ಶುಕ್ರವಾರ, ಸೆಪ್ಟೆಂಬರ್ 17, 2021
29 °C
ಮಹಾನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಲ್ತಾಫ ಹಳ್ಳೂರ ಹೇಳಿಕೆ

ತಪ್ಪು ನಿರ್ಧಾರಗಳಿಂದ ಪಕ್ಷಕ್ಕೆ ಹಿನ್ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ‘ಟಿಕೆಟ್ ಹಂಚಿಕೆಗೆ ಸಂಬಂಧಿಸಿದ ತಪ್ಪು ನಿರ್ಧಾರಗಳಿಂದಾಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿದೆ. ಆದರೂ, ಕಳೆದ ಚುನಾವಣೆಯಲ್ಲಿ 22 ಸ್ಥಾನ ಗೆದ್ದ ಪಕ್ಷವು ಈ ಬಾರಿ 33 ಕಡೆ ಗೆಲುವು ಸಾಧಿಸಿದೆ’ ಎಂದು ಮಹಾನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಲ್ತಾಫ ಹಳ್ಳೂರ ಹೇಳಿದರು.

‘ಜಿಲ್ಲಾ ಸಮಿತಿ ಅಂತಿಮಗೊಳಿಸಿದ ಅಭ್ಯರ್ಥಿಗಳಿಗೆ ಟಿಕೆಟ್ ಕೊಟ್ಟಿದ್ದರೆ, ಬಹುಮತದಷ್ಟು ಸ್ಥಾನಗಳು ಬರುತ್ತಿದ್ದವು. ಆದರೆ, ಸಮಿತಿ ಮೀರಿ ಕೆಲವರು ವರಿಷ್ಠರ ಪ್ರಭಾವ ಬಳಸಿ ಟಿಕೆಟ್ ಗಿಟ್ಟಿಸಿಕೊಂಡರು. ಇಷ್ಟವಿಲ್ಲದಿದ್ದರೂ ‘ಬಿ’ ಫಾರಂ ಕೊಡುವ ಅನಿವಾರ್ಯತೆ ಸೃಷ್ಟಿಯಾಯಿತು. ಹಾಗಾಗಿ, ಗೆಲ್ಲುವ ಅಭ್ಯರ್ಥಿಗಳು ಪಕ್ಷದ ವಿರುದ್ಧ ಬಂಡಾಯವೆದ್ದು ಪಕ್ಷೇತರರಾಗಿ ಸ್ಪರ್ಧಿಸಿದರು. ಇದರ ಲಾಭವನ್ನು ಬಿಜೆಪಿ ಸೇರಿದಂತೆ ಇತರ ಪಕ್ಷಗಳು ಪಡೆದವು’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಧಿಕಾರಿಗಳ ತಾರತಮ್ಯ:

‘ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಪಕ್ಷದ ಮುಖಂಡರು ಹಲವರು ನಗರಕ್ಕೆ ಬಂದಾಗ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಅಧಿಕಾರಿಗಳು ಅವಕಾಶ ನೀಡಲಿಲ್ಲ. ಆದರೆ, ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಬಂದಾಗ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಪ್ರಚಾರಕ್ಕೆ ಅವಕಾಶ ನೀಡಿದರು. ಆ ಪಕ್ಷ ಬಿಜೆಪಿಯ ‘ಬಿ’ ಟೀಂ ಆಗಿರುವುದೇ ಇದಕ್ಕೆ ಕಾರಣ. ಅಧಿಕಾರಿಗಳ ತಾರತಮ್ಯ ನೀತಿಯೂ ಪಕ್ಷದ ಹಿನ್ನಡೆಗೆ ಕಾರಣವಾಯಿತು’ ಎಂದು ಆರೋಪಿಸಿದರು.

‘ಪಕ್ಷದ ವಿರುದ್ಧ ಬಂಡಾಯವೆದ್ದವರ ಉಚ್ಚಾಟನೆಯಲ್ಲಿ ನನ್ನ ಪಾತ್ರವಿಲ್ಲ. ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿರುವ ಅವರನ್ನು ಮರಳಿ ಪಕ್ಷಕ್ಕೆ ಸ್ವಾಗತಿಸಲಾಗುವುದು. ಪಾಲಿಕೆಯಲ್ಲಿ ಅಧಿಕಾರ ಹಿಡಿಯುವ ಲೆಕ್ಕಾಚಾರ ಆರಂಭವಾಗಿದ್ದು, ಅಗತ್ಯ ಬಿದ್ದರೆ ಪಕ್ಷೇತರರು ಹಾಗೂ ಎಐಎಂಐಎಂ ವಿಜೇತರನ್ನು ಸೆಳೆಯಲಾಗುವುದು’ ಎಂದರು.

ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ ಮಾತನಾಡಿ, ‘ನನ್ನ ವಿಷಯದಲ್ಲಿ ಅನಗತ್ಯವಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಎಳೆದು ತರಲಾಗುತ್ತಿದೆ. ಸ್ಥಳೀಯ ರಾಜಕಾರಣಕ್ಕೂ ಅವರಿಗೂ ಸಂಬಂಧವಿಲ್ಲ. ಸಾಮೂಹಿಕ ನಾಯಕತ್ವದಲ್ಲೇ ಚುನಾವಣೆ ಎದುರಿಸಿದ್ದೇವೆ. ನನ್ನ ಬ್ಲಾಕ್‌ ವ್ಯಾಪ್ತಿಯ 13 ವಾರ್ಡ್‌ಗಳ ಪೈಕಿ 6ರಲ್ಲಿ ಪಕ್ಷವು ಗೆಲುವು ಸಾಧಿಸಿದೆ’ ಎಂದರು.

‘ಸಮುದಾಯದ ಒತ್ತಡವಿತ್ತು’

‘71ನೇ ವಾರ್ಡ್‌ನಿಂದ ಮುಸಲ್ಮಾನರಿಗೇ ಟಿಕೆಟ್ ನೀಡಬೇಕೆಂಬ ಒತ್ತಡವಿತ್ತು. ಗಣೇಶ ಟಗರಗುಂಟಿ ಅವರಿಗೆ ಟಿಕೆಟ್ ಕೊಟ್ಟರೆ ಪಕ್ಷಕ್ಕೆ ಹೆಚ್ಚಿನ ಹಾನಿಯಾಗುತ್ತಿತ್ತು. ಹಾಗಾಗಿ, ನನ್ನ ಮಗನಿಗೆ ಟಿಕೆಟ್ ನೀಡಲಾಯಿತು. ಆತನ ಪರವಾಗಿ ಹೆಚ್ಚು ಕೆಲಸ ಮಾಡಲಾಗದಿದ್ದರಿಂದ ಅಲ್ಲಿ ಸೋಲುಂಟಾಯಿತು’ ಎಂದು ಪ್ರಶ್ನೆಯೊಂದಕ್ಕೆ ಅಲ್ತಾಫ ಹಳ್ಳೂರ ಪ್ರತಿಕ್ರಿಯಿಸಿದರು.

‘ಎಐಎಂಐಎಂನಿಂದ ಗೆಲುವು ಸಾಧಿಸಿರುವ ನಜೀರ ಅಹ್ಮದ ಹೊನ್ಯಾಳ ಅವರನ್ನು ಶಾಸಕ ಪ್ರಸಾದ ಅಬ್ಬಯ್ಯ ಮತ್ತು ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಹಿಂದೆ ಪಾಲಿಕೆಯ ನಾಮನಿರ್ದೇಶಿತ ಸದಸ್ಯರನ್ನಾಗಿ ಆಯ್ಕೆ ಮಾಡಿದ್ದರು. ಟಿಕೆಟ್ ಹಂಚಿಕೆ ವಿಷಯದಲ್ಲಿ ಅಸಮಾಧಾನಗೊಂಡ ಅವರು, ಪಕ್ಷ ತೊರೆದು ಎಐಎಂಐಎಂ ಸೇರಿಕೊಂಡರು’ ಎಂದರು.

ಮುಖಂಡರಾದ ಮಹಮದ್ ಷರೀಪ ದರ್ಗದ, ವೀರೇಶ ಹುಂಡಿ ಹಾಗೂ ಶಜಾಮಾನ್ ಮುಜಾಹೀದ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.