ಭಾನುವಾರ, ಫೆಬ್ರವರಿ 28, 2021
29 °C
ದೇಶದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತ: ಎಡಿಜಿಪಿ ಸಂಧು ಕಳವಳ

ಧಾರವಾಡ: ಅಪಘಾತಕ್ಕೆ 291 ಜನ ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಕಳೆದ ಮೂರು ವರ್ಷಗಳಲ್ಲಿ ಅವಳಿ ನಗರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ 291 ಜನ ಮೃತಪಟ್ಟಿದ್ದು, 1,451 ಗಂಭೀರವಾಗಿ ಗಾಯಗೊಂಡಿದ್ದಾರೆ. ಆದ್ದರಿಂದ ವಾಹನ ಚಲಾಯಿಸುವಾಗ ಎಚ್ಚರದಿಂದ ಇರಬೇಕು ಎಂದು ಎಡಿಜಿಪಿ, ಸಂಚಾರ ಹಾಗೂ ಸುರಕ್ಷತಾ ವಿಭಾಗದ ಆಯುಕ್ತ ಪಿ.ಎಸ್‌. ಸಂಧು ಹೇಳಿದರು.

ನಗರದ ಬಿವಿಬಿ ಕಾಲೇಜಿನ ಬಯೋಟೆಕ್‌ ಸಭಾಂಗಣದಲ್ಲಿ ಮಂಗಳವಾರ ನಡೆದ ವಿದ್ಯಾರ್ಥಿಗಳನ್ನು ವಾಹನಗಳಲ್ಲಿ ಕರೆದುಕೊಂಡು ಹೋಗುವ ಹಾಗೂ ಸರಕು ಸಾಗಾಣಿಕೆ ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸುವ ಕುರಿತು ಸಂಚಾರಿ ನಿಯಮಗಳ ಜಾಗೃತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಕಳೆದ ವರ್ಷ ನಡೆದ ರಸ್ತೆ ಅಪಘಾತಗಳಲ್ಲಿ ದೇಶದಲ್ಲಿ 1 ಲಕ್ಷಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಸಾವಿರಾರು ಕುಟುಂಬಗಳು ಅನಾಥವಾಗಿವೆ. ಇವನ್ನೆಲ್ಲ ಮನಗಂಡು ಸುಪ್ರೀಂ ಕೋರ್ಟ್‌ ಸಂಚಾರಿ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸೂಚನೆ ನೀಡಿದೆ’ ಎಂದರು.

‘2018ರಲ್ಲಿ ಕರ್ನಾಟಕದಲ್ಲಿ 11 ಸಾವಿರ ಜನರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. 20 ಸಾವಿರಕ್ಕೂ ಹೆಚ್ಚು ಜನ ಗಂಭೀರ ಗಾಯಗೊಂಡಿದ್ದಾರೆ.  ತಮಿಳು ನಾಡಿನಲ್ಲಿ ಪ್ರತಿವರ್ಷಕ್ಕಿಂತ ಶೇ 25ರಷ್ಟು ಅಪಘಾತಗಳು ಕಡಿಮೆಯಾಗಿವೆ. ಅಲ್ಲಿ ಅಳವಡಿಸಿಕೊಂಡಿರುವ ಸಂಚಾರಿ ನಿಯಮಾವಳಿಗಳನ್ನು ಅಧ್ಯಯನ ಮಾಡಲು ರಾಜ್ಯದ ಎರಡು ತಂಡ ಅಲ್ಲಿಗೆ ತೆರಳಿದೆ. ವರದಿ ಬಂದ ನಂತರ ಅದನ್ನು ರಾಜ್ಯದಲ್ಲಿ ಜಾರಿಗೆ ತರಲಾಗುವುದು’ ಎಂದರು.

‘ಬೈಕ್‌ ಸವಾರರು ಹೆಲ್ಮೆಟ್‌ ಧರಿಸಲೇಬೇಕು. ವಾಹನ ಚಾಲನೆ ಮಾಡುವಾಗ ಚಾಲಕರು ರಹದಾರಿ, ವಿಮೆ, ಚಾಲನಾ ಪರವಾನಗಿ ಪತ್ರಗಳನ್ನು ಇಟ್ಟುಕೊಂಡಿರಬೇಕು. ಅನುಮತಿ ಪಡೆದ ಸಂಖ್ಯೆಗಿಂತ ಹೆಚ್ಚು ಮಕ್ಕಳನ್ನು ಹಾಗೂ ಪ್ರಯಾಣಿಕರನ್ನು ವಾಹನಗಳಲ್ಲಿ ಕರೆದೊಯ್ಯಬಾರದು’ ಎಂದರು.

ಹುಬ್ಬಳ್ಳಿ–ಧಾರವಾಡ ಪೊಲೀಸ್‌ ಕಮಿಷನರ್‌ ಎಂ.ಎನ್‌. ನಾಗರಾಜ ‘ಸುಪ್ರಿಂ ಕೋರ್ಟ್‌ ಆದೇಶದ ಮೇರೆಗೆ ಅವಳಿ ನಗರದ ಪ್ರತಿಯೊಂದು ಶಾಲಾ, ಕಾಲೇಜುಗಳಿಗೆ ಭೇಟಿ ನೀಡಿ ಸಂಚಾರಿ ನಿಯಮಾವಳಿ ಕುರಿತು ಜಾಗೃತಿ ಮೂಡಿಸಿದ್ದೇವೆ. ಆಟೊ, ಕ್ಯಾಬ್‌ ವಾಹನ ಚಾಲಕರಿಗೂ ಮಾಹಿತಿ ನೀಡಿದ್ದೇವೆ. ಈವರೆಗೆ 1,347 ಪ್ರಕರಣ ದಾಖಲಿಸಿ ₹ 2 ಲಕ್ಷ ದಂಡ ವಸೂಲಿ ಮಾಡಲಾಗಿದೆ. 400ಕ್ಕೂ ಹೆಚ್ಚು ಜನರ ಚಾಲನಾ ಪರವಾನಗಿ ರದ್ದು ಮಾಡಲಾಗಿದೆ’ ಎಂದರು. ಬಳಿಕ ಸಂವಾದ ನಡೆಯಿತು.

ಡಿಸಿಪಿಗಳಾದ ಡಿ.ಎಲ್‌. ನಾಗೇಶ, ಡಾ. ಶಿವಕುಮಾರ ಹಾಗೂ ಅಪರ ಸಾರಿಗೆ ಆಯುಕ್ತ ಮಾರುತಿ ಸಾಂಬ್ರಾಣಿ ಇದ್ದರು.

‘ಟ್ರಾಫಿಕ್‌ ವಾರ್ಡನ್‌ ವ್ಯವಸ್ಥೆಗೆ ನಿರ್ಧಾರ’

ಅವಳಿನಗರದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಪೊಲೀಸ್‌ ಸಿಬ್ಬಂದಿ ಇಲ್ಲ. ಪೊಲೀಸ್‌ ಇಲಾಖೆಗೆ ನೆರವಾಗಲೆಂದು ‘ಟ್ರಾಫಿಕ್‌ ವಾರ್ಡನ್‌’ ವ್ಯವಸ್ಥೆ ಜಾರಿಗೆ ತರಲು ನಿರ್ಧರಿಸಲಾಗಿದೆ. ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಲು ಇಚ್ಛಿಸುವವರು ಹೆಸರು ನೋಂದಾಯಿಸಿಕೊಳ್ಳಬಹುದು. ಅವರಿಗೆ ಸಮವಸ್ತ್ರ, ಬೂಟ್‌ ಮತ್ತು ಟೊಪ್ಪಿಗೆ ನೀಡಲಾಗುವುದು. ಇಲಾಖೆಯಿಂದ ಅವರಿಗೆ ಸಂಚಾರಿ ನಿಯಮಾವಳಿಗಳ ಕುರಿತು ತರಬೇತಿ ಕೊಡಲಾಗುತ್ತದೆ. ನಂತರ ಸಂಚಾರಿ ಪೊಲೀಸರ ಜತೆಗೆ ಅವರು ಕರ್ತವ್ಯ ನಿರ್ವಹಿಸಬಹುದು ಎಂದು ಎಂ.ಎನ್‌. ನಾಗರಾಜ ತಿಳಿಸಿದರು.

23 ಸಾವಿರ ಸಿಬ್ಬಂದಿ ಕೊರತೆ

1971ರ ಜನಸಂಖ್ಯೆಗೆ ಅನುಗುಣವಾಗಿ ದೇಶದಲ್ಲಿ ಪೊಲೀಸ್‌ ಸಿಬ್ಬಂದಿ ನೇಮಕಾತಿ ನಡೆಯುತ್ತಿದೆ. ದೇಶದಾದ್ಯಂತ 5 ಲಕ್ಷ ಸಿಬ್ಬಂದಿ ಕೊರತೆಯಿದ್ದರೆ, ರಾಜ್ಯದಲ್ಲಿ 23 ಸಾವಿರ ಸಿಬ್ಬಂದಿ ಕೊರತೆಯಿದೆ. ಪ್ರತಿ ವರ್ಷ ಪೊಲೀಸ್‌ ನೇಮಕಾತಿ ನಡೆಯುತ್ತಿದ್ದರೂ, ಸಾಕಷ್ಟು ಪೊಲೀಸರು ನಿವೃತ್ತರಾಗುತ್ತಾರೆ. ಸದ್ಯ ರಾಜ್ಯದಲ್ಲಿ 40 ಸಾವಿರ ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಹಂತ ಹಂತವಾಗಿ ಅವರಿಗೆ ತರಬೇತಿ ನೀಡಿ ನೇಮಕ ಮಾಡಿಕೊಳ್ಳಲಾಗುವುದು ಎಂದು ಸಂಧು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು