ಶುಕ್ರವಾರ, ಏಪ್ರಿಲ್ 16, 2021
25 °C
ಜೀವ ಲೆಕ್ಕಿಸದೆ ಕರ್ತವ್ಯ ಸಲ್ಲಿಸಿದವರ ಭತ್ಯೆ ಬಿಡುಗಡೆಗೆ ವಿಳಂಬ

ಹುಬ್ಬಳ್ಳಿ: ಕಿಮ್ಸ್‌ ಸಿಬ್ಬಂದಿಗೆ ಸಿಗದ ಕೋವಿಡ್ ಭತ್ಯೆ

ಓದೇಶ ಸಕಲೇಶಪುರ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಜೀವದ ಹಂಗು ತೊರೆದು ಕೋವಿಡ್–19‌ ರೋಗಿಗಳ ಚಿಕಿತ್ಸೆ ಮತ್ತು ಆರೈಕೆ ಮಾಡಿದ ಕಿಮ್ಸ್‌ ಆಸ್ಪತ್ರೆಯ ವೈದ್ಯಕೀಯ, ಅರೆ ವೈದ್ಯಕೀಯ, ಗುತ್ತಿಗೆ ಹಾಗೂ ಹೊರಗುತ್ತಿಗೆ ಸಿಬ್ಬಂದಿಗೆ ಸರ್ಕಾರ ಘೋಷಿಸಿದ್ದ ₹5 ಸಾವಿರ ಕೋವಿಡ್‌ ಭತ್ಯೆ ಇನ್ನೂ ಸಿಕ್ಕಿಲ್ಲ.

ಕೆಇಎಯಿಂದ (ವೈದ್ಯಕೀಯ ಇಲಾಖೆ) ನೇಮಕವಾದ 149 ನರ್ಸಿಂಗ್ ಅಧಿಕಾರಿಗಳು, ಕಿಮ್ಸ್‌ನಿಂದ ನೇರವಾಗಿ ಗುತ್ತಿಗೆ ಆಧಾರದಲ್ಲಿ ನೇಮಕವಾದ 79 ಸಿಬ್ಬಂದಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 39, ಕ್ಯಾಟ್‌ಲಾಬ್‌ನ 20 ಹಾಗೂ ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯಡಿ (ಪಿಎಂಎಸ್‌ಎಸ್‌ವೈ) ನೇಮಕವಾಗಿದ್ದ 82 ಮಂದಿ ಸೇರಿದಂತೆ ಒಟ್ಟು 375 ಮಂದಿ ಕೋವಿಡ್ ಕರ್ತವ್ಯ ನಿರ್ವಹಿಸಿದ್ದರು.

‘ಕೋವಿಡ್‌ ಸಂದರ್ಭದಲ್ಲಿ ಪಿಪಿಇ ಕಿಟ್ ಧರಿಸಿ ಕರ್ತವ್ಯ ನಿರ್ವಹಿಸುವ ಆರೋಗ್ಯ ಸಿಬ್ಬಂದಿಗೆ ಸರ್ಕಾರ ಕಳೆದ ಜುಲೈನಲ್ಲಿ ಕೋವಿಡ್ ಭತ್ಯೆ ಘೋಷಿಸಿತ್ತು. ತಿಂಗಳಿಗೆ ₹5 ಸಾವಿರದಂತೆ ಆರು ತಿಂಗಳವರೆಗೆ ಭತ್ಯೆ ನೀಡುವಂತೆ ಆರೋಗ್ಯ ಇಲಾಖೆಗೆ ಸೂಚಿಸಿತ್ತು. ಆದರೆ, ಕಿಮ್ಸ್‌ನಲ್ಲಿ 375 ಮಂದಿಗೆ ಇನ್ನೂ ಹಣ ಬಿಡುಗಡೆಯಾಗಿಲ್ಲ’ ಎಂದು ಆಸ್ಪತ್ರೆಯ ನರ್ಸಿಂಗ್ ಅಧಿಕಾರಿ ನಾಗರಾಜ ನಾಯಕ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಲ್ಲಾಡಳಿತದಿಂದ ಕೋವಿಡ್ ನಿಮಿತ್ತ ಆರು ತಿಂಗಳ ಅವಧಿಗೆ ತಾತ್ಕಾಲಿಕವಾಗಿ ನೇಮಕ ಮಾಡಿಕೊಂಡಿದ್ದವರಿಗೆ ಭತ್ಯೆ ಪಾವತಿಸಲಾಗಿದೆ. ನಮಗೆ ಕೊಡಲು ಮೀನಮೇಷ ಎಣಿಸುತ್ತಿದ್ದಾರೆ. ಕಾರಣ ಕೇಳಿದರೆ ಅನುದಾನವಿಲ್ಲ ಎಂದು ನೆಪ ಹೇಳುತ್ತಾರೆ. ಕಟ್ಟಡಕ್ಕೆ ಬಣ್ಣ ಬಳಿಯಲು, ಸೌಂದರ್ಯೀಕರಣಕ್ಕೆ ಹಣವಿರುತ್ತದೆ. ಸಂಕಷ್ಟದ ನಡುವೆಯೂ ಕೆಲಸ ಮಾಡಿದವರಿಗೆ ಭತ್ಯೆ ಕೊಡಲು ಮಾತ್ರ ಇವರ ಬಳಿ ಹಣವಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಪಿಪಿಇ ಕಿಟ್‌ ಧರಿಸಿ ಕರ್ತವ್ಯ ನಿರ್ವಹಿಸಿದವರ ಕಷ್ಟ ಮಾಡಿದವರಿಗೇ ಗೊತ್ತು. ಒಮ್ಮೆ ಕಿಟ್ ಧರಿಸಿ ಕರ್ತವ್ಯದ ಅವಧಿ ಮುಗಿಯುವವರೆಗೆ ತೆಗೆಯುವಂತಿಲ್ಲ. ಈ ಮಧ್ಯೆ ನೀರು ಸಹಿತ ಕುಡಿಯದಂತೆ ಕರ್ತವ್ಯ ನಿರ್ವಹಿಸಿದ್ದೇವೆ. ನಮ್ಮ ಶ್ರಮಕ್ಕೆ ಸರ್ಕಾರ ಘೋಷಿಸಿರುವ ಭತ್ಯೆ ನೀಡಲು ಯಾಕೆ ನಿರ್ಲಕ್ಷ್ಯ ತೋರುತ್ತಿದ್ದಾರೊ ಗೊತ್ತಿಲ್ಲ’ ಎಂದು ಕಿಮ್ಸ್ ಸಿಬ್ಬಂದಿ ಉಮಾ ಅಸಮಾಧಾನ ತೋರಿದರು.

‘ಅನುದಾನದ ಬದಲಿಗೆ ಪರಿಕರ'

ಕೋವಿಡ್–19 ಚಿಕಿತ್ಸೆಗೆ ಬೇಕಿದ್ದ ಸಾಮಗ್ರಿಗಳ ಖರೀದಿಗಾಗಿ ಕಿಮ್ಸ್‌ ಅನುದಾನದಲ್ಲಿ ₹1.47 ಕೋಟಿ ವೆಚ್ಚ ಮಾಡಲಾಗಿತ್ತು. ಆ ಮೊತ್ತ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿತ್ತು. ಅನುದಾನದ ಬದಲಿಗೆ ಕೋವಿಡ್ ನಿರ್ವಹಣೆಗೆ ಬೇಕಾದ ಪಿಪಿಇ ಕಿಟ್‌, ಎನ್‌–95 ಮಾಸ್ಕ್, ವೆಂಟಿಲೇಟರ್, ಸ್ಕ್ಯಾನಿಂಗ್ ಯಂತ್ರಗಳನ್ನು ಸರ್ಕಾರ ಜಿಲ್ಲಾಡಳಿತದ ಮೂಲಕ ಪೂರೈಕೆ ಮಾಡಿದೆ’ ಎಂದು ಡಾ. ರಾಮಲಿಂಗಪ್ಪ ಅಂಟರತಾನಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು