ಧಾರವಾಡ: ‘ಕೇಂದ್ರ ಸರ್ಕಾರವು ರೈಲ್ವೆ ಮಾರ್ಗಗಳ ವಿದ್ಯುದ್ದೀಕರಣಕ್ಕೆ ಆದ್ಯತೆ ನೀಡಿದೆ. ಒಂಬತ್ತು ವರ್ಷಗಳಲ್ಲಿ 37 ಸಾವಿರ ಕಿ.ಮೀ ಮಾರ್ಗದಲ್ಲಿ ವಿದ್ಯುದ್ದೀಕರಣ ಮಾಡಲಾಗಿದೆ’ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಅಳ್ನಾವರದಲ್ಲಿ ಭಾನುವಾರ ಏರ್ಪಡಿಸಿದ್ದ ಅಮೃತ ಭಾರತ ಯೋಜನೆಯಡಿ ಅಳ್ನಾವರ ರೈಲು ನಿಲ್ದಾಣದ ಕಾಮಗಾರಿಗೆ ಶಂಕುಸ್ಥಾಪನೆ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಈವರೆಗೆ 58 ಸಾವಿರ ಕಿ.ಮೀ ರೈಲ್ವೆ ಮಾರ್ಗದ ವಿದ್ಯುದ್ದೀಕರಣ ಮುಗಿದಿದೆ. ಹಿಂದಿನ ಸರ್ಕಾರಗಳು 20 ಸಾವಿರ ಕಿ.ಮೀ ಮಾರ್ಗದ ವಿದ್ಯುದ್ದೀಕರಣ ಮಾಡಿದ್ದವು. ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಹಿಂದಿನ ಸರ್ಕಾರಗಳು 60 ವರ್ಷಗಳಲ್ಲಿ ಮಾಡಿದ್ದಕ್ಕಿಂತ ಹೆಚ್ಚು ಮಾರ್ಗವನ್ನು ವಿದ್ಯುದ್ದೀಕರಣಗೊಳಿಸಿದೆ’ ಎಂದು ಹೇಳಿದರು.
‘ಅಳ್ನಾವರ ರೈಲು ನಿಲ್ದಾಣ ನವೀಕರಣ ಮಾಡಬೇಕು ಎಂಬ ಬೇಡಿಕೆ ಬಹಳ ವರ್ಷಗಳಿಂದ ಇತ್ತು. ಹಿಂದಿನ ಸರ್ಕಾರಗಳು ಕ್ರಮ ವಹಿಸಿರಲಿಲ್ಲ. ಈಗ ಅಮೃತ ಯೋಜನೆಯಡಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಬಾಕಿ ನಿಲ್ದಾಣಗಳ ನವೀಕರಣ ಕಾಮಗಾರಿಯನ್ನು ಮುಂದಿನ ಹಂತದಲ್ಲಿ ಕೈಗೆತ್ತಿಕೊಳ್ಳಲಾಗುವುದು’ ಎಂದರು.
‘ಸೇತುಬಂಧ ಯೋಜನೆಯಡಿ ₹784 ಕೋಟಿ ವೆಚ್ಚದಲ್ಲಿ 22 ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಅಳ್ನಾವಾರ ಪಟ್ಟಣದ ಕೇಳಸೇತುವೆ ವಿಸ್ತರಣೆ, ಅಣ್ಣಿಗೇರಿ ಪಟ್ಟಣದ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯನ್ನು ₹30 ಕೋಟಿ ವೆಚ್ಚದಲ್ಲಿ ನಡೆಸಲಾಗುತ್ತದೆ’ ಎಂದು ವಿವರಿಸಿದರು.
‘ರಾಜ್ಯದಲ್ಲಿ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗೆ ಈಗ ₹ 47 ಸಾವಿರ ಕೋಟಿ ಒದಗಿಸಲಾಗಿದೆ. ಕೆ.ಎಚ್.ಮುನಿಯಪ್ಪ ಅವರು ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದಾಗ 2007–08ನೇ ಸಾಲಿನ ಬಜೆಟ್‌ನಲ್ಲಿ ₹ 900 ಕೋಟಿ ಅನುದಾನವನ್ನು ಕರ್ನಾಟಕಕ್ಕೆ ನೀಡಲಾಗಿತ್ತು. ರಾಜ್ಯಕ್ಕೆ ಹೆಚ್ಚು ಅನುದಾನ ಒದಗಿಸಲಾಗಿದೆ ಎಂದು ಹೆಮ್ಮೆಪಟ್ಟುಕೊಂಡಿದ್ದರು. ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಕಳೆದ ವರ್ಷದ ಬಜೆಟ್‌ನಲ್ಲಿ ರಾಜ್ಯಕ್ಕೆ ₹ 7,261 ಕೋಟಿ ಒದಗಿಸಿದೆ’ ಎಂದು ತಿಳಿಸಿದರು.
‘ದ್ವಿಪಥ ನಿರ್ಮಾಣ ಮತ್ತು ಹೊಸ ಮಾರ್ಗಗಳ ಕಾಮಗಾರಿ ನಡೆಯುತ್ತಿದೆ. ಧಾರವಾಡ – ಬೆಂಗಳೂರು ದ್ವಿಪಥ ಮುಗಿಸಿ ರೈಲುಗಳ ವೇಗ ಹೆಚ್ಚಿಸಲು ಕ್ರಮ ವಹಿಸಲಾಗುವುದು’ ಎಂದರು.
‘ಬಿಜೆಪಿ ಸರ್ಕಾರ ರೈಲು ನಿಲ್ದಾಣಗಳ ಅಭಿವೃದ್ಧಿಗೆ ಆದ್ಯತೆ ನೀಡಿದೆ. ಅಮೃತ ಭಾರತ ಯೋಜನೆಯಡಿ ದೇಶದಲ್ಲಿ 508 ನಿಲ್ದಾಣಗಳ ನವೀಕರಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ದೊಡ್ಡ ನಿಲ್ದಾಣಗಳನ್ನು ವಿಶ್ವದರ್ಜೆ ನಿಲ್ದಾಣವಾಗಿಸುವ, ಒಂದೇ ಸೂರಿನಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ಇತ್ಯಾದಿ ಎಲ್ಲ ವ್ಯವಸ್ಥೆಗೊಳಿಸುವ ನಿಟ್ಟಿನಲ್ಲಿ ತಯಾರಿ ನಡೆದಿದೆ’ ಎಂದು ಹೇಳಿದರು.
ಹುಬ್ಬಳ್ಳಿ ರೈಲ್ವೆ ವಿಭಾಗದ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಮಾಣಪತ್ರ ನೀಡಲಾಯಿತು. ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ್, ಹುಬ್ಬಳ್ಳಿ ವಿಭಾಗದ ವ್ಯವಸ್ಥಾಪಕ ಹರ್ಷ ಖರೆ, ನಾರಾಯಣ ಮೊರೆ, ಭರತ್‌ಕುಮಾರ್ ಜೈನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.