ಗುರುವಾರ , ಫೆಬ್ರವರಿ 25, 2021
29 °C
ಸ್ಮಾರ್ಟ್ ಸಿಟಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕರಾದ ಶೆಟ್ಟರ್, ಬೆಲ್ಲದ ಸೂಚನೆ

ಕಾಲಮಿತಿಯೊಳಗೆ ಕಾಮಗಾರಿ ಮುಗಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಹುಬ್ಬಳ್ಳಿ–ಧಾರವಾಡ ಸ್ಮಾರ್ಟ್ ಸಿಟಿಗೆ ಸೆಲೆಕ್ಟ್ ಆಗಿದೆ ಎನ್ನುತ್ತೀರಿ. ಆದರೆ, ನಗರದಲ್ಲಿ ಅಂತಹ ಯಾವ ಬದಲಾವಣೆಯೂ ಕಾಣುತ್ತಿಲ್ಲವಲ್ಲಾ ಎಂದು ಹೋದ ಕಡೆಯೆಲ್ಲಾ ಜನ ನಮ್ಮನ್ನು ಕೇಳ್ತಾರೆ. ಅವರಿಗೆ ಉತ್ತರ ಕೊಟ್ಟು ಸಾಕಾಗಿದೆ. ಹಾಗಾಗಿ, ಕಾಲಮಿತಿಯೊಳಗೆ ಎಲ್ಲಾ ಯೋಜನೆಗಳನ್ನು ಮುಗಿಸಿ’ ಎಂದು ಶಾಸಕ ಜಗದೀಶ ಶೆಟ್ಟರ್ ಹಾಗೂ ಅರವಿಂದ ಬೆಲ್ಲದ ಅಧಿಕಾರಿಗಳಿಗೆ ಸೂಚಿಸಿದರು.

ನಗರದಲ್ಲಿ ಬುಧವಾರ ನಡೆದ ಸ್ಮಾರ್ಟ್ ಸಿಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಯೋಜನೆಗಳ ಸಮರ್ಪಕ ಜಾರಿಗೆ ಪಾಲಿಕೆ, ಪೊಲೀಸ್, ಜಲ ಮಂಡಳಿ, ಹೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಆದಷ್ಟು ಬೇಗ ಕಾಮಗಾರಿಗಳನ್ನು ಆರಂಭಿಸಬೇಕು’ ಎಂದರು.

ಶಾಸಕ ಶೆಟ್ಟರ್ ಮಾತನಾಡಿ, ‘ಸಭೆಯಲ್ಲಿ ಪ್ರಸ್ತಾಪಿಸುವ ಅಂಶಗಳನ್ನು ಯೋಜನೆಯನ್ನು ಪರಿಷ್ಕರಿಸುವಾಗ ಸೇರಿಸಿಕೊಳ್ಳಬೇಕು. ಅಲ್ಲದೆ, ನಾವು ಹೇಳಿದ್ದನ್ನು ಗಂಭೀರವಾಗಿ ಫಾಲೋಅಪ್ ಮಾಡಬೇಕು. ಎಲ್ಲವನ್ನೂ ಇಲ್ಲೇ ಬಿಟ್ಟು ಹೋಗಬೇಡಿ’ ಎಂದ ಅವರು, ‘ಉಣಕಲ್ ಕೆರೆ, ಮಹಾತ್ಮ ಗಾಂಧೀಜಿ ಉದ್ಯಾನ, ತೋಳನಕೆರೆ ಸೇರಿದಂತೆ ನಗರದ ಉದ್ಯಾನಗಳಲ್ಲಿ ಅಳವಡಿಸುವ ಓಪನ್ ಜಿಮ್ ಸಲಕರಣೆಗಳು ಗುಣಮಟ್ಟದಿಂದ ಇರಬೇಕು. ಒಂದೆರಡು ವರ್ಷಗಳಲ್ಲಿ ಹಾಳಾಗುವಂತಿರಬಾರದು’ ಎಂದರು.

ಶಾಸಕ ಅರವಿಂದ ಬೆಲ್ಲದ ಮಾತನಾಡಿ, ‘ಕಂದಾಯ ನಿರ್ವಹಣಾ ವ್ಯವಸ್ಥೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ನೀಡಿರುವ ಪರವಾನಗಿ ಮಾಹಿತಿಯನ್ನೂ ಸೇರಿಸಿ. ಬಾರ್ ಕೋಡ್ ಸ್ಕ್ಯಾನ್ ಯಾವುದೇ ಕಟ್ಟಡದ ಸಂಪೂರ್ಣ ಮಾಹಿತಿ ಸಿಗುವಂತಿರಬೇಕು’ ಎಂದು ಸಲಹೆ ನೀಡಿದರು. ಇದಕ್ಕೆ ಶೆಟ್ಟರ್ ಕೂಡ ದನಿಗೂಡಿಸಿದರು.

ಅಕ್ರಮ ಲೇಔಟ್‌ಗೆ ಕಡಿವಾಣ ಹಾಕಿ:

‘ನಗರದ ಸೆಟ್ಲ್‌ಮೆಂಟ್, ಮಂಟೂರು ಸೇರಿದಂತೆ ಹಲವೆಡೆ ಅಕ್ರಮವಾಗಿ ಲೇಔಟ್‌ಗಳು ತಲೆ ಎತ್ತುತ್ತಿವೆ. ಇದರಲ್ಲಿ ಅಧಿಕಾರಿಗಳೂ ಭಾಗಿಯಾಗಿದ್ದಾರೆ. ಜತೆಗೆ, ಒತ್ತುವರಿಯೂ ಹೆಚ್ಚಾಗಿದೆ. ಕಟ್ಟಡ ನಿರ್ಮಿಸುವಾಗ ಸೆಟ್‌ ಬ್ಯಾಕ್ ಬಿಡುವುದಿಲ್ಲ. ಕಟ್ಟಡ ಕಟ್ಟಲು ಪಾಲಿಕೆಯವರು ಕೇವಲ ಅನುಮತಿ ನೀಡಿದರೆ ಸಾಲದು. ಆಗಾಗ, ಸ್ಥಳಕ್ಕೆ ಭೇಟಿ ನೀಡಿ ನಿಯಮ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು’ ಎಂದು ಸೂಚನೆ ನೀಡಿದರು.

‘ಮಹಾತ್ಮ ಗಾಂಧೀಜಿ ಉದ್ಯಾನದಲ್ಲಿರುವ ಗ್ಲಾಸ್‌ ಹೌಸ್‌ಗೆ ಬೇರೆ ಗ್ಲಾಸ್‌ಗಳನ್ನು ಅಳವಡಿಸಬೇಕು. ಜತೆಗೆ, ಹೆಚ್ಚು ಬಾಳಿಕೆ ಬರುವ ಗುಣಮಟ್ಟದ ಲೇಸರ್ ಬೆಳಕಿನ ಸಂಗೀತದ ಕಾರಂಜಿಯನ್ನು ಅಳವಡಿಸಬೇಕು’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹ್ಮದ್, ‘ಗ್ಲಾಸ್ ಅಳವಡಿಸುವ ಸಂಬಂಧ, ಈಗಾಗಲೇ ಟೆಂಡರ್ ಕರೆಯಲಾಗಿದೆ. ಲೇಸರ್ ಸಹಿತ ಮ್ಯೂಸಿಕಲ್ ಫೌಂಟೇನ್ ಅಳವಡಿಸುವ ಸಂಬಂಧ ಡಿಪಿಆರ್ ತಯಾರಿಸಲಾಗುತ್ತಿದೆ. ಉದ್ಯಾನದ ಸಿವಿಲ್ ಕಾಮಗಾರಿ 2020ರ ಫೆಬ್ರುವರಿಯೊಳಗೆ ಪೂರ್ಣಗೊಳ್ಳಲಿದೆ’ ಎಂದು ಹೇಳಿದರು.

‘ನಾಲೆಯನ್ನು ಗ್ರೀನ್ ಕಾರಿಡಾರ್ ಆಗಿ ಅಭಿವೃದ್ಧಿಪಡಿಸುವುದಕ್ಕೆ ಮುಂಚೆ ಒತ್ತುವರಿ ತೆರವುಗೊಳಿಸಿ. ನಾಲೆ ಜಾಗದಲ್ಲಿ ಕಟ್ಟಿರುವ ಕಟ್ಟಡಗಳನ್ನು ನೆಲಸಮಗೊಳಿಸಬೇಕು. ಯಾವುದೇ ಕಾರಣಕ್ಕೂ ನಾಲೆಗೆ ಒಳಚರಂಡಿ ನೀರು ಸೇರಬಾರದು’ ಎಂದರು. ಅದಕ್ಕೆ ಅಧಿಕಾರಿಗಳು, ‘ಒಳಚರಂಡಿ ನೀರು ಹರಿಯಲು ಪ್ರತ್ಯೇಕವಾದ ಮಾರ್ಗ ನಿರ್ಮಿಸಲಾಗುವುದು’ ಎಂದು ತಿಳಿಸಿದರು.

ಸಮಗ್ರ ಕ್ರೀಡಾ ಸಂಕೀರ್ಣವಾಗಲಿ:

‘ಹುಬ್ಬಳ್ಳಿಯ ಹೃದಯಭಾಗದಲ್ಲಿರುವ ನೆಹರೂ ಮೈದಾನವನ್ನು ಸಮಗ್ರ ಕೀಡಾ ಸಂಕೀರ್ಣವಾಗಿ ಅಭಿವೃದ್ಧಿಪಡಿಸಬೇಕು. ಒಳ ಹಾಗೂ ಹೊರಾಂಗಣದ ಎಲ್ಲಾ ಆಟಗಳಿಗೂ ವ್ಯವಸ್ಥೆ ಇರಬೇಕು’ ಎಂದು ಶೆಟ್ಟರ್ ಹಾಗೂ ಬೆಲ್ಲದ ಸಲಹೆ ನೀಡಿದರು.

ಪಾಲಿಕೆ ಆಯುಕ್ತ ಪ್ರಶಾಂತಕುಮಾರ್ ಮಿಶ್ರಾ, ಡಿಸಿಪಿ ಶಿವಕುಮಾರ್, ಬಿಜೆಪಿ ಮುಖಂಡರಾದ ಮಹೇಶ ಬುರ್ಲಿ ಹಾಗೂ ರವಿ ನಾಯಕ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು