ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲೆ ಮಳೆಗೆ ಜಿಲ್ಲೆ ತತ್ತರ

ಜಿಲ್ಲೆಯಲ್ಲಿ ದಾಖಲೆ ಪ್ರಮಾಣದ ಮಳೆ: ಸ್ಥಿತಿ ನಿರ್ವಹಣೆ ನಿರತ ಜಿಲ್ಲಾಡಳಿತ
Last Updated 8 ಆಗಸ್ಟ್ 2019, 13:49 IST
ಅಕ್ಷರ ಗಾತ್ರ

ಧಾರವಾಡ: ‘ಕಳೆದ ಹತ್ತು ವರ್ಷಗಳಲ್ಲಿ ಆಗದಷ್ಟು ದಾಖಲೆ ಪ್ರಮಾಣದಲ್ಲಿ ಈ ಬಾರಿ ಜಿಲ್ಲೆಯಲ್ಲಿ ಮಳೆಯಾಗಿದ್ದು, ಮಳೆಯಿಂದ ಉಂಟಾಗಿರುವ ಆತಂಕದ ಸ್ಥಿತಿಯನ್ನು ನಿರ್ವಹಿಸಲು ಜಿಲ್ಲಾಡಳಿತ ಹಗಲಿರುಳು ಶ್ರಮಿಸುತ್ತಿದೆ’ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್‌ ಹೇಳಿದರು.

‘ಆ. 1 ರಿಂದ ಈವರೆಗೆ ದಾಖಲೆ ಪ್ರಮಾಣದಲ್ಲಿ (154 ಮಿ.ಮೀ.) ಮಳೆಯಾಗಿದೆ. ಬುಧವಾರ ಒಂದೇ ದಿನ 121 ಮಿ.ಮೀ. ಮಳೆಯಾಗಿದ್ದು, ವಾಡಿಕೆಗಿಂತ ಈ ಬಾರಿ 5 ಪಟ್ಟು ಹೆಚ್ಚು ಮಳೆಯಾಗಿದೆ. ಹೀಗಾಗಿ ನಗರ ಹಾಗೂ ಗ್ರಾಮೀಣ ಪ್ರದೇಶವೆನ್ನದೆ ಬಹಳಷ್ಟು ಪ್ರದೇಶಗಳು ಜಲಾವೃತಗೊಂಡಿವೆ’ಎಂದು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಹೀಗಾಗಿ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ. ಇನ್ನು ಪ್ರವಾಹ ಕುರಿತು ವಾಟ್ಸ್‌ಪ್ ಮೂಲಕವೇ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಸಾಗಿದೆ.ನಿರಾಶ್ರಿತರ ಆಶ್ರಯಕ್ಕಾಗಿ ಈಗಾಗಲೇ ಜಿಲ್ಲೆಯಲ್ಲಿ 35 ಪುನರ್ವಸತಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದ್ದು, ಅಗತ್ಯ ಬಿದ್ದರೆ ಇನ್ನೂ ಹೆಚ್ಚಿನ ಕೇಂದ್ರಗಳನ್ನು ತೆರೆಯಲಾಗುವುದು’ ಎಂದರು.

‘ಜಿಲ್ಲೆಯಲ್ಲಿ 1232 ಮನೆಗಳು ಭಾಗಶಃ ಕುಸಿದಿದ್ದು, 13 ಜಾನುವಾರುಗಳು ಮೃತಪಟ್ಟಿವೆ. ಪ್ರವಾಹ ಪರಿಹಾರ ಕಾರ್ಯಕ್ಕಾಗಿ ಪ್ರತಿ ತಾಲ್ಲೂಕು ತಹಶೀಲ್ದಾರ್ ಖಾತೆಯಲ್ಲಿ ₹50 ಲಕ್ಷ ಅನುದಾನವಿದೆ. ಹಣದ ಕೊತರೆ ಎದುರಾಗಿಲ್ಲ.ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಳೆ ಬೀಳುವ ಸಾಧ್ಯತೆ ಇದ್ದು, ಕೆರೆ, ಹಳ್ಳ ಹಾಗೂ ತಗ್ಗು ಪ್ರದೇಶಗಳ ಬಳಿ ತೆರಳದಂತೆ ಜನರಿಗೆ ಸೂಚನೆ ನೀಡಲಾಗಿದೆ’ ಎಂದು ಅವರು ಹೇಳಿದರು.

ಅಳ್ನಾವರ ತಾಲ್ಲೂಕಿನಲ್ಲಿ ದಾಖಲೆ ಮಳೆ

‘ಅಳ್ನಾವರ ತಾಲ್ಲೂಕಿನಲ್ಲಿ ಹೆಚ್ಚು ಮಳೆಯಾಗಿದ್ದು, ಹೂಲಿಕೆರೆ, ಡವಗಿ ನಾಲಾ ಸಂಪೂರ್ಣ ಭರ್ತಿಯಾಗಿವೆ. ಖಾನಾಪುರ ಭಾಗದಿಂದಲೂ ನೀರು ಹರಿದು ಬರುತ್ತಿರುವುದರಿಂದ ಅಳ್ನಾವರ ಭಾಗಕ್ಕೆ ಹೆಚ್ಚಿನ ತೊಂದರೆಯಾಗಿದೆ. ಹೀಗಾಗಿ ಹೂಲಿಕೆರೆ ಒಡ್ಡು ಒಡೆಯದಂತೆ ಮುಂಜಾಗೃತಾ ಕ್ರಮ ಕೈಗೊಂಡು, ಹೆಚ್ಚುವರಿ ನೀರನ್ನು ಕೋಡಿ ಮೂಲಕ ಹೊರ ಹೋಗುವಂತೆ ವ್ಯವಸ್ಥೆ ಮಾಡಲಾಗಿದೆ. ಸ್ಥಳದಲ್ಲಿ ನೋಡಲ್ ಅಧಿಕಾರಿ, ಸಣ್ಣ ನೀರಾವರಿ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಆಧಿಕಾರಿಗಳು ಹಾಜರಿದ್ದು, ಪರಿಸ್ಥಿತಿ ನಿಭಾಯಿಸುತ್ತಿದ್ದಾರೆ’ ಎಂದು ಅವರು ಹೇಳಿದರು.

ಉಕ್ಕಿಹರಿಯುತ್ತಿದೆ ಬೆಣ್ಣಿಹಳ್ಳ, ತುಪ್ಪರಿಹಳ್ಳ

‘ಬುಧವಾರದವರೆಗೂ ನವಲಗುಂದ ತಾಲ್ಲೂಕಿನ ಬೆಣ್ಣೆ ಹಳ್ಳದಿಂದ ಸಮಸ್ಯೆಯಾಗಿರಲಿಲ್ಲ. ಇದೀಗ ಹಳ್ಳ ಉಕ್ಕಿ ಹರಿಯುತ್ತಿದ್ದು, ಸುರಕ್ಷತಾ ಕ್ರಮ ಕೈಗೊಂಡು, ಯಾವುದೇ ಜೀವ ಹಾನಿಯಾಗದಂತೆ ಎಚ್ಚರಿಕೆವಹಿಸಲಾಗಿದೆ. ಬೆಣ್ಣೆಹಳ್ಳದಿಂದ 15 ಗ್ರಾಮಗಳು ಮತ್ತು ತುಪ್ಪರಿಹಳ್ಳದಿಂದ ಎರಡು ಹಳ್ಳಿಗಳು ಬಾಧಿತವಾಗುವ ಸಂಭವವಿದ್ದು, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಚೋಳನ್ ತಿಳಿಸಿದರು.

‘ಮಳೆಯಿಂದ ಸಾಂಕ್ರಾಮಿಕ ರೋಗಗಳು ಹರಡದಂತೆ ಸಂಚಾರಿ ಆರೋಗ್ಯ ತಂಡಗಳನ್ನು ರಚಿಸಿ ಕ್ಷೇತ್ರಗಳಿಗೆ ಕಳುಹಿಸಲಾಗಿದೆ. ಪ್ರತಿ ದಿನ ಪರಿಹಾರ ಕೇಂದ್ರಗಳಲ್ಲಿನ ಜನರ ಆರೋಗ್ಯ ತಪಾಸಣೆ ಮಾಡಿ ಉಚಿತವಾಗಿ ಔಷಧಿ ವಿತರಿಸಲಾಗುತ್ತಿದೆ. ಅಗತ್ಯವಾದರೆ ಖಾಸಗಿ ವೈದ್ಯರ ಸೇವೆ ಸಹ ಬಳಸಿಕೊಳ್ಳಲಾಗುವುದು’ ಎಂದರು.

ಜಿಲ್ಲಾ ಪಂಚಾಯ್ತಿ ಸಿಇಒ ಡಾ. ಬಿ.ಸಿ. ಸತೀಶ್, ಹೆಚ್ಚುವರಿ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಪ್ರೊಬೇಷನರಿ ಐಎಎಸ್ ಅಧಿಕಾರಿ ಆಕೃತಿ ಬನ್ಸಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT