ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ: ವಿದ್ಯಾರ್ಥಿಗಳಿಗೆ ಬೈಸಿಕಲ್, ಹಳೆಯದ್ದು ಉಳಿದಿಲ್ಲ–ಹೊಸತು ಸಿಕ್ಕಿಲ್ಲ!

Published 5 ಡಿಸೆಂಬರ್ 2023, 7:35 IST
Last Updated 5 ಡಿಸೆಂಬರ್ 2023, 7:35 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮರಳಿ ಶಾಲೆಗೆ ಕರೆತರಲು ಮತ್ತು ಅನುಕೂಲ ಕಲ್ಪಿಸಲು ರಾಜ್ಯ ಸರ್ಕಾರ 2006–07ರಲ್ಲಿ 8ನೇ ತರಗತಿ ವಿದ್ಯಾರ್ಥಿಗಳಿಗೆ ಜಾರಿಗೆ ತಂದ ಉಚಿತ ಬೈಸಿಕಲ್ ಯೋಜನೆ 2020ರಲ್ಲಿ ಸ್ಥಗಿತಗೊಂಡಿದೆ. ಇದು ಪುನಃ ಆರಂಭವಾಗದ ಕಾರಣ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಗಂಭೀರ ಪರಿಣಾಮ ಬೀರಿದೆ.

ಗ್ರಾಮ ಮತ್ತು ಕಾಡಂಚಿನ ಪ್ರದೇಶ, ಗುಡ್ಡಗಾಡು ಪ್ರದೇಶಗಳಿಂದ ಶಾಲೆಗೆ ನಡೆದುಕೊಂಡು ಹೋಗುವ ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್ ಆಸರೆ ಆಗಿತ್ತು. ಆದರೆ, ಬೈಸಿಕಲ್ ಇರದ ಕಾರಣ ಅವರು ನಡೆದುಕೊಂಡೇ ಶಾಲೆಗೆ ತೆರಳುತ್ತಾರೆ.

ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಾಲಾ ಶಿಕ್ಷಕರ ಸಂಘದವರು ಯೋಜನೆ ಪುನಃ ಜಾರಿಗೊಳಿಸಲು ಸರ್ಕಾರವನ್ನು ಈಗಾಗಲೇ ಹಲವು ಬಾರಿ ಕೋರಿದ್ದಾರೆ. ಆದರೆ, ಪ್ರಯೋಜನವಾಗಿಲ್ಲ.

‘ಗ್ರಾಮೀಣ ಭಾಗದಲ್ಲಿ ಆರ್ಥಿಕವಾಗಿ ಸುಸ್ಥಿತಿಯಲ್ಲಿರುವ ಕುಟುಂಬದ ವಿದ್ಯಾರ್ಥಿಗಳು ಸ್ವಂತ ಸೈಕಲ್‌ನಲ್ಲಿ ಶಾಲೆಗೆ ಬರುತ್ತಾರೆ. ಆದರೆ, ಬಡ ವಿದ್ಯಾರ್ಥಿಗಳು ನಡೆದುಕೊಂಡೇ ಶಾಲೆಗೆ ಬರಬೇಕು. ಅದರಲ್ಲೂ ಬಿಸಿಲು, ಮಳೆಯಲ್ಲಿ ಅವರ ಪಾಡು ಹೇಳತೀರದು’ ಎಂದು ಶಿಕ್ಷಕರೊಬ್ಬರು ಹೇಳಿದರು. 

ಬಸ್‌ನಲ್ಲಿ ಸಿಗದ ಜಾಗ: ರಾಜ್ಯ ಸರ್ಕಾರದ ‘ಶಕ್ತಿ’ ಯೋಜನೆ ಜಾರಿಗೊಂಡ ಬಳಿಕ ಸರ್ಕಾರಿ ಬಸ್‌ಗಳಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಕೂರಲು ಅಷ್ಟೇ ಅಲ್ಲ, ನಿಲ್ಲಲೂ ಜಾಗ ಸಿಗದ ಪರಿಸ್ಥಿತಿಯಿದೆ.

‘ನಾನು ಧಾರವಾಡ ತಾಲ್ಲೂಕಿನ ಶಿರೂರು ಗ್ರಾಮದ ಎನ್‌.ಜಿ.ಬಾಳನಗೌಡ್ರ ಪ್ರೌಢಶಾಲೆಯಲ್ಲಿ ಕಲಿಯುತ್ತೇನೆ. ಹಾರೋಬೆಳವಾಡಿಯಿಂದ ಶಿರೂರು ಮಾರ್ಗವಾಗಿ ಶಾಲಾ ಸಮಯಕ್ಕೆ ಒಂದೇ ಬಸ್ ಇದೆ. ‘ಶಕ್ತಿ’ ಯೋಜನೆಯಿಂದ ಬಸ್‌ನಲ್ಲಿ ನಿಲ್ಲಲು ಜಾಗವೇ ಸಿಗಲ್ಲ. ಪ್ರಯಾಣಿಕರು ಹೆಚ್ಚಿರುತ್ತಾರೆ. ಅದಕ್ಕೆ ಆಟೊ ಹಿಡಿದು ಇನಾಂಹೊಂಗಲ ಗ್ರಾಮದವರೆಗೆ ತೆರಳಿ, ಅಲ್ಲಿಂದ ಒಂದೂವರೆ ಕಿ.ಮೀ ದೂರ ಇರುವ ಶಾಲೆಗೆ ನಡೆದುಕೊಂಡು ಹೋಗಬೇಕು. 5ರಿಂದ 6 ಕಿ.ಮೀ. ದೂರದಲ್ಲಿರುವ ಶಾಲೆಗೆ ಹೋಗಲು ಸೈಕಲ್ ಇದ್ದಿದ್ದರೆ ಅನುಕೂಲ ಆಗುತಿತ್ತು’ ಎಂದು ವಿದ್ಯಾರ್ಥಿನಿ ಸ್ನೇಹಾ ಪಟದಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

ದುರ್ಗಮ ದಾರಿಯಲ್ಲೇ ಕಾಲ್ನಡಿಗೆ: 

ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ಪುರ ಗ್ರಾಮದಿಂದ 3 ಕಿ.ಮೀ ದೂರ ಇರುವ ಅಳ್ನಾವರದ ಪ್ರೌಢಶಾಲೆಗಳಿಗೆ ಪ್ರತಿ ದಿನ  32 ವಿದ್ಯಾರ್ಥಿಗಳು ನಡೆದುಕೊಂಡೇ ಹೋಗುತ್ತಾರೆ. ರಸ್ತೆ ದುರ್ಗಮವಾಗಿದ್ದು, ಭಯದಲ್ಲೇ ಅವರು ಹೋಗಬೇಕು. ಸಮೀಪದ ಬೆಣಚಿ ಸರ್ಕಾರಿ ಪ್ರೌಢಶಾಲೆಗೆ ಕಿವಡೆಬೈಲ್ ಹಾಗೂ ಡೊಪೆನಟ್ಟಿ ಗ್ರಾಮದಿಂದ ತೆರಳುವ ವಿದ್ಯಾರ್ಥಿಗಳದ್ದೂ ಇದೇ ಪರಿಸ್ಥಿತಿ.

-
-
ಬೈಸಿಕಲ್ ಯೋಜನೆ ಬಗ್ಗೆ ಶಿಕ್ಷಣ ಇಲಾಖೆಗೆ ಮಾಹಿತಿ ಇಲ್ಲ. 2019–20ನೇ ಸಾಲಿನಲ್ಲಿ 8 ತರಗತಿ ವಿದ್ಯಾರ್ಥಿಗಳಿಗೆ ಬೈಸಿಕಲ್‌ ವಿತರಿಸಲಾಗಿದೆ
ಎಸ್‌.ಎಸ್‌.ಕೆಳದಿಮಠ ಉಪನಿರ್ದೇಶಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಧಾರವಾಡ
ಗ್ರಾಮೀಣ ಭಾಗದ ವಿದ್ಯಾರ್ಥಿನಿಯರು ಶಾಲೆಗಳಿಗೆ ನಡೆಯಲು ಸಾಧ್ಯವಾಗದೆ ಅರ್ಧಕ್ಕೆ ಶಿಕ್ಷಣ ನಿಲ್ಲಿಸುತ್ತಾರೆ. ಯೋಜನೆ ಆರಂಭಿಸಿದರೆ ಅನುಕೂಲವಾಗಲಿದೆ.
ಎಫ್‌.ವಿ.ಮಂಜಣ್ಣವರ ಅಧ್ಯಕ್ಷ ಪ್ರೌಢಶಾಲಾ ಸಹಶಿಕ್ಷಕರ ಸಂಘ ಧಾರವಾಡ ಜಿಲ್ಲಾ ಘಟಕ
‘ಬಳಕೆಯಾಗದೇ ಗುಜರಿಗೆ’
ಬೈಸಿಕಲ್ ಯೋಜನೆಯಲ್ಲಿ ವಿದ್ಯಾರ್ಥಿಗಳಿಗೆ ವಿತರಿಸುವ ಸೈಕಲ್‌ಗಳು ತೀರಾ ಕಳಪೆಯಾಗಿದ್ದವು. ಕೆಲವೇ ತಿಂಗಳಲ್ಲಿ ಹಾಳಾಗುತ್ತಿದ್ದವು. ಮತ್ತೆ ಬಳಕೆಗೆ ಯೋಗ್ಯವಾಗದೆ ಗುಜರಿ ಸೇರಿವೆ. ‘ಬೈಸಿಲ್‌ಗಳು ಕಳೆಪೆ ಆಗಿರುವ ಕಾರಣ ಅವುಗಳನ್ನು ದೀರ್ಘ ಕಾಲ ಬಳಸಲು ಆಗುವುದಿಲ್ಲ. ಬೈಸಿಕಲ್‌ಗಳು ಪಡೆದ 6 ತಿಂಗಳಲ್ಲೇ ಬಳಸಲು ಆಗದಂತಹ ಸ್ಥಿತಿ ತಲುಪುತ್ತವೆ. ಹೀಗಾಗಿ ಅವು ಗುಜರಿ ಸೇರುತ್ತವೆ. ವಿದ್ಯಾರ್ಥಿಗಳಿಗೆ ಹಳೆಯದ್ದು ಬಳಸಲು ಆಗುತ್ತಿಲ್ಲ. ಹೊಸತು ಸಿಗುತ್ತಿಲ್ಲ’ ಎಂದು ಶಿಕ್ಷಕರೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT