ಗುರುವಾರ , ಡಿಸೆಂಬರ್ 1, 2022
20 °C
ಹಲವು ಅನುಮಾನಗಳನ್ನು ಹುಟ್ಟುಹಾಕಿದ ಸಾವು

ಹುಬ್ಬಳ್ಳಿ: ಗ್ರಾಮ ಪಂಚಾಯ್ತಿ ಸದಸ್ಯ ದೀಪಕ ಪಟದಾರಿ ಪತ್ನಿ ಪುಷ್ಪಾ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಹತ್ಯೆಯಾದ ರಾಯನಾಳ ಗ್ರಾಮ ಪಂಚಾಯ್ತಿ ಸದಸ್ಯ ದೀಪಕ ಪಟದಾರಿ ಅವರ ಪತ್ನಿ ಪುಷ್ಪಾ ಪಟದಾರಿ (28) ಬುಧವಾರ ನವನಗರದ ಸಿಟಿ ಪಾರ್ಕ್‌ನಲ್ಲಿರುವ ಸಂಬಂಧಿಯ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೀಪಕ ಹತ್ಯೆ ಪ್ರಕರಣ ಕುರಿತು ಸಿಐಡಿ ತನಿಖೆ ಕೈಗೊಂಡ ಬೆನ್ನಲ್ಲೇ ಪುಷ್ಪಾ ಆತ್ಮಹತ್ಯೆ ಮಾಡಿಕೊಂಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಕಿಮ್ಸ್‌ಗೆ ಕಳಿಸಲಾಗಿದ್ದು, ನವನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಸಿಪಿ ವಿನೋದ ಮುಕ್ತೇದಾರ, ಇನ್‌ಸ್ಪೆಕ್ಟರ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ದೀಪಕ ಹತ್ಯೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದ ಪುಷ್ಪಾ ಅವರು ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಸಿಐಡಿ ತಿನಿಖೆ ಯಾವ ನಿಟ್ಟಿನಲ್ಲಿ ಸಾಗಲಿದೆ ಎಂಬ ಕುತೂಹಲ ಮನೆ ಮಾಡಿದೆ. ಆದರೆ, ತಂದೆ–ತಾಯಿಯನ್ನು ಕಳೆದುಕೊಂಡ ಇಬ್ಬರು ಹೆಣ್ಣುಮಕ್ಕಳು ಅನಾಥರಾಗಿದ್ದಾರೆ.

‘ಮೇಟಿ ಕುಟುಂಬದ ಪುಷ್ಪಾ ಅವರನ್ನು ದೀಪಕ ಪ್ರೀತಿಸಿ ಮದುವೆಯಾಗಿದ್ದರು. ಮದುವೆಗೆ ಪುಷ್ಪಾ ಅವರ ಕುಟುಂಬದ ಸಮ್ಮತಿ ಇರಲಿಲ್ಲ. ರಾಯನಾಳ ಗ್ರಾಮ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಸಂದರ್ಭ ದೀಪಕ ಅವಿಶ್ವಾಸ ನಿರ್ಣಯ ಮಂಡಿಸಿದ್ದರು. ಈ ವಿಷಯವಾಗಿ ದೀಪಕ ಅವರನ್ನು ಇದೇ ಜುಲೈ 4ರಂದು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ’ ಎಂದು ದೀಪಕ ಅವರ ಸಹೋದರ ಸಂಜಯ ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಪ್ರಕರಣ ಸಂಬಂಧ ಪೊಲೀಸರು ಆರು ಮಂದಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ‘ರಾಜಕೀಯ ಕಾರಣಕ್ಕಾಗಿ ದೀಪಕ ಅವರನ್ನು ಹತ್ಯೆ ಮಾಡಲಾಗಿದೆ. ಪ್ರಕರಣದ ಪ್ರಮುಖ ಆರೋಪಿಗಳನ್ನು ಕೈ ಬಿಡಲಾಗಿದೆ’ ಎಂದು ಆರೋಪಿಸಿ ದೀಪಕ ಅವರ ಸಹೋದರ ಸಂಜಯ್‌ ಮತ್ತು ಪುಷ್ಪಾ ಮರಾಠಾ ಸಮುದಾಯದವರ ಜತೆ ಸೇರಿ ಪ್ರತಿಭಟನೆ ನಡೆಸಿದ್ದರು.

ಕೆಲ ದಿನಗಳ ಹಿಂದಷ್ಟೇ ಜಂಟಿ ಸುದ್ದಿಗೋಷ್ಠಿ ನಡೆಸಿ, ‘ನಿಷ್ಪಕ್ಷಪಾತವಾಗಿ ತನಿಖೆ ನಡೆಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಪೊಲೀಸ್ ಸಿಬ್ಬಂದಿಯೇ ಕೊಲೆ ಪ್ರಕರಣದ ಸೂತ್ರಧಾರಿಗಳಾಗಿದ್ದು, ಪ್ರಕರಣವನ್ನು ಸಿಐಡಿಗೆ ವಹಿಸಬೇಕು’ ಎಂದು ಆಗ್ರಹಿಸಿ, ಮುಖ್ಯಮಂತ್ರಿ ಮತ್ತು ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದರು. ಸರ್ಕಾರದ ಆದೇಶದ ಮೇರೆಗೆ ಸೆ. 21ರಂದು ಪೊಲೀಸ್‌ ಕಮಿಷನರ್‌ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ್ದರು.

‘ಸಿಐಡಿ ವಿಚಾರಣೆಗೆ ಹಾಜರಾಗಿ ವಾಪಸ್‌ ಬರುವಾಗ ಪ್ರಕಾಶ ಕರಗುಪ್ಪಿ ಅಡ್ಡಗಟ್ಟಿ, ಪ್ರಕರಣ ಹಿಂಪಡೆಯುವಂತೆ ಜೀವ ಬೆದರಿಕೆ ಹಾಕಿದ್ದರು’ ಎಂದು ಸಂಜಯ ಪಟದಾರಿ ವಿದ್ಯಾನಗರ ಪೊಲೀಸ್‌ ಠಾಣೆಯಲ್ಲಿ ಸೆ.26ರಂದು ಪ್ರಕರಣ ದಾಖಲಿಸಿದ್ದರು. ಅದಾದ ಎರಡೇ ದಿನಗಳಲ್ಲಿ ಪುಷ್ಪಾ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಪ್ರಕರಣ ಮತ್ತಷ್ಟು ಗಂಭೀರತೆ ಪಡೆದುಕೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು