ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಭೆಗೆ ಅನುಮತಿ ನೀಡದ್ದಕ್ಕೆ ಮಠಾಧೀಶರ ಪ್ರತಿಭಟನೆ; ಕ್ಷಮೆ ಕೋರಿದ ಡಿಸಿಪಿ

Published 4 ಮೇ 2024, 10:32 IST
Last Updated 4 ಮೇ 2024, 10:32 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಲ್ಲಿನ ವಿದ್ಯಾನಗರದ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗುರುವಿರಕ್ತ ಸಾಧು ಸನ್ಯಾಸಿಗಳ ಚಿಂತನ ಮಂಥನ ಸಭೆಗೆ ಚುನಾವಣಾ ಆಯೋಗ ಅನುಮತಿ ನೀಡದ ಕಾರಣ, ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಸ್ವಾಮೀಜಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ಚನ್ನಮ್ಮ ವೃತ್ತದಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿ ಚುನಾವಣಾ ಅಧಿಕಾರಿ ಹಾಗೂ ಪೊಲೀಸರ ವಿರುದ್ಧ ಘೋಷಣೆ ಕೂಗಿದರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಜೀತದಾಳುಗಳ ಹಾಗೆ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಂತರ ಅಲ್ಲಿಂದ ಪಾದಯಾತ್ರೆ ಮೂಲಕ‌ ಮಹಾನಗರ ಪಾಲಿಕೆ ಆವರಣಕ್ಕೆ ಬಂದು, ಪ್ರತಿಭಟನೆ ಮುಂದುವರಿಸಿದರು.

ಈ ವೇಳೆ ಪೊಲೀಸ್ ಮತ್ತು ಮಠಾಧೀಶರ ನಡುವೆ ಸುಮಾರು ಅರ್ಧಗಂಟೆ ಚರ್ಚೆ ನಡೆಯಿತು. ತಕ್ಷಣ ಅನುಮತಿ ನೀಡಬೇಕು, ಚುನಾವಣಾಧಿಕಾರಿಯಾದ ಪಾಲಿಕೆ ಆಯುಕ್ತರು ಸ್ಥಳಕ್ಕೆ ಬರಬೇಕು. ಯಾಕೆ ಅನುಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸಬೇಕು. ಸಭೆಗೆ ಧಕ್ಕೆ ತಂದು ಮಠಾಧೀಶರನ್ನು ಬಂಧಿಸುತ್ತೇನೆ ಎಂದ ವಿದ್ಯಾನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಧರೇಗೌಡ ಪಾಟೀಲ ಅವರು ಸ್ವಾಮೀಜಿಗಳ‌ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದರು.

ಸ್ಥಳಕ್ಕಾಗಮಿಸಿದ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ, ಅನುಮತಿ ಪತ್ರದಲ್ಲಿ ರಾಜಕೀಯ ಸಭೆ ಎಂದು ಬರೆದ ಕಾರಣ ಅನುಮತಿ ನೀಡಿಲ್ಲ. ಧಾರ್ಮಿಕ ಸ್ಥಳದಲ್ಲಿ ರಾಜಕೀಯ ಸಭೆ ನಡೆಸಲು ಅವಕಾಶವೂ ಇಲ್ಲ. ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ರಾಜಕೀಯೇತರ ಸಭೆ ನಡೆಸಲು ಈಗ ಅನುಮತಿ ನೀಡಿದ್ದೇವೆ' ಎಂದರು.

ಅದಕ್ಕೆ ಸಮಾಧಾನವಾಗದ ಸ್ವಾಮೀಜಿಗಳು, ಮಠಾಧೀಶರನ್ನು ಬೀದಿಗಿಳಿಸಿದ ಇನ್‌ಸ್ಪೆಕ್ಟರ್ ಅವರು ನಮ್ಮ ಕ್ಷಮೆ ಕೇಳಬೇಕು. ಇಲ್ಲಿದ್ದರೆ ಮತ್ತೆ ಬೀದಿಗಿಳಿದು ಪ್ರತಿಭಟನೆ ನಡರಸುತ್ತೇವೆ. ನಾಳೆ ರಾಜ್ಯದಾದ್ಯಂತ ಬಂದ್ ಕರೆ ನೀಡುತ್ತೇವೆ ಎಂದು ಪಟ್ಟು ಹಿಡಿದರು. ಆಗ ಡಿಸಿಪಿ ರಾಜೀವ್ ಎಂ. 'ನಿಮ್ಮ ಭಾವನೆಗಳಿಗೆ ಧಕ್ಕೆಯಾಗಿದ್ದರೆ ಕ್ಷಮೆ ಕೇಳುತ್ತೇವೆ. ರಾಜಕೀಯ ಹೊರತುಪಡಿಸಿ ಸಭೆ ನಡೆಸಿ' ಎಂದರು. ನಂತರ ಮಠಾಧೀಶರು ಪ್ರತಿಭಟನೆ ಹಿಂಪಡೆದರು.

ಕೊಟ್ಟೂರು ಮಹಾಸ್ವಾಮೀಜಿ, ಮಹಾಲಿಂಗ ಸ್ವಾಮೀಜಿ, ವೃಷಭೇಂದ್ರ ಸ್ವಾಮೀಜಿ, ಶಿವಕುಮಾರ ಸ್ವಾಮೀಜಿ, ಶಂಭುಲಿಂಗವಸ್ವಾಮೀಜಿ, ವಾಮದೇವ ಶಿವಾಚಾರ್ಯ ಸ್ವಾಮೀಜಿ, ಮಹಾಂತ ಶಿವಾಚಾರ್ಯ ಸ್ವಾಮೀಜಿ, ಸಿದ್ದಬಸವ ಸ್ವಾಮೀಜಿ, ಬಸವ ಭೂಷಣ ಸ್ವಾಮೀಜಿ, ಸಂಗಮೇಶ ಸ್ವಾಮೀಜಿ, ಶರಣಬಸವ ದೇವರು, ಕುಮಾರ ಸ್ವಾಮೀಜಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಬಂದ ಸ್ವಾಮೀಜಿ ಇದ್ದರು.

ದಿಂಗಾಲೇಶ್ವರ ಸ್ವಾಮೀಜಿ ಆಕ್ರೋಶ

'ನಾವು ಸಾಧು ಸಂತರ ಸಭೆ ನಡೆಸಲು ತೀರ್ಮಾನಿಸಿ, ಅನುಮತಿ ನೀಡುವಂತೆ ಶುಕ್ರವಾರವೇ ಚುನಾವಣಾ ಆಯೋಗಕ್ಕೆ ವಿನಂತಿಸಿದ್ದೆವು. ರಾತ್ರಿವರೆಗೂ ಕಾದು, ನಂತರ ಬೆಳಿಗ್ಗೆ ಅನುಮತಿ ನೀಡುವುದಾಗಿ ತಿಳಿಸಿದ್ದರು. ಶನಿವಾರ ಬೆಳಿಗ್ಗೆ 11.30 ಆದರೂ ಅನುಮತಿ ನೀಡದ ಕಾರಣ, ನಾವು ಸಭೆ ನಡೆಸಲು ಮುಂದಾದೆವು. ಆಗ ಪೊಲೀಸರು ಮತ್ತು ಚುನಾವಣಾ ಅಧಿಕಾರಿಗಳು ಬಂದು ಸಭೆ ನಡೆಸದಂತೆ ತಡೆದರು' ಎಂದು ದಿಂಗಾಲೇಶ್ವರ ಸ್ವಾಮೀಜಿ ಆರೋಪಿಸಿದರು.

'ಮಠಾಧೀಶರ ಸಭೆ ನಡೆದರೆ ತಮಗೆ ಸಮಸ್ಯೆಯಾಗುತ್ತದೆ ಎಂದು ಭಯಗೊಂಡ ಪ್ರಲ್ಹಾದ ಜೋಶಿ ಅವರು, ಅದನ್ನು ಚುನಾವಣಾ ಆಯೋಗದ ಮೂಲಕ ಹತ್ತಿಕ್ಕಿದ್ದಾರೆ‌. ಬ್ರಿಟಿಷ್ ಸರ್ಕಾರದ ಪಾಲಿಸಿ ಹು-ಧಾ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈಗಲೂ ಇದೆ. ನಾವೇನು ಕಾನೂನು ಬಾಹಿರ ಚಟುವಟಿಕೆ, ದೇಶದ್ರೋಹ ಚಟುವಟಿಕೆ ನಡೆಸಲು ಸಭೆ ನಡೆಸುತ್ತಿರಲಿಲ್ಲ. ಪೊಲೀಸ್ ಇಲಾಖೆ ಮತ್ತು ಚುನಾವಣಾ ಆಯೋಗ ಸಚಿವರ ಮನೆ ಆಳಿನಂತೆ ಕೆಲಸ ಮಾಡುತ್ತಿವೆ. ಜೋಶಿ ವಿರುದ್ಧ ನಮ್ಮ ಧರ್ಮಯುದ್ಧ ನಿರಂತರವಾಗಿ ಇರುತ್ತದೆ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT