ಬುಧವಾರ, ಜುಲೈ 28, 2021
28 °C
ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಪ್ರಕರಣಗಳು, ಕೊರೊನಾ ದೃಢವಾದರೂ ಗಂಟೆಗಟ್ಟಲೆ ಕಾಯಬೇಕಾದ ಸಂಕಷ್ಟ

ಆಸ್ಪತ್ರೆಗೆ ಸೇರಲು ಸೋಂಕಿತರ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಂತೆ ಆಂಬುಲೆನ್ಸ್‌ ಮತ್ತು ಬೆಡ್‌ಗಳ ಅಭಾವ ಶುರುವಾಗಿದೆ. ತಮಗೆ ಸೋಂಕು ಇದೆ ಎಂದು ದೃಢವಾದರೂ ಅವರಿಗೆ ಬೇಗನೆ ಆಸ್ಪತ್ರೆಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ.

ಕಳೆದ ವಾರ ಮೂರುಸಾವಿರಮಠದ ಸಮೀಪದಲ್ಲಿ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಆಸ್ಪತ್ರೆಗೆ ಸೇರಲು ಅವರು ಆಂಬುಲೆನ್ಸ್‌ಗಾಗಿ ಆರೇಳು ಗಂಟೆ ಕಾಯಬೇಕಾಯಿತು. ಎರಡು ದಿನಗಳ ಹಿಂದೆ ಗೋಕುಲ ರಸ್ತೆಯ ಆರ್‌.ಎಂ. ಲೋಹಿಯಾ ನಗರದ ವ್ಯಕ್ತಿಯೊಬ್ಬರಿಗೆ ಸೋಂಕು ದೃಢಪಟ್ಟಿದೆ. ಆ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿ ಬಂದಿದ್ದ ಕುಟುಂಬದ ಸದಸ್ಯರನ್ನು ಸೋಂಕು ಪತ್ತೆ ಪರೀಕ್ಷೆಗೆ ಕರೆದುಕೊಂಡು ಹೋಗಲು ಗಂಟೆಗಟ್ಟಲೆ ಕಾದರೂ ಅಂಬುಲೆನ್ಸ್‌ ಸಿಬ್ಬಂದಿ ಬಂದಿರಲಿಲ್ಲ. ಇದರಿಂದ ಆ ಕುಟುಂಬದವರು ಮತ್ತು ನೆರೆಯವರು ಆತಂಕದಿಂದಲೇ ಸಮಯ ಕಳೆದಿದ್ದಾರೆ.

ಈ ರೀತಿಯ ಘಟನೆಗಳು ನಗರದಲ್ಲಿ ಮೇಲಿಂದ ಮೇಲೆ ನಡೆಯುತ್ತಿವೆ. ಕಿಮ್ಸ್‌ನಲ್ಲಿ ಸದ್ಯಕ್ಕೆ 250 ಬೆಡ್‌ಗಳು ಇದ್ದು, 15 ಬೆಡ್‌ಗಳು ಮಾತ್ರ ಖಾಲಿಯಿವೆ. ಸೋಂಕಿತರು ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿರುವ ಕಾರಣ ಹೊಸದಾಗಿ ಬರುವ ಸೋಂಕಿತರಿಗೆ ಬೆಡ್‌ಗಳನ್ನು ಹೊಂದಿಸುವುದೇ ಕಿಮ್ಸ್‌ ವೈದ್ಯರಿಗೆ ದೊಡ್ಡ ಸವಾಲಾಗುತ್ತಿದೆ.

ಒಬ್ಬ ರೋಗಿಗೆ ಎರಡು ತಾಸು:

ಹುಬ್ಬಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ ಸೋಂಕಿತರನ್ನು ಕರೆತರಲು ಮೂರು 108 ಅಂಬುಲೆನ್ಸ್‌ಗಳು ಕಾರ್ಯ ನಿರ್ವಹಿಸುತ್ತಿವೆ. ತಲಾ 12 ಗಂಟೆ ಲೆಕ್ಕದಲ್ಲಿ ಒಟ್ಟು ಆರು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಪ್ರತಿ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿ ಮತ್ತೊಮ್ಮೆ ಸೋಂಕಿತ ವ್ಯಕ್ತಿಯನ್ನು ಕರೆದುಕೊಂಡು ಬರಲು ಎರಡರಿಂದ, ಎರಡೂವರೆ ತಾಸು ಬೇಕಾಗುತ್ತಿದೆ. ಇದರಿಂದ ಸೋಂಕಿತರು ತಮ್ಮ ಸರತಿ ಬರುವ ತನಕ ಕಾಯಬೇಕಾಗಿದೆ!

ಕಿಮ್ಸ್‌ಗೆ ಸೋಂಕಿತರನ್ನು ಕರೆದುಕೊಂಡು ಬರುವ 108 ಅಂಬುಲೆನ್ಸ್‌ನ ಸಿಬ್ಬಂದಿಯೊಬ್ಬರು ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿ ‘ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಊಟ ಮಾಡಲೂ ಪುರಸೊತ್ತು ಇಲ್ಲದಷ್ಟು ಕೆಲಸವಿದೆ. ಸೋಂಕಿತ ವ್ಯಕ್ತಿ ಹಿರಿಯ ವಯಸ್ಸಿನವರಾಗಿದ್ದರೆ ಅವರನ್ನು ಕಿಮ್ಸ್‌ಗೆ ಕರೆದುಕೊಂಡು ಹೋಗಬೇಕು. ಅಲ್ಲಿ ಬೆಡ್‌ ಖಾಲಿಯಾಗುವ ತನಕ ಗಂಟೆಗಟ್ಟಲೆ ಕಾಯಬೇಕು, ಸೋಂಕಿತರನ್ನು ವಾಹನದಿಂದ ಇಳಿಸಿ ಅಂಬುಲೆನ್ಸ್‌ ಅನ್ನು ಸ್ಯಾನಿಟೈಸ್ ಮಾಡಿ ನಾವು ಪಿಪಿಇ ಕಿಟ್ ಬದಲಿಸಿ ಮತ್ತೊಬ್ಬರನ್ನು ಕರೆದುಕೊಂಡು ಬರಬೇಕಾಗಿದೆ’ ಎಂದರು.

‘ಕಿಮ್ಸ್ ಕೋವಿಡ್‌ ವಾರ್ಡ್ ಮುಂದೆ ಸಾಕಷ್ಟು ಹೊತ್ತು ಕಾದ ಬಳಿಕ ಸೋಂಕಿನ ಲಕ್ಷಣಗಳು ಇಲ್ಲದ ವ್ಯಕ್ತಿಗಳಿದ್ದರೆ ಅವರನ್ನು ಆಯುರ್ವೇದ ಕಾಲೇಜುಗಳಿಗೆ ಸ್ಥಳಾಂತರಿಸಬೇಕು. ಇದರಿಂದ ಅಂಬುಲೆನ್ಸ್‌ ಸಿಬ್ಬಂದಿಗೆ ಬಹಳಷ್ಟು ಒತ್ತಡವಾಗುತ್ತಿದೆ. ಇದರಿಂದ ಸೋಂಕಿತರನ್ನು ಕರೆದುಕೊಂಡು ಬರಲು ಹೋದಾಗ ಟೀಕೆಗೆ ಒಳಗಾಗಿದ್ದೂ ಇದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಕಿಮ್ಸ್‌ನಲ್ಲಿ 250 ಹೆಚ್ಚುವರಿ ಬೆಡ್‌ಗಳಿಗೆ ಸಿದ್ಧತೆ

ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಕಿಮ್ಸ್‌ನ ಪಿಎಂಎಸ್‌ಎಸ್‌ವೈ ಕೋವಿಡ್‌ ಆಸ್ಪತ್ರೆಯಲ್ಲಿ ಬೆಡ್‌ಗಳು ಕಡಿಮೆ ಇವೆ. ಸೋಂಕಿತರನ್ನು ಕರೆದುಕೊಂಡು ಬಂದ ಬಳಿಕ ಅವರ ದಾಖಲಾತಿ, ಗುಣಮುಖರಾದವರ ಬಿಡುಗಡೆ ‍ಪ್ರಕ್ರಿಯೆಗಳಿಂದಾಗಿ ಅಂಬುಲೆನ್ಸ್‌ಗಳಿಗೆ ತಡವಾಗುತ್ತಿತ್ತು. ಇದನ್ನು ತಪ್ಪಿಸಲು ಸೋಂಕಿತರಿಗೆ ಕಾಯ್ದುರಿಸುವ ಕೋಣೆ ಆರಂಭಿಸಿದ್ದೇವೆ ಎಂದು ಕಿಮ್ಸ್‌ ನಿರ್ದೇಶನ ರಾಮಲಿಂಗಪ್ಪ ಅಂಟರತಾನಿ ಹೇಳಿದರು.

‘ಸೋಂಕಿತ ವ್ಯಕ್ತಿಯ ವಿಳಾಸ ಪತ್ತೆ ಹಚ್ಚುವುದರಿಂದಲೂ ಕೆಲ ಬಾರಿ ವಿಳಂಬವಾಗುತ್ತಿದೆ. ಬೆಡ್‌ಗಳ ಕೊರತೆ ನೀಗಿಸಲು ಮುಖ್ಯ ಆಸ್ಪತ್ರೆಯಲ್ಲಿ ಇನ್ನೂ 250 ಹೆಚ್ಚುವರಿ ಬೆಡ್‌ಗಳನ್ನು ಸಿದ್ಧಗೊಳಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು