ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಕೋವಿಡ್ 2ನೇ ಅಲೆಯ ಬಿಸಿ; ಆತಂಕದಲ್ಲಿ ಹೋಟೆಲ್ ಉದ್ಯಮ

ಸರ್ಕಾರದ ಪರಿಷ್ಕೃತ ನಿಯಮಾವಳಿ, ನುಂಗಲಾರದ ತುತ್ತು–ಹೋಟೆಲ್‌ನವರ ಸಂಕಷ್ಟ
Last Updated 8 ಏಪ್ರಿಲ್ 2021, 20:00 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕಳೆದ ವರ್ಷದ ಲಾಕ್‌ಡೌನ್‌ನಿಂದ ಇತ್ತೀಚೆಗಷ್ಟೇ ಚೇತರಿಸಿಕೊಂಡು ಹಳಿಗೆ ಮರಳುತ್ತಿದ್ದ ಹೋಟೆಲ್‌ ಉದ್ಯಮ ಕೊರೊನಾ ಎರಡನೇ ಅಲೆಯ ಬಿಸಿಗೆ ಮತ್ತೀಗ ಸಂಕಷ್ಟಕ್ಕೆ ಸಿಲುಕಿದೆ.

ರಾಜ್ಯ ಸರ್ಕಾರ ಪ್ರಕಟಿಸಿರುವ ಪರಿಷ್ಕೃತ ಕೋವಿಡ್‌ ನಿಯಮಾವಳಿಗಳ ಪ್ರಕಾರ ಹೋಟೆಲ್, ಬಾರ್ ಅಂಡ್‌ ರೆಸ್ಟೋರೆಂಟ್‌ಗಳಲ್ಲಿ ಶೇ 50ರಷ್ಟು ಮಾತ್ರ ಸ್ಥಳಾವಕಾಶ ಭರ್ತಿಗೆ ಅನುಮತಿಯಿದೆ. ಹೀಗಾಗಿ ಉದ್ಯಮ ಮತ್ತೆ ನೆಲಕಚ್ಚುವ ಆತಂಕದಲ್ಲಿದ್ದಾರೆ ಹೋಟೆಲ್‌ ಉದ್ಯಮಿಗಳು.

ಕೊರೊನಾ ಸೋಂಕು, ಲಾಕ್‌ಡೌನ್‌ ಬಳಿಕ ಹೋಟೆಲ್‌ಗಳು ಮುಚ್ಚಿದ್ದವು. ಅಕ್ಟೋಬರ್ ಬಳಿಕ ಹೋಟೆಲ್‌ಗಳಿಗೆ ನಿಧಾನವಾಗಿ ಗ್ರಾಹಕರು ಬರಲಾರಂಭಿಸಿದ್ದರು. ಆದರೆ ಈಗ ಮತ್ತೆ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ನಿರ್ಬಂಧ ಹೋಟೆಲ್‌ಗಳಿಗೆ ಬಿಸಿತುಪ್ಪವಾಗಿದೆ.

‘ಜನರ ಆರೋಗ್ಯದ ಕಾಳಜಿ ಮುಖ್ಯ. ಆದರೆ, ರಾಜಕಾರಣಿಗಳು ತಮ್ಮ ಸಭೆ, ಸಮಾವೇಶಗಳಿಗೆ ಲಕ್ಷಾಂತರ ಜನರನ್ನು ಸೇರಿಸುತ್ತಾರೆ. ಯಾರೋ ಹೇಳಿದರೆಂದು ಸಿನಿಮಾಗಳಿಗೆ ನಿರ್ಬಂಧ ತೆಗೆಯುತ್ತಾರೆ. ಆದರೆ, ಹೋಟೆಲ್‌ಗಳ ಮೇಲೆ ಮಾತ್ರ ನಿರ್ಬಂಧ ಏಕೆ? ಆರು ತಿಂಗಳು ಸ್ತಬ್ಧರಾಗಿದ್ದೆವು. ಇತ್ತೀಚೆಗಷ್ಟೇ ಮರಳಿ ಹೋಟೆಲ್‌ಗಳು ಚೇತರಿಕೆ ಕಂಡಿದ್ದವು. ಬಹುಶಃ ಮತ್ತೆ ಲಾಕ್‌ಡೌನ್‌ ಏನಾದರೂ ಮಾಡಿದರೆ ಸಂಪೂರ್ಣ ನೆಲಕಚ್ಚಿ ಹೋಗಲಿದ್ದೇವೆ’ ಎಂದು ಹುಬ್ಬಳ್ಳಿ ಹೋಟೆಲ್‌ ಸಂಘಟನೆಗಳ ಅಧ್ಯಕ್ಷ ಸುಧಾಕರ ಶೆಟ್ಟಿ ಆತಂಕ ವ್ಯಕ್ತಪಡಿಸಿದರು.

‘ಹೊರಗಿನಿಂದ ನೋಡಲು ದೊಡ್ಡ ಕಟ್ಟಡಗಳಲ್ಲಿ ಹೋಟೆಲ್‌ ನಡೆಸುತ್ತಿರಬಹುದು. ಯಾರೂ ಶ್ರೀಮಂತರಲ್ಲ. ಸಾಲ ಮಾಡಿಯೇ ಉದ್ಯಮ ಮುನ್ನಡೆಸುತ್ತಿರುವವರು. ಸಾಲ ಕೊಟ್ಟ ಬ್ಯಾಂಕ್‌ಗಳೇನು ಸುಮ್ಮನೆ ಕೂರುವುದಿಲ್ಲ, ಹೀಗಾಗಿ ನಮಗೆ ನಿರ್ಬಂಧಗಳಲ್ಲಿ ಒಂದಿಷ್ಟು ಸಡಿಲಿಕೆ ಮಾಡಬೇಕು ’ ಎನ್ನುತ್ತಾರೆ.

ಕೆನರಾ ಹೋಟೆಲ್‌ ಮಾಲೀಕ ಅನಂತ ಪದ್ಮನಾಭ ಐತಾಳ್, ‘ಈಗಷ್ಟೇ ಉಸಿರು ಬಿಡುತ್ತಿದ್ದೆವು. ಬಹುಶಃ ಈ ನಿರ್ಬಂಧ ಮುಂದುವರಿದರೆ ಉದ್ಯಮ ಸತ್ತೇ ಹೋಗಬಹುದು. ಈಗಾಗಲೇ ಪೆಟ್ರೋಲ್‌, ದಿನಸಿ ಸಾಮಾನುಗಳ ಏರಿಕೆಯಿಂದಾಗಿ ಮಾರುಕಟ್ಟೆಯ ವ್ಯವಸ್ಥೆಯೇ ಹಾಳಾಗಿದೆ. ಇಂತಹ ಸಮಯದಲ್ಲಿ ಸರ್ಕಾರದ ಪರಿಷ್ಕೃತ ನಿಯಮಾವಳಿ ನುಂಗಲಾರದ ತುತ್ತಾಗಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಮುಖ್ಯವಾಗಿ ಜನರಲ್ಲಿ ಜಾಗೃತಿ ಮೂಡಬೇಕು. ಕಡ್ಡಾಯವಾಗಿ ಮಾಸ್ಕ್‌ ಧರಿಸುವುದು, ಅಂತರ ಕಾಪಾಡಿಕೊಳ್ಳುವುದು ಇತ್ಯಾದಿ. ಗ್ರಾಹಕರಿಗಾಗಿ ಅಗತ್ಯದ ಮುಂಜಾಗ್ರತಾ ಕ್ರಮ ನಾವೂ ಕೈಗೊಳ್ಳುತ್ತಿದ್ದೇವೆ‘ ಎನ್ನುತ್ತಾರೆ ಅವರು.

ಧಾರವಾಡದ ಮಯೂರ ರೆಸಾರ್ಟ್ ಮಾಲೀಕ ಮೋಹನ್‌ ಮೋರೆ, ‘ಕೋವಿಡ್‌ಗೆ ಹೆದರಿ ಹೋಟೆಲ್‌ಗೆ ಬರೋದನ್ನ ಜನ ನಿಲ್ಲಿಸ್ತಿದ್ದಾರೆ. ಖರ್ಚು ಪೂರಾ ನಮ್ಮ ಮೈಮೇಲೆ ಬೀಳುವಂಗೆ ಆಗಿರೋದಕ್ಕೆ ಗ್ರಾಹಕರಿಗಿಂತ ನಾವ್‌ ಹೆದರೀವ್ರಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT