ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಡಿಕೆಯಿಂದ ಅಲ್ಪಸಂಖ್ಯಾತರ ಕಣ್ಣೊರೆಸುವ ತಂತ್ರ: ಕಾಂಗ್ರೆಸ್

ಪ್ರತಿಪಕ್ಷದಿಂದಲೇ ಪ್ರತಿಪಕ್ಷದ ನಾಯಕರ ಟೀಕೆ ಉದ್ದೇಶಪೂರ್ವಕ: ಖಾದರ್‌
Last Updated 17 ಅಕ್ಟೋಬರ್ 2021, 8:08 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ. ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ಅಲ್ಪ ಸಂಖ್ಯಾತರಿಗೆ ಏನೂ ಮಾಡಿಲ್ಲ. ಈಗ ಸಿದ್ದರಾಮಯ್ಯ ಅವರನ್ನು ಟಾರ್ಗೆಟ್‌ ಮಾಡಲು ಅಲ್ಪಸಂಖ್ಯಾತರನ್ನು ಓಲೈಸುವ ತಂತ್ರ ಮಾಡುತ್ತಿದ್ದಾರೆ ಎಂದು ವಿಧಾನಪರಿಷತ್‌ ಸದಸ್ಯ ಕಾಂಗ್ರೆಸ್‌ನ ನಾಸೀರ್‌ ಅಹ್ಮದ್‌, ಶಾಸಕ ರಿಜ್ವಾನ್‌ ಅರ್ಷದ್‌ ಮತ್ತು ಮಾಜಿ ಸಚಿವ ಯು.ಟಿ. ಖಾದರ್‌ ವಾಗ್ದಾಳಿ ನಡೆಸಿದರು.

ಹಾನಗಲ್‌ ಉಪಚುನಾವಣೆಗೆ ಪ್ರಚಾರಕ್ಕೆ ತೆರಳುವ ಮುನ್ನ ನಗರದಲ್ಲಿ ಭಾನುವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ನಾಸೀರ್‌ ಅಹ್ಮದ್‌ ‘ರಾಜ್ಯದಲ್ಲಿ ಶೇ 18ರಷ್ಟಿರುವ ಅಲ್ಪಸಂಖ್ಯಾತರಿಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ₹3,500 ಕೋಟಿ ಕೊಟ್ಟಿದ್ದಾರೆ. ಎಲ್ಲ ಧರ್ಮದ ಜನರಿಗೆ ನೆರವಾಗಿದ್ದಾರೆ. ಆದರೆ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಅಲ್ಪಸಂಖ್ಯಾತರಿಗೆ ₹1,800 ಕೋಟಿ ನೀಡುವುದಾಗಿ ಹೇಳಿ ₹1,100 ಕೋಟಿ ಮಾತ್ರ ಕೊಟ್ಟಿದ್ದಾರೆ. ಈಗ ಉಪಚುನಾವಣೆಯ ನೆಪದಲ್ಲಿ ಅಲ್ಪಸಂಖ್ಯಾತರ ಬಗ್ಗೆ ಮಾತನಾಡುವ ಹಕ್ಕು ಕುಮಾರಸ್ವಾಮಿಗಿಲ್ಲ’ ಎಂದು ಟೀಕಿಸಿದರು.

‘ಹಾನಗಲ್‌ ಹಾಗೂ ಸಿಂದಗಿ ಕ್ಷೇತ್ರಗಳ ಉಪಚುನಾವಣೆಯಲ್ಲಿ ಜೆಡಿಎಸ್‌ ಅಲ್ಪಸಂಖ್ಯಾತರಿಗೆ ಟಿಕೆಟ್‌ ನೀಡಿದೆ. ಹಿಂದೆ ಬಸವಕಲ್ಯಾಣದಲ್ಲಿಯೂ ಇದೇ ರೀತಿ ಮಾಡಿತ್ತು. ಅಲ್ಪ ಸಂಖ್ಯಾತರ ಬಗ್ಗೆ ಕುಮಾರಸ್ವಾಮಿಗೆ ನಿಜವಾದ ಕಾಳಜಿಯಿದ್ದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹಾಸನ, ಚನ್ನಪಟ್ಟಣ ಮತ್ತು ರಾಮನಗರದಲ್ಲಿ ಅಲ್ಪಸಂಖ್ಯಾತರಿಗೇ ಟಿಕೆಟ್ ಕೊಡಲಿ’ ಎಂದು ಸವಾಲು ಹಾಕಿದರು.

ಯು.ಟಿ. ಖಾದರ್‌ ಮಾತನಾಡಿ ‘ಉಪಚುನಾವಣೆ ಸಮಯದಲ್ಲಿ ಕುಮಾರಸ್ವಾಮಿ ಆಡಳಿತಪಕ್ಷ ಬಿಜೆಪಿಯನ್ನು ಟೀಕಿಸುವ ಬದಲು ಪ್ರತಿಪಕ್ಷವಾದ ಕಾಂಗ್ರೆಸ್‌ ಅನ್ನು ಟೀಕಿಸುತ್ತಿದ್ದಾರೆ. ಅದರಲ್ಲೂ ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ತಮ್ಮ ಪಕ್ಷದಲ್ಲಿಯೇ ನೂರಾರು ಸಮಸ್ಯೆಗಳಿದ್ದರೂ ಇನ್ನೊಂದು ಪಕ್ಷದ ಬಗ್ಗೆ ಟೀಕೆ ಮಾಡುವ ಮೊದಲು ಕುಮಾರಸ್ವಾಮಿ ಆತ್ಮಾವಲೋಕನ ಮಾಡಿಕೊಳ್ಳಲಿ’ ಎಂದರು.

ರಿಜ್ವಾನ್‌ ಅರ್ಷದ್‌ ಮಾತನಾಡಿ ‘ರಾಜ್ಯದಲ್ಲಿ ಅಲ್ಪಸಂಖ್ಯಾತರೂ ಬದುಕಿದ್ದಾರೆ ಎನ್ನುವುದು ಕುಮಾರಸ್ವಾಮಿ ಅವರಿಗೆ ಈಗ ಜ್ಞಾನೋದಯವಾಗಿದೆ. ಮುಖ್ಯಮಂತ್ರಿಯಾಗಿದ್ದಾಗ ಅವರು ತಮ್ಮ ಪಕ್ಷದ ಯಾವ ಅಲ್ಪಸಂಖ್ಯಾತರಿಗೂ ಉತ್ತಮ ಸ್ಥಾನಮಾನ ಕೊಡಲಿಲ್ಲ. ಈಗ ಇಂಧನ ಹಾಗೂ ಅಗತ್ಯ ಬೆಲೆ ವಸ್ತುಗಳ ಬೆಲೆ ಏರಿಕೆ ಬಗ್ಗೆ ಟೀಕಿಸುತ್ತಿಲ್ಲ. ಬಿಜೆಪಿಯನ್ನು ಓಲೈಸಲು ಅಲ್ಪಸಂಖ್ಯಾತರನ್ನು ಹಾಗೂ ಸಿದ್ದರಾಮಯ್ಯ ಅವರನ್ನು ವಿನಾಕಾರಣ ಬಯ್ಯುತ್ತಿದ್ದಾರೆ’ ಎಂದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಕಾಂಗ್ರೆಸ್‌ ಮುಖಂಡ ಇಸ್ಮಾಯಿಲ್‌ ತಮಟಗಾರ ಇದ್ದರು.

‘ಅಗತ್ಯ ವಸ್ತುಗಳ ಬೆಲೆ ಇಳಿಯಬೇಕೇ; ಬಿಜೆಪಿಯನ್ನು ಸೋಲಿಸಿ’
ನಿತ್ಯ ಏರಿಕೆಯಗುತ್ತಿರುವ ಇಂಧನ ಸೇರಿದಂತೆ ಇತರ ಅಗತ್ಯ ವ‌ಸ್ತುಗಳ ಬೆಲೆಏರಿಕೆ ಕಡಿಮೆಯಾಗಬೇಕಾದರೆ ಈಗಿನ ಎರಡೂ ಉಪಚುನಾವಣೆಗಳಲ್ಲಿ ಬಿಜೆಪಿಯನ್ನು ಸೋಲಿಸಬೇಕು ಎಂದು ಮಾಜಿ ಸಚಿವ ಯು.ಟಿ. ಖಾದರ್‌ ಹೇಳಿದರು.

ಸಾಮಾನ್ಯ ಜನರ ನಿತ್ಯದ ಬದುಕಿನ ಮೇಲೆ ಬರೆ ಹಾಕುತ್ತಿರುವ ಬಿಜೆಪಿಗೆ ತಕ್ಕಪಾಠ ಕಲಿಸಲು ಇದು ಸರಿಯಾದ ಸಮಯ. ಒಂದು ವೇಳೆ ಬಿಜೆಪಿಯನ್ನು ಗೆಲ್ಲಿಸಿದರೆ ಮತ್ತಷ್ಟು ಬೆಲೆ ಏರಿಕೆ ಆಗಲಿವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT