ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಮ್ಸ್‌ನಲ್ಲಿ ಮಗು ಅಪಹರಣ: ಆರೋಪ

ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿ ಪರಿಶೀಲಿಸಿದ ಪೊಲೀಸರು: ತಾಯಿಯಿಂದ ಗೊಂದಲದ ಹೇಳಿಕೆ
Last Updated 14 ಜೂನ್ 2022, 3:16 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕಿಮ್ಸ್‌ನ ಮಕ್ಕಳ ವಾರ್ಡ್‌ನಲ್ಲಿ ದಾಖಲಿಸಲಾಗಿದ್ದ 40 ದಿನಗಳ ಹೆಣ್ಣು ಮಗುವನ್ನು ಸೋಮವಾರ ಎತ್ತಿಕೊಂಡು ಹೋಗಲಾಗಿದೆ.

‘ಮಗುವನ್ನು ಎತ್ತಿಕೊಂಡು ವಾರ್ಡ್‌ನಿಂದ ಹೊರಗೆ ತಂದಾಗ ವ್ಯಕ್ತಿಯೊಬ್ಬ ಏಕಾಏಕಿ ಕಸಿದುಕೊಂಡು ಪರಾರಿಯಾಗಿದ್ದಾನೆ’ ಎಂದು ಮಗುವಿನ ತಾಯಿ, ಕುಂದಗೋಳದ ನಿವಾಸಿ ಸಲ್ಮಾ ಶೇಖ್‌ ಆರೋಪಿಸಿದ್ದಾರೆ.

‘ಮಗುವಿನ ಮಿದುಳಿನಲ್ಲಿ ತುಂಬಿದ್ದ ನೀರಿನ ಚಿಕಿತ್ಸೆಗಾಗಿ ಮೂರು ದಿನಗಳ ಹಿಂದೆ ಕಿಮ್ಸ್‌ನ ಮಕ್ಕಳ ವಾರ್ಡ್‌ನಲ್ಲಿ ದಾಖಲಿಸಿದ್ದೆವು. ಚಿಕಿತ್ಸೆಯ ನಂತರ ಸೋಮವಾರ ಮನೆಗೆ ಕರೆದುಕೊಂಡು ಹೋಗಬಹುದು ಎಂದು ವೈದ್ಯರು ತಿಳಿಸಿದ್ದರು. ಮಗು ಅಳುತ್ತಿದೆ ಎಂದು ವಾರ್ಡ್‌ನಿಂದ ಹೊರಗಡೆ ಬಂದಾಗ ಬಿಳಿ ಶರ್ಟ್‌ಧಾರಿ ವ್ಯಕ್ತಿಯೊಬ್ಬ ಕಸಿದು ಓಡಿ ಹೊದ’ ಎಂದು ಅವರು ವಿವರಿಸಿದರು.

‘ಕಿಮ್ಸ್‌ನಲ್ಲಿ ಭದ್ರತಾ ವೈಫಲ್ಯದಿಂದ ನಮ್ಮ ಮಗುವು ಕಳವು ಆಗಿದೆ. ತಾಯಿ ಜೋರಾಗಿ ಕಿರುಚಿದರೂ ಯಾರೊಬ್ಬರೂ ರಕ್ಷಣೆಗೆ ಬಂದಿಲ್ಲ’ ಎಂದು ಮಗುವಿನ ದೊಡ್ಡಪ್ಪ ಅಸ್ಲಾಂ ಶೇಖ್‌ ಆಪಾದಿಸಿದ್ದಾರೆ.

‘ಮಿದುಳಿನ ಸಮಸ್ಯೆಯಿಂದ ಮಗು ಗುಣಮುಖವಾದ ನಂತರ ಮಧ್ಯಾಹ್ನ 1ರ ವೇಳೆಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದೇವೆ. ಮಗುವನ್ನು ಎತ್ತಿಕೊಂಡು ಹೊರಗೆ ಬಂದಾಗ ವ್ಯಕ್ತಿಯೊಬ್ಬ ಎತ್ತಿಕೊಂಡು ಹೋಗಿದ್ದಾನೆ ತಾಯಿ ಎಂದು ಹೇಳುತ್ತಿದ್ದಾರೆ. ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ’ ಎಂದು ಕಿಮ್ಸ್‌ ವೈದ್ಯಕೀಯ ಅಧೀಕ್ಷಕ ಸಿ.ಅರುಣಕುಮಾರ ತಿಳಿಸಿದರು.

ಪರಿಶೀಲನೆ: ಕಮಿಷನರ್‌ ಲಾಭೂರಾಮ್‌, ಡಿಸಿಪಿ ಸಾಯಿಲ್‌ ಬಾಗ್ಲಾ, ಎಸಿಪಿ ವಿನೋದ ಮುಕ್ತೇದಾರ, ಇನ್‌ಸ್ಪೆಕ್ಟರ್‌ಗಳಾದ ಮಹಾಂತೇಶ ಹೂಳಿ ಮತ್ತು ಜಗದೀಶ ಹಂಚಿನಾಳ ಅವರು ಕಿಮ್ಸ್‌ಗೆ ದೌಡಾಯಿಸಿ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದರು.

‘ಸಿಸಿಟಿವಿ ಕ್ಯಾಮೆರಾ ದೃಶ್ಯಾವಗಳಿಗಳಲ್ಲಿ ಎಲ್ಲಿಯೂ ತಾಯಿಯ ಚಲನವಲನಗಳು ಕಂಡುಬಂದಿಲ್ಲ. ಅವರನ್ನು ವಿಚಾರಣೆಗೆ ಒಳಪಡಿಸಿದಾಗ, ‘ಮಗು ಎತ್ತಿಕೊಂಡು ಹೋಗಿದ್ದಾನೆ’ ಎಂದು ಒಮ್ಮೆ ಹೇಳಿದರೆ, ‘ಎತ್ತಿಕೊಳ್ಳುತ್ತೇನೆ ಎಂದು ಮಗುವನ್ನು ತೆಗೆದುಕೊಂಡಿದ್ದ’ ಎಂದು ಮತ್ತೊಮ್ಮೆ ಹೇಳುತ್ತಿರುವುದು ಗೊಂದಲಕ್ಕೆ ಕಾರಣವಾಗಿದೆ. ಮಗು ಕಳವಾಗಿದೆಯೇ? ಅಥವಾ ಬೇರೆ ಏನಾದರೂ ನಡೆದಿದೆಯೇ? ಎನ್ನುವ ಆ ನಿಟ್ಟಿನಲ್ಲಿಯೂ ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಆರೋಪಿ ಪತ್ತೆಗೆ ತಾಯಿ ಸಹಕಾರ ಅಗತ್ಯ’

‘ಮಗುವನ್ನು ಎತ್ತಿಕೊಂಡು ಹೋಗುವಾಗ ತಾಯಿ ಕಿರುಚಾಡಿದರೆ ಆರೋಪಿಯನ್ನು ಸುಲಭವಾಗಿ ಪತ್ತೆಹಚ್ಚಬಹುದಾಗಿತ್ತು. ಆದರೆ, ಅಂತಹದ್ದೇನು ನಡೆದಿಲ್ಲ. ವಿಷಯ ತಿಳಿದ ತಕ್ಷಣ ಭದ್ರತಾ ಸಿಬ್ಬಂದಿ ಆಸ್ಪತ್ರೆಯ ಎಲ್ಲ ಗೇಟ್‌ಗಳಲ್ಲಿಯೂ ಪರಿಶೀಲನೆ ನಡೆಸಿದ್ದಾರೆ. ಆಸ್ಪತ್ರೆ ಆವರಣದಲ್ಲಿ 300 ಸಿಸಿಟಿವಿ ಕ್ಯಾಮೆರಾಗಳಿವೆ. ಯಾವುದಾದರೂ ಕ್ಯಾಮೆರಾದಲ್ಲಿ ಆರೋಪಿಯ ಚಹರೆ ಸೆರೆ ಆಗಿಯೇ ಆಗುತ್ತದೆ. ಅವನನ್ನು ಗುರುತಿಸಲು ತಾಯಿಯ ಸಹಕಾರ ಮುಖ್ಯ’ ಎಂದು ಕಿಮ್ಸ್‌ ನಿರ್ದೇಶಕ ರಾಮಲಿಂಗಪ್ಪ ಅಂಟರತಾನಿ ಹೇಳಿದರು.

ಮಗುವಿನ ತಾಯಿ ವಿದ್ಯಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಡಿಸಿಪಿ ನೇತೃತ್ವದಲ್ಲಿ ತಂಡ ರಚಿಸಿ ತನಿಖೆ ನಡೆಸಲಾಗುತ್ತಿದೆ
ಲಾಭೂರಾಮ್‌, ಕಮಿಷನರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT