ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆಂಗ್ಲ ವ್ಯಾಮೋಹದಿಂದ ಕನ್ನಡಕ್ಕೆ ಹಿನ್ನಡೆ ಬೇಡ: ಸಮ್ಮೇಳನಾಧ್ಯಕ್ಷ ಈರಣ್ಣ ಅಗಳಗಟ್ಟಿ

ಅಳ್ನಾವರ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನ
Last Updated 26 ಫೆಬ್ರುವರಿ 2021, 16:17 IST
ಅಕ್ಷರ ಗಾತ್ರ

ಅಳ್ನಾವರ (ಡಾ. ಪಾಟೀಲಪುಟ್ಟಪ್ಪನವರ ವೇದಿಕೆ): ‘ಮಾತೃಭಾಷೆ ಕನ್ನಡದ ಬಗ್ಗೆ ಎಲ್ಲರಲ್ಲಿಯೂ ಅಭಿಮಾನ ಉಕ್ಕಿ ಹರಿಯಬೇಕು. ಆಂಗ್ಲ ಭಾಷೆಯ ಮೇಲಿನ ವ್ಯಾಮೋಹದಿಂದಾಗಿ ಕನ್ನಡಕ್ಕೆ ಹಿನ್ನಡೆಯಾಗಬಾರದು. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿಯೂ ಆಂಗ್ಲ ಭಾಷೆಯ ನಡುವೆ ಕನ್ನಡ ನಲುಗುತ್ತಿದೆ ಎಂದುಕವಿ ಹಾಗೂ ಸಮ್ಮೇಳನಾಧ್ಯಕ್ಷ ಈರಣ್ಣ ಅಗಳಗಟ್ಟಿ ಕಳವಳ ವ್ಯಕ್ತಪಡಿಸಿದರು.

ಇಲ್ಲಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದಅಳ್ನಾವರ ತಾಲ್ಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು ‘ಅಪ್ಪ–ಅಮ್ಮ ಎಂಬ ಅಪ್ಪಟ ಕನ್ನಡ ಶಬ್ದ ಬಳಕೆ ದೂರವಾಗಿ ಮಮ್ಮಿ–ಡ್ಯಾಡಿ ಸಂಸ್ಕ್ರತಿ ಆಳವಾಗಿ ಬೇರೂರುತ್ತಿದೆ. ಕನ್ನಡದ ಮಕ್ಕಳ ಗೀತೆಗಳ ಸ್ಥಾನವನ್ನು ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್... ಹಾಡು ಆವರಿಸಿದೆ. ಆಂಗ್ಲ ಭಾಷೆಯ ಶಬ್ದಗಳನ್ನು ಮಕ್ಕಳಿಗೆ ಹೇರುತ್ತಿರುವುದು ದುರದೃಷ್ಟಕರ’ ಎಂದರು.

‘ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ಉತ್ತಮ ಸಂಸ್ಕಾರ ಕೊಟ್ಟು ಭವ್ಯ ಪ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿ ತಾಯಂದಿರ ಮೇಲಿದೆ. ಮಕ್ಕಳಿಗೆ ರಾಮಾಯಣ, ಮಹಾಭಾರತ‌ ಹೇಳಿಕೊಟ್ಟು ಅವರಲ್ಲಿ ಆದರ್ಶಗಳನ್ನು ಬಿತ್ತಬೇಕು.ಶಿಕ್ಷಕರು ಮಕ್ಕಳಲ್ಲಿ ಕನ್ನಡ ಸಾಹಿತ್ಯದ ಅಭಿರುಚಿ ಬೆಳಸಬೇಕು. ಕನ್ನಡ ಭಾಷೆಯ ಶ್ರೀಮಂತಿಗೆ ಹೆಚ್ಚಿಸಲು ಎಲ್ಲರೂ ಕೈ ಜೋಡಿಸಬೇಕು’ ಎಂದರು.

ಭವ್ಯ ಮೆರವಣಿಗೆ: ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆಯುದ್ದಕ್ಕೂ ದಾರಿಯನ್ನು ರಂಗೋಲಿ ಹಾಕಿ ಅಲಂಕರಿಸಲಾಗಿತ್ತು. ಎಲ್ಲಡೆ ಕನ್ನಡದ ಬಾವುಟಗಳು ರಾರಾಜಿಸಿದವು.ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಮಂಗಲಾ ರವಳಪ್ಪನವರ ರಾಷ್ಟ್ರಧ್ವಜವನ್ನು, ಕ.ಸಾ.ಪ‍. ಜಿಲ್ಲಾ ಘಟಕದ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ನಾಡಧ್ವಜವನ್ನು ಮತ್ತು ಬಸವರಾಜ ಮೂಡಬಾಗಿಲ್ ಪರಿಷತ್‌ ಧ್ವಜಾರೋಹಣ ನೆರವೇರಿಸಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಪಿ.ಆರ್. ನಾಗರಾಳ ಸಮ್ಮೇಳನದ ನಿರ್ಣಯಗಳನ್ನು ಮಂಡಿಸಿದರು.

ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷ ನದೀಮ ಕಂಟ್ರ್ಯಾಕ್ಟರ್, ಎಸ್.ಬಿ. ಪಾಟೀಲ, ಗುರುರಾಜ ಸಬನೀಸ್, ಪ್ರವೀಣ ಪವಾರ, ದುಂಡಮ್ಮ ತೇಗೂರ,ನಿಂಗಪ್ಪ ಬೇಕ್ವಾಡಕರ, ಪ್ರಕಾಶ ಉಡಕೇರಿ, ಶಿವಾನಂದ ಬಾವಿಕಟ್ಟಿ, ಲತಾ ಬಿಜಾಪೂರ,ಐ.ಬಿ. ಶೀಲವಂತರಮಠ, ಬೆಣಚಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸಂದೀಪ ಪಾಟೀಲ, ಕಡಬಗಟ್ಟಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ರಸೂಲಸಾಬ ಡೆಂಕೆವಾಲೆ, ಹಸನಅಲಿ ಶೇಖ, ಯಲ್ಲಾರಿ ಹುಬ್ಳೀಕರ,ರಮೇಶ ಕುನ್ನೂರಕರ, ಅಮೂಲ ಗುಂಜೀಕರ, ರೇಶ್ಮಿ ತೇಗೂರ, ನೇತ್ರಾವತಿ ಕಡಕೋಳ, ಭಾಗ್ಯವತಿ ಕುರುಬರ ಇದ್ದರು.

***

ಹಳ್ಳಿಗಳು ತಮ್ಮ ಮೂಲ ಸ್ವರೂಪ ಕಳೆದುಕೊಂಡು ಆಧುನಿಕತೆಯಿಂದ ರಾರಾಜಿಸುತ್ತಿದೆ. ಮಾನವೀಯತೆ ಆಧಾರದ ಮೇಲೆ ಮೂಲ ಸಮಾಜ ಕಟ್ಟಬೇಕು.

- ಪ್ರೊ. ರಾಘವೇಂದ್ರ ಪಾಟೀಲ,ಬೆಳಗಾವಿಯ ಬೆಟಗೇರಿ ಕೃಷ್ಣ ಟ್ರಸ್ಟ್ ಅಧ್ಯಕ್ಷ

***

ಕನ್ನಡ ಸಾಹಿತ್ಯದ ಪರಂಪರೆ ದೊಡ್ಡದು. ಕನ್ನಡ ಸಾಹಿತ್ಯದಲ್ಲಿ ಹಲವಾರು ಗಟ್ಟಿತನದ ಮಾತುಗಳಿವೆ. ಅದನ್ನು ಅಪ್ಪಿಕೊಳ್ಳಬೇಕು. ಕನ್ನಡ ಮನೆಗಳಾಗಿ ಪರಿವರ್ತನೆ ಆಗಬೇಕು.

- ಡಾ. ಬಸವರಾಜ ಮೂಡಬಾಗಿಲ್‌,ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ

***

ಸಮ್ಮೇಳನದ ನಿರ್ಣಯಗಳು

ಕನ್ನಡ ಸಾಹಿತ್ಯ ಭವನ ನಿರ್ಮಿಸಬೇಕು.

ಗಡಿ ಭಾಗದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸಬೇಕು.

ಸ್ಥಳೀಯ ಜನಪದ ಕಲೆ ಮತ್ತು ಸಾಹಿತ್ಯದ ಕುರಿತು ಸಂಶೋಧನೆ ಹಾಗೂ ಅಧ್ಯಯನಕ್ಕೆ ಒತ್ತು ನೀಡುವುದು.

ಸ್ಥಳೀಯ ಯುವ ಲೇಖಕರಿಗೆ ವೇದಿಕೆ ಒದಗಿಸಿ ಅವರನ್ನು ಬೆಳಕಿಗೆ ತರುವದು.

ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಕನ್ನಡವನ್ನು ಕಡ್ಡಾಯಗೊಳಿಸುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT