ಬುಧವಾರ, ಏಪ್ರಿಲ್ 21, 2021
30 °C
ಕೇಂದ್ರ ಸಚಿವ ಜೋಶಿಯಿಂದ ಅಹವಾಲು ಸ್ವೀಕಾರ; ಸಮಸ್ಯೆ ಸ್ಪಂದಿಸಲು ಅಧಿಕಾರಿಗಳಿಗೆ ಸೂಚನೆ

ಸಾರ್ವಜನಿಕರಿಂದ ಅಹವಾಲುಗಳ ಮಹಾಪೂರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಶನಿವಾರ ತಮ್ಮ ನಿವಾಸದಲ್ಲಿ ನಡೆಸಿದ ಸಾರ್ವಜನಿಕರ ಅಹವಾಲು ಸ್ವೀಕಾರದಲ್ಲಿ, ದೂರುಗಳ ಮಹಾಪೂರವೇ ಹರಿದು ಬಂದಿತ್ತು.

ವರ್ಗಾವಣೆ, ಮನೆ ಒಕ್ಕಲೆಬ್ಬಿಸುವುದು, ಪರಿಹಾರ ಬಾರದಿರುವುದು, ಉದ್ಯೋಗ ನೇಮಕಾತಿ ಸೇರಿದಂತೆ ಹಲವು ಸಮಸ್ಯೆಗಳು, ದೂರು ಹಾಗೂ ಸಚಿವರ ಶಿಫಾರಸು ಪತ್ರಕ್ಕಾಗಿ ಜಿಲ್ಲೆಯ ವಿವಿಧ ಭಾಗಗಳಿಂದ ನಾಗರಿಕರು ಬಂದಿದ್ದರು. ಎಲ್ಲರ ಸಮಸ್ಯೆಗಳನ್ನು ಸಮಾಧಾನದಿಂದ ಆಲಿಸಿದ ಜೋಶಿ, ಕೆಲ ದೂರುಗಳಿಗೆ ಸಂಬಂಧಪಟ್ಟಂತೆ ಸ್ಥಳದಲ್ಲೇ ಅಧಿಕಾರಿಗಳಿಗೆ ಕರೆ ಮಾಡಿ ಕ್ರಮಕ್ಕೆ ಸೂಚಿಸಿದರು.

ತೆರವಿಗೆ ತಡೆ:

ಧಾರವಾಡ ತಾಲ್ಲೂಕಿನ ದೇವಗರಿ ಮತ್ತು ಲಾಳ್ಳಗಟ್ಟಿ ಗ್ರಾಮದ ಅರಣ್ಯ ಭೂಮಿಯ ಸರ್ವೆ ನಂ. 97 ಮತ್ತು 82ರಲ್ಲಿ ವಾಸಿಸುತ್ತಿರುವ 80 ಮನೆಗಳನ್ನು 30 ದಿನದೊಳಗೆ ಖಾಲಿ ಮಾಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ನೋಟಿಸ್ ನೀಡಿದ್ದರು. ಇದರಿಂದ ಕಂಗಲಾದ ಗ್ರಾಮಸ್ಥರು ಮನವಿಯೊಂದಿಗೆ ಜೋಶಿ ಅವರನ್ನು ಭೇಟಿ ಮಾಡಿ ಅಳಲು ತೋಡಿಕೊಂಡರು.

ಸ್ಥಳದಲ್ಲೇ ಸಹಾಯಕ ಅರಣ್ಯಾಧಿಕಾರಿಗೆ ಕರೆ ಮಾಡಿದ ಜೋಶಿ, ‘ಗ್ರಾಮಸ್ಥರಿಗೆ ಪರ್ಯಾಯ ವ್ಯವಸ್ಥೆ ಮಾಡುವವರೆಗೆ ತೆರವು ಕಾರ್ಯಾಚರಣೆ ಮಾಡಬೇಡಿ. ಅಲ್ಲಿರುವ ಜನರಿಗೆ ಸರ್ಕಾರವೇ ಇಂದಿರಾ ಆವಾಸ್ ಮತ್ತು ಬಸವ ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಿಸಿ ಕೊಟ್ಟಿದೆ. ಓಡಾಡಲು ರಸ್ತೆಗಳನ್ನು ಸಹ ಮಾಡಿಕೊಟ್ಟಿದೆ. ಇದೀಗ ದಿಢೀರನೆ ಖಾಲಿ ಮಾಡಿ ಎಂದರೆ, ಎಲ್ಲಿಗೆ ಹೋಗಬೇಕು?’ ಎಂದು ಪ್ರಶ್ನಿಸಿದರು.

‘ಈ ವಿಷಯದ ಬಗ್ಗೆ ನಾನು ಜಿಲ್ಲಾಧಿಕಾರಿ ಜತೆಗೂ ಮಾತನಾಡುತ್ತೇನೆ. ಅಲ್ಲಿಯವರೆಗೆ ಜನರಿಗೆ ಯಾವುದೇ ರೀತಿಯಲ್ಲೂ ತೊಂದರೆ ಕೊಡಬೇಡಿ’ ಎಂದು ಸೂಚಿಸಿದರು.

ಪರಿಹಾರದಲ್ಲಿ ವ್ಯತ್ಯಾಸ:

ಗದಗ –ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಗೆ ಎಲ್ಲರೂ ಸಮಾನವಾಗಿ ಭೂಮಿ ನೀಡಿದ್ದರೂ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡಿದೆ. ಕೆಲವರಿಗೆ ಹೆಚ್ಚು ಮೊತ್ತ ಕೊಟ್ಟು, ಉಳಿದವರಿಗೆ ಕಡಿಮೆ ಕೊಟ್ಟಿದೆ. ಈ ವಿಷಯವನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ನೀವಾದರೂ ನನಗೆ ನ್ಯಾಯ ಕೊಡಿಸಿ ಎಂದು ಹುಬ್ಬಳ್ಳಿ ತಾಲ್ಲೂಕಿನ ಭಂಡಿವಾಡ, ಮಂಟೂರ ಹಾಗೂ ಶಿರಗುಪ್ಪಿ ಗ್ರಾಮದ ರೈತರು ಸಚಿವರಿಗೆ ಮೊರೆ ಇಟ್ಟರು.

ರೈತರ ಮನವಿ ಸ್ವೀಕರಿಸಿದ ಜೋಶಿ, ‘ಸಂಬಂಧಪಟ್ಟ ಅಧಿಕಾರಿಗಳ ಜತೆ ಮಾತನಾಡಿ ನಿಮಗೆ ನ್ಯಾಯ ಕೊಡಿಸುತ್ತೇನೆ’ ಎಂದು ಭರವಸೆ ನೀಡಿದರು.

ಅನಾರೋಗ್ಯದ ನಡುವೆಯೂ ಸಮಸ್ಯೆ ಹೊತ್ತು ಮನೆವರೆಗೆ ಬಂದಿದ್ದ ಎಲ್ಲಾ ಸಾರ್ವಜನಿಕರಿಂದಲೂ ಮನವಿ ಸ್ವೀಕರಿಸಿದ ಜೋಶಿ, ಈ ಬಗ್ಗೆ ಫಾಲೋಅಪ್ ಮಾಡುವಂತೆ ತಮ್ಮ ಆಪ್ತ ಕಾರ್ಯದರ್ಶಿಗೆ ಸೂಚಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.