ಬುಧವಾರ, ಜುಲೈ 28, 2021
23 °C
ಆಚೆ ಬರುವುದು ಅನಿವಾರ್ಯವೇ? ಒಮ್ಮೆ ಪ್ರಶ್ನಿಸಿಕೊಳ್ಳಿ: ಜಿಲ್ಲಾಧಿಕಾರಿ ಸಲಹೆ

ಮಾಸ್ಕ್‌ ಹಾಕ್ಕೊಳ್ಳಿ, ಸ್ಯಾನಿಟೈಸರ್‌ ಬಳಸಿ, ಅಂತರ ಕಾಯ್ಕೊಳ್ಳಿ: ಡಿಸಿ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅನಗತ್ಯವಾಗಿ ಯಾರೂ ಓಡಾಡಬೇಡಿ. ಅನಿವಾರ್ಯ ಇದ್ದರೆ ಮಾತ್ರ ಮನೆಯಿಂದ ಆಚೆ ಬನ್ನಿ.  ಆಚೆ ಬರುವ ಮುನ್ನ ನಿಮ್ಮನ್ನೇ ಪ್ರಶ್ನಿಸಿಕೊಳ್ಳಿ, ಆಚೆ ಬರುವುದು ಅನಿವಾರ್ಯವೇ ಎಂದು.. ಹೌದು ಎಂದಾದಲ್ಲಿ ಮಾತ್ರ ಆಚೆ ಬನ್ನಿ. 

ಕೋವಿಡ್‌19 ಲಾಕ್‌ಡೌನ್ ಹಿನ್ನೆಲೆಯಲ್ಲಿ‌ ಭಾನುವಾರ ನಡೆದ ‘ಪ್ರಜಾವಾಣಿ’ ಫೋನ್‌ ಇನ್ ಕಾರ್ಯಕ್ರಮದಲ್ಲಿ ನಿರಂತರವಾಗಿ ಬಂದ ಸಾರ್ವಜನಿಕರ ಪ್ರಶ್ನೆಗಳಿಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಸಮರ್ಥವಾಗಿ ಉತ್ತರಿಸಿದರು.  

ಕೋವಿಡ್ ನಿಯಂತ್ರಣಕ್ಕೆ ಜಿಲ್ಲಾಡಳಿತ ಕೈಗೊಂಡ ಕ್ರಮಗಳೇನು? ಕೋವಿಡ್ ನಿಯಂತ್ರಣದಲ್ಲಿ ಸಾರ್ವಜನಿಕರ ಮತ್ತು ಅಧಿಕಾರಿಗಳ ಪಾತ್ರವೇನು? ಸೋಂಕು ಹರಡದಂತೆ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳೇನು? ಲಾಕ್‌ಡೌನ್‌ ಜಾರಿಯ ಉದ್ದೇಶ ಮತ್ತು ಅದರಿಂದ ಆಗಲಿರುವ ಲಾಭಗಳೇನು ಎಂಬಿತ್ಯಾದಿ ಪ್ರಶ್ನೆಗಳಿಗೆ ಅವರು ಸಮಾಧಾನದಿಂದ ವಿವರವಾಗಿ ಪ್ರತಿಕ್ರಿಯಿಸಿದರು.

ಧಾರವಾಡ–ಹುಬ್ಬಳ್ಳಿ ಮಹಾನಗರ ಸಹಿತ ಜಿಲ್ಲೆಯಲ್ಲಿ ಜುಲೈ 15ರಿಂದ 24ವರೆಗೆ ಕಟ್ಟುನಿಟ್ಟಿನ ಲಾಕ್‌ಡೌನ್‌ ಇರಲಿದ್ದು, ಜನರ ಸಹಕಾರ ಇದ್ದರೆ ಖಂಡಿತ ಕೋವಿಡ್‌ ನಿಯಂತ್ರಣ ಸಾಧ್ಯವಾಗಲಿದೆ. ಮನೆ ಒಳಗೂ ಕೋವಿಡ್‌ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವ ಅಗತ್ಯವಿದೆ. ಕರ್ತವ್ಯಕ್ಕೆಂದು ಮನೆಯಿಂದ ಹೊರ ಹೋಗಿ ಬರುವವರು ಮನೆಯಲ್ಲೂ ಮಾಸ್ಕ್‌ ಧರಿಸಿ, ಅಂತರ ಕಾಯ್ಕೊಳ್ಳಿ. ಪ್ರತ್ಯೇಕ ಟವೆಲ್‌, ಸೋಪ್‌ ಬಳಸಿ. ಇದರಿಂದ ಕೊರೊನಾ ಸೋಂಕಿನ ಹರಡುವಿಕೆಯ ಸರಪಳಿ ಖಂಡಿತ ತುಂಡಾಗಲಿದೆ ಎಂದರು. 

ಕೋವಿಡ್‌ 19 ಲಾಕ್‌ಡೌನ್‌ ಸಂಬಂಧ ಸಾರ್ವಜನಿಕರು ಕೇಳಿದ ಪ್ರಶ್ನೆಗಳಿಗೆ ಜಿಲ್ಲಾಧಿಕಾರಿ ನೀಡಿರುವ ಉತ್ತರಗಳು ಇಲ್ಲಿವೆ.

* ಮಹೇಂದ್ರ ಸಿಂಘಿ, ಹುಬ್ಬಳ್ಳಿ: ಖಾಸಗಿಯಾಗಿ ಕೋವಿಡ್ ಕೇರ್‌ ಸೆಂಟರ್ (ಸಿಸಿಸಿ) ತೆರೆಯುವ ಇಚ್ಛೆ ಇದೆ. ಇದಕ್ಕೆ ಜಿಲ್ಲಾಡಳಿತದ ಅನುಮತಿ ಸಿಗಬಹುದೇ?

ಸಂಘ–ಸಂಸ್ಥೆಗಳು ಹಾಗೂ ಸಮುದಾಯ ಸಂಘಟನೆಗಳು ಸ್ವ ಇಚ್ಛೆಯಿಂದ ಮುಂದೆ ಬಂದರೆ,   ಕೋವಿಡ್ ಕೇರ್ ಸೆಂಟರ್‌ ತೆರೆಯಲು ಖಂಡಿತಾ ಅನುಮತಿ ನೀಡುತ್ತೇವೆ. ಆಹಾರ ಸೇರಿದಂತೆ ಇತರ ಸೌಲಭ್ಯಗಳನ್ನು ಒದಗಿಸಲು ಜಿಲ್ಲಾಡಳಿತ ಸಿದ್ಧವಿದೆ. ನಿಮ್ಮನ್ನು ಅಧಿಕಾರಿಗಳು ಸಂಪರ್ಕಿಸಿ, ಆ ಕುರಿತು ಚರ್ಚಿಸಿ ಅನುಮತಿ ನೀಡಲಿದ್ದಾರೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಜನರು ಈ ರೀತಿ ನಮ್ಮೊಂದಿಗೆ ಕೈ ಜೋಡಿಸಿದರೆ, ನಮಗೂ ಖುಷಿಯಾಗುತ್ತದೆ.

*ಸೋಂಕಿನ ಲಕ್ಷಣಗಳು ಇಲ್ಲದಿದ್ದರೆ ಸೋಂಕಿತರಾದವರಿಗೆ ಚಿಕಿತ್ಸೆ ನೀಡುತ್ತಿಲ್ಲ ಎಂಬ ದೂರು ಕೇಳಿ ಬರುತ್ತಿವೆಯಲ್ಲಾ?

ಇತ್ತೀಚೆಗೆ ಸೋಂಕಿನ ಲಕ್ಷಣಗಳು ಇಲ್ಲದಿದ್ದರೂ ಸೋಂಕು ದೃಢಪಡುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಅವರನ್ನು ಹಾಗೆಯೇ ಬಿಟ್ಟರೆ, ಬೇರೆಯವರಿಗೆ ಸೋಂಕು ಹರಡಲಿದೆ. ಹಾಗಾಗಿ, ಅವರನ್ನು ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಇಡಲಾಗುತ್ತಿದೆ. ಅಲ್ಲಿ ಪೌಷ್ಟಿಕಾಂಶವುಳ್ಳ ಆಹಾರದ ಜತೆಗೆ, ರೋಗ ನಿರೋಧಕ ಹಾಗೂ ವಿಟಮಿನ್ ಮಾತ್ರೆಗಳನ್ನು ನೀಡಲಾಗುತ್ತಿದೆ. ವರದಿ ನೆಗೆಟಿವ್ ಬಂದ ತಕ್ಷಣ ಮನೆಗೆ ಕಳಿಸಲಾಗುತ್ತಿದೆ. ಈಚೆಗೆ ಸೋಂಕಿನ ಪ್ರಮಾಣ ಹೆಚ್ಚುತ್ತಿರುವುದರಿಂದ, ಮುಂದೆ ಮನೆಯಲ್ಲೇ ಐಸೊಲೇಷನ್ ಆಗಿರುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ.

* ಮಹೇಶ, ರಾಜನಗರ: ಕೋವಿಡ್‌ಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನಿರಾಕರಿಸಲಾಗುತ್ತಿದೆ ಎಂಬ ಸುದ್ದಿಗಳನ್ನು ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ.

ರಾಜ್ಯ ಸರ್ಕಾರ ಗುರುತಿಸಿರುವ ಖಾಸಗಿ ಆಸ್ಪತ್ರೆಗಳಲ್ಲಿ ಶೇ 50ರಷ್ಟು ಹಾಸಿಗೆಗಳನ್ನು ಕೋವಿಡ್‌ಗೆ ಮೀಸಲಿಟ್ಟು, ಚಿಕಿತ್ಸೆ ನೀಡಲಾಗುತ್ತಿದೆ. ಉಳಿದಂತೆ, ಸರ್ಕಾರದ ಕೋವಿಡ್ ಆಸ್ಪತ್ರೆ ಕಿಮ್ಸ್‌ನಲ್ಲಿ ಕೋವಿಡ್ ಅಷ್ಟೇ ಅಲ್ಲದೆ, ಇತರ ಅನಾರೋಗ್ಯವಿದ್ದಾಗಲೂ ದಾಖಲಿಸಿಕೊಳ್ಳಲಾಗುತ್ತದೆ. ಸದ್ಯ ಜನರು ತುರ್ತು ಇದ್ದರಷ್ಟೇ ಆಸ್ಪತ್ರೆಗೆ ಬಂದರೆ ಒಳ್ಳೆಯದು.

* ಕಲ್ಲಪ್ಪ ಕಟ್ಟಿಮನಿ: ಹಳೇ ಹುಬ್ಬಳ್ಳಿಯ ಕಮರಿಪೇಟೆ, ಮುಲ್ಲಾ ಓಣಿಯಲ್ಲಿ ಲಾಕ್‌ಡೌನ್ ನಿಯಮ ಪಾಲನೆ ಸರಿಯಾಗಿ ಪಾಲನೆಯಾಗುತ್ತಿಲ್ಲ.

ಜನ ಲಾಕ್‌ಡೌನ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಆಗ ಮಾತ್ರ ಕೊರೊನಾ ನಿಯಂತ್ರಿಸಲು ಸಾಧ್ಯ. ಹಳೇ ಹುಬ್ಬಳ್ಳಿಯಲ್ಲಿ ಲಾಕ್‌ಡೌನ್ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಪೊಲೀಸ್ ಕಮಿಷನರ್‌ ಅವರಿಗೆ ಸೂಚಿಸುತ್ತೇನೆ.

* ಭದ್ರಪ್ಪ, ಅಣ್ಣಿಗೇರಿ: ಉಸಿರಾಟದ ಸಮಸ್ಯೆ ಹೊಂದಿದ್ದ 72 ವರ್ಷದ ತಾಯಿಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರೆ, ವೈದ್ಯರು ಕೊರೊನಾ ಇರುವ ಶಂಕೆ ವ್ಯಕ್ತಪಡಿಸಿ ಹೆದರಿ ಚಿಕಿತ್ಸೆಗೆ ನಿರಾಕರಿಸಿದರು. ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಅವರು ಕೊನೆಯುಸಿರೆಳೆದರು. ಇದರಿಂದ ವೈದ್ಯರ ಬಗ್ಗೆ ಇದ್ದ ಗೌರವವೇ ಕಡಿಮೆಯಾಯಿತು.

ಕೋವಿಡ್‌ಗೆ ಹೆದರಿ ಬೇರೆ ರೀತಿಯ ಅನಾರೋಗ್ಯಕ್ಕೂ ಚಿಕಿತ್ಸೆ ನೀಡಲು ನಿರಾಕರಿಸದಂತೆ, ಸರ್ಕಾರಿ ಮತ್ತು ಖಾಸಗಿ ವೈದ್ಯರಿಗೆ ತಿಳಿವಳಿಕೆ ನೀಡಲಾಗುವುದು. ಸದ್ಯದ ಸಂದರ್ಭದಲ್ಲಿ ಜನರು ತುರ್ತು ಇದ್ದಾಗ, ಸಮೀಪದ ಸರ್ಕಾರಿ ಆಸ್ಪತ್ರೆಗಳಿಗೆ ಮೊದಲು ಕರೆದೊಯ್ಯುಬೇಕು.

* ಮಂಜುನಾಥ್, ಹುಬ್ಬಳ್ಳಿ: ಕೊರೊನಾ ಸೋಂಕಿನ ಲಕ್ಷಣಗಳಿಲ್ಲದಿದ್ದರೂ ನನ್ನನ್ನು ಹೋಂ ಕ್ವಾರಂಟೈನ್ ಮಾಡಿದ್ದಾರೆ? ಇದರಿಂದ ಕೆಲಸಕ್ಕೆ ಹೋಗಲಾಗದೆ ತೊಂದರೆಯಾಗಿದೆ. ಏನು ಮಾಡೋದು?

ಸೋಂಕಿತರ ಸಂಪರ್ಕಕ್ಕೆ ಬಂದಿದ್ದಾಗ ಮಾತ್ರ ಕ್ವಾರಂಟೈನ್ ಮಾಡಲಾಗುತ್ತದೆ. ಹಾಗಾಗಿ, ನೀವು ಮತ್ತು ನಿಮ್ಮ ಕುಟುಂಬದ ಸುರಕ್ಷತೆಯ ದೃಷ್ಟಿಯಿಂದ ಕ್ವಾರಂಟೈನ್ ಮುಗಿಸಿ. ತಾತ್ಕಾಲಿಕವಾಗಿ ಕೆಲ ತೊಂದರೆಗಳಾಗಬಹುದು. ಆದರೆ, ನಿರ್ಲಕ್ಷ್ಯ ಮಾಡಿದರೆ ಮುಂದೆ ಕಷ್ಟ ಎದುರಿಸಬೇಕಾಗುತ್ತದೆ.

* ರೂಪಾ, ಧಾರವಾಡ: ಲಾಕ್‌ಡೌನ್‌ನಿಂದಾಗಿ ಪತಿಗೆ ಕೆಲಸವಿಲ್ಲ. ಪಡಿತರವೂ ಸಿಗುತ್ತಿಲ್ಲ. ನಮ್ಮ ಸಮಸ್ಯೆಗೆ ಪರಿಹಾರ ನೀಡಿ.

ನಿಮ್ಮ ಸಂಪರ್ಕ ಸಂಖ್ಯೆಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡುವೆ. ಅವರು ನಿಮ್ಮನ್ನು ಸಂಪರ್ಕಿಸಿ ಪಡಿತರ ಸಿಗುವಂತೆ ಮಾಡುತ್ತಾರೆ.

* ಡೇವಿಡ್, ಹುಬ್ಬಳ್ಳಿ: ಮನೆ ಪಕ್ಕದ ಬಿಸಿಎಂ ಹಾಸ್ಟೆಲ್‌ ಅನ್ನು ಕೋವಿಡ್ ಕೇರ್ ಸೆಂಟರ್‌ ಆಗಿ ಪರಿವರ್ತಿಸಲಾಗಿದೆ. ಅಲ್ಲಿ ಸರಿಯಾದ ಭದ್ರತಾ ಸಿಬ್ಬಂದಿ ನಿಯೋಜಿಸಿಲ್ಲ. ಹಾಗಾಗಿ, ಅಲ್ಲಿಗೆ ಹೋಗಿ ಬರುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.

ಎಲ್ಲಾ ಸೆಂಟರ್‌ಗಳಲ್ಲಿ ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗಿದೆ. ಸೋಂಕಿತರಿಗೆ ಆಹಾರ ಪೂರೈಸುವ ಕೇಟರಿಂಗ್ ಸಿಬ್ಬಂದಿ ಹೊರತುಪಡಿಸಿ, ಮತ್ಯಾರಿಗೂ ಅಲ್ಲಿಗೆ ಹೋಗಲು ಅನುಮತಿ ಇಲ್ಲ. ಅವರೂ ಸುರಕ್ಷತೆಯೊಂದಿಗೆ ಹೋಗಿ ಬರುತ್ತಾರೆ.

*ಸಂಜೀವ ದುಮ್ಮಕನಾಳ: ವಾರ್ಡ್‌ಗಳಲ್ಲಿ ಸಂಘ ಸಂಸ್ಥೆಗಳ ನೆರವು ಪಡೆದು ಸೋಂಕು ತಡೆಯಬಹುದು ಅಲ್ಲವೇ?

ಜಿಲ್ಲೆಯ ಪ್ರತಿ ವಾರ್ಡ್‌ಗಳಿಗೂ ವಾರ್ಡ್‌ ಟಾಸ್ಕ್‌ಪೋರ್ಸ್‌ ಮಾಡಲಾಗಿದೆ. ಇದರಲ್ಲಿ ಸಂಘ ಸಂಸ್ಥೆಗಳು, ಎಲ್ಲಾ ವಿಭಾಗದ 12ಜನರ ತಂಡ ರಚಿಸಿ ಕ್ರಮ ಕೈಗೊಳ್ಳಲಾಗುತ್ತಿದೆ.

*ಲತಾ: ಅಂಗನವಾಡಿ, ಆಶಾ ಕಾರ್ಯಕರ್ತೆಯರು ಪ್ರತಿ ಮನೆ ಮನೆಗೆ ತೆರಳಿ ಸಮೀಕ್ಷೆ ಮಾಡುತ್ತಾರೆ. ಆದರೂ ಕೆಲವರು ಸರಿಯಾದ ಮಾಹಿತಿ ನೀಡುವುದಿಲ್ಲ. ಇದರಿಂದ ಸಮೀಕ್ಷೆ ಹೆಚ್ಚು ಪ್ರಯೋಜನವಾಗುತ್ತದೆಯೇ?‌

ಕೆಲವರು ಸಮಸ್ಯೆಯನ್ನು ಅರಿಯದೆ ಮುಚ್ಚಿಡುವ ಪ್ರಯತ್ನ ಮಾಡುತ್ತಾರೆ. ಸೋಂಕು ಪ್ರಕರಣ ಹೆಚ್ಚಲು ಪ್ರಮುಖ ಕಾರಣವಾಗಿದೆ. ಆದ್ದರಿಂದ ಪ್ರತಿಯೊಂದು ಔಷಧ ಅಂಗಡಿಗಳಲ್ಲಿ ಔಷಧ ಖರೀದಿಸುವವರ ಹಾಗೂ ಕ್ಲಿನಿಕ್‌ಗಳಲ್ಲಿ ಚಿಕಿತ್ಸೆ ಪಡೆಯುವ ಎಲ್ಲರನ್ನೂ ಪತ್ತೆ ಹಚ್ಚಿ ಕಡ್ಡಾಯವಾಗಿ ಕೋವಿಡ್‌ ಪರೀಕ್ಷೆ ಮಾಡಲಾಗುತ್ತಿದೆ. ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕಕ್ಕೆ ಬಂದ ಎಲ್ಲರಿಗೂ ಕಡ್ಡಾಯವಾಗಿ ಕೋವಿಡ್‌ ಪರೀಕ್ಷೆ ಮಾಡಲಾಗುತ್ತದೆ. ಪ್ರಾಥಮಿಕ ಸಂಪರ್ಕದಲ್ಲಿರುವವರಿಗೆ ಐದು ದಿನಗಳ ಒಳಗೆ ಪರೀಕ್ಷೆ ಮಾಡಲಾಗುತ್ತದೆ. ದ್ವಿತೀಯ ಸಂಪರ್ಕಕ್ಕೆ ಬಂದವರಿಗೆ ಹೋಂ ಕ್ವಾರಂಟೈನ್‌ ಮಾಡಲಾಗುತ್ತದೆ.

*ಪ್ರದೀಪ ಭಟ್‌: ಜಿಲ್ಲಾಡಳಿತದಿಂದ ಹೋಂ ಐಸೊಲೇಷನ್‌ಗೆ ಅವಕಾಶ ನೀಡಲಾಗಿದೆಯೇ?

ಜಿಲ್ಲೆಯಲ್ಲಿ ಸೋಂಕಿತರು ಅನುಕೂಲಸ್ಥರಾಗಿದ್ದರೆ, ಹೋಂ ಐಸೊಲೇಷನ್‌ಗೆ ಅವಕಾಶವಿದೆ. ಅವರಿಗೆ ಮುನ್ನೆಚ್ಚರಿಕೆ ಕ್ರಮದ ಬಗ್ಗೆ ತಿಳಿಸಲಾಗುತ್ತದೆ. ಅವರು ಪ್ರತ್ಯೇಕ ಕೋಣೆ, ಶೌಚಾಲಯ, ಸ್ನಾನಗೃಹ ಬಳಸಬೇಕು. ಆಗಾಗ್ಗೆ ತಮ್ಮ ಉಸಿರಾಟದ ಪರೀಕ್ಷೆ ಮಾಡಿಸಿಕೊಳ್ಳಬೇಕು. ಈ ವ್ಯವಸ್ಥೆ ಯುವಕರಿಗೆ ಮಾತ್ರ. ಮಕ್ಕಳು, ವೃದ್ಧರಿಗೆ ಈ ಅವಕಾಶವಿಲ್ಲ.

*ಲೋಕನಾಥ್‌: ನವಲಗುಂದದ ಕಿರಾಣಿ ಅಂಗಡಿಗಳಲ್ಲಿ ಸುರಕ್ಷಿತ ಅಂತರ ಕಾಯ್ದುಕೊಳ್ಳುತ್ತಿಲ್ಲ. ಹೋಂ ಡೆಲಿವರಿಗೆ ಅವಕಾಶವಿದ್ದರೂ, ಜನ ಅಂಗಡಿಗೆ ಬರುತ್ತಾರೆ.

ಕಿರಾಣಿ ಅಂಗಡಿಗಳಲ್ಲಿ ಒಮ್ಮೆಗೆ ಕೇವಲ ನಾಲ್ಕು ಜನ ಅವಕಾಶ ನೀಡಬಹುದು. ಮನೆಯಿಂದ ಒಬ್ಬರು ಮಾತ್ರ ಹೋಗಿ ಖರೀದಿಸಬೇಕು. ಹೆಚ್ಚಿನ ಮಂದಿ ಸೇರುವಂತಿಲ್ಲ. ಅವರಿಗೆ ಸೂಚನೆ ನೀಡಲಾಗುತ್ತದೆ.

*ರಾಜು: ಲಾಕ್‌ಡೌನ್‌ ಸಂದರ್ಭದಲ್ಲಿ ಬೆಳಿಗ್ಗೆ 5ರಿಂದ 12ರವರೆಗೆ ಖರೀದಿಗೆ ಅವಕಾಶ ನೀಡಿದ್ದೀರಿ ಏಕೆ?

ಜನರಿಗೆ ಅಗತ್ಯ ವಸ್ತುಗಳ ಖರೀದಿಗೆ ಸಮಸ್ಯೆ ಆಗಬಾರದೆಂದು ಈ ಸಮಯವನ್ನು ನಿಗದಿ ಮಾಡಲಾಗಿದೆ. ದಿನಕೂಲಿಕಾರ್ಮಿಕರು ಒಮ್ಮೆಲೆ ಇಡೀ ವಾರದ ದಿನಸಿಯನ್ನು ಖರೀದಿಸಲು ಸಾಧ್ಯವಿಲ್ಲ. ಅವರ ಅನುಕೂಲವನ್ನೂ ಗಮನದಲ್ಲಿಟ್ಟು ಈ ವ್ಯವಸ್ಥೆ ಮಾಡಲಾಗಿದೆ.

*ಕುಮಾರಸ್ವಾಮಿ, ಅಕ್ಷಯ ಕಾಲೊನಿ: ಮಧ್ಯಾಹ್ನ ತನಕ ಕೊಟ್ಟಿರುವ ಸಂಚಾರ ವಿನಾಯ್ತಿಯೇ ಪ್ರಕರಣಗಳ ಹೆಚ್ಚಲು ಕಾರಣವಾಗುತ್ತಿವೆಯಲ್ಲ?

ಲಾಕ್‌ಡೌನ್‌ನಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 5ರಿಂದ ಮಧ್ಯಾಹ್ನ ತನಕ ಅವಕಾಶ ನೀಡಲಾಗಿದೆ. ಒಂದೇ ಗಂಟೆ ಸಡಿಲಿಕೆ ನೀಡಿದರೆ, ಜನದಟ್ಟಣೆ ಉಂಟಾಗುತ್ತದೆ ಎಂದು ಹೆಚ್ಚಿನ ಸಮಯ ನೀಡಲಾಗಿದೆ. ಅದರರ್ಥ ನೀವು ಮಧ್ಯಾಹ್ನದ ತನಕ ತಿರುಗಾಡಬಹುದು ಎಂದಲ್ಲ. ನಿಮ್ಮ ಮನೆಗಳ ಪಕ್ಕದಲ್ಲೇ ಸಿಗುವ ವಸ್ತುಗಳನ್ನು 5–10 ನಿಮಿಷಗಳಲ್ಲಿ ಖರೀದಿಸಿ, ಮನೆ ಸೇರಿಕೊಳ್ಳಬೇಕು.

*ಅಪ್ಪಾಜಿಗೌಡ: ಆಯುರ್ವೇದಿಕ್‌, ಹೋಮಿಯೊಪಥಿ ಬಳಕೆಗೆ ಏಕೆ ಅವಕಾಶ ನೀಡುತ್ತಿಲ್ಲ?

ಜಿಲ್ಲೆಯಲ್ಲಿ ಆಯುರ್ವೇದಿಕ್‌, ಹೋಮಿಯೊಪಥಿ ಔಷಧ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಇದು ಸಹಾಯಕವಾಗಿದೆ. ನಮ್ಮ ಆಯುಷ್‌ ಮೂಲಕ ಸಾಕಷ್ಟು ಕಿಟ್‌ಗಳನ್ನು ವಿತರಿಸಲಾಗಿದೆ. ಸ್ಲಂನಲ್ಲಿರುವವರಿಗೆ, ಸೋಂಕು ಶಂಕಿತರಿಗೂ ಈ ಔಷಧಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ.

*ಹುಬ್ಬಳ್ಳಿ–ಧಾರವಾಡದ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಪ್ರಕರಣ ಹೆಚ್ಚುತ್ತವೆ. ಅದನ್ನು ಹೇಗೆ ತಡೆಯುತ್ತೀರಿ?

ಜಿಲ್ಲಾಧಿಕಾರಿ: ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿರುವ ಪ್ರದೇಶಗಳಲ್ಲಿ ಔಷಧ ಸಿಂಪಡಣೆ, ಮಾಸ್ಕ್‌ಗಳ ವಿತರಣೆ, ಹೆಚ್ಚೆಚ್ಚು ಪರೀಕ್ಷೆಗೆ ಕ್ರಮವಹಿಸಲಾಗಿದೆ. ಜೊತೆಗೆ 67 ವಾರ್ಡ್‌ಗಳಲ್ಲಿ ವಾರ್ಡ್ ‌ಮಟ್ಟದ ಕಾರ್ಯ ಪಡೆ ರಚಿಸಲಾಗುತ್ತಿದೆ.

*ರವಿಕುಮಾರ್, ಅಕ್ಷಯ ಗಾರ್ಡನ್‌ ನಿವಾಸಿ ಹಾಗೂ ಐ.ಕೆ.ಲಕ್ಕುಂಡಿ: ಎಪಿಎಂಸಿ, ಬೀದಿ ಬದಿ ವ್ಯಾಪಾರಿಗಳು ಮಾಸ್ಕ್‌ ಧರಿಸದೇ ಓಡಾಡುತ್ತಿದ್ದಾರಲ್ಲ? ಅಂಥ ಪ್ರದೇಶಗಳನ್ನು ನಿತ್ಯ ಸ್ಯಾನಿಟೈಸ್‌ ಮಾಡಬಹುದೇ?

ಮಾಸ್ಕ್‌ ಧರಿಸದವರಿಗೆ ಈಗಾಗಲೇ ದಂಡ ವಿಧಿಸುತ್ತಿದ್ದೇವೆ. ಎಪಿಎಂಸಿಗಳ ನಮ್ಮ ಅಧಿಕಾರಿಗಳ ತಂಡ ಇನ್ನಷ್ಟು ನಿಗಾವಹಿಸಲಿದೆ. ಈ ಕುರಿತು ನಗರ ಪೊಲೀಸ್‌ ಆಯುಕ್ತರೊಂದಿಗೆ ಮಾತನಾಡಿ ಕಠಿಣ ಕ್ರಮವಹಿಸುತ್ತೇವೆ. ಸದ್ಯ ಸೀಲ್‌ಡೌನ್‌ ಪ್ರದೇಶಗಳಲ್ಲಿ ಸ್ಯಾನಿಟೈಸ್‌ ಮಾಡುತ್ತಿದ್ದೇವೆ. ಎಪಿಎಂಸಿ ಸೇರಿದಂತೆ ಹಲವೆಡೆ ನಿತ್ಯ ಸ್ಯಾನಿಟೈಸ್‌ ಕುರಿತು ಚರ್ಚಿಸಿ ಕ್ರಮಕೈಗೊಳ್ಳುತ್ತೇವೆ.

*ಡಾ.ಹಿರೇಮಠ: ಸರ್ಕಾರದ ನಿಯಮಗಳನ್ನು ಮೀರಿ ಕೆಲವು ಕಾಲೇಜುಗಳು ವಿದ್ಯಾರ್ಥಿಗಳ ಪ್ರವೇಶ, ಕ್ಲಾಸ್‌ ನಡೆಸುತ್ತಿವೆಯಲ್ಲ?

*ಜಿಲ್ಲೆಯ ಯಾವುದೇ ಶಾಲೆ–ಕಾಲೇಜುಗಳಲ್ಲಿ ಸರ್ಕಾರದ ಮಾರ್ಗಸೂಚಿಗಳು ಉಲ್ಲಂಘಿಸಿದ್ದು ಕಂಡು ಬಂದರೆ ಕ್ರಮಕೈಗೊಳ್ಳುತ್ತೇವೆ. ಈ ಕುರಿತು ಡಿಡಿಪಿಐ ಹಾಗೂ ಡಿಡಿಪಿಯು ಅವರನ್ನು ಕಳುಹಿಸಿ, ವಸ್ತು ಸ್ಥಿತಿ ಪರಿಶೀಲಿಸಿ ಲೋಪಕಂಡು ಬಂದರೆ ಕ್ರಮಕೈಗೊಳ್ಳಲಾಗುವುದು.

*ಚರಂತಯ್ಯ ಹಿರೇಮಠ: ಗ್ರಾಮೀಣ ಭಾಗದ ಸೀಲ್‌ಡೌನ್‌ ಪ್ರದೇಶಗಳ ಬಡವರಿಗೆ ಆಹಾರ ವಿತರಿಸಲು ಏನು ಕ್ರಮಕೈಗೊಳ್ಳಲಾಗಿದೆ?
ಜಿಲ್ಲಾಡಳಿತ ಹಾಗೂ ಕೆಲ ಸರ್ಕಾರೇತರ ಸಂಸ್ಥೆಗಳ ನೆರವಿನೊಂದಿಗೆ ಬಡಜನರ ಹಸಿವು ನೀಗಿಸಲು ಕ್ರಮಕೈಗೊಳ್ಳಲಾಗಿದೆ.

*ವಿದ್ಯಾಧರ ಪಾಟೀಲ: ನವಲಗುಂದ ತಾಲ್ಲೂಕಿನಲ್ಲಿ ಕೋವಿಡ್‌ ಬಾಧಿತರ ನಿರ್ವಹಣೆಗೆ ಏನು ಕ್ರಮಕೈಗೊಂಡಿದ್ದೀರಿ?

ನವಲಗುಂದ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್‌ ಬಾಧಿತರಿಗಾಗಿ 50 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಸೋಂಕಿನ ಲಕ್ಷಣಗಳು ಇಲ್ಲದವರ ಚಿಕಿತ್ಸೆಗಾಗಿ ಮೊರಾರ್ಜಿ, ರಾಣಿ ಚನ್ನಮ್ಮ ವಸತಿ ಶಾಲೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಅದಾಗ್ಯೂ ಕೋವಿಡ್‌ ಬಾಧಿತರನ್ನು ಜಿಲ್ಲೆಯಲ್ಲಿರುವ ನಿಗದಿತ ಆಸ್ಪತ್ರೆಗೆ ದಾಖಲಿಸಿಯೇ ಚಿಕಿತ್ಸೆ ನೀಡಲಾಗುತ್ತಿದೆ.

*ಮಲ್ಲಿಕಾರ್ಜುನ: ಧಾರವಾಡದ ಕೆಲ ಕೈಗಾರಿಕೆಗಳಲ್ಲಿ ಸ್ಯಾನಿಟೈಸರ್‌ ಬಳಕೆ ಸೇರಿದಂತೆ ಯಾವುದೇ ಮಾರ್ಗಸೂಚಿ ಪಾಲಿಸುತ್ತಿಲ್ಲ?

ಜಿಲ್ಲಾಧಿಕಾರಿ: ಕೈಗಾರಿಕೆಗಳಿಗೆ ನಿರ್ದಿಷ್ಟ ಷರತ್ತುಗಳನ್ನು ವಿಧಿಸಿ ಆರಂಭಿಸಲು ಅನುಮತಿ ನೀಡಲಾಗಿದೆ. ಒಂದು ವೇಳೆ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುತ್ತಿಲ್ಲ ಎಂದಾದರೆ, ಕ್ರಮಕೈಗೊಳ್ಳುತ್ತವೆ. ಕಾರ್ಮಿಕ ಇಲಾಖೆಯ ಉಪ ಆಯುಕ್ತರನ್ನು ಕಳುಹಿಸಿ ಈ ಕುರಿತು ಪರಿಶೀಲಿಸಲಾಗುವುದು.

*ದಾದಾಸಾಹೇಬ್‌, ಲಾಕ್‌ಡೌನ್‌ ಆದರೂ ನಿತ್ಯ ಸೋಂಕಿತರ ಪ್ರಕರಣಗಳು ಹೆಚ್ಚುತ್ತಿವೆಯಲ್ಲ?

ಇದೀಗ ವರದಿಯಾಗುತ್ತಿರುವ ಪ್ರಕರಣಗಳಲ್ಲಿ ಬಹು ಹಿಂದೆಯೇ ಸೋಂಕು ತಗುಲಿರುವ ಸಾಧ್ಯತೆ ಇರುತ್ತದೆ. ಲಾಕ್‌ಡೌನ್‌ಗೂ ಅದಕ್ಕೂ ಸಂಬಂಧವಿಲ್ಲ. ಈಗ ವಿಧಿಸಲಾದ ಲಾಕ್‌ಡೌನ್‌ ಫಲಿತಾಂಶ ಈಗಲೇ ಕಾಣಿಸದು. ಮುಂದಿನ ಎರಡು ವಾರಗಳ ಬಳಿಕ ಅದರ ಪರಿಣಾಮ ಗೋಚರವಾಗುತ್ತದೆ. ಹೀಗಾಗಿ ಸಾರ್ವಜನಿಕರು ಮನೆಗಳಲ್ಲಿಯೇ ಇದ್ದು ಕೊರೊನಾ ಸೋಂಕು ನಿಯಂತ್ರಣಕ್ಕೆ ನೆರವಾಗಬೇಕು.

ಸೋಂಕು ತಡೆಗೆ ಸೂತ್ರಗಳು

*ಮಾಸ್ಕ್‌ ಧರಿಸುವುದು, ಸ್ಯಾನಿಟೈಸರ್‌ ಬಳಕೆ, ಸುರಕ್ಷಿತ ಅಂತರ ಕಾಪಾಡಿಕೊಳ್ಳುವುದು.. ಇವು ಸೋಂಕು ತಡೆಗೆ ಇರುವ ಪರಿಣಾಮಕಾರಿ ಅಸ್ತ್ರಗಳು. ಇದರಿಂದ ಸೋಂಕು ಹರಡುವುದನ್ನು ಶೇ99ರಷ್ಟು ತಡೆಯಬಹುದು. ಇದಕ್ಕೆ ಎಲ್ಲರೂ ಸಹಕರಿಸಬೇಕು. ಜನ ಕೈಜೋಡಿಸಿದರೆ, ಕೊರೊನಾ ಸೋಂಕಿನ ವಿರುದ್ಧದ ಹೋರಾಟವನ್ನು ಗೆಲ್ಲುವುದು ಸುಲಭ.

ವೈಜ್ಞಾನಿಕ ರೀತಿಯಲ್ಲೇ ಅಂತ್ಯಕ್ರಿಯೆ ನಡೆಯುತ್ತಿದೆ...

ಕೋವಿಡ್‌ನಿಂದ‌ ದೃಢಪಟ್ಟು ಸಾವನ್ನಪ್ಪಿದವರ ಅಂತ್ಯಸಂಸ್ಕಾರವನ್ನು ಹುಬ್ಬಳ್ಳಿಯ ವಿದ್ಯಾನಗರದ ರುದ್ರಭೂಮಿಯಲ್ಲಿ ಮಾಡಿ, ಹಾಗೆಯೇ ಬಿಟ್ಟು ಹೋಗುತ್ತಾರೆ. ಸ್ಯಾನಿಟೈಸ್‌ ಮಾಡಿಸಿ ಎಂದು ‘ಪ್ರಜಾವಾಣಿ’ ಫೇಸ್‌ಬುಕ್‌ ಲೈವ್‌ನಲ್ಲಿ ವಿದ್ಯಾನಗರದ ನಿವಾಸಿಯೊಬ್ಬರ ವಿನಂತಿಗೆ  ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ‘ವೈಜ್ಞಾನಿಕ ರೀತಿಯಲ್ಲಿಯೇ ಸೋಂಕಿತರ ಅಂತ್ಯಕ್ರಿಯೆ ಮಾಡಲಾಗುತ್ತಿದೆ. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ಇದಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಅಂತ್ಯಕ್ರಿಯೆ ನಡೆದ ನಂತರ ಕಡ್ಡಾಯ ಸ್ಯಾನಿಟೈಸ್‌ ಮಾಡಲಾಗುತ್ತಿದೆ. ಇದರ ಬಗ್ಗೆ ಅನಗತ್ಯ ಭಯಬೇಡ. ಸಾರ್ವಜನಿಕರು ನಿಮ್ಮ ವೈಯಕ್ತಿಕ ಸುರಕ್ಷತೆ ಕಾಪಾಡಿಕೊಳ್ಳಿ’ ಎಂದರು.

ಕೋವಿಡ್‌ ಪೀಡಿತರಿಗೆ ಪೌಷ್ಟಿಕ ಆಹಾರ

ಜಿಲ್ಲೆಯಲ್ಲಿ ಆರಂಭಿಸಿರುವ ಎಲ್ಲ ಕೋವಿಡ್‌ ಕೇರ್‌ ಕೇಂದ್ರಗಳಲ್ಲಿ ದಿನದಲ್ಲಿ ಆರು ಬಾರಿ ಪೌಷ್ಟಿಕವುಳ್ಳ ಆಹಾರವನ್ನು ಪೂರೈಸಲಾಗುತ್ತಿದೆ. ರೋಗಿ ಬೆಳಿಗ್ಗೆ ಎದ್ದ ಕೂಡಲೇ ಕಾಫಿ/ಟೀ/ಹಾಲು. ಸೋಮವಾರದಿಂದ ಭಾನುವಾರದವರೆಗೆ ಬೆಳಗಿನ ಉಪಾಹಾರಕ್ಕೆ (ಬೆಳಿಗ್ಗೆ 7ಕ್ಕೆ ) ರವಾ ಇಡ್ಲಿ, ಪೊಂಗಲ್, ಸೆಟ್‌ ದೋಸೆ, ಅಕ್ಕಿ ಇಡ್ಲಿ, ಬಿಸಿಬೇಳೆಬಾತ್‌, ಚೌಚೌ ಬಾತ್‌, ಸೆಟ್‌ ದೋಸೆ; ಬೆಳಿಗ್ಗೆ 10 ಗಂಟೆಗೆ ಕಲ್ಲಂಗಡಿ, ಪಪಾಯ, ರಾಗಿಗಂಜಿ, ಪಾಲಕ್ ಸೂಪ್‌, ರವಾ ಗಂಜಿ, ಕ್ಯಾರೆಟ್‌ ಸೂಪ್‌, ಟೊಮೆಟೊ ಸೂಪ್‌; ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಪುಲ್ಕಾ–ಪಲ್ಲ್ಯಾ, ಅನ್ನ–ಸಾರು, ಮೊಸರು. ಸಂಜೆ ಉಪಾಹಾರಕ್ಕೆ ಏಲಕ್ಕಿ ಬಾಳೆಹಣ್ಣು, ಮಾರಿ ಬಿಸ್ಕತ್ತು, ಪ್ರೊಟಿನ್‌ ಬಿಸ್ಕತ್ತು, ಖರ್ಜೂರ, ಮ್ಯಾಂಗ್ಯೋ ಬಾರ್‌.  ರಾತ್ರಿ ಮಲಗುವ ಮುನ್ನ ಹಾಲು.

ಧಾರವಾಡ ಜಿಲ್ಲೆಯಲ್ಲಿ ವರದಿಯಾಗಿರುವ ಕೋವಿಡ್‌ –19 ಪ್ರಕರಣಗಳ ಪೈಕಿ, ಶೇ 30 ಮಂದಿಗೆ ಮಾತ್ರ ಸೋಂಕಿನ ಲಕ್ಷಣಗಳಿವೆ. ಉಳಿದ ಶೇ 70 ಮಂದಿಗೆ ಇಲ್ಲ. ಹಾಗಾಗಿ, ಜನರು ಕೊರೊನಾ ಬಗ್ಗೆ ನಿರ್ಲಕ್ಷ್ಯ ತೋರದೆ, ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು. ಕೊರೊನಾ ಪಾಸಿಟಿವ್‌ ವರದಿ ಬಂದಾಗ ಭಯಪಡುವವರಿಗಾಗಿ ಆತ್ಮಸ್ಥೈರ್ಯ ತುಂಬಲು ಮಾನಸಿಕ ತಜ್ಞರನ್ನೊಳಗೊಂಡ ವಿಶೇಷ ತಂಡದಿಂದ ಆನ್‌ಲೈನ್‌ ಕೌನ್ಸೆಲಿಂಗ್‌ ಅನ್ನು ಸದ್ಯದಲ್ಲಿಯೇ ಆರಂಭಿಸಲಾಗುವುದು

- ನಿತೇಶ್ ಪಾಟೀಲ, ಜಿಲ್ಲಾಧಿಕಾರಿ

****

ಫೋನ್‌ ಇನ್‌ ಕಾರ್ಯಕ್ರಮ ನಿರ್ವಹಣೆ: ರಶ್ಮಿ ಎಸ್, ಆರ್‌.ಮಂಜುನಾಥ್‌, ಕೃಷ್ಣಿ ಶಿರೂರ, ಬಸೀರ್‌ ಅಹಮದ್ ‌ನಗಾರಿ, ಓದೇಶ ಸಕಲೇಶಪುರ, ಸಬಿನಾ ಎ, ಸಂಧ್ಯಾರಾಣಿ ಎಚ್‌.ಎಂ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು