ಹುಬ್ಬಳ್ಳಿ: ಧಾರವಾಡದ ಕೃಷಿ ವಿಶ್ವವಿದ್ಯಾಲಯ ಕಳೆದ ವಾರ ಆಯೋಜಿಸಿದ್ದ ಕೃಷಿ ಮೇಳದಲ್ಲಿ ನವೋದ್ಯಮಿಗಳ ಉತ್ಸಾಹವೂ ಜನರನ್ನು ಸೆಳೆದವು. ಮೇಳದ ಫಲಪುಷ್ಪ ಪ್ರದರ್ಶನ ವಿಭಾಗದಲ್ಲಿ ಹತ್ತಾರು ನವೋದ್ಯಮಿಗಳು ತಮ್ಮ ಉದ್ಯಮವನ್ನು ಪರಿಚಯಿಸಿದರು.
ಅವುಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಪೂಜಾ ದೇಶಪಾಂಡೆ ಪರಿಸರಸ್ನೇಹಿ ಮಾರ್ಜಕಗಳನ್ನು (ಡಿಟೆರ್ಜೆಂಟ್), ಖಾನಾಪುರದ ಆರ್.ಐ.ಪಾಟೀಲರು ಕಬ್ಬಿನ ಹಾಲನ್ನು ವರ್ಷವಿಡೀ ಬಾಳುವಂತೆ ಮಾಡಿರುವುದರ ಜತೆಗೆ ಟೀ, ಕಾಫಿಗೆ ಸಕ್ಕರೆ ಬದಲು ಸಾವಯವ ಬೆಲ್ಲದ ಪುಡಿ ಬಳಸುವಂಥ ಕಬ್ಬಿನ ಉತ್ಪನ್ನ ಪರಿಚಯಿಸಿದ್ದಾರೆ.
ಎಂಜಿನಿಯರಿಂಗ್ ಪದವಿ ಓದಿರುವ ಪೂಜಾ ಅವರು ರಾಸಾಯನಿಕಯುಕ್ತ ಡಿಟೆರ್ಜೆಂಟ್ ಬಳಕೆಯಿಂದ ತಮ್ಮ ಮಗುವಿಗೆ ಎದುರಾದ ಚರ್ಮದ ಸಮಸ್ಯೆಗಳಿಗೆ ಮುಕ್ತಿ ಕಂಡುಕೊಂಡಿದ್ದು, ತಮ್ಮ ತೋಟದಲ್ಲಿ ಬೆಳೆದ ಲಿಂಬು, ಅಂಟವಾಳದಿಂದ ತಯಾರಿಸಿದ ಪರಿಸರಸ್ನೇಹಿ ಡಿಟೆರ್ಜೆಂಟ್‌ನಿಂದ. ಆರಂಭದಲ್ಲಿ ಮನೆಬಳಕೆಗಷ್ಟೇ ಪರಿಸರಸ್ನೇಹಿ ಡಿಟೆರ್ಜೆಂಟ್ ತಯಾರಿಸಿಕೊಂಡ ಪೂಜಾ, ನಂತರ ಬಂಧುಗಳು, ಸ್ನೇಹಿತರಿಂದ ಉತ್ತಮ ಸ್ಪಂದನೆ, ಬೇಡಿಕೆ ಬಂದಾಗ ಉತ್ಪನ್ನದ ಪ್ರಮಾಣ ಹೆಚ್ಚಿಸಿದರು. ಧರಣಿ (ನ್ಯಾಚುರಲ್ ಬೇಸಡ್ ಹೋಮ್‌ಕೇರ್ ಪ್ರೊಡಕ್ಟ್) ಎಂಬ ಲೇಬಲ್ ಅಡಿಯಲ್ಲಿ ಡಿಟೆರ್ಜೆಂಟ್ ಸಿದ್ಧಪಡಿಸಿ ಉದ್ಯಮವಾಗಿಸಿದರು.
ಪಾತ್ರೆ ತೊಳೆಯಲು, ನೆಲ ಒರೆಸಲು, ಶೌಚಾಲಯ ಸ್ವಚ್ಛಗೊಳಿಸಲು ಮಾರ್ಜಕಗಳನ್ನು ಉತ್ಪಾದಿಸಿದ್ದಾರೆ. ಬಟ್ಟೆ ತೊಳೆಯಲೂ ಲಾಂಡ್ರಿ ಲಿಕ್ವಿಡ್ ಸಿದ್ಧಪಡಿಸಿದ್ದಾರೆ.
‘ಮನೆಗಳಲ್ಲಿ ನಿತ್ಯ ಬಳಸುವ ರಾಸಾಯನಿಕಯುಕ್ತ ಡಿಟೆರ್ಜೆಂಟ್‌ಗಳ ಬಳಕೆಯಿಂದ ಕಣ್ಣು ಉರಿ, ಗಂಟಲುರಿ, ತಲೆನೋವು ಸಮೇತ ಹಲವು ಆರೋಗ್ಯ ಸಮಸ್ಯೆಗಳು ಉಂಟು ಮಾಡಬಹುದು. ಕೆಲವು ಉತ್ಪನ್ನಗಳು ಬಾಷ್ಪಶೀಲ ಸಾವಯವ ಸಂಯುಕ್ತಗಳು ಸೇರಿದಂತೆ ಅಪಾಯಕಾರಿ ರಾಸಾಯನಿಕಗಳನ್ನು ಬಿಡುಗಡೆ ಮಾಡಲಿವೆ. ಧರಣಿ ಉತ್ಪನ್ನಗಳಾದ ಫ್ಲೋರ್ ಕ್ಲೀನರ್, ಟಾಯ್ಲೆಟ್ ಕ್ಲೀನರ್, ಡಿಶ್ ವಾಶ್ ಲಿಕ್ವಿಡ್, ಲಾಂಡ್ರಿ ಲಿಕ್ವಿಡ್ ಬಳಸುವುದರಿಂದ ಆರೋಗ್ಯ ರಕ್ಷಣೆಯ ಜತೆಗೆ ಪರಿಸರವನ್ನೂ ಸಂರಕ್ಷಿಸಿದಂತಾಗುತ್ತದೆ’ ಎನ್ನುತ್ತಾರೆ ಪೂಜಾ.