಾಗದ ಮಕ್ಕಳು ವಿವಿಧ ಕ್ರೀಡಾ ಅಕಾಡೆಮಿಗಳಲ್ಲಿದ್ದು ತರಬೇತಿ ಪಡೆಯುತ್ತಿದ್ದರು. ಜಿಲ್ಲೆಯ ಬಹುತೇಕ ಅಕಾಡೆಮಿಗಳು ವರ್ಷಪೂರ್ತಿ ಶಿಬಿರಗಳನ್ನು ನಡೆಸಿದರೂ ಅವರಿಗೆ ಬೇಸಿಗೆಯ ಶಿಬಿರಗಳಿಂದಲೇ ಹೆಚ್ಚು ಆದಾಯ ಬರುತ್ತಿತ್ತು. ಇದರಿಂದ ಮಾಲೀಕರಿಗೆ ಮೈದಾನ, ಟರ್ಫ್‌ಗಳ ನಿರ್ವಹಣೆ ನೋಡಿಕೊಳ್ಳಲು ಸಾಧ್ಯವಾಗುತ್ತಿತ್ತು. ಈ ಬಾರಿ ಯಾವ ಆದಾಯವೂ ಇಲ್ಲದಂತಾಗಿದೆ. ಬದಲಾಗಿ ಬ್ಯಾಡ್ಮಿಂಟನ್‌ ಕೋರ್ಟ್‌ಗಳ ನಿರ್ವಹಣೆ, ಕಟ್ಟಡದ ಬಾಡಿಗೆ ಕಟ್ಟುವುದು ಮತ್ತು ಮೈದಾನದ ನಿರ್ವಹಣೆ ಮಾಲೀಕರಿಗೆ ಹೊರೆಯಾಗಿದೆ.

ಪೇಟ್ಕರ್‌ ಅಕಾಡೆಮಿಯ ಮಾಲೀಕ ಮಂಜುನಾಥ ಪ್ರತಿಕ್ರಿಯಿಸಿ ‘₹48 ಲಕ್ಷ ಹೂಡಿಕೆ ಮಾಡಿ ಬ್ಯಾಡ್ಮಿಂಟನ್‌ ಅಕಾಡೆಮಿ ಆರಂಭಿಸಿದ್ದೆ. ₹20 ಲಕ್ಷಕ್ಕೂ ಹೆಚ್ಚು ಬ್ಯಾಂಕ್‌ನಿಂದ ಲೋನ್‌ ಪಡೆದಿದ್ದೇನೆ. ನನಗೆ ಆದಾಯ ಬರಲಿ; ಬಿಡಲಿ ಪ್ರತಿ ತಿಂಗಳು ಬ್ಯಾಂಕ್‌ಗೆ ಮಾಸಿಕ ಕಂತು ಕಟ್ಟಲೇಬೇಕು. ಕಟ್ಟಡದ ಮಾಲೀಕರಿಗೂ ಬಾಡಿಗೆ ಕೊಡಬೇಕಾದ ಕಾರಣ ಬಹಳಷ್ಟು ಹೊರೆಯಾಗುತ್ತಿದೆ. ಶಿಬಿರ ನಡೆಯದ ಕಾರಣ ಅಂದಾಜು ₹5 ಲಕ್ಷ ನಷ್ಟವಾಗಿದೆ‘ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರತಿ ವರ್ಷ ಶಿರೂರು ಲೇ ಔಟ್‌ನಲ್ಲಿರುವ ಬಾಣಜಿ ಡಿ ಕಿಮ್ಜಿ ಮತ್ತು ಬಿವಿಬಿ ಮೈದಾನದಲ್ಲಿ ಆಯೋಜಿಸುವ ಕ್ರಿಕೆಟ್ ಶಿಬಿರದಲ್ಲಿ ತಲಾ 120ರಿಂದ 150 ಜನ ಪಾಲ್ಗೊಳ್ಳುತ್ತಿದ್ದರು. ಕಿಮ್ಜಿ ಮೈದಾನದ ಸಹ ಮಾಲೀಕ ಶಿವಾನಂದ ಗುಂಜಾಳ ‘ಬೇಸಿಗೆ ಶಿಬಿರ ನಡೆಯದಿದ್ದರೂ ಪಿಚ್‌ ಹಾಗೂ ಮೈದಾನ ನಿರ್ವಹಣೆಗೆ ನಾಲ್ಕೈದು ಸಿಬ್ಬಂದಿ ಕೆಲಸ ಮಾಡಿದ್ದಾರೆ. ಅವರೆಲ್ಲರಿಗೂ ವೇತನ ಕೊಟ್ಟಿದ್ದೇವೆ. ಶಿಬಿರ ನಡೆಯದ ಕಾರಣ ಒಂದು ಮೈದಾನದಿಂದ ಕನಿಷ್ಠ ₹5 ಲಕ್ಷ ನಷ್ಟವಾಗಿದೆ’ ಎಂದು ತಿಳಿಸಿದರು.

*
ವಿವಿಧ ಕ್ಷೇತ್ರಗಳ ಜನರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೆರವು ನೀಡಿವೆ. ವೃತ್ತಿಪರ ಕ್ರೀಡೆಯನ್ನೇ ನೆಚ್ಚಿಕೊಂಡ ನಮಗೂ ಪರಿಹಾರ ಕೊಡಬೇಕು.
-ಮಂಜುನಾಥ ಪೇಟ್ಕರ್‌, ಬ್ಯಾಡ್ಮಿಂಟನ್‌ ಅಕಾಡೆಮಿಯ ಮಾಲೀಕ

*
ಹತ್ತು ವರ್ಷ ಮೇಲ್ಪಟ್ಟ ಮಕ್ಕಳಿಗೆ ಶಿಬಿರ ನಡೆಸಲು ಯೋಜನೆ ರೂಪಿಸಿದ್ದೇವೆ. ಸರ್ಕಾರದ ನಿರ್ದೇಶನದಂತೆ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಶಿಬಿರ ಆರಂಭಿಸುತ್ತೇವೆ.
-ಶಿವಾನಂದ ಗುಂಜಾಳ, ಬಾಣಜಿ ಕಿಮ್ಜಿ ಮೈದಾನದ ಮಾಲೀಕ

*
ದೂರದಲ್ಲಿ ನಿಂತು ಆಡುವ ಕ್ರಿಕೆಟ್, ಬ್ಯಾಡ್ಮಿಂಟನ್‌ ರೀತಿಯ ಕ್ರೀಡೆಗಳನ್ನು ಆಡಬಹುದು. ಆದರೆ, ಅಂತರ ಕಾಯ್ದುಕೊಳ್ಳಲು ಸಾಧ್ಯವಾಗದ ಕುಸ್ತಿ, ಕಬಡ್ಡಿ ಆಡಲು ಅವಕಾಶವಿಲ್ಲ.
-ಸುರೇಶ ಇಟ್ನಾಳ, ಪಾಲಿಕೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT