ಮಂಗಳವಾರ, ಏಪ್ರಿಲ್ 20, 2021
31 °C
ಗೋಡೆಗಳಲ್ಲಿ ಮೂಡಿದ ಚಿತ್ತಾರ; ಮಕ್ಕಳ ಕಲರವ

ಹುಬ್ಬಳ್ಳಿ-ಧಾರವಾಡ: ತೊಟ್ಟಿಯಿಂದ ತೊಟ್ಟಿಲು ಮನೆಗೆ ಮಕ್ಕಳು

ಸಬೀನಾ ಎ. Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಸೂರ್ಯ ಉದಯಿಸುವ ಮುನ್ನ ಹೆಗಲಲ್ಲಿ ಹರಿದ ಚೀಲ ಹಿಡಿದು ತ್ಯಾಜ್ಯ ಆಯಲು ಹೋಗುವ ಮಕ್ಕಳಿಗೆ ಹೊಟ್ಟೆಗೆ ಒಂದಷ್ಟು ಹೆಚ್ಚು ಹಿಟ್ಟು ಗಿಟ್ಟಿಸುಕೊಳ್ಳುವುದೇ ಕನಸು. ಎಳೆಯರಿಗೆ ಚರಂಡಿ, ತ್ಯಾಜ್ಯದ ಕೊಂಪೆಯೇ ಆಟದ ಮೈದಾನ. ಸ್ವಚ್ಛತೆಯ ಪರಿಜ್ಞಾನ, ಅದರ ಬಗ್ಗೆ ಯೋಚಿಸುವಷ್ಟು ವ್ಯವಧಾನವಿಲ್ಲದ ಸ್ಥಿತಿಯಲ್ಲಿ ಬದುಕಿನ ಬಂಡಿ ದೂಡುತ್ತಿರುವ ಮಕ್ಕಳಿಗೆ ಶಿಕ್ಷಣದ ಕನಸು ಮೂಡಿಸಿದೆ ಪ್ಲಾಸ್ಟಿಕ್‌ ಫಾರ್‌ ಚೇಂಜ್‌ ಇಂಡಿಯಾ ಫೌಂಡೇಷನ್‌.

ದಿನವಿಡೀ ಅಲೆದಾಡುವ ಇಲ್ಲಿನ ಜನರಿಗೆ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಕನ್ನಡಿಯೊಳಗಿನ ಗಂಟು. ಇಂಥದ್ದೇ ದುಸ್ಥಿತಿಯಲ್ಲಿದ್ದ ಧಾರವಾಡ ಸಮೀಪ ಶ್ರೀರಾಮನಗರದ ವಾಲ್ಮೀಕಿ ಕಾಲೊನಿಯಲ್ಲಿರುವ ತ್ಯಾಜ್ಯ, ಕೂದಲು ಆರಿಸುವವರ 3ರಿಂದ 6 ವರ್ಷದ ಮಕ್ಕಳಿಗೆ ತೊಟ್ಟಿಲು ಮನೆ ಆರಂಭಿಸಿ, ಶಿಕ್ಷಣದ ಜತೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಲಾಗುತ್ತಿದೆ.

ಆಪ್ತ ಸಮಾಲೋಚನೆ ಮಾಡಿ, ತೀರಾ ಬಡತನ ಎದುರಿಸುತ್ತಿರುವ, ಅಪೌಷ್ಟಿಕತೆಯಿಂದ ನರಳುತ್ತಿರುವವರಿಗೆ ಸಂಸ್ಥೆ ವತಿಯಿಂದಲೇ ಪೌಷ್ಟಿಕ ಆಹಾರ, ಹಣ್ಣು ಒದಗಿಸಲಾಗುತ್ತಿದೆ. ಕೌಟುಂಬಿಕ ಸ್ಥಿತಿ ಸುಧಾರಿಸಿ ಮಕ್ಕಳನ್ನು ಶಾಲೆಗೆ ಸೇರಿಸಲಾಗುತ್ತಿದೆ. ಅವರ ಶಿಕ್ಷಣದ ಎಲ್ಲಾ ಜವಾಬ್ದಾರಿ ಸಂಸ್ಥೆಯೇ ನಿರ್ವಹಿಸುತ್ತಿದೆ. ಮದ್ಯ ಮಾರುತ್ತಿದ್ದವರಿಗೆ, ಮದ್ಯ ವ್ಯಸನಿಗಳಿಗೆ ಕೌನ್ಸೆಲಿಂಗ್‌ ಮಾಡಿಸಿ, ಸ್ಥಳೀಯ ಪೊಲೀಸರ ಮೂಲಕ ಕಾನೂನು ಅರಿವು ಮೂಡಿಸಲಾಗಿದೆ. ಕೆಲವರು ಮದ್ಯ ಮಾರಾಟ ಬಿಟ್ಟು ಕಿರಾಣಿ ಅಂಗಡಿ ನಡೆಸುತ್ತಿದ್ದಾರೆ ಎನ್ನುತ್ತಾರೆ ಮಹಿಳಾ ಕಲ್ಯಾಣ ಸಂಸ್ಥೆ ಪಿಎಫ್‌ಸಿ ಯೋಜನಾ ಸಂಯೋಜಕರು ಸುರೇಖಾ ಪಾಟೀಲ.

ಸ್ಲಂಗಳಲ್ಲಿ ಕಡು ಬಡತನ ಎದುರಿಸುತ್ತಿರುವ ಕುಟುಂಬಗಳಿಗೆ ಆರ್ಥಿಕ, ಸಾಮಾಜಿಕ ನೆರವು, ಮುಖ್ಯ ವೇದಿಕೆಯಲ್ಲಿ ಗುರುತಿಸಿಕೊಳ್ಳುವಂತೆ ಮಾಡುವ ಉದ್ದೇಶದಿಂದ ಸಂಸ್ಥೆ ಸ್ಥಾಪನೆಯಾಗಿದ್ದು, ಆಗಸ್ಟ್‌ 2020ರಿಂದ ಹುಬ್ಬಳ್ಳಿ ಧಾರವಾಡದಲ್ಲಿ ಬೆಳಗಾವಿಯ ವುಮೆನ್‌ ವೆಲ್‌ಫೇರ್‌ ಸೊಸೈಟಿ ಸಹಯೋಗದಲ್ಲಿ ಕಾರ್ಯ ನಿರ್ವಹಿಸಲಾಗುತ್ತಿದೆ.

ಆಧಾರ್‌ ಕಾರ್ಡ್‌, ಬ್ಯಾಂಕ್‌ ಖಾತೆ ತೆರೆಯಿಸಿ ಉಳಿತಾಯದ ಬಗ್ಗೆ ಶಿಕ್ಷಣ, ಆರೋಗ್ಯ ಶಿಬಿರ, ಅಪೌಷ್ಟಿಕತೆಯಿಂದ ನರಳುತ್ತಿರುವ ಮಕ್ಕಳಿಗೆ ವಿಶೇಷ ಕಾಳಜಿ, ವಿದ್ಯಾರ್ಥಿವೇತನ ನೀಡಿ ಸಂಸ್ಥೆ ಬೆನ್ನೆಲುಬಾಗಿ ನಿಂತಿದೆ ಎನ್ನುತ್ತಾರೆ ಸಂಸ್ಥೆಯ ಸಂಸ್ಥಾಪಕ ಚಂದನ್‌ ಎಂ.ಸಿ.

ಅವಳಿ ನಗರದ 17 ಸ್ಲಂಗಳಲ್ಲಿ ಸರ್ವೆ ಮಾಡಿ ಅಂದಾಜು 561 ಕುಟುಂಬಗಳ 557 ಮಕ್ಕಳಿಗೆ ನೆರವು ನೀಡಲಾಗುತ್ತಿದೆ. 2015ರಲ್ಲಿ ಆರಂಭವಾದ ಫೌಂಡೇಷನ್‌ ಬೆಂಗಳೂರು, ಮಂಗಳೂರು, ಕಾರವಾರ, ಉಡುಪಿ ಹಾಗೂ ಹುಬ್ಬಳ್ಳಿ– ಧಾರವಾಡಗಳಲ್ಲಿ ಚಟುವಟಿಕೆ ಮಾಡಲಾಗುತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು