ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಾಹ್ಮಣ, ವೇದ-ಉಪನಿಷತ್ ಅವಹೇಳನವು ಭಾರತೀಯರ ನಾಶಕ್ಕೆ ಮುಹೂರ್ತ: ನಾರಾಯಣಾಚಾರ್ಯ

Last Updated 17 ಜುಲೈ 2021, 9:05 IST
ಅಕ್ಷರ ಗಾತ್ರ

ಹುಬ್ಬಳ್ಳಿ: 'ಇತ್ತೀಚೆಗೆ ಎಲ್ಲೆಡೆ ಬ್ರಾಹ್ಮಣ, ಸಂಸ್ಕೃತ, ವೇದ, ಉಪನಿಷತ್ ಅವಹೇಳನ ನಡೆಯುತ್ತಿದೆ. ಇದು ಭಾರತೀಯರ ನಾಶಕ್ಕೆ ಮುಹೂರ್ತ ಇಟ್ಟ ಹಾಗೆ' ಎಂದು ಡಾ. ಕೆ.ಎಸ್. ನಾರಾಯಣಾಚಾರ್ಯ ಅಭಿಪ್ರಾಯಪಟ್ಟರು.

ಬುಕ್ ಬ್ರಹ್ಮ ಹಾಗೂ ಸಾಹಿತ್ಯ ಪ್ರಕಾಶನ ಶನಿವಾರ ಆನ್'ಲೈನ್'ನಲ್ಲಿ ಹಮ್ಮಿಕೊಂಡಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

'ಮಹಾಭಾರತ, ರಾಮಾಯಣವನ್ನು ಸಾಹಿತಿ ಎಂದೆನಿಸಿಕೊಂಡವರು ಅಳತೆಗೋಲನ್ನಾಗಿ ಇಟ್ಟುಕೊಂಡಿಲ್ಲ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿಯೊಬ್ಬ ರಾವಣ, ಕುಂಭಕರ್ಣ ಮೃತಪಟ್ಟ ನಂತರ ಲವ-ಕುಶರಾಗಿ ಹುಟ್ಟಿದರು ಎಂದು ಬರೆಯುತ್ತಾನೆ. ಕಾಳಿದಾಸ, ಬಾಸ ಕವಿಗಳ ಕೃತಿಗಳನ್ನೇ ತಿರುಚಿ, ಮನಸ್ಸಿಗೆ ಬಂದ ಹಾಗೆ ಕೆಲವರು ಬರೆಯುತ್ತಿದ್ದಾರೆ. ಸಾಹಿತ್ಯಕಾರನಿಗೆ ಪೆನ್ನು, ತುಟಿಯಲ್ಲಿ ಜವಾಬ್ದಾರಿ ಇರಬೇಕು. ಅಧ್ಯಯನಶೀಲನಾಗಿ, ಚಿಂತನಾ ಪ್ರವೃತ್ತಿ ಬೆಳೆಸಿಕೊಳ್ಳಬೇಕು' ಎಂದು ಹೇಳಿದರು.

'ನಮ್ಮಲ್ಲಿ ಕೆಲವರು ವೇದ, ಉಪನಿಷತ್ ಓದುತ್ತಾರೆ. ಆದರೆ, ಅದರಲ್ಲಿರುವ ಸೂಕ್ಷ್ಮತೆ ಅರ್ಥ ಮಾಡಿಕೊಳ್ಳುವುದಿಲ್ಲ. ಇದರಿಂದ ಅವುಗಳಿಗೆ ನಿರೀಕ್ಷಿತ ಸ್ಥಾನ ದೊರಕುತ್ತಿಲ್ಲ. ಹಾಗೆಯೆ, ಮಹಾಭಾರತ, ರಾಮಾಯಣ ಅಂಗೈಯಲ್ಲಿ ಇದ್ದರೂ, ಧರ್ಮ, ಸಂಸ್ಕೃತಿ, ಪರಂಪರೆ ಎಂದು ಎಲ್ಲೇಲ್ಲೋ ಸುತ್ತುತ್ತಾರೆ. ನಮ್ಮದೇ ಸಾಹಿತ್ಯವನ್ನು ನಾವು ವಿಮರ್ಶಕ ದೃಷ್ಟಿಯಿಂದ ನೋಡುತ್ತಿಲ್ಲ. ಅದನ್ನು ಅರ್ಥೈಸಿಕೊಂಡು ವಿಮರ್ಶೆ ಮಾಡಬೇಕು. ಇಲ್ಲದಿದ್ದರೆ ಕಾವ್ಯಕ್ಕೆ ಅಪಚಾರವಾಗುತ್ತದೆ' ಎಂದು ಅಭಿಪ್ರಾಯಪಟ್ಟರು.

ಕೃತಿ ಬಿಡುಗಡೆ ಮಾಡಿ ಮಾತನಾಡಿದ ಸಾಹಿತಿ ಬಾಬು ಕೃಷ್ಣಮೂರ್ತಿ, 'ನಹುಷ, ಊರ್ವಶಿ ಪೂರೂರವ(ಕಾದಂಬರಿ) ಮತ್ತು ಅಗ್ನಿಹೋತ್ರ ತತ್ವ(ಧಾರ್ಮಿಕ) ಕೃತಿ ಭಿನ್ನ ಕೃತಿಗಳಾಗಿದ್ದು, ಓದುವವರಿಗೆ ತುಸು ಜಟಿಲ ಎಂದೆನಿಸಬಹುದು. ಆದರೆ, ಅದರಲ್ಲಿಯ ಸೂಕ್ಷ್ಮತೆ ಹೊಸ ವಿಚಾರಕ್ಕೆ ನಾಂದಿ ಹಾಡುತ್ತದೆ. ಸಂಸ್ಕೃತ ಸಾಹಿತ್ಯದ ಅಂತರಾತ್ಮ ಅರ್ಥಮಾಡಿಕೊಂಡಿರುವ ನಾರಾಯಣಾಚಾರ್ಯರು, ಸತ್ಯಾನ್ವೇಷಣೆ ಮಾಡಿ ಪ್ರಾಮಾಣಿಕ ದರ್ಶನದ ಹಿನ್ನೆಲೆಯಲ್ಲಿ ಕೃತಿ ರಚಿಸಿದ್ದಾರೆ. ನಹುಷ ಕಾದಂಬರಿ ವಿವಾದಕ್ಕೆ, ಚರ್ಚೆಗೆ ಇಂಬು ನೀಡಬಹುದು. ಅದನ್ನು ಓದುತ್ತ ಹೋದಂತೆ ಹೊಸ ಕಲ್ಪನೆ ಮೂಡುತ್ತದೆ. ತುಲಾನತ್ಮಕ ಅಧ್ಯಯನಕ್ಕೆ ಯೋಗ್ಯವಾದ ಕೃತಿ ಇದಾಗಿದ್ದು, ಮೂಲ ಆಕರಕ್ಕೆ ಧಕ್ಕೆ ಬರದ ರೀತಿಯಲ್ಲಿ ರಚಿಸಿದ್ದಾರೆ' ಎಂದರು.

ಸಾಹಿತ್ಯ ಪ್ರಕಾಶನದ ಸಂಸ್ಥಾಪಕ ಎಂ.ಎ. ಸುಬ್ರಹ್ಮಣ್ಯ, ವಾಗ್ದೇವಿ ವಿಲಾಸ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಹರೀಶ ಇದ್ದರು.

ಭಾರತೀಯ ಸಂಸ್ಕೃತಿ ಅವಸಾನದತ್ತ ಇರುವ ಕಾಲಘಟ್ಟದಲ್ಲಿ ಈ ಮೂರು ಕೃತಿ ಕೆಲವರ ಕಣ್ತೆರೆಸಬಹುದು.

-ಡಾ. ಕೆ.ಎಸ್. ನಾರಾಯಣಾಚಾರ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT