ಮನವೊಲಿಕೆಗೆ ಕಾಂಗ್ರೆಸ್‌ ಯತ್ನ; ಬಿಜೆಪಿ ಸಂಧಾನ

ಭಾನುವಾರ, ಮೇ 26, 2019
27 °C
ಕುಂದಗೋಳ ವಿಧಾನಸಭೆ ಉಪಚುನಾವಣೆ

ಮನವೊಲಿಕೆಗೆ ಕಾಂಗ್ರೆಸ್‌ ಯತ್ನ; ಬಿಜೆಪಿ ಸಂಧಾನ

Published:
Updated:

ಹುಬ್ಬಳ್ಳಿ: ಕುಂದಗೋಳ ಉಪಚುನಾವಣೆಯಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಗಳನ್ನು ಮನವೊಲಿಸುವ ನಿಟ್ಟಿನಲ್ಲಿ ಮಂಗಳವಾರ ಕಾಂಗ್ರೆಸ್‌ ಯತ್ನ ನಡೆಸಿದ್ದರೆ, ಇತ್ತ ಬಿಜೆಪಿಯು ಸಂಧಾನ ಸಭೆ ನಡೆಸಿತು.

ಕಾಂಗ್ರೆಸ್‌ನಿಂದ ಬಂಡಾಯ ಎದ್ದು ನಾಮಪತ್ರ ಸಲ್ಲಿಸಿರುವ ಶಿವಾನಂದ ಬೆಂತೂರ, ಸುರೇಶ ಸವಣೂರ, ವಿಶ್ವನಾಥ ಕುಬಿಹಾಳ, ಚಂದ್ರಶೇಖರ ಜುಟ್ಟಲ್, ಜಿ.ಡಿ.ಘೋರ್ಪಡೆ, ಎಚ್.ಎಲ್. ನದಾಫ್ ಹುಬ್ಬಳ್ಳಿಯಲ್ಲಿ ಸಭೆ ಸೇರಿ ಚರ್ಚೆ ನಡೆಸಿದ್ದಾರೆ.

ಸಭೆ ನಡೆಸಿರುವುದನ್ನು ಖಚಿತ ಪಡಿಸಿದ ಬೆಂತೂರ ಹಾಗೂ ಜುಟ್ಟಲ್‌ ಅವರು, ‘ಚುನಾವಣಾ ಕಣದಲ್ಲಿ ನಮ್ಮಲ್ಲಿ ಒಬ್ಬರು ಉಳಿಯುವುದು ಎಂದು ನಿರ್ಧಾರ ಮಾಡಿದ್ದೇವೆ. ಪಕ್ಷದ ನಾಯಕರ ಒತ್ತಡಕ್ಕೆ ಮಣಿಯುವುದಿಲ್ಲ. ಬುಧವಾರದಿಂದ ರಟ್ಟಿಗೇರಿ, ಕಳಸದಿಂದ ಬೆಳಿಗ್ಗೆ 9 ಗಂಟೆಗೆ ಪ್ರಚಾರ ಆರಂಭಿಸಲಿದ್ದೇವೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಈ ನಡುವೆ ಕಾಂಗ್ರೆಸ್‌ ಮುಖಂಡ ವಿನಯ ಕುಲಕರ್ಣಿ, ಹುಬ್ಬಳ್ಳಿ ಧಾರವಾಡ ಗ್ರಾಮೀಣ ಘಟಕದ ಅಧ್ಯಕ್ಷ ಅನಿಲಕುಮಾರ ಪಾಟೀಲ ಅವರು ಕರೆ ಮಾಡಿ ನಾಮಪತ್ರ ಹಿಂಪಡೆಯುವಂತೆ ಮನವೊಲಿಸಲು ಯತ್ನಿಸಿದ್ದಾರೆ.

‘ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಗಳೊಂದಿಗೆ ಬುಧವಾರ ಮಾತುಕತೆ ನಡೆಸುತ್ತೇನೆ. ಅವಶ್ಯಕತೆ ಬಿದ್ದರೆ ರಾಜ್ಯ ನಾಯಕರೂ ಮಾತನಾಡಲಿದ್ದಾರೆ. ಎಲ್ಲರೂ ನಾಮಪತ್ರ ಹಿಂತೆಗೆದುಕೊಳ್ಳಲಿದ್ದಾರೆ ಎಂಬ ವಿಶ್ವಾಸವನ್ನು ಅನಿಲಕುಮಾರ ಪಾಟೀಲ ವ್ಯಕ್ತಪಡಿಸಿದರು.

ಇನ್ನೊಂದೆಡೆ ಹುಬ್ಬಳ್ಳಿಯಲ್ಲಿ ಬಿಜೆಪಿ ಮುಖಂಡರು ಅಭ್ಯರ್ಥಿ ಎಸ್‌.ಐ. ಚಿಕ್ಕನಗೌಡ್ರ ಹಾಗೂ ಆಕಾಂಕ್ಷಿಯಾಗಿದ್ದ ಎಂ.ಆರ್‌. ಪಾಟೀಲ ಹಾಗೂ ಅವರ ಬೆಂಬಲಿಗರೊಂದಿಗೆ ಸಂಧಾನ ಸಭೆ ನಡೆಸಿದರು.‌

ಸಭೆಯಲ್ಲಿ ಭಾಗವಹಿಸಿದ್ದ ಸಂಸದ ಪ್ರಹ್ಲಾದ ಜೋಶಿ, ಶಾಸಕರಾದ ಬಸವರಾಜ ಬೊಮ್ಮಾಯಿ ಅವರು, ಮುಂದಿನ ದಿನಗಳಲ್ಲಿ ಎಲ್ಲರಿಗೂ ಅವಕಾಶ ದೊರೆಯಲಿದೆ. ಆದ್ದರಿಂದ ಎಲ್ಲರೂ ಒಗ್ಗಟ್ಟಿನಿಂದ ಚುನಾವಣಾ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು. ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಸೂಚಿಸಿದರು ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !