ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ | ಟಗರು ಸಾಕಾಣಿಕೆ: ನಿರಂತರ ಆದಾಯ

ಅರಣ್ಯ ಕೃಷಿಗೆ ಒತ್ತು ನೀಡಿದ ರೈತ ಮಹೇಶ ಬಿ. ಕುಲಕರ್ಣಿ
Published : 24 ಆಗಸ್ಟ್ 2024, 5:27 IST
Last Updated : 24 ಆಗಸ್ಟ್ 2024, 5:27 IST
ಫಾಲೋ ಮಾಡಿ
Comments

ಹುಬ್ಬಳ್ಳಿ: ಬಯಲುಸೀಮೆಯ ಪರಿಸರ ಸಂರಕ್ಷಣೆ ಹಾಗೂ ಕೃಷಿ ಪ್ರವಾಸೋದ್ಯಮ ಉತ್ತೇಜಿಸುವ ಉದ್ದೇಶದಿಂದ ಅರಣ್ಯ, ತೋಟಗಾರಿಕೆ ಕೃಷಿ ಹಾಗೂ ಟಗರು, ಹೈನು ಸಾಕಾಣಿಕೆಯೊಂದಿಗೆ ಸಮಗ್ರ ಕೃಷಿ ಮಾಡಿರುವ ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಗುರುವಿನಹಳ್ಳಿಯ ಕೃಷಿಕ ಮಹೇಶ ಬಿ. ಕುಲಕರ್ಣಿ ಅವರು ಇತರ ರೈತರಿಗೂ ಮಾದರಿ ಆಗಿದ್ದಾರೆ.

ಮೂಲ ಕೃಷಿ ಕುಟುಂಬದ ಇವರು, ಒಟ್ಟು ನಾಲ್ಕು ಎಕರೆ ಭೂಮಿಯಲ್ಲಿ 350 ಮಹಾಗನಿ, 200 ಅಡಿಕೆ, ತಲಾ 100 ರಕ್ತಚಂದನ, ತೇಗ ಮತ್ತು ಸಿಲ್ವರ್‌ ಟ್ರೀ, 50 ಶ್ರೀಗಂಧ, 30 ಹುಣಸೆ, ತಲಾ 50 ಮಾವು, ನಿಂಬೆ, ತಲಾ 25 ಪೇರಲ, ಸೀತಾಫಲ, ಹಲಸು, ರಾಮಫಲ, ಲಕ್ಷ್ಮಣಫಲ, ದಾಳಿಂಬೆ, 2 ಹನುಮಾನಫಲ, ತಲಾ 20 ನೆರಳೆ, ವಾಟರ್‌ ಆ್ಯಪಲ್‌, ತಲಾ 10 ಗೋಡಂಬಿ, ನೋನಿ ಮರಗಳು ಹಾಗೂ 1 ಮಹಾಬಿಲ್ವ, 1 ರುದ್ರಾಕ್ಷಿ ಗಿಡಗಳನ್ನೂ ಬೆಳೆಸಿದ್ದಾರೆ.

‘ಕೋವಿಡ್‌ ಲಾಕ್‌ಡೌನ್‌ ವೇಳೆ ಎಲ್ಲ ಕೆಲಸಗಳಿಗೂ ನಿರ್ಬಂಧ ಹೇರಲಾಗಿತ್ತು. ಆದರೆ ಕೃಷಿಗೆ ಮಾತ್ರ ಅವಕಾಶವಿದ್ದದ್ದರಿಂದ ಕೃಷಿಯತ್ತ ಹೊರಳಿದ ನಾನು ಈ ಬಗ್ಗೆ ಅಧ್ಯಯನ ನಡೆಸಿ, ಅರಣ್ಯ ಕೃಷಿ, ಸಮಗ್ರ ಮತ್ತು ಸಾವಯವ ಕೃಷಿಗೆ ಒತ್ತು ನೀಡಿದೆ. ಜೊತೆಗೆ ಟಗರು, ಹೈನು ಸಾಕಾಣಿಕೆಯನ್ನೂ ಆರಂಭಿಸಿದೆ’ ಎಂದು ಕೃಷಿಕ ಮಹೇಶ ಬಿ. ಕುಲಕರ್ಣಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ವರ್ಷಪೂರ್ತಿ ವಿದ್ಯುತ್‌ ಕೊರತೆ ನೀಗಿಸಲು ಬೋರ್‌ವೆಲ್‌ಗೆ ಸೋಲಾರ್‌ ವ್ಯವಸ್ಥೆ ಮಾಡಿಕೊಂಡಿರುವ ಅವರು, 50/50 ಕೃಷಿಹೊಂಡ ನಿರ್ಮಿಸಿಕೊಂಡು ಹನಿ ನೀರಾವರಿ ಪದ್ಧತಿಯನ್ನೂ ಅಳವಡಿಸಿಕೊಂಡಿದ್ದಾರೆ.

ಟಗರು ಸಾಕಾಣಿಕೆ: ‘ಹಾವೇರಿ, ಕೆರೂರು, ಚಿಕ್ಕೋಡಿ ಹಾಗೂ ಬೆಳಗಾವಿಯಿಂದ ಆರೇಳು ಸಾವಿರ ರೂಪಾಯಿಗೆ ಮೂರ್ನಾಲ್ಕು ತಿಂಗಳ ಟಗರಿನ ಮರಿಗಳನ್ನು ಖರೀದಿಸಿ, ಆರು ತಿಂಗಳು ಸಾಕಿ ಅವುಗಳ ತೂಕ ಹೆಚ್ಚಿಸುತ್ತೇವೆ. 30 ರಿಂದ 40 ಕೆ.ಜಿ ತೂಕ ಬಂದಾಗ ಅಂದಾಜು ₹15 ಸಾವಿರದಿಂದ ₹20 ಸಾವಿರಕ್ಕೆ ಮಾರಾಟ ಮಾಡುತ್ತೇವೆ. ಸದ್ಯ ನಮ್ಮಲ್ಲಿ 25 ಟಗರುಗಳಿವೆ. ಇವುಗಳಿಗಾಗಿ 20/10 ಜಾಗದಲ್ಲಿ ಹೈಟೆಕ್‌ ಶೆಡ್‌ ನಿರ್ಮಿಸಿದ್ದು, ಒಟ್ಟು 28 ಟಗರುಗಳನ್ನು ನಿಲ್ಲಿಸಬಹುದು. 20/10 ಜಾಗದಲ್ಲಿ ನಾಲ್ಕು ಹಸುಗಳನ್ನು ನಿಲ್ಲಿಸಬಹುದು’ ಎಂದರು.

ಹೈನುಗಾರಿಕೆ: 2021ರಿಂದ ಹೈನುಗಾರಿಕೆ ಆರಂಭಿಸಿರುವ ಅವರ ಬಳಿ ಗುಜರಾತ್‌ನ ಗಿರ್‌ತಳಿಯ 4 ಹಸು, 6 ಕರುಗಳು, 1 ಮಲೆನಾಡು ಗಿಡ್ಡ,  1 ರೆಡ್‌ಸಿಂಧಿ ಸೇರಿ ವಿವಿಧ ತಳಿಯ 17 ಹಸುಗಳಿವೆ.    

‘ದಿನಕ್ಕೆ ಅಂದಾಜು 28 ರಿಂದ 32 ಲೀಟರ್‌ ಹಾಲು ಸಿಗುತ್ತಿದ್ದು, ಇದರಿಂದ 1 ಕೆ.ಜಿ ದೇಸಿ ತುಪ್ಪ ತಯಾರಿಸುತ್ತೇವೆ. ಮಾರುಕಟ್ಟೆಯಲ್ಲಿ ಇದಕ್ಕೆ ₹2 ಸಾವಿರ ವರೆಗೆ ದರವಿದೆ. ಕೆ.ಜಿ ಬೆಣ್ಣೆಗೆ ₹1,500 ದರವಿದ್ದು, ಔಷಧಕ್ಕಾಗಿ ಬಳಸುವವರು ಖರೀಸುತ್ತಾರೆ. ಮನೆಬಳಕೆ ಆಗಿ ಉಳಿಯುವ ಅಂದಾಜು 20 ಲೀಟರ್‌ ಮಜ್ಜಿಗೆಯನ್ನು ಜೀವಾಮೃತ, ಗೋಕೃಪಾಮೃತಕ್ಕೆ ಬಳಸುತ್ತೇವೆ. ಗೋಮೂತ್ರ, ಸಗಣಿಯಿಂದ ಎರೆಗಹುಳು ಗೊಬ್ಬರ ತಯಾರಿಸಿ, ಜಮೀನುಗಳಿಗೆ ಬಳಸುತ್ತಿದ್ದೇವೆ’ ಎಂದು ತಿಳಿಸಿದರು.

‘ಅರಣ್ಯ ಕೃಷಿ ಕೈ ಹಿಡಿಯಲು ಕನಿಷ್ಠ 10 ವರ್ಷಗಳು ಬೇಕು. ಆಗ ದೊಡ್ಡ ಮಟ್ಟದ ಲಾಭವನ್ನು ನಿರೀಕ್ಷಿಸಬಹುದು. ನಿರಂತರ ಆದಾಯಕ್ಕೆ ತೋಟಗಾರಿಕೆ ಕೃಷಿ, ಹೈನುಗಾರಿಕೆ ಪೂರಕವಾಗಿದೆ. ತೋಟಗಾರಿಕೆಯಿಂದ ತಿಂಗಳಿಗೆ ಕನಿಷ್ಠ ₹30 ಸಾವಿರ ಹಾಗೂ ಟಗರು, ಹೈನುಗಾರಿಕೆಯಿಂದ ₹30 ಸಾವಿರ ಆದಾಯ ಪಡೆಯಬಹುದು’ ಎಂದು ವಿವರಿಸಿದರು. 

ಶ್ರೇಷ್ಠ ಕೃಷಿಕ ಪ್ರಶಸ್ತಿ: ಮಹೇಶ ಅವರು ಆತ್ಮಯೋಜನೆ ಅಡಿ ಕೃಷಿ ಇಲಾಖೆಯಿಂದ 2024ನೇ ಸಾಲಿನ ಧಾರವಾಡ ಜಿಲ್ಲಾಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಗುರುವಿನಹಳ್ಳಿಯ ಕೃಷಿಕ ಮಹೇಶ ಬಿ. ಕುಲಕರ್ಣಿ ಅವರು ಸಾಕಿರುವ ವಿವಿಧ ತಳಿಯ ಹಸುಗಳು
ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಗುರುವಿನಹಳ್ಳಿಯ ಕೃಷಿಕ ಮಹೇಶ ಬಿ. ಕುಲಕರ್ಣಿ ಅವರು ಸಾಕಿರುವ ವಿವಿಧ ತಳಿಯ ಹಸುಗಳು
ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಗುರುವಿನಹಳ್ಳಿಯ ಕೃಷಿಕ ಮಹೇಶ ಬಿ. ಕುಲಕರ್ಣಿ ಅವರು ಸಾಕಿರುವ ಟಗರುಗಳು
ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಗುರುವಿನಹಳ್ಳಿಯ ಕೃಷಿಕ ಮಹೇಶ ಬಿ. ಕುಲಕರ್ಣಿ ಅವರು ಸಾಕಿರುವ ಟಗರುಗಳು
ಮಹೇಶ ಬಿ. ಕುಲಕರ್ಣಿ
ಮಹೇಶ ಬಿ. ಕುಲಕರ್ಣಿ
ರೈತರು ಸಾವಯವ ಕೃಷಿ ಕೈಗೊಂಡು ಮಣ್ಣಿನ ಫಲವತ್ತತೆ ಕಾಪಾಡಬೇಕು. ಮನೆಗೊಂದು ಹಸು ಸಾಕಿದರೆ ಮೌಲ್ಯಯುತ ಹಾಗೂ ಆರೋಗ್ಯಯುತ ಜೀವನ ನಡೆಸಬಹುದು
ಮಹೇಶ ಕುಲಕರ್ಣಿ ಕೃಷಿಕ

ಬೆಳೆಗಳಿಗೆ ಪೂರಕ ‘ಗೋ ನಂದಾಜಲ’

ಗೋವು ಅಥವಾ ಕರು ಸತ್ತ ಬಳಿಕ ಬಹುತೇಕರು ಅದನ್ನು ಮಣ್ಣಿನಲ್ಲಿ ಹೂತು ಸುಮ್ಮನಾಗುತ್ತಾರೆ. ಕಾಮಧೇನು ಸತ್ತ ಬಳಿಕವೂ ಉಪಯುಕ್ತವಾಗಿದ್ದು ಅದರಿಂದ ‘ಗೋ ನಂದಾಜಲ’ ತಯಾರಿಸಿ ವರ್ಷಪೂರ್ತಿ ಬಳಸಬಹುದು ಎನ್ನುವ ಮಾತು ಕೃಷಿಕ ಮಹೇಶ ಕುಲಕರ್ಣಿ ಅವರದ್ದು. ತಯಾರಿ ಹೇಗೆ?: ‘ನಮ್ಮಲ್ಲಿನ ಒಂದು ಕರು ಮೃತಪಟ್ಟಾಗ ಅದನ್ನು 8/10 ತೊಟ್ಟಿಯಲ್ಲಿ ಅದರ ತೂಕದಷ್ಟೇ ಗೋಮೂತ್ರ ಸಗಣಿ ಮಜ್ಜಿಗೆ ಹಾಕಿ ತೊಟ್ಟಿಯನ್ನು ಮೂರ್ನಾಲ್ಕು ತಿಂಗಳು ಮುಚ್ಚಿಟ್ಟೆವು. ಅದೆಲ್ಲವೂ ಕಳೆತ ನಂತರ ದ್ರಾವಣ ಸಿದ್ಧವಾಗುತ್ತದೆ. ಅದನ್ನು ಸೋಸಿ ಬಳಸಬಹುದು. ಗಿಡಗಳಿಗೆ ಜಮೀನಿಗೆ ಸಿಂಪರಣೆ ಮಾಡುವುದರಿಂದ ಬೆಳೆಗಳು ಉತ್ತಮವಾಗುತ್ತವೆ. ಹಣ್ಣಿನ ಗಿಡಗಳಿಗೆ ಸಿಂಪರಣೆ ಮಾಡಿದರೆ ಹೂ ಉದುರುವಿಕೆಯನ್ನು ತಡೆಗಟ್ಟಬಹುದು. ಗಾತ್ರ ಹಾಗೂ ಇಳುವರಿ ಹೆಚ್ಚಳವಾಗುವುದರ ಜೊತೆಗೆ ಹಣ್ಣಿನ ಬಾಳಿಕೆಯೂ ಅಧಿಕವಾಗುತ್ತದೆ’ ಎಂದು ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT