ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡಿಕೆ ಈಡೇರಿಕೆಗೆ ಸಂಘಟನೆಗಳ ಒತ್ತಾಯ

ಬಿಎಸ್‌ಪಿ, ರಾಷ್ಟ್ರೀಯ ಬಸವದಳದಿಂದ ಮನವಿ ಸಲ್ಲಿಕೆ, ರೈಲ್ವೆ ಮಜ್ದೂರ್‌ ಸಂಘದಿಂದ ಜಾಗೃತಿ ಅಭಿಯಾನ
Last Updated 18 ಸೆಪ್ಟೆಂಬರ್ 2020, 15:03 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದಲ್ಲಿ ಶುಕ್ರವಾರ ಹಲವು ಸಂಘಟನೆಗಳು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರೆ, ಇನ್ನೂ ಕೆಲವರು ಸ್ಥಳೀಯ ಅಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು.

ಬಿಎಸ್‌ಪಿ: ಬಹುಜನ ಸಮಾಜ ಪಾರ್ಟಿ ಜಿಲ್ಲಾ ಘಟಕದ ಪದಾಧಿಕಾರಿಗಳು ಮಿನಿವಿಧಾನಸೌಧದ ಎದುರು ಪ್ರತಿಭಟನೆ ನಡೆಸಿ ಖಾಸಗಿ ಮತ್ತು ಸರ್ಕಾರಿ ಕಾಲೇಜುಗಳ ಶುಲ್ಕ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

‘ಕೋವಿಡ್‌ 19 ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವೈಜ್ಞಾನಿಕವಾಗಿ ಲಾಕ್‌ಡೌನ್‌ ನಿರ್ಧಾರ ತೆಗೆದುಕೊಂಡಿದ್ದರಿಂದ ದೇಶದಲ್ಲಿ 18 ಕೋಟಿ ಜನ ನಿರುದ್ಯೋಗಿಗಳಾದ್ದಾರೆ. ಇದರಿಂದ ಅನೇಕರು ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿರುವ ಕಾರಣ ತಮ್ಮ ಮಕ್ಕಳ ಶಾಲಾ, ಕಾಲೇಜುಗಳ ಶುಲ್ಕ ಪಾವತಿಸಲು ಸಾಧ್ಯವಾಗುತ್ತಿಲ್ಲ. ಆನ್‌ಲೈನ್‌ ತರಗತಿಗಳಿಗೆ ಹಾಜರಾಗಲು ಮೊಬೈಲ್‌ ಫೋನ್‌ ಕೊಡಿಸಲು ಕೂಡ ಆಗುತ್ತಿಲ್ಲ. ಆದ್ದರಿಂದ ಶುಲ್ಕ ಮನ್ನಾ ಮಾಡುವುದು ಸರ್ಕಾರದ ಜವಾಬ್ದಾರಿ. ಈಗಾಗಲೇ ಶುಲ್ಕ ಪಾವತಿಸಿದವರ ಹಣ ವಾಪಸ್‌ ನೀಡಲು ಕ್ರಮ ಕೈಗೊಳ್ಳಬೇಕು’ ಎಂದು ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

ಘಟಕದ ಪ್ರಮುಖರಾದ ನಿಸ್ಸಾರ್‌ ಅಹ್ಮದ್‌ ಮುಲ್ಲಾ, ಕೆ. ವಿಜಯ, ರೇವಣಸಿದ್ದಪ್ಪ ಹೊಸಮನಿ, ಗೋಕಾವಿ, ರಂಗಸ್ವಾಮಿ, ಮುಸ್ತಾಕ್‌ ಕಾಸಿಬ್‌ ಇದ್ದರು.

ತ್ವರಿತ ಕಾಮಗಾರಿಗೆ ಒತ್ತಾಯ: ಹದಗೆಟ್ಟ ರಸ್ತೆಗಳಿಂದ ನಗರದ ಸೌಂದರ್ಯ ಹಾಳಾಗಿದ್ದು, ಅರ್ಧದಲ್ಲಿ ನಿಂತಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿ ಶಿವಸೇನಾ ಕಾರ್ಯಕರ್ತರು ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.

‘ಪ್ರಮುಖ ಮಾರುಕಟ್ಟೆಗಳು, ಮುಖ್ಯರಸ್ತೆಗಳು ಸೇರಿದಂತೆ ಅನೇಕ ಕಡೆ ಕಾಮಗಾರಿ ಪೂರ್ಣಗೊಂಡಿಲ್ಲ. ನೆಹರೂ ಮೈದಾನ ಅಭಿವೃದ್ಧಿ ನೆಪದಲ್ಲಿ ಸಾಕಷ್ಟು ಹಣ ವ್ಯಯ ಮಾಡಲಾಗಿದೆ. ಮತ್ತೊಂದು ಯೋಜನೆಯ ನೆಪದಲ್ಲಿ ಮೈದಾನವನ್ನು ಮತ್ತಷ್ಟು ಹಾಳು ಮಾಡಲಾಗುತ್ತಿದೆ’ ಎಂದು ಪದಾಧಿಕಾರಿಗಳು ಆರೋಪಿಸಿದ್ದಾರೆ. ಶಿವಸೇನೆಯ ಮಹಾನಗರ ಅಧ್ಯಕ್ಷ ಅಣ್ಣಪ್ಪ ದೊಡ್ಡಮನಿ, ಹುಬ್ಬಳ್ಳಿ ನಗರ ಅಧ್ಯಕ್ಷ ಕುಬೇರ ಪವಾರ್‌ ಇದ್ದರು.

ಜಾಗೃತಿ ಅಭಿಯಾನ: ನೈರುತ್ಯ ರೈಲ್ವೆ ಮಜ್ದೂರ್‌ ಯೂನಿಯನ್ ವತಿಯಿಂದ ರೈಲ್‌ ಸೌಧದಲ್ಲಿ ‘ರೈಲ್ವೆ ಉಳಿಸಿ, ದೇಶ ಉಳಿಸಿ’ ಅಭಿಯಾನ ಜರುಗಿತು.

ನಿಲ್ದಾಣಗಳನ್ನು ಖಾಸಗೀಕರಣ ಮಾಡುವ ಮೂಲಕ ಕೇಂದ್ರ ಸರ್ಕಾರ ರೈಲ್ವೆ ಇಲಾಖೆಯನ್ನು ಪತನದಂಚಿಗೆ ದೂಡುತ್ತಿದೆ. ರೈಲ್ವೆ ಉತ್ಪಾದನಾ ಘಟಕಗಳನ್ನು ಆರಂಭಿಸಿದ್ದು, ಇದು ಸರ್ಕಾರ ಮತ್ತು ಖಾಸಗಿಯವರ ನಡುವೆ ಮಧ್ಯವರ್ತಿಯಾಗಿ ಕೆಲಸ ಮಾಡುತ್ತದೆ. ಸರ್ಕಾರಿ ಸ್ವಾಮ್ಯದ ಉತ್ಪಾದನಾ ಘಟಕಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿ ಕಾರ್ಮಿಕರ ಸಂಖ್ಯೆ ಕಡಿಮೆ ಮಾಡುವ ಹುನ್ನಾರ ನಡೆದಿದೆ ಎಂದು ಯೂನಿಯನ್‌ ಪದಾಧಿಕಾರಿಗಳು ಆರೋಪಿಸಿದರು.

ಖಾಸಗೀಕರಣದಿಂದ ಎಲ್ಲ ರಿಯಾಯಿತಿಗಳನ್ನು ರದ್ದು ಮಾಡಲಾಗುತ್ತಿದೆ, ಹೆಚ್ಚು ಹಣ ಪಡೆದು ಕಡಿಮೆ ಗುಣಮಟ್ಟದ ಸೌಲಭ್ಯಗಳನ್ನು ನೀಡಲಾಗುತ್ತಿದೆ ಮತ್ತು ಹೆಚ್ಚಿನ ಆದಾಯ ಬರುವ ಮಾರ್ಗದಲ್ಲಿ ಮಾತ್ರ ರೈಲು ಸಂಚರಿಸುವಂತೆ ಮಾಡುವ ತಂತ್ರದ ಮೊರೆ ಹೋಗಲಾಗುತ್ತಿದೆ.ಆದ್ದರಿಂದ ಸಾರ್ವಜನಿಕರಿಗೆ ಈ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದುಯೂನಿಯನ್‌ ಪ್ರಧಾನ ಕಾರ್ಯದರ್ಶಿ ಎ.ಎಂ. ಡಿಕ್ರೂಜ್‌ ತಿಳಿಸಿದರು.

ಲಿಂಗಾಯತ ಜಾತಿ ಪ್ರಮಾಣಪತ್ರ ನೀಡಲು ಒತ್ತಾಯ

ಹುಬ್ಬಳ್ಳಿ: ಲಿಂಗಾಯತ ಸಮುದಾಯಕ್ಕೆ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಆಗ್ರಹಿಸಿ ಲಿಂಗಾಯತ ಧರ್ಮ ಮಹಾಸಭಾ ಮತ್ತು ರಾಷ್ಟ್ರೀಯ ಬಸವದಳದ ಪದಾಧಿಕಾರಿಗಳು ಶುಕ್ರವಾರ ಆಗ್ರಹಿಸಿದರು. ಈ ಕುರಿತು ಮುಖ್ಯಮಂತ್ರಿಗೆ ಬರೆದ ಮನವಿಯನ್ನು ತಹಶೀಲ್ದಾರ್‌ ಕಚೇರಿ ಅಧಿಕಾರಿಗೆ ಸಲ್ಲಿಸಿದರು.

‘ನಮ್ಮ ಜಾತಿ ಪ್ರಮಾಣಪತ್ರ ಕೇಳಿದರೆ ಕಂದಾಯ ಇಲಾಖೆಯಿಂದ ವೀರಶೈವ ಲಿಂಗಾಯತ ಎಂದು ಕೊಡುತ್ತಿದ್ದಾರೆ. ಇದರಿಂದ ನಮಗೆ ಮುಜುಗರವಾಗುತ್ತಿದೆ. ಶಾಲಾ ದಾಖಲಾತಿಗಳಲ್ಲಿ ಲಿಂಗಾಯತ ಎಂದು ಬರೆಯಿಸಿದರೂ ಎಸ್‌ಎಟಿಎಸ್‌ ತಂತ್ರಜ್ಞಾನದಲ್ಲಿ ವೀರಶೈವ ಲಿಂಗಾಯತ ಎಂದೇ ಬರುತ್ತಿದೆ. ಇದರಿಂದ ನಮಗೆ ಅನ್ಯಾಯವಾಗುತ್ತಿದ್ದು,ಇದನ್ನು ಆದಷ್ಟು ಬೇಗನೆ ಸರಿಪಡಿಸಬೇಕು ಎಂದು ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

ಪದಾಧಿಕಾರಿಗಳಾದ ಎಫ್‌.ಕೆ. ಬಣಕಾರ, ಸುಶೀಲಾ ಬಣಕಾರ, ಬಿ. ಶಿವಪ್ಪ, ಬಸವರಾಜ, ಶಾರದಾ ಲಕ್ಷ್ಮೇಶ್ವರ, ಸುಮಂಗಲಾ, ಬಿ.ಜಿ. ಹೊಸಗೌಡರ, ಬಿ.ಬಿ. ಲಕ್ಷ್ಮೇಶ್ವರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT