ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಬಾಲ ಕಾರ್ಮಿಕ ಪದ್ಧತಿ- 5 ವರ್ಷದಲ್ಲಿ 927 ದಾಳಿ

ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘದ ಹದ್ದಿನ ಕಣ್ಣು: 37 ಪ್ರಕರಣ ದಾಖಲು
Last Updated 28 ಅಕ್ಟೋಬರ್ 2022, 6:21 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆ ಕಾರ್ಮಿಕ ಪದ್ಧತಿಗೆ ಸಂಬಂಧಿಸಿದಂತೆ,ಜಿಲ್ಲಾ ಬಾಲ ಕಾರ್ಮಿಕ ಸಮಿತಿಯು ಕಳೆದ ಐದು ವರ್ಷಗಳಲ್ಲಿ 927 ಕಡೆ ದಾಳಿ ನಡೆಸಿದೆ. ಈ ಪೈಕಿ, 37 ಕಡೆ ಬಾಲ ಕಾರ್ಮಿಕರು ಪತ್ತೆಯಾಗಿದ್ದು, ಪ್ರಕರಣಗಳು ದಾಖಲಾಗಿವೆ.

ಬಡತನ, ತಂದೆ–ತಾಯಿ ಇಲ್ಲದೆ ಅನಾಥರಾಗಿರುವುದು, ಕಲಿಕೆಯಲ್ಲಿ ನಿರಾಸಕ್ತಿ ಸೇರಿ ವಿವಿಧ ಕಾರಣಗಳಿಂದಾಗಿ ಮನೆ ಬಿಟ್ಟು ನಗರ ಸೇರುವ ಮಕ್ಕಳು ವಿವಿಧ ಕೆಲಸಗಳಲ್ಲಿ ತೊಡಗುತ್ತಾರೆ. ಅಂತಹವರ ಕುರಿತು ನಿಗಾ ವಹಿಸುವ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘವು, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ರಕ್ಷಣೆ ಮಾಡುತ್ತದೆ.

‘ವಿವಿಧ ಕಾರಣಗಳಿಗಾಗಿ ಮನೆ ಅಥವಾ ಹಾಸ್ಟೆಲ್ ಬಿಟ್ಟು ಬರುವ ಮಕ್ಕಳು ಸಾಮಾನ್ಯವಾಗಿ ಹೋಟೆಲ್, ಬೇಕರಿ, ಗ್ಯಾರೇಜ್, ಬಾರ್ ಆ್ಯಂಡ್ ರೆಸ್ಟೊರೆಂಟ್ ಸೇರಿದಂತೆ ವಿವಿಧೆಡೆ ಕೆಲಸ ಮಾಡುತ್ತಾರೆ. ಅಂತಹವರ ಬಗ್ಗೆ ಮಾಹಿತಿ ಸಂಗ್ರಹಿಸಿ, ಅವರು ಕೆಲಸ ಮಾಡುವ ಸ್ಥಳಗಳ ಮೇಲೆ ದಾಳಿ ನಡೆಸಿ ರಕ್ಷಿಸುತ್ತೇವೆ’ ಎಂದು ಜಿಲ್ಲಾ ಬಾಲ ಕಾರ್ಮಿಕ ಯೋಜನಾ ನಿರ್ದೇಶಕ ಬಸವರಾಜ ಪಂಚಾಕ್ಷರಿಮಠ ‘ಪ್ರಜಾವಾಣಿ’ಗೆ ತಿಳಿಸಿದರು.

ಮಾಲೀಕರ ವಿರುದ್ಧ ಕ್ರಮ: ‘ಬಾಲ ಕಾರ್ಮಿಕರಲ್ಲಿ ಎರಡು ರೀತಿ ಇದೆ. ಹದಿನಾಲ್ಕು ವರ್ಷದೊಳಗಿನ ಮಕ್ಕಳಿಂದ ಯಾವ ಕೆಲಸವನ್ನೂ ಮಾಡಿಸುವಂತಿಲ್ಲ. 14 ವರ್ಷ ಮೀರಿದ ಹಾಗೂ 18 ವರ್ಷದೊಳಗಿನವರನ್ನು ಕಿಶೋರ ಕಾರ್ಮಿಕರು ಎಂದು ಪರಿಗಣಿಸಲಾಗುತ್ತದೆ. ಅವರನ್ನು ಉದ್ಯಮ, ಕಾರ್ಖಾನೆ, ಕಟ್ಟಡ ನಿರ್ಮಾಣ ಸೇರಿದಂತೆ ಅಪಾಯಕಾರಿ ಕೆಲಸಗಳಿಗೆ ನಿಯೋಜಿಸುವಂತಿಲ್ಲ. ಇದನ್ನು ಮೀರಿ ಕೆಲಸ ಮಾಡಿಸಿದರೆ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.

‘ದಾಳಿ ಸಂದರ್ಭದಲ್ಲಿ ರಕ್ಷಿಸುವವರನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸುತ್ತೇವೆ. ಮಕ್ಕಳನ್ನು ಮತ್ತೆ ಮನೆಗೆ ತಲುಪಿಸಬೇಕೇ, ಶಾಲೆಗೆ ಕಳಿಸಬೇಕೇ ಅಥವಾ ಹಾಸ್ಟೆಲ್‌ಗೆ ಸೇರಿಸಬೇಕೇ ಎಂಬುದರ ಕುರಿತು ಸಮಿತಿ ಅಂತಿಮ ನಿರ್ಧಾರ ಕೈಗೊಳ್ಳುತ್ತದೆ’ ಎಂದು ಹೇಳಿದರು.

‘ಬಾಲ ಕಾರ್ಮಿಕ ಪದ್ಧತಿ ವಿರುದ್ಧ ನಿರಂತರವಾಗಿ ಜಾಗೃತಿ ಮತ್ತು ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಪ್ರತಿ ತಿಂಗಳು ಅಧಿಕಾರಿಗಳೊಂದಿಗೆ ಸಭೆ, ಬೀದಿ ನಾಟಕ ಪ್ರದರ್ಶನ, ಭಿತ್ತಿ ಪತ್ರಗಳ ವಿತರಣೆ, ಅಂಗಡಿ ಮಾಲೀಕರಿಗೆ ಜಾಗೃತಿ, ಕಾನೂನು ಸೇವಾ ಪ್ರಾಧಿಕಾರದ ಸಹಯೋಗದೊಂದಿಗೆ ಕಾನೂನು
ಅರಿವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ’ ಎಂದು ತಿಳಿಸಿದರು.

‘ಮಾಲೀಕರಿಗೆ ₹20 ಸಾವಿರ ದಂಡ’

‘ಜಿಲ್ಲೆಯಲ್ಲಿ ಕಳೆದ ವರ್ಷಗಳಲ್ಲಿ ದಾಖಲಾಗಿರುವ ಪ್ರಕರಣಗಳ ಪೈಕಿ, ಕೇವಲ ಎರಡರಲ್ಲಿ ಮಾತ್ರ ಇಬ್ಬರು ಮಾಲೀಕರಿಗೆ ನ್ಯಾಯಾಲಯವು ತಲಾ ₹20 ಸಾವಿರ ದಂಡ ವಿಧಿಸಿದೆ. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಕೆಲ ಪ್ರಕರಣಗಳಲ್ಲಿ ಮಾಲೀಕರು ಖುಲಾಸೆಯಾಗಿದ್ದರೆ, ಉಳಿದವು ವಿಚಾರಣಾ ಹಂತದಲ್ಲಿವೆ. ಧೀರ್ಘಾವಧಿಯವರೆಗೆ ನಡೆಯುವ ವಿಚಾರಣೆಯೂ ಶಿಕ್ಷೆಯ ಪ್ರಮಾಣ ಕಡಿಮೆಯಾಗಿರುವುದಕ್ಕೆ ಕಾರಣವಾಗಿದೆ’ ಎಂದು ಬಸವರಾಜ ಪಂಚಾಕ್ಷರಿಮಠ ಹೇಳಿದರು.

ಕಾನೂನು ಹೇಳುವುದೇನು?

ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆಯ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ– 1986ರ ಪ್ರಕಾರ, ಬಾಲ ಮತ್ತು ಕಿಶೋರ ಕಾರ್ಮಿಕರನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳುವಂತಿಲ್ಲ. ಕಾಯ್ದೆ ಮೀರಿದರೆ ಮೊದಲ ಅಪರಾಧಕ್ಕೆ ಮಾಲೀಕರಿಗೆ 6 ತಿಂಗಳಿಂದ 2 ವರ್ಷದವರೆಗೆ ಜೈಲು ಶಿಕ್ಷೆ ಅಥವಾ ₹20 ಸಾವಿರದಿಂದ ₹50 ಸಾವಿರದವರೆಗೆ ದಂಡ ಅಥವಾ ಎರಡನ್ನು ವಿಧಿಸಬಹುದಾಗಿದೆ. ಪುನರಾವರ್ತಿತ ಅಪರಾಧಕ್ಕೆ 1–3 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಪೋಷಕರೇ ಅಪರಾಧಿಗಳಾಗಿದ್ದಲ್ಲಿ ₹10 ಸಾವಿರದವರೆಗೆ ದಂಡ ವಿಧಿಸಬಹುದಾಗಿದೆ. ಅಪರಾಧ ಎಸಗಿದ ಮಾಲೀಕ ತಾವು ಕೆಲಸಕ್ಕೆ ನಿಯೋಜಿಸಿಕೊಂಡ ಪ್ರತಿ ಮಗುವಿಗೆ ₹20 ಸಾವಿರದಂತೆ ಮಕ್ಕಳ ಪುನರ್ವಸತಿಗಾಗಿ ರಚಿಸಿರುವ ಕಲ್ಯಾಣ ನಿಧಿಗೆ ದಂಡ ಪಾವತಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT