ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಗೊ: ಮುಂಚೂಣಿಯಲ್ಲಿ ಹುಬ್ಬಳ್ಳಿ ವಿಭಾಗ

ಆರ್ಥಿಕ ಸಂಕಷ್ಟದಲ್ಲಿರುವ ಸಾರಿಗೆ ಸಂಸ್ಥೆಗೆ ನೆರವಾದ ಸರಕು ಸಾಗಣೆ
Last Updated 1 ಆಗಸ್ಟ್ 2021, 16:25 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಸಾರಿಗೆ ಸಂಸ್ಥೆಗೆ ಲಘು ಸರಕು ಸಾಗಣಿಗೆ ಆರಂಭಿಸಲಾಗಿರುವ ಕಾರ್ಗೋ ಸೇವೆ ಆಸರೆಯಾಗಿದ್ದು, ಜುಲೈನಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಆದಾಯ ಗಳಿಕೆಯಲ್ಲಿ ಹುಬ್ಬಳ್ಳಿ ವಿಭಾಗ ಮುಂಚೂಣಿಯಲ್ಲಿದೆ.

ಸಾರಿಗೆ ಸಂಸ್ಥೆಯ ಚಾಲಕರು ಹಾಗೂ ನಿರ್ವಾಹಕರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಪದೇ ಪದೇ ಮುಷ್ಕರ ಮಾಡಿದ್ದರು. ಕೋವಿಡ್‌ ಹಾಗೂ ಲಾಕ್‌ಡೌನ್‌ನಿಂದಾಗಿ ಬಹುತೇಕ ಎರಡು ತಿಂಗಳು ಸಾರಿಗೆ ಸಂಚಾರ ರದ್ದಾಗಿತ್ತು. ಮೊದಲ ಅಲೆಯ ಸಮಯದಲ್ಲಿಯೂ ಒಂದಾದ ಮೇಲೊಂದು ಸಮಸ್ಯೆಗಳು ಎದುರಾಗಿದ್ದರಿಂದ ಇಲಾಖೆಯ ಆರ್ಥಿಕ ಸಂಕಷ್ಟ ಹೆಚ್ಚಾಗಿತ್ತು.

ಆದ್ದರಿಂದ ರಾಜ್ಯ ಸರ್ಕಾರ ಆದಾಯ ಗಳಿಕೆಯ ಉದ್ದೇಶದಿಂದ ಫೆಬ್ರುವರಿ ಅಂತ್ಯದಲ್ಲಿ ಬಸ್‌ಗಳಲ್ಲಿ ಲಘು ಸರಕು ಸಾಗಣಿ ಸೌಲಭ್ಯ ಆರಂಭಿಸಿತ್ತು. ‘ಮೆ. ಸ್ಟ್ರಾಟಜಿಕ್‌ ಔಟ್ ಸೋರ್ಸಿಂಗ್‌ ಪ್ರೈವೇಟ್‌ ಲಿಮಿಟೆಡ್‌’ ಐದು ವರ್ಷಗಳ ಅವಧಿಗೆ ಟೆಂಡರ್‌ ಮೂಲಕ ಪಾರ್ಸೆಲ್‌ ಸೇವೆಯ ಜವಾಬ್ದಾರಿ ನೋಡಿಕೊಳ್ಳುತ್ತಿದೆ.

ಟೆಂಡರ್‌ ಪಡೆದ ಸಂಸ್ಥೆಯೇ ಕೌಂಟರ್‌ ನಿರ್ವಹಿಸಲು ಸಿಬ್ಬಂದಿ ನಿಯೋಜನೆ, ಲಗೇಜ್‌ ಸ್ವೀಕಾರ, ಬಸ್‌ಗೆ ಲೋಡ್‌ ಹಾಗೂ ಅನ್‌ಲೋಡ್‌ ಮಾಡುವ ಕೆಲಸ ನಿರ್ವಹಿಸುತ್ತಿದೆ. ಹುಬ್ಬಳ್ಳಿಯಲ್ಲಿ ಹೊಸೂರು, ಗೋಕುಲ ರೋಡ್‌ ಬಸ್‌ ನಿಲ್ದಾಣ ಹಾಗೂ ಧಾರವಾಡದ ಹೊಸ ಬಸ್‌ ನಿಲ್ದಾಣ ಹಾಗೂ ಸವದತ್ತಿಯಲ್ಲಿ ಲಘು ಸರಕು ಸಂಗ್ರಹ ಮಾಡಲು ಕೇಂದ್ರಗಳನ್ನು ತೆರೆಯಲಾಗಿದೆ.

ಸರಕು ತಲುಪಬೇಕಾದವರಿಗೆ ತಲುಪುವ ತನಕ ನಿಗಾ ವಹಿಸಲು ‘ಟ್ರ್ಯಾಕಿಂಗ್‌’ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಸರಕು ಕಳುಹಿಸಿದವರ ಹಾಗೂ ತಲುಪಿದವರ ಮೊಬೈಲ್‌ ಸಂಖ್ಯೆಗೆ ಸಂದೇಶ ಬರುವ ವ್ಯವಸ್ಥೆ ಮಾಡಲಾಗಿದೆ.

ಜುಲೈನಲ್ಲಿ 1,940 ಪಾರ್ಸಲ್‌ಗಳನ್ನು ತಲುಪಿಸಿರುವ ಹುಬ್ಬಳ್ಳಿ ವಿಭಾಗ ಇದರಿಂದ ₹1.86 ಲಕ್ಷ ಆದಾಯ ಗಳಿಸಿ ವಾಯವ್ಯ ಸಾರಿಗೆ ವಿಭಾಗದಲ್ಲಿ ಮೊದಲ ಸ್ಥಾನ ಹೊಂದಿದ್ದರೆ, ಧಾರವಾಡ ವಿಭಾಗ 131 ಪಾರ್ಸಲ್‌ಗಳನ್ನು ತಲುಪಿಸಿ ₹15,313 ಗಳಿಸಿ ಕೊನೆಯ ಸ್ಥಾನದಲ್ಲಿದೆ.

ಈ ಕುರಿತು ಪ್ರಜಾವಾಣಿಗೆ ಪ್ರತಿಕ್ರಿಯಿಸಿದ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್‌. ರಾಮನಗೌಡರ ‘ಕಾರ್ಗೊ ಸೇವೆಗೆ ಕ್ರಮೇಣವಾಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ವಾಯವ್ಯ ಸಾರಿಗೆ ಸಂಸ್ಥೆಯ 8 ವಿಭಾಗಗಳಲ್ಲಿ ಹುಬ್ಬಳ್ಳಿ ವಿಭಾಗದಲ್ಲಿ ಹೆಚ್ಚು ಅದಾಯ ಸಂಗ್ರಹವಾಗುತ್ತಿದೆ. ಮುಂದಿನ ದಿನಗಳಲ್ಲಿ ಕಲಘಟಗಿ, ನವಲಗುಂದ, ಅಣ್ಣಿಗೇರಿ ಹಾಗೂ ಮತ್ತಿತರ ಬಸ್ ನಿಲ್ದಾಣಗಳಲ್ಲಿ ಸರಕು ಸಂಗ್ರಹ ಕೇಂದ್ರಗಳನ್ನು ಆರಂಭಿಸಲು ಯೋಜನೆ ರೂಪಿಸಲಾಗುತ್ತಿದೆ. ಕೋವಿಡ್‌ ಕಾರಣದಿಂದ ಹೊರರಾಜ್ಯಗಳ ಸಂಚಾರ ಸಮರ್ಪಕವಾಗಿಲ್ಲ. ಪರಿಸ್ಥಿತಿ ತಿಳಿಯಾದ ಬಳಿಕ ಇನ್ನಷ್ಟು ಆದಾಯ ಬರುವ ನಿರೀಕ್ಷೆಯಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT