ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ | ಶುದ್ಧ ನೀರಿನ ಘಟಕಗಳಿಗೆ ಗ್ರಹಣ

Published 17 ಜುಲೈ 2023, 4:35 IST
Last Updated 17 ಜುಲೈ 2023, 4:35 IST
ಅಕ್ಷರ ಗಾತ್ರ

ಪೂರ್ಣಿಮಾ ಗೊಂದೆನಾಯ್ಕರ

ಹುಬ್ಬಳ್ಳಿ: ಜನರಿಗೆ ಶುದ್ಧ ಕುಡಿಯುವ ನೀರು ದೊರೆಯಲಿ ಎಂಬ ಉದ್ದೇಶದಿಂದ ಕುಡಿಯುವ ನೀರಿನ ಘಟಕಗಳನ್ನು ಜಿಲ್ಲೆಯ ಎಲ್ಲ‌ ತಾಲ್ಲೂಕು, ನಗರ, ಗ್ರಾಮೀಣ ಪ್ರದೇಶಗಳಲ್ಲಿ ಅಳವಡಿಸಲಾಗಿದೆ. ಆದರೆ, ನಿರ್ವಹಣೆ ಕೊರತೆ, ಜನ ನೀರು ಬಳಸದಿರುವುದು, ಕಾಯಿನ್ ಬೂತ್ ಸಮಸ್ಯೆ, ಪೈಪ್‌ಲೈನ್ ಸಮಸ್ಯೆಯಿಂದ ನೀರು ಸಂಗ್ರಹಕ್ಕೆ ತೊಂದರೆ ಸೇರಿ‌ದಂತೆ  ಹಲವು ಕಾರಣಗಳಿಂದ ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಗಿತಗೊಂಡಿವೆ.

ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ದೊರೆಯಬೇಕೆಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‌ಐಐಡಿಎಲ್‌) ಹಾಗೂ ಸಹಕಾರಿ ಸಂಘಗಳ ಸಹಕಾರದೊಂದಿಗೆ ರೂಪಿಸಿದ‌ ಯೋಜನೆಗೆ ಇಂದು ಸರ್ಕಾರ‌, ಆಡಳಿತ ವರ್ಗ ಕಾಳಜಿ ಬೇಕಿದೆ ಎಂದು ಸಾರ್ವಜನಿಕರು ಹೇಳುತ್ತಾರೆ.

ಧಾರವಾಡ ಜಿಲ್ಲೆಯಲ್ಲಿ ಒಟ್ಟು 467 ಕುಡಿಯುವ ನೀರಿನ ಘಟಕಗಳಿವೆ. ಅವುಗಳಲ್ಲಿ 356 ಘಟಕಗಳು ಕಾರ್ಯನಿರ್ವಹಿಸಿದರೆ, 111 ಘಟಕಗಳು ಬಂದ್ ಆಗಿವೆ. 

ನವಲಗುಂದ ತಾಲ್ಲೂಕಿನ ಗ್ರಾಮಸ್ಥರು ಅತಿ ಹೆಚ್ಚು ಶುದ್ಧ ಕುಡಿಯುವ ನೀರನ್ನು ಕುಡಿಯುತ್ತಾರೆ. ನೀರಿನ ಘಟಕಗಳು ದುರಸ್ತಿ ಬಂದರೆ ಅತೀ ಹೆಚ್ಚು ಸಮಯವೆಂದರೂ ನಾಲ್ಕೈದು ದಿನಗಳಲ್ಲಿ ದುರಸ್ತಿ ಮಾಡಿ ಮತ್ತೆ ಕುಡಿಯುವ ನೀರನ್ನು ಪೂರೈಸುತ್ತೇವೆ.
ಪ್ರಕಾಶ್ ಹಾಲಕೇರಿ, ಎನ್‌ಎಎಸ್‌ಐ ಕಂಪನಿ ಮ್ಯಾನೇಜರ್, ಹುಬ್ಬಳ್ಳಿ

ಗ್ರಾಮೀಣ ಪ್ರದೇಶಗಳಲ್ಲೂ ಈ ಸಮಸ್ಯೆ ಬಿಗಡಾಯಿಸಿದ್ದು, ಕೆರೆ, ಕೊಳವೆ ಬಾವಿ‌ ನೀರನ್ನು ನಂಬಿ ಜೀವನ ಮಾಡಬೇಕಿದೆ. ಅಣ್ಣಿಗೇರಿ, ನವಲಗುಂದ, ಕಲಘಟಗಿ, ಕುಂದಗೋಳ, ಅಳ್ನಾವರ,  ಉಪ್ಪಿನಬೇಟಗೆರಿ ತಾಲ್ಲೂಕಿನಲ್ಲೂ ಕುಡಿಯುವ ನೀರಿಗಾಗಿ ಅಲೆದಾಡುವಂತಾಗಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.

‘ಅಣ್ಣಿಗೇರಿಯ ಗ್ರಾಮೀಣ ಪ್ರದೇಶಗಳಲ್ಲಿ ಬಹುತೇಕ ಘಟಕಗಳು ನಿರ್ವಹಣೆ ಇಲ್ಲದೆ ಪಾಳು ಬಿದ್ದಿವೆ. ಪಟ್ಟಣದ ಪಂಪನಗರ ಹಾಗೂ ಎಪಿಎಂಸಿಯಲ್ಲಿರುವ ಘಟಕಗಳು ಇದ್ದು ಇಲ್ಲದಂತಾಗಿವೆ. ಪಟ್ಟಣದಲ್ಲಿ 10 ದಿನಕ್ಕೊಮ್ಮೆ ಬಳಕೆಗೆ ಕುಡಿಯಲು ಪೂರೈಸುವುದರಿಂದ ನೀರು ಶೇಖರಣೆ ಮಾಡಿಟ್ಟುಕೊಳ್ಳಬೇಕಿದೆ ಎಂದು ನಿವಾಸಿಗಳು ಹೇಳುತ್ತಾರೆ.

ಶುದ್ಧ ನೀರಿನ ಘಟಕ ಶೀಘ್ರದಲ್ಲೇ ದುರಸ್ತಿಗೊಳಿಸಬೇಕು. ಘಟಕ ದುರಸ್ತಿ ಆದರೆ ಗ್ರಾಮಕ್ಕೆ ಅಷ್ಟೇ ಅಲ್ಲದೆ ಸುತ್ತಮುತ್ತಲಿನ ನಾಗರಿಕರಿಗೆ ನೀರಿನ ಸಮಸ್ಯೆ ನಿವಾರಣೆ ಆಗಲಿದೆ.
ಶಂಕರಪ್ಪ ಅಂಬಲಿ, ರೈತ ಹೋರಾಟಗಾರ, ಹೆಬ್ಬಾಳ

ನವಲಗುಂದದಲ್ಲಿ ಒಟ್ಟು 66 ಘಟಕಗಳಿದ್ದು, ಪುರಸಭೆ ಬಳಿ 2 ಮತ್ತು ಬಸ್ ಡಿಪೊದಲ್ಲಿ 1 ಘಟಕ ಇದ್ದು, ಬಹುತೇಕ ಶುದ್ಧ ಕುಡಿಯುವ ನೀರಿನ ಘಟಕಗಳು ನಿರ್ವಹಣೆ ಕೊರತೆಯಿಂದ ಕೆಟ್ಟುನಿಂತಿವೆ. ದುರಸ್ತಿ ಮಾಡಿಸಿದರೂ ಪ್ರತಿದಿನ ಒಂದಿಲ್ಲೊಂದು ಕಾರಣಕ್ಕೆ ಘಟಕಗಳು ಬಂದ್ ಆಗುತ್ತವೆ.

ಲಕ್ಷಾಂತರ ಹಣ ಖರ್ಚು ಮಾಡಿ ನಿರ್ಮಿಸಲಾದ ಮಹತ್ವಾಕಾಂಕ್ಷಿ ಈ ಯೋಜನೆಯಲ್ಲಿ ಇಂದು ಯಂತ್ರೋಪಕರಣಗಳು ತುಕ್ಕು ಹಿಡಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇವುಗಳನ್ನು ದುರಸ್ತಿ ಮಾಡಬೇಕಾದ ಗ್ರಾಮ ಪಂಚಾಯಿತಿಗಳು ನಿರ್ಲಕ್ಷ್ಯ ತೋರುತ್ತಿವೆ.

ಗ್ರಾಮೀಣ ಭಾಗದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ನಿರುಪಯುಕ್ತ ವಾಗಿರುವ ಬಗ್ಗೆ ಮಾಹಿತಿ ಬಂದಿದೆ. ದುರಸ್ತಿ ಬಗ್ಗೆ ಕ್ರಮ ವಹಿಸಲಾಗುವುದು. ತ್ವರಿತವಾಗಿ ಸಮಸ್ಯೆ ಬಗೆಹರಿಸಿ ಶೀಘ್ರದಲ್ಲೇ ಜನರಿಗೆ ಶುದ್ಧ ನೀರು ಪೂರೈಸಲಾಗುವುದು
ಭಾಗ್ಯಶ್ರೀ ಜಹಗೀರದಾರ, ಕಾರ್ಯನಿರ್ವಹಣಾಧಿಕಾರಿ, ತಾಲ್ಲೂಕು ಪಂಚಾಯಿತಿ ನವಲಗುಂದ

ಅಳ್ನಾವರ, ಕಲಘಟಗಿ, ಕುಂದಗೋಳ ಪಟ್ಟಣಗಳಲ್ಲೂ ಜನರ ಬಳಕೆ ಇಲ್ಲದ ಕಾರಣ ಘಟಕಗಳು ಸ್ಥಗಿತಗೊಂಡರೆ, ಕೆಲವು ತಾಂತ್ರಿಕ ಸಮಸ್ಯೆಗಳಿಂದ ಬಂದ್ ಆಗಿವೆ.

‘ಶುದ್ಧ ಕುಡಿಯುವ ನೀರಿನ ಘಟಕಗಳು ದುರಸ್ತಿ ಕಂಡು ಬಂದಲ್ಲಿ ಅದಕ್ಕೆ ಸಂಬಂಧಿಸಿದ ಅಧಿಕಾರಿಗಳ ಮೊಬೈಲ್‌ ನಂಬರ್‌ ಫಲಕವನ್ನು ಆಯಾ ಘಟಕಕ್ಕೆ ಅಳವಡಿಸಿದ್ದು, ಕರೆ ಮಾಡಿ ತಿಳಿಸಿದರೆ ಎರಡ್ಮೂರು ದಿನಗಳಲ್ಲಿ ದುರಸ್ತಿ ಕಾರ್ಯ ಕೈಗೊಂಡು ಸಮಸ್ಯೆ ಪರಿಹರಿಸುತ್ತೇವೆ. ಅಲ್ಲದೇ ವಾಟ್ಸ್‌ಆ್ಯಪ್ ಗ್ರೂಪ್ ಮಾಡಿಕೊಂಡಿದ್ದು, ತಕ್ಷಣ ಮಾಹಿತಿ ಹಂಚಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ’ ಎಂದು ಉಪ್ಪಿನಬೇಟಗೇರಿ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರವೀಣ ಬಿರಾದಾರ ತಿಳಿಸಿದರು.

ನಮ್ಮ ಇಲಾಖೆಯಿಂದ 68 ಘಟಕಗಳಿಗೆ ಟೆಂಡರ್ ನೀಡಿ ನಿರ್ವಹಣೆ ಮಾಡಲಾಗುತ್ತಿದೆ. ಕೆಲವೊಂದು ಕಡೆ ವಿವಿಧ ಖಾಸಗಿ ಕಂಪನಿಯವರು ನಿರ್ಮಿಸಿದ್ದಾರೆ. ಅವುಗಳು ಕೂಡಾ ಬರುವ ದಿನಗಳಲ್ಲಿ ನಮ್ಮ ವ್ಯಾಪ್ತಿಗೆ ಪಡೆದುಕೊಂಡು ದುರಸ್ತಿಗೊಳಿಸಿ ಪ್ರಾರಂಭಿಸಲಾಗುವುದು.
ಶಿವಪುತ್ರಪ್ಪ ಮಠಪತಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಂಜಿನಿಯರ್‌, ಕಲಘಟಗಿ

‘ಗ್ರಾಮೀಣ ಪ್ರದೇಶಗಳಲ್ಲಿ ಕೆರೆ ನೀರು ಬಳಸುವುದರಿಂದ ಘಟಕಗಳು ಹೆಚ್ಚು ದುರಸ್ತಿಗೆ ಬರುತ್ತವೆ. ಕೆರೆ ನೀರು ರಾಡಿ ಆಗಿರುವುದರಿಂದ ಹೆಚ್ಚು ಯಂತ್ರಗಳು ಹಾಳಾಗುತ್ತವೆ. ಕೆರೆ ನೀರಿನಿಂದ ಶುದ್ಧವಾಗಿ ಬರುವ ನೀರಿನಲ್ಲಿ ಪಾಚಿ ಇರುತ್ತದೆ. ಪಾಚಿ ಅಂಟಿಕೊಂಡು ಮೆಮರಿನ್‌ ಬ್ಲಾಕ್‌ ಆಗುವುದರಿಂದ ದುರಸ್ತಿಗೊಳ್ಳುತ್ತವೆ. ಒಂದು ಮೆಮರಿನ್‌ ಹಾಳಾದರೆ ₹75 ಸಾವಿರ ವರೆಗೂ ಖರ್ಚಾಗುತ್ತದೆ’ ಎಂದು ಧಾರವಾಡ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಂಜಿನಿಯರ್ ಆರ್.ಎಂ. ಸೊಪ್ಪಿನಮಠ ತಿಳಿಸಿದರು.

ಹುಬ್ಬಳ್ಳಿ–ಧಾರವಾಡ ಅವಳಿ ನಗರದಲ್ಲಿ ರಸ್ತೆ ಕಾಮಗಾರಿ, 24*7 ನೀರು ಪೂರೈಕೆಯ ಪೈಪ್‌ಲೈನ್‌ ಕಾಮಗಾರಿ ನಡೆದಿದ್ದರಿಂದ ಕೆಲ ನೀರಿನ ಘಟಕಗಳು ಸ್ಥಗಿತಗೊಂಡಿವೆ. ಕೆಲ ಕಡೆ ನೀರಿನ ಟ್ಯಾಂಕರ್‌ಗಳ ಮೂಲಕ ಘಟಕಗಳು ಸ್ಥಗಿತಗೊಂಡ ನಗರಗಳಿಗೆ ನೀರು ಪೂರೈಸಲಾಗುತ್ತದೆ ಎಂದು ಪಾಲಿಕೆ ಅಧಿಕಾರಿಗಳು ಹೇಳುತ್ತಾರೆ. 

ಈ ಶುದ್ಧ ನೀರಿನ ಘಟಕ ಯಾವಾಗ ಚಾಲು ಇರತದಂತ ಗೊತ್ತಾಗುದಿಲ್ಲ. ಯಾವಾಗ ನೋಡಿದ್ರ ಬಂದ್‌ ಇರತೈತ. ಒಂದಿನ ಅಲ್ಲಿಂದ ನೀರ ತಂದಿಲ್ಲ ನೋಡ್ರಿ.
ಶಿವಲೀಲಾ ಬೋರಶೆಟ್ಟರ, ಶಿರಕೋಳ ನಿವಾಸಿ

‘ಹುಬ್ಬಳ್ಳಿಯಲ್ಲಿ ನೀರು ಪೂರೈಕೆಯನ್ನು ಎಲ್‌ ಅಂಡ್ ಟಿ ಕಂಪನಿ ಅವರಿಗೆ ವಹಿಸಲಾಗಿದೆ.‌‌‌‌‌‌ ಇದರ ಜೊತೆಗೆ ನಗರದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ನಮ್ಮ ನಗರದಲ್ಲಿರುವ ನೀರಿನ ಘಟಕ ಕೆಟ್ಟು ನಿಂತು ತಿಂಗಳುಗಳೇ ಗತಿಸಿವೆ. ಘಟಕದ ಪಕ್ಕದಲ್ಲಿ ಅಂಗನವಾಡಿ ಕೇಂದ್ರ ಇದ್ದು, ಈ ನೀರು ಅವರಿಗೆ ಸಹಕಾರಿ ಆಗಿತ್ತು. ಸ್ಥಗಿತವಾಗಿದ್ದರಿಂದ ಮಕ್ಕಳಿಗೆ ಶುದ್ಧ ನೀರು ತರಲು ಅಲ್ಲಿನ ಸಿಬ್ಬಂದಿ ಪರದಾಡುವಂತಹ ಪರಿಸ್ಥಿತಿ ಇದೆ. ಸಾಕಷ್ಟು ಭಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ದುರಸ್ತಿ ಮಾಡಿ ಹೋದರೂ ನಾಲ್ಕೈದು ದಿನಗಳಲ್ಲಿ ಕೆಟ್ಟು ನಿಲ್ಲುತ್ತದೆ. ಆರಂಭವಾದಾಗಿನಿಂದ ಇದೇ ಸಮಸ್ಯೆ ಮುಂದುವರೆದಿದೆ’ ಎಂದು ಹೇಳುತ್ತಾರೆ ನೇಕಾರ ನಗರದ ನಿವಾಸಿ ಚಂದ್ರಶೇಖರ ಹಿರೇಮಠ.‌

ಕೆಲವು ಕಡೆ ನೀರು ಶೇಖರಣೆ ಸಮಸ್ಯೆ

‘ಪ್ರತಿ ದಿನ ಹುಬ್ಬಳ್ಳಿಯಲ್ಲಿರುವ ಪ್ರತಿ ಘಟಕಕ್ಕೆ ಭೇಟಿ‌ ನೀಡಿ 15 ನಿಮಿಷ ನಿರ್ವಹಣೆ ಕಾರ್ಯ ಮಾಡಬೇಕು. ಇದಕ್ಕಾಗಿ ನಗರದಲ್ಲಿ ನಾಲ್ಕು ಜನರನ್ನು ನೇಮಿಸಲಾಗಿದೆ. ಸಣ್ಣ ಪುಟ್ಟ ದುರಸ್ತಿ ಇದ್ದರೆ ಶೀಘ್ರ ಮಾಡಲಾಗುವುದು. ₹400ರಿಂದ ₹500 ಖರ್ಚು ತಗಲುತ್ತದೆ. ದೊಡ್ಡ ಮಟ್ಟದ ನಿರ್ವಹಣೆ ಇದ್ದರೆ ಅಂತಹವುಗಳನ್ನು ಅಧಿಕಾರಿಗಳ ಗಮನಕ್ಕೆ ತಂದು ಅನುಮತಿ ಕೊಟ್ಟರೆ ದುರಸ್ತಿ ಮಾಡಲಾಗುವುದು. ದುರಸ್ತಿ ಮಾಡಲು ಎರಡ್ಮೂರು ದಿನವೂ ತೆಗೆದುಕೊಳ್ಳುತ್ತದೆ.

ಸುಮಾರು ₹75 ಸಾವಿರದಿಂದ ₹80 ಸಾವಿರದ ವರೆಗೆ ಖರ್ಚು ತಗಲುತ್ತದೆ ಎಂದು ರೇಯರ್ ಟೇಕ್ ಸಲ್ಯೂಷನ್ ಗುತ್ತಿಗೆದಾರ ಕೃಷ್ಣ ಕುಲಕರ್ಣಿ ಹೇಳುತ್ತಾರೆ. ಆರೇಳು ವರ್ಷದಿಂದ ಶುದ್ಧ ಕುಡಿಯುವ ನೀರಿನ‌ ಘಟಕಗಳ ನಿರ್ವಹಣೆ ಮಾಡಲಾಗುತ್ತಿದೆ. ಮೂರು ನಾಲ್ಕು ಘಟಕಗಳು ತಾಂತ್ರಿಕ ಸಮಸ್ಯೆಯಿಂದ ಬಂದಾಗಿವೆ. ಇದನ್ನು ಹೊರತುಪಡಿಸಿ ಉಳಿದಂತೆ ಎಲ್ಲ ಘಟಕಗಳು‌ ಕಾರ್ಯ ನಿರ್ವಹಿಸುತ್ತಿವೆ. ಕೆಲವು ಕಡೆ ನೀರು ಶೇಖರಣೆ ಸಮಸ್ಯೆ ಇದೆ. ಅಲ್ಲಿ ಅಂಡರ್ ಗ್ರೌಂಡ್ ಟ್ಯಾಂಕ್ ಹಾಕಿದರೆ ಸಮಸ್ಯೆ ಬಗೆಹರಿಯುತ್ತದೆ’ ಎಂದು ಅವರು ಹೇಳುತ್ತಾರೆ.

ಗ್ರಾಮದಲ್ಲಿ 5 ಶುದ್ಧ ಕುಡಿಯುವ ನೀರಿನ ಘಟಕ ಇದ್ದು ಇಲ್ಲದಂಗ ಆಗಿವೆ. ಕಳೆದ 5 ವರ್ಷಗಳಿಂದ ಸ್ಥಗಿತಗೊಂಡಿವೆ. ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.
ನೀಲಮ್ಮ ಎಚ್‌., ಉಪ್ಪಿನಬೆಟಗೇರಿ ನಿವಾಸಿ

ಶುದ್ಧ ಕುಡಿಯುವ ನೀರಿನ ಘಟಕ ನಿರ್ವಹಣೆ ಕಷ್ಟ

‘ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸರ್ಕಾರ ಆಯಾ ಗ್ರಾಮಗಳಲ್ಲಿರುವ ಜನಸಂಖ್ಯೆಗೆ ಅನುಗುಣವಾಗಿ 500 1000 1500 ಹಾಗೂ 2000 ಲೀಟರ್‌ ಸಾಮರ್ಥ್ಯದ ನೀರಿನ ಘಟಕಗಳನ್ನು ಅಳವಡಿಸಲಾಗಿದೆ. ಈ ಮುಂಚೆ ₹2ಕ್ಕೆ 20 ಲೀಟರ್‌ ಕುಡಿಯುವ ನೀರು ದೊರಕುತ್ತಿತ್ತು. 2018–19ರಲ್ಲಿ ₹5ಕ್ಕೆ 20 ಲೀಟರ್‌ ಮಾಡಲಾಗಿದೆ. ಆದರೆ ಕೆಲ ಗ್ರಾಮಗಳಲ್ಲಿ ಜನ ಇದಕ್ಕೆ ವಿರೋಧ ವ್ಯಕ್ತಪಡಿಸಿ ₹2ಕ್ಕೆ 20 ಲೀಟರ್‌ ನೀಡುವಂತೆ ಹೇಳುತ್ತಿದ್ದಾರೆ. ಇದರಿಂದ ಕೆಲ ಕಡೆ ನೀರಿನ ಬಳಕೆಯಾಗದ ಕಾರಣ ಸ್ಥಗಿತಗೊಂಡಿವೆ’ ಎಂದು ಧಾರವಾಡ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಂಜಿನಿಯರ್ ಆರ್.ಎಂ. ಸೊಪ್ಪಿನಮಠ  ತಿಳಿಸಿದರು.

ನಾಣ್ಯಗಳ ಸಮಸ್ಯೆ

ಹುಬ್ಬಳ್ಳಿಯ ನೆಹರೂ ನಗರದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಇದ್ದರೂ ನೀರಿನ‌ ಸಮಸ್ಯೆ ತಪ್ಪುವುದಿಲ್ಲ. ಒಂದು ನಾಣ್ಯಗಳ ಸಮಸ್ಯೆ ಆದರೆ ಕೆಲವೊಂದು ಸಲ ನೀರೇ ಇರುವುದಿಲ್ಲ. ₹2 ನಾಣ್ಯ ಇದ್ದರೂ ನೀರಿನ ಘಟಕಕ್ಕೆ ದೊಡ್ಡ ಗಾತ್ರದ ನಾಣ್ಯ ಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ₹2 ನಾಣ್ಯ ಸಣ್ಣ ಗಾತ್ರದಲ್ಲಿ ಬರುತ್ತಿದ್ದು ನಾಣ್ಯಕ್ಕಾಗಿ ಪರದಾಡುವಂತಾಗಿದೆ. ನಾಣ್ಯ ಇದ್ದರೆ ಶುದ್ಧ ನೀರು ಇಲ್ಲದಿದ್ದರೆ ಟ್ಯಾಂಕರ್‌ ನೀರು ತೆಗೆದುಕೊಂಡು ಹೋಗುತ್ತೇವೆ ಎಂದು ಹೇಳುತ್ತಾರೆ ವಿವೇಕಾನಂದ ನಗರದ ನಿವಾಸಿ ರೋಹಿತ್‌. 

ಜಿಲ್ಲೆಯ ಶುದ್ಧ ಕುಡಿಯುವ ನೀರಿನ ಘಟಗಳ ಮಾಹಿತಿ

ಸ್ಥಳ ; ಕಾರ್ಯನಿರ್ವಹಣೆ ; ಸ್ಥಗಿತ ; ಒಟ್ಟು

ಧಾರವಾಡ ; 103 ; 44 ; 147

ಹುಬ್ಬಳ್ಳಿ ; 62 ; 16 ; 78

ಕಲಘಟಗಿ;65;23;88

ಕುಂದಗೋಳ ; 67 ; 21 ; 88

ನವಲಗುಂದ ; 59 ; 07 ; 66

ಒಟ್ಟು ; 356 ; 111 ; 467

ಪೂರಕ ಮಾಹಿತಿ: ಅಬ್ದುಲ್‌ ರಝಾಕ್‌ ನದಾಫ್‌, ಜಗದೀಶ ಗಾಣಿಗೇರ, ಕಲ್ಲಪ್ಪ ಮಿರ್ಜಿ, ರಮೇಶ ಓರಣಕರ

ಕುಂದಗೋಳ ತಾಲ್ಲೂಕಿನ ಅಲ್ಲಾಪುರದಲ್ಲಿ ಸ್ಥಗಿತಗೊಂಡ ಕುಡಿಯುವ ನೀರಿನ ಘಟಕದ ಎದುರು ಬಸ್‌ಗಾಗಿ ಕಾದು ಕುಳಿತಿರುವ ಮಹಿಳೆಯರು –ಚಿತ್ರ–ಗೋವಿಂದರಾಜ ಜವಳಿ
ಕುಂದಗೋಳ ತಾಲ್ಲೂಕಿನ ಅಲ್ಲಾಪುರದಲ್ಲಿ ಸ್ಥಗಿತಗೊಂಡ ಕುಡಿಯುವ ನೀರಿನ ಘಟಕದ ಎದುರು ಬಸ್‌ಗಾಗಿ ಕಾದು ಕುಳಿತಿರುವ ಮಹಿಳೆಯರು –ಚಿತ್ರ–ಗೋವಿಂದರಾಜ ಜವಳಿ
ಕುಂದಗೋಳ ತಾಲ್ಲೂಕಿನ ಅಲ್ಲಾಪುರದಲ್ಲಿ ಸ್ಥಗಿತಗೊಂಡ ಕುಡಿಯುವ ನೀರಿನ ಘಟಕದ ಮಷಿನ್‌
ಕುಂದಗೋಳ ತಾಲ್ಲೂಕಿನ ಅಲ್ಲಾಪುರದಲ್ಲಿ ಸ್ಥಗಿತಗೊಂಡ ಕುಡಿಯುವ ನೀರಿನ ಘಟಕದ ಮಷಿನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT