ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಕಿತರ ಅಸಹಾಯಕತೆ ದುರುಪಯೋಗ ಬೇಡ

ಖಾಸಗಿ ಆಸ್ಪತ್ರೆ ಆಡಳಿತ ಮಂಡಳಿಗಳೊಂದಿಗೆ ಸಭೆ ನಡೆಸಿದ ಜೋಶಿ, ಶೆಟ್ಟರ್
Last Updated 30 ಏಪ್ರಿಲ್ 2021, 13:48 IST
ಅಕ್ಷರ ಗಾತ್ರ

ಧಾರವಾಡ: ‘ಖಾಸಗಿ ಆಸ್ಪತ್ರೆಗಳು ಕೋವಿಡ್ ಸೋಂಕಿತರ ಅಸಹಾಯಕತೆಯನ್ನೇ ಬಂಡವಾಳ ಮಾಡಿಕೊಂಡು, ಸರ್ಕಾರ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚಿನ ಮೊತ್ತ ಪಾವತಿಸುವಂತೆ ಒತ್ತಡ ಹೇರಬಾರದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.

ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಹಾಗೂ ಅಲ್ಲಿಗೆ ನೇಮಕಗೊಂಡಿರುವ ನೋಡಲ್ ಅಧಿಕಾರಿಗಳ ಸಭೆಯನ್ನು ಶುಕ್ರವಾರ ನಡೆಸಿ ಅವರು ಮಾತನಾಡಿದರು.

‘ಕೋವಿಡ್–19 ಸೋಂಕು ಹೆಚ್ಚಾಗುತ್ತಿದ್ದಂತೆ ಬಹಳಷ್ಟು ಜನ ತೊಂದರೆಗಳಿಗೆ ಸಿಲುಕಿದ್ದಾರೆ. ಕೆಲವರು ನೇರವಾಗಿ ಆಸ್ಪತ್ರೆಗೆ ದಾಖಲಾಗಿ, ನಂತರ ವೆಚ್ಚ ಭರಿಸಲು ಕಷ್ಟಪಡುತ್ತಿದ್ದಾರೆ. ಅಂಥವರ ನೆರವಿಗಾಗಿ ಸರ್ಕಾರ ಉಚಿತ ಚಿಕಿತ್ಸೆ ಹಾಗೂ ಇತರ ಅನೇಕ ಕ್ರಮಗಳನ್ನು ಕೈಗೊಂಡಿದೆ. ಇಂಥ ಕಷ್ಟದ ಸಮಯದಲ್ಲಿ ಖಾಸಗಿ ಆಸ್ಪತ್ರೆಗಳು ಜನರು ಮತ್ತು ಸರ್ಕಾರಕ್ಕೆ ನೆರವಾಗಬೇಕು. ಜತೆಗೆ ವೈದ್ಯಕೀಯ ವೃತ್ತಿಯ ಘನತೆ ಹೆಚ್ಚಿಸಬೇಕು’ ಎಂದರು.

‘ಖಾಸಗಿ ಆಸ್ಪತ್ರೆಗಳಿಗೆ ಅಗತ್ಯ ಸಹಕಾರ ನೀಡಲು ಸರ್ಕಾರವು ನಿರಂತರವಾಗಿ ಶ್ರಮಿಸುತ್ತಿದೆ. ಆಸ್ಪತ್ರೆಗಳು ಬಯಸಿದಲ್ಲಿ ಅಗತ್ಯ ಪೊಲೀಸ್ ಬಂದೋಬಸ್ತ್ ನೀಡಲು ಸಿದ್ಧ. ಎಲ್ಲರೂ ಸೇರಿ ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಿಸಲು ಮತ್ತು ಈ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕ್ರಮ ವಹಿಸಲು ಪರಸ್ಪರ ಸಹಕಾರದಿಂದ ಕೈಜೋಡಿಸಬೇಕು’ ಎಂದು ಶೆಟ್ಟರ್ ಹೇಳಿದರು.

‘ಪ್ರತಿ ಖಾಸಗಿ ಆಸ್ಪತ್ರೆಯು ಶೇ 50ರಷ್ಟು ಹಾಸಿಗೆ ಮತ್ತು ಇತರ ಸೌಲಭ್ಯ ಮೀಸಲಿಡಬೇಕು. ಬಹುತೇಕ ಆಸ್ಪತ್ರೆಗಳು ಇದನ್ನು ಬೆಂಬಲಿಸಿದ್ದರೂ, ಕೆಲವು ಖಾಸಗಿ ಆಸ್ಪತ್ರೆಗಳು ಸೋಂಕಿತರನ್ನು ದಾಖಲಿಸಿಕೊಳ್ಳದೆ ತಿರಸ್ಕರಿಸುತ್ತಿರುವುದು ಮತ್ತು ದಾಖಲಾತಿ ಮಾಡಿಕೊಳ್ಳುವಲ್ಲಿ ನಿಧಾನಗತಿಯನ್ನು ಅನುಸರಿಸುತ್ತಿರುವುದು ಕಂಡುಬಂದಿದೆ. ಹೀಗಿದ್ದರೂ ಖಾಸಗಿ ಆಸ್ಪತ್ರೆಗಳೊಂದಿಗೆ ಮೊದಲ ಹಂತದಲ್ಲಿ ಚರ್ಚೆ ಮೂಲಕ ಸಹಕಾರ ಪಡೆಯಲು ಯತ್ನಿಸಲಾಗುತ್ತಿದೆ. ಹೀಗಿದ್ದರೂ ಸಹಕಾರ ನೀಡಿದ್ದರೆ ಜಿಲ್ಲಾಡಳಿತವು ಕಾನೂನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲಿದೆ’ ಎಂದು ಎಚ್ಚರಿಸಿದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ‘ಇಡೀ ರಾಷ್ಟ್ರವೇ ಕೋವಿಡ್ ನಿರ್ವಹಣೆಯಲ್ಲಿ ಶಕ್ತಿಮೀರಿ ಶ್ರಮಿಸುತ್ತಿದೆ. ಇಂಥ ಸಂಕಷ್ಟ ಸಂದರ್ಭದಲ್ಲಿ ಆದಾಯ, ಲಾಭ ಲೆಕ್ಕಿಸದೇ ವೈದ್ಯವೃತ್ತಿಯಲ್ಲಿರುವ ಪ್ರತಿಯೊಬ್ಬರೂ ಮಾನವೀಯತೆಯಿಂದ ಸಮಾಜಕ್ಕೆ ನೆರವಾಗಬೇಕು. ಸರ್ಕಾರ ಕಾಲಕಾಲಕ್ಕೆ ತೆಗೆದುಕೊಳ್ಳುವ ನಿರ್ಧಾರಗಳಿಗೆ ಬೆಂಬಲ ನೀಡಿ, ಸರ್ಕಾರದ ಕಾರ್ಯಗಳಿಗೆ ಕೈಜೋಡಿಸಬೇಕು’ ಎಂದರು.

‘ಸರ್ಕಾರ ಪ್ರಕಟಿಸಿರುವ ಚಿಕಿತ್ಸಾ ದರವನ್ನು ಸಾರ್ವಜನಿಕರಿಗೆ ಎದ್ದು ಕಣುವಂತೆ ಆಸ್ಪತ್ರೆಯ ಪ್ರಮುಖ ಸ್ಥಳದಲ್ಲಿ ಪ್ರಕಟಿಸಬೇಕು ಎಂದು ಈ ಹಿಂದೆಯೇ ಸೂಚಿಸಲಾಗಿದೆ. ಇವುಗಳನ್ನು ಪಾಲಿಸದ ಆಸ್ಪತ್ರೆಗಳ ವಿರುದ್ಧ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರಿ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ’ ಎಂದು ಹೇಳಿದರು.

‘ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯಡಿ ಕಿಮ್ಸ್ ಆಸ್ಪತ್ರೆ ಆವರಣದಲ್ಲಿ ಒಂದು ಸಾವಿರ ಹಾಸಿಗೆಗಳ ನೂತನ ಘಟಕ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಜಿಲ್ಲಾ ಆಸ್ಪತ್ರೆಗೆ ಕೇಂದ್ರದಿಂದ ಬೇರೆಬೇರೆ ಸಂದರ್ಭದಲ್ಲಿ ಅನುದಾನ ಬಂದಿದೆ. ಇದೀಗ ತಾಯಿ ಮತ್ತು ಶಿಶು ಆರೈಕೆ ಆಸ್ಪತ್ರೆಗೆ ₹26ಕೋಟಿ ನೀಡಲಾಗಿದೆ. ಪಿಎಂ ಕೇರ್‌ ನಿಧಿಯಿಂದ ವೆಂಟಿಲೇಕಟರ್ಸ್‌ಗಳು ಮೊದಲ ಹಂತದಲ್ಲಿ ಬಂದಿವೆ. 2ನೇ ಹಂತದಲ್ಲಿಯೂ ಅಗತ್ಯವಿರುವ ವೆಂಟಿಲೇಟರ್‌ಗಳನ್ನು ಪೂರೈಸಲಾಗುವುದು’ ಎಂದರು.

ಜಿಲ್ಲಾಧಿಕಾರಿ ನಿತೇಶ್ ಕೆ. ಪಾಟೀಲ ಮಾತನಾಡಿ, ‘ಸರ್ಕಾರದ ನಿರ್ದೇಶನ ಪಾಲಿಸದ, ಚಿಕಿತ್ಸೆಗೆ ಶಿಫಾರಸು ಮಾಡಿರುವ ಸೋಂಕಿತರಿಗೆ ಚಿಕಿತ್ಸೆ ನೀಡಲು ನಿರಾಕರಿಸುವ, ದಾಖಲಾಗಿರುವ ಕೋವಿಡ್ ಸೋಂಕಿತರಿಗೆ ತಪ್ಪು ಮಾಹಿತಿ ನೀಡುವ, ಸರ್ಕಾರ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ದರ ವಸೂಲು ಮಾಡುವ ಕುರಿತು ದೂರುಗಳು ಬಂದಲ್ಲಿ ಜಿಲ್ಲಾಡಳಿತವು ಪರಿಶೀಲನೆ ನಡೆಸಿ ಕಟ್ಟುನಿಟ್ಟಿನ ಕಾನೂನು ಕ್ರಮ ತೆಗೆದುಕೊಳ್ಳಲಿದೆ’ ಎಂದರು.

ಜಿಲ್ಲಾ ಪಂಚಾಯ್ತಿ ಸಿಇಒ ಡಾ. ಬ.ಸುಶೀಲಾ, ಪೊಲೀಸ್ ಆಯುಕ್ತ ಲಾಬೂರಾಮ್, ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ, ಮಹಾಗರ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ದೀಪಿಕಾ ಬಾಜಪೇಯಿ, ಡಾ. ಬಿ.ಗೋಪಾಲಕೃಷ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT