ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತುಂಗಕ್ಕೇರಿದ ‘ವಿದ್ಯಾಕಾಶಿ’ ಹಿರಿಮೆ

ಹುಬ್ಬಳ್ಳಿ–ಧಾರವಾಡ ಮೆಟ್ರೊ
Last Updated 11 ನವೆಂಬರ್ 2019, 10:04 IST
ಅಕ್ಷರ ಗಾತ್ರ

‘ವಿದ್ಯಾಕಾಶಿ’ ಎಂದೇ ಪ್ರಸಿದ್ಧವಾಗಿರುವ ಧಾರವಾಡ ಜಿಲ್ಲೆ ಮೊದಲಿನಿಂದಲೂ ಶೈಕ್ಷಣಿಕವಾಗಿ ಮುಂಚೂಣಿಯಲ್ಲಿದೆ. ಕರ್ನಾಟಕ ಕಾಲೇಜು, ಕರ್ನಾಟಕ ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ, ಕರ್ನಾಟಕ ಕಾನೂನು ವಿಶ್ವವಿದ್ಯಾಲಯ, ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ(ಕಿಮ್ಸ್‌), ನೂತನವಾಗಿ ಆರಂಭವಾಗಿರುವ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ಐಐಟಿ)ಗಳಂತಹ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳು ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆಯನ್ನು ಗುರುತಿಸುವಂತೆ ಮಾಡಿವೆ. ಇವುಗಳ ಜೊತೆಗೆ ಪ್ರಮುಖ ಖಾಸಗಿ ಶಿಕ್ಷಣ ಸಂಸ್ಥೆಗಳು ಕೆಎಲ್‌ಇ, ಜೆಎಸ್‌ಎಸ್‌, ಕಿಟಲ್‌ ಕಾಲೇಜು, ಬಾಸೆಲ್‌ ಮಿಷನ್‌ ಪ್ರಮುಖವಾಗಿ ಇಲ್ಲಿ ಹೆಸರಿಸಬಹುದಾಗಿದೆ. ಈ ಎಲ್ಲ ಶಿಕ್ಷಣ ಸಂಸ್ಥೆಗಳು ಜಿಲ್ಲೆಯನ್ನು ಮಾತ್ರವಲ್ಲದೇ ಮುಂಬೈ–ಕರ್ನಾಟಕ ಭಾಗದ ಜನರನ್ನು ಶೈಕ್ಷಣಿಕವಾಗಿ ಶ್ರೀಮಂತಗೊಳಿಸುವಲ್ಲಿ ಮುಖ್ಯ ಪಾತ್ರ ವಹಿಸಿವೆ.

ವಿಜಯಪುರ, ಬಾಗಲಕೋಟೆ, ಗದಗ, ಹಾವೇರಿ, ಉತ್ತರಕನ್ನಡ ಮತ್ತು ಬೆಳಗಾವಿ ಜಿಲ್ಲೆಯ ಅದೆಷ್ಟೋ ಪೋಷಕರು ಹುಬ್ಬಳ್ಳಿ–ಧಾರವಾಡದಲ್ಲಿ ಬಾಡಿಗೆಮನೆ ಮಾಡಿಕೊಂಡು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ತಮ್ಮ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸುತ್ತಿರುವುದೇ ಜಿಲ್ಲೆ ಶೈಕ್ಷಣಿಕವಾಗಿ ಎಷ್ಟು ಶ್ರೀಮಂತವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಲಕ್ಷ, ಲಕ್ಷ ವಿದ್ಯಾರ್ಥಿಗಳು

ಜಿಲ್ಲೆಯಲ್ಲಿ ಗುಣಮಟ್ಟದ ಪ್ರಾಥಮಿಕ ಶಿಕ್ಷಣವನ್ನು ನೀಡುವಲ್ಲಿ ಸರ್ಕಾರಿ ಶಾಲೆಗಳು ಮುಖ್ಯ ಪಾತ್ರವಹಿಸಿವೆ. ಜಿಲ್ಲೆಯಲ್ಲಿ ಪ್ರಸ್ತುತ ಇರುವ 1256 ಸರ್ಕಾರಿ ಪ್ರಾಥಮಿಕ ಶಾಲೆಗಳು, 418 ಸರ್ಕಾರಿ, ಅನುದಾನಿತ ಪ್ರೌಢಶಾಲೆಗಳಲ್ಲಿ ಒಂದರಿಂದ ಹತ್ತನೇ ತರಗತಿವರೆಗೆ 3,36,868 ಮಕ್ಕಳು ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಕಲಿಯುತ್ತಿದ್ದಾರೆ.

5698 ಪ್ರಾಥಮಿಕ ಶಾಲಾ ಶಿಕ್ಷಕರು, 864 ಪ್ರೌಢಶಾಲಾ ಶಿಕ್ಷಕರು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಖಾಲಿ ಇರುವ 413 ಪ್ರಾಥಮಿಕ ಮತ್ತು 60 ಪ್ರೌಢಶಾಲಾ ಶಿಕ್ಷಕ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎನ್ನುತ್ತಾರೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಜಾನನ ಮನ್ನಿಕೇರಿ.

ಜಿಲ್ಲೆಯಲ್ಲಿ ಆರ್‌ಟಿಇ ಅಡಿ ಲಭ್ಯ ಇರುವ 824 ಸೀಟುಗಳಿಗೆ ಈ ವರ್ಷ 699 ಮಕ್ಕಳು ಮಾತ್ರ ಸೇರ್ಪಡೆಯಾಗಿದ್ದಾರೆ. ಪ್ರಸಕ್ತ ವರ್ಷದಲ್ಲಿ 547 ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಲಾಗಿದ್ದು, ಅದರಲ್ಲಿ 381 ಮಕ್ಕಳನ್ನು ಶಾಲೆಗೆ ಮರಳಿ ಕರೆತಂದಿದ್ದೇವೆ. ಅಲೆಮಾರಿ ಕುಟುಂಬಗಳ ಹಾಗೂ ಹೊರ ಜಿಲ್ಲೆಗಳಿಂದ ವಲಸೆ ಬರುವ ಮಕ್ಕಳನ್ನು ಗುರುತಿಸಿ ಅವರನ್ನು ಕಸ್ತೂರಬಾ ಗಾಂಧಿ ವಸತಿ ಶಾಲೆ ಮತ್ತು ಸರ್ಕಾರಿ ವಸತಿ ಶಾಲೆಗಳಲ್ಲಿ ಅವಕಾಶ ಕಲ್ಪಿಸಿ; ಶಿಕ್ಷಣ ನೀಡಲಾಗುತ್ತಿದೆ ಎನ್ನುತ್ತಾರೆ ಅವರು.

ಆಂಗ್ಲ ಮಾಧ್ಯಮ ಸರ್ಕಾರಿ ಶಾಲೆ

ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಜಿಲ್ಲೆಯಲ್ಲಿ ಈ ವರ್ಷ 28 ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮವನ್ನು ಆರಂಭಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಈ ಶಾಲೆಗಳಿಗೆ ಹೆಚ್ಚು ಬೇಡಿಕೆ ಕಂಡುಬಂದಿದೆ. ಒಂದು ಶಾಲೆಗೆ 30 ವಿದ್ಯಾರ್ಥಿಗಳಂತೆ 800 ಮಕ್ಕಳು ಎಲ್‌ಕೆಜಿ, ಯುಕೆಜಿ ಕಲಿಕೆಯಲ್ಲಿ ನಿರತವಾಗಿದ್ದಾರೆ. ಇಂಗ್ಲಿಷ್‌ ಮಾಧ್ಯಮ ಆರಂಭವಾದ ಬಳಿಕ ಅಕ್ಕಪಕ್ಕದ ಖಾಸಗಿ ಶಾಲೆಗಳನ್ನು ತೊರೆದು ಸರ್ಕಾರಿ ಶಾಲೆಗಳತ್ತ ಮಕ್ಕಳು ಬರಲಾರಂಭಿಸಿದ್ದಾರೆ ಎಂದು ಮನ್ನಿಕೇರಿ ಮೆಚ್ಚುಗೆ ವ್ಯಕ್ತಪಡಿಸಿದರು.

ಎಸ್‌ಎಸ್‌ಎಲ್‌ಸಿಯಲ್ಲಿ ಕಳೆದ ಶೈಕ್ಷಣಿಕ ಸಾಲಿನಲ್ಲಿ ಜಿಲ್ಲೆಗೆ ಶೇ 75ರಷ್ಟು ಫಲಿತಾಂಶ ಬಂದಿದ್ದು, ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 10 ಸ್ಥಾನದೊಳಗೆ ಬರುವ ನಿಟ್ಟಿನಲ್ಲಿ ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ, ಮಕ್ಕಳಿಗೆ ವಿಶೇಷ ತರಗತಿ ಸೇರಿದಂತೆ ಹತ್ತು, ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ.ಅದೇ ರೀತಿ, ಪ್ರಸಕ್ತ ವರ್ಷದಿಂದ ಏಳನೇ ತರಗತಿಗೂ ಪಬ್ಲಿಕ್‌ ಪರೀಕ್ಷೆ ನಡೆಸಲು ಸರ್ಕಾರ ನಿರ್ಧರಿಸಿರುವುದರಿಂದ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಅವರು ವಿವರಿಸಿದರು.

ಶೈಕ್ಷಣಿಕವಾಗಿ ಜಿಲ್ಲೆ ಉತ್ತುಂಗಕ್ಕೆ ಏರಿದೆ. ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಮತ್ತಷ್ಟು ಸಾಧನೆ ಮಾಡಬೇಕಾದ ಸವಾಲು ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT