ಕಾನೂನು, ತಂತ್ರಜ್ಞಾನ ಬಲಗೊಳಿಸಿದಲ್ಲಿ ದೇಶದ ಭದ್ರತೆ ಸದೃಢ: ಅಮಿತ್ ಶಾ

ಧಾರವಾಡ: ದೇಶದಲ್ಲಿ ಸದ್ಯ ಇರುವ ಐಪಿಸಿ, ಸಿಆರ್ಪಿಸಿ, ಸಾಕ್ಷ್ಯ ಕಾಯ್ದೆಗಳಿಗೆ ಅಗತ್ಯ ಬದಲಾವಣೆ ತರುವುದರ ಜತೆಗೆ, ವಿಧಿ ವಿಜ್ಞಾನ ತಂತ್ರಜ್ಞಾನ ಅಭಿವೃದ್ಧಿಪಡಿಸಿ ಬಲಿಷ್ಠ ರಾಷ್ಟ್ರ ನಿರ್ಮಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ರಾಷ್ಟೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯದ 9ನೇ ಕ್ಯಾಂಪಸ್ ಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಅಪರಾಧ ಕೃತ್ಯಗಳನ್ನು ಸಾಭಿತು ಮಾಡಲು 3ನೇ ಡಿಗ್ರಿ ಕಾಲ ಈಗಿಲ್ಲ. ಆದರೆ ಕಾನೂನಾತ್ಮಕವಾಗಿ ಆರೋಪಿಗೆ ಶಿಕ್ಷೆ ಸಿಗುವಂತೆ ಮಾಡಲು ವಿಧಿ ವಿಜ್ಞಾನ ಆಧಾರಿತ ಸಾಕ್ಷ್ಯ ಸಂಗ್ರಹ ಅಗತ್ಯ. ಈ ನಿಟ್ಟಿನಲ್ಲಿ ವಿಧಿ ವಿಜ್ಞಾನ ವಿಶ್ವವಿದ್ಯಾಲಯದ ಕ್ಯಾಂಪಸ್ ಗಳ ಸ್ಥಾಪನೆಯೂ ನೇರವಾಗಲಿದೆ ಎಂದರು.
2002ರಲ್ಲಿ ಕೇಂದ್ರ ಗೃಹ ಮಂತ್ರಿ ಆಗಿದ್ದ ಎಲ್ ಕೆ ಅಡ್ವಾಣಿ ಅವರು ಮೊದಲಬಾರಿಗೆ ವಿಧಿ ವಿಜ್ಞಾನ ನಿರ್ದೇಶನಾಲಯ ಆರಂಭಿಸಿದರು. ಅದರ ಆಧಾರದಲ್ಲಿ ಗುಜರಾತ್ ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿ ಅವರು ವಿಧಿ ವಿಜ್ಞಾನ ಪ್ರಯೋಗಾಲಯ ಆರಂಭಿಸುವ ಯೋಜನೆ ರೂಪಿಸಿದರು. ಮೂಲ ಸೌಕರ್ಯ ಕಲ್ಪಿಸಿದರೂ ತಜ್ಞರ ಕೊರತೆ ಎದುರಾಯಿತು. ಇದನ್ನು ನಿಗಿಸಲು ವಿಧಿ ವಿಜ್ಞಾನ ವಿಷಯ ಕೋರ್ಸ್ ಆರಂಭಿಸಲು ಗುಜರಾತ್ ಸರ್ಕಾರ ನಿರ್ಧರಿಸಿ ವಿಶ್ವವಿದ್ಯಾಲಯ ಆರಂಭಿಸಿತು. ಆದರೆ ಅಲ್ಲಿಂದ ಹೊರ ಬರುತ್ತಿರುವ ಪರಿಣಿತರ ಸಂಖ್ಯೆ ಕಡಿಮೆ ಇದ್ದ ಕಾರಣ ವಿವಿಧ ರಾಜ್ಯಗಳಲ್ಲಿ ಕ್ಯಾಂಪಸ್ ನಿರ್ಮಾಣ ಮಾಡಲಾಗಿದೆ. ಇದರಿಂದ ದೇಶದ ವಿಧಿ ವಿಜ್ಞಾನ ಕ್ಷೇತ್ರಕ್ಕೆ ಆಗತ್ಯ ಇರುವ 8ರಿಂದ 10 ಸಾವಿರ ತಜ್ಞರ ಸಿಗಲಿದ್ದಾರೆ ಎಂದು ಹೇಳಿದರು.
ವಿದ್ಧಿ ವಿಜ್ಞಾನ ಕೋರ್ಸ್ ಮೂಲಕ 12ನೇ ತರಗತಿ ನಂತರ ಈ ಕೋರ್ಸ್ ಕಲಿಯಬಹುದು. ಇದರಿಂದ ಶೇ 100 ರಷ್ಟು ಉದ್ಯೋಗ ಖಾತ್ರಿ ಇರಲಿದೆ ಎಂದರು
ಜಗತ್ತಿನ ಇತರ ರಾಷ್ಟ್ರಗಳ ಸರಿ ಸಮನಾಗಿ ನಿಲ್ಲಬೇಕಾದರೆ ದೇಶದ ವಿದ್ಧಿ ವಿಜ್ಞಾನ ಕ್ಷೇತ್ರ ಬಲಿಷ್ಠ ಗೊಳಿಸಬೇಕು. ಅದಕ್ಕೆ ಅಗತ್ಯ ಇರುವ ತಜ್ಞರನ್ನು ರೂಪಿಸಬೇಕಿದೆ. ಈ ನಿಟ್ಟಿನಲ್ಲಿ ಪ್ರಾರಂಭವಾದ ಈ ಕ್ಯಾಂಪಸ್ ರಾಜ್ಯದ ವಿದ್ಯಾರ್ಥಿಗಳಿಗೆ ಹೊಸ ಅವಕಾಶ ಹಾಗೂ ರಾಜ್ಯ ಪೊಲೀಸ್ ವ್ಯವಸ್ಥೆ ಬಲಿಷ್ಠ ಗೊಳಿಸಲು ನೇರವಾಗಲಿದೆ ಎಂದು ಶಾ ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಆಧುನಿಕತೆ ಹೆಚ್ಚಾದಂತೆ ಅಪರಾಧ ಪ್ರಕರಣಗಳ ಸ್ವರೂಪವೂ ಬದಲಾಗಿದೆ. ಇದಕ್ಕೆ ಪೂರಕವಾಗಿ ಪೊಲೀಸ ರು ಒಂದು ಹೆಜ್ಜೆ ಮುಂದಿರಬೇಕು. ಆ ನಿಟ್ಟಿನಲ್ಲಿ ರಾಜ್ಯ ಪೊಲೀಸ್ ವ್ಯವಸ್ಥೆ ಬಲಪಡಿಸಲು ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಕುಲಪತಿ ಡಾ. ವ್ಯಾಸ ಮಾತನಾಡಿದರು. ಗೃಹ ಸಚಿವ ಆರಗ ಜ್ಞಾನೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ, ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ. ಮೇಯರ್ ಈರೇಶ ಅಂಚಟಗೇರಿ, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ರಜನಿಶ್ ಗೊಯಲ್, ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.